ಚೀನಾ ಪದ್ಧತಿ ವರ್ಷ ಭವಿಷ್ಯ 2025: ಹಾವು ಗುಂಪಿಗೆ ಸೇರಿದವರಿಗೆ ಈ ವರ್ಷ ಸಂಬಂಧಗಳು ಬಲಗೊಳ್ಳಲಿವೆ, ಆರ್ಥಿಕವಾಗಿ ಸವಾಲಿನ ವರ್ಷ
ಜ್ಯೋತಿಷ್ಯದ ನಂಬಿಕೆ ಒಂದೊಂದು ದೇಶದಲ್ಲಿ ಒಂದೊಂದು ಥರ. ಇಂದಿನ ವರ್ಷ ಭವಿಷ್ಯಕ್ಕೆ ಚೀನಾದಲ್ಲಿ ಅನುಸರಿಸುವ ಜ್ಯೋತಿಷ್ಯ ನಂಬಿಕೆ ಆಧರಿಸಿ ವಿವರ ನೀಡಲಾಗಿದೆ. ಚೀನಾದಲ್ಲಿ ಒಂದು ವರ್ಷಕ್ಕೆ ಒಂದು ಪ್ರಾಣಿಯ ಚಿಹ್ನೆ. ಅಂದರೆ 12 ವರ್ಷಕ್ಕೆ 12 ಪ್ರಾಣಿ. ಈ ಪದ್ಧತಿಯಲ್ಲಿ 6ನೇ ಚಿಹ್ನೆಯು ಹಾವು ಆಗಿರುತ್ತದೆ. 2025ರಲ್ಲಿ ಹಾವು ರಾಶಿಯವರ ಭವಿಷ್ಯ ಹೇಗಿರುತ್ತೆ ನೋಡೋಣ.
ವರ್ಷ ಭವಿಷ್ಯ 2025 ಚೀನಾ ಪದ್ಧತಿ: ಇಲ್ಲಿ ನೀಡಿರುವುದು 2025ರ ವರ್ಷ ಭವಿಷ್ಯ. ಆದರೆ ಇದು ಭಾರತದಲ್ಲಿ ಅಲ್ಲ; ಚೀನಾ ದೇಶದಲ್ಲಿ ಅನುಸರಿಸುವ ವಿಧಾನ. ಅಲ್ಲಿ ಹನ್ನೆರಡು ವರ್ಷಕ್ಕೆ ಒಂದು ಚಕ್ರ. ಅಂದರೆ ಪ್ರತಿ ವರ್ಷಕ್ಕೆ ಒಂದರಂತೆ ಹನ್ನೆರಡು ವರ್ಷಕ್ಕೆ ಒಂದೊಂದು ಪ್ರಾಣಿಯ ಚಿಹ್ನೆಯನ್ನು ಇರಿಸಿಕೊಂಡಿದ್ದಾರೆ. ಹನ್ನೆರಡು ವರ್ಷದ ನಂತರ ಅವೇ ಆರಂಭದಿಂದ ಪುನರಾವರ್ತನೆ ಆಗುತ್ತವೆ. ಹಾಗೆ ಅದು ಶುರುವಾಗುವುದು ಇಲಿಯಿಂದ. ಆ ನಂತರ ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಕುರಿ, ಕೋತಿ, ಹುಂಜ, ನಾಯಿ ಮತ್ತು ಹಂದಿ. ಥೇಟ್ ಭಾರತದಲ್ಲಿ ಇರುವಂತೆಯೇ; ಆದರೆ ಇಲ್ಲಿ ಮೇಷದಿಂದ ಮೀನದ ತನಕ ಹೆಸರನ್ನು ನೀಡಿದ್ದೇವೆ. ಆದರೆ ಚೀನಾದಲ್ಲಿ ಒಂದೊಂದು ಇಸವಿಗೆ ಒಂದೊಂದು ಪ್ರಾಣಿಗಳ ಹೆಸರನ್ನು ನೀಡುತ್ತಾರೆ. ಆ ಇಡೀ ವರ್ಷದಲ್ಲಿ ಯಾವುದೇ ತಿಂಗಳು ಅಥವಾ ದಿನದಂದು ಹುಟ್ಟಿದರೂ ಅವರಿಗೆ ಆ ಪ್ರಾಣಿಯೇ ರಾಶಿ ಅಂದುಕೊಳ್ಳಬೇಕು. 2025ನೇ ಇಸವಿಯನ್ನು ಪ್ರತಿನಿಧಿಸುವುದು ‘ಮರದ ಹಾವು (ವುಡ್ ಸ್ನೇಕ್)‘. ಇನ್ನು ಯಾರೆಲ್ಲಾ ‘ಹಾವು‘ ಪ್ರತಿನಿಧಿಸುತ್ತಾರೋ ಅವರ ವರ್ಷ ಭವಿಷ್ಯ ಈ ಲೇಖನದಲ್ಲಿದೆ.
ಹಾವು ರಾಶಿಯನ್ನು ಪ್ರತಿನಿಧಿಸುವವರು 2025ರಲ್ಲಿ ವಿಶಿಷ್ಟ ಬದಲಾವಣೆಗಳು ಕಾಯುತ್ತಿವೆ. ಹಿಂದಿನ ತಪ್ಪುಗಳಿಂದ ಎಚ್ಚರಿಕೆಯ ಪಾಠ ಕಲಿಯಬೇಕು. ನೀವು ಶಾಂತ ಮತ್ತು ಬುದ್ಧಿವಂತ ಸ್ವಭಾವಕ್ಕೆ ಬದ್ಧರಾಗಿದ್ದರೆ ಇದು ನಿಮಗೆ ಅತ್ಯುತ್ತಮ ಸಮಯವಾಗಿದೆ. 2025 ನಿಮ್ಮ ಜೀವನದಲ್ಲಿ ನಿಧಾನಗತಿಯ ಪ್ರಗತಿಯನ್ನು ತರುತ್ತದೆ. ಕಳೆದ ಬಾರಿಗಿಂತ ನೀವು ಈ ವರ್ಷ ನಿಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ಮುನ್ನಡೆಯಬೇಕು. ಆದರೆ ಯಾವುದೇ ಕೆಲಸ ಮಾಡುವ ಮುನ್ನ ನೂರು ಬಾರಿ ಯೋಚಿಸಿ ಮುಂದುವರೆಯಬೇಕು. ಹಳೆಯ ಸಮಸ್ಯೆಗಳನ್ನು ಪರಿಹರಿಸಲು ನಿಮಗಿದು ಉತ್ತಮ ಸಮಯ.
1953, 1965, 1977, 1989, 2001, 2013, 2025 ಜನಿಸಿದವರು ʼಹಾವುʼ ಗುಂಪಿಗೆ ಸೇರಿದವರು
ಉದ್ಯೋಗ-ವೃತ್ತಿ ಭವಿಷ್ಯ
ಈ ವರ್ಷ ವೃತ್ತಿಯಲ್ಲಿ ಸಾಕಷ್ಟು ಅವಕಾಶಗಳು ದೊರೆಯಲಿವೆ. ಆದರೂ ನಿಮ್ಮ ವೃತ್ತಿಯಲ್ಲಿ ನೀವು ಯಶಸ್ಸು ಸಾಧಿಸಲು ಹೆಚ್ಚಿನ ಒತ್ತು ನೀಡಬೇಕು. ಉದ್ಯೋಗ ಬದಲಾವಣೆಗೆ ಯೋಚಿಸುವವರಿಗೆ ಕೂಡಾ ಇದು ಉತ್ತಮ ಸಮಯ. ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಈ ವರ್ಷ ಉತ್ತಮವಾಗಿದೆ. ಹೊಸ ಸವಾಲುಗಳು ಎದುರಾಗುತ್ತವೆ. ಆದರೆ ನೀವು ತಾಳ್ಮೆಯಿಂದ, ಶ್ರಮ ವಹಿಸಿ ಕೆಲಸ ಮಾಡಿದಾಗ ಮಾತ್ರ ನಿಮ್ಮ ಗುರಿ ಈಡೇರುತ್ತದೆ. ನಿಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಇದು ಉತ್ತಮ ಸಮಯ. ಟೀಂ ವರ್ಕ್‌ನಲ್ಲಿ ತೊಡಗಿಸಿಕೊಳ್ಳಿ. ಹೊಸ ವಿಷಯಗಳನ್ನು ಕಲಿಯಲು ಆದ್ಯತೆ ನೀಡಿ.
ಹಣಕಾಸು ಭವಿಷ್ಯ
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಈ ವರ್ಷ ಹಾವು ಗುಂಪಿನವರಿಗೆ ಬಹಳ ಸವಾಲಿನ ವರ್ಷವಾಗಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ನೀವು ಸ್ವಲ್ಪ ರಿಸ್ಕ್ ತೆಗೆದುಕೊಳ್ಳಬೇಕಾಗಿಬರಬಹುದು. ರಿಯಲ್ ಎಸ್ಟೇಟ್ ಹೂಡಿಕೆಯು ಆದಾಯದ ಉತ್ತಮ ಮೂಲವಾಗಿದೆ. ಸ್ಟಾಕ್ ಮಾರ್ಕೆಟ್ ಕೂಡಾ ನಿಮಗೆ ಆದಾಯ ದೊರೆಯಲಿದೆ. ಯಾವುದೇ ಹೂಡಿಕೆ ಮಾಡುವ ಮುನ್ನ ತಜ್ಞರೊಂದಿಗೆ ಚರ್ಚಿಸಿ ನಂತರ ಮುಂದುವರೆಯಿರಿ. ಇದು ನಿಮಗೆ ಭವಿಷ್ಯದಲ್ಲಿ ಉತ್ತಮ ಲಾಭ ತಂದುಕೊಡಲಿದೆ.
ಪ್ರೀತಿ-ಪ್ರೇಮ, ಮದುವೆ ಭವಿಷ್ಯ
ಈ ವರ್ಷ ನಿಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಹೊಸ ಪರಿಚಯಸ್ಥರು ಮತ್ತು ಸ್ನೇಹಿತರನ್ನು ಮಾಡಿಕೊಳ್ಳಲು ಇದು ಉತ್ತಮ ಸಮಯ. ಕೆಲವರು ಆನ್‌ಲೈನ್ ಡೇಟಿಂಗ್ ಮಾಡಬಹುದು. ಆದರೆ ಸಂಬಂಧಗಳಲ್ಲಿ ನೀವು ಮುಕ್ತರಾಗಿರಬೇಕು. ಈ ವರ್ಷವು ಪ್ರೀತಿ ವೃದ್ಧಿಸುವಲ್ಲಿ ಸಹಕಾರಿಯಾದರೂ ಸಂಬಂಧಗಳನ್ನು ಉಳಿಸಿಕೊಳ್ಳುವುದರಲ್ಲಿ ನಿಮ್ಮ ಶ್ರಮ ಕೂಡಾ ಇದೆ. ಒಬ್ಬಂಟಿ ಇರುವವರು ತಮ್ಮ ಜೀವನಕ್ಕೆ ಸರಿ ಹೊಂದುವ ವ್ಯಕ್ತಿಯನ್ನು ಭೇಟಿ ಆಗಬಹುದು. ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯುವಿರಿ. ಇದರಿಂದ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ. ದಂಪತಿ ಒಬ್ಬರಿಗೊಬ್ಬರು ಕಾಳಜಿ ಮಾಡುವುದು ಅಗತ್ಯವಾಗಿದೆ.
ಆರೋಗ್ಯ ಭವಿಷ್ಯ
ಹಾವುಗಳ ಗುಂಪಿಗೆ ಸೇರಿದ ಜನರು ಉತ್ತಮ ಲೈಫ್‌ಸ್ಟೈಲ್ ಹೊಂದಿರುವುದು ಮುಖ್ಯವಾಗಿದೆ. 2025ರಲ್ಲಿ ನೀವು ಆರೋಗ್ಯ ವೃದ್ಧಿಸುವ ಚಟುವಟಿಕೆಗಳತ್ತ ಗಮನ ಹರಿಸಬೇಕು. ನರಮಂಡಲ, ಸ್ನಾಯುವಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡುವುದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಕೆಲಸದಲ್ಲಿ ಉಂಟಾಗುವ ಹೆಚ್ಚಿನ ಒತ್ತಡದಿಂದ ತಲೆ ನೋವು ಕಾಡಬಹುದು. ಮಾನಸಿಕ ಆರೋಗ್ಯದತ್ತ ಕೂಡಾ ಹೆಚ್ಚು ಗಮನ ಹರಿಸಬೇಕಾಗಿದೆ. ಆಹಾರ ಕ್ರಮದತ್ತ ಕೂಡಾ ನೀವು ಗಮನ ನೀಡಬೇಕು. ಎಣ್ಣೆಯಲ್ಲಿ ಕರಿದ ಅಥವಾ ಸಂಸ್ಕರಿಸಿದ ಅಹಾರಗಳಿಂದ ದೂರ ಇದ್ದಷ್ಟು ಒಳ್ಳೆಯದು. ವಿಶೇಷವಾಗಿ ಫೆಬ್ರವರಿ, ಏಪ್ರಿಲ್, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.