ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿಸ್ವಾರ್ಥ ಮನಸ್ಸಿನವರು, ಅದೃಷ್ಟವನ್ನು ನಂಬದೆ ಕಠಿಣ ಪರಿಶ್ರಮಕ್ಕೆ ಆದ್ಯತೆ ನೀಡುವವರು; 31ನೇ ತಾರೀಖಿನಂದು ಜನಿಸಿದವರ ಸ್ವಭಾವ

ನಿಸ್ವಾರ್ಥ ಮನಸ್ಸಿನವರು, ಅದೃಷ್ಟವನ್ನು ನಂಬದೆ ಕಠಿಣ ಪರಿಶ್ರಮಕ್ಕೆ ಆದ್ಯತೆ ನೀಡುವವರು; 31ನೇ ತಾರೀಖಿನಂದು ಜನಿಸಿದವರ ಸ್ವಭಾವ

Birth Date Astrology: ಯಾವುದೇ ವ್ಯಕ್ತಿಯ ಗ್ರಹಗತಿಗಳನ್ನು ನೋಡುವಾಗ ಜನ್ಮ ದಿನಾಂಕವನ್ನು ಪರಿಗಣಿಸಲಾಗುತ್ತದೆ. ಅದರ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಹೇಗಿರಬಹುದು ಎಂದು ಅಂದಾಜಿಸಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆಯೂ ಅವರ ಗುಣಧರ್ಮ ಹೇಗಿದೆ ಎಂಬುದನ್ನು ಹೇಳಬಹುದು. 31ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ ತಿಳಿಯಿರಿ.

ನಿಸ್ವಾರ್ಥ ಮನಸ್ಸಿನವರು, ಅದೃಷ್ಟವನ್ನು ನಂಬದೆ ಕಠಿಣ ಶ್ರಮಕ್ಕೆ ಆದ್ಯತೆ ನೀಡುವವರು; 31ನೇ ತಾರೀಖಿನಂದು ಜನಿಸಿದವರ ಸ್ವಭಾವ
ನಿಸ್ವಾರ್ಥ ಮನಸ್ಸಿನವರು, ಅದೃಷ್ಟವನ್ನು ನಂಬದೆ ಕಠಿಣ ಶ್ರಮಕ್ಕೆ ಆದ್ಯತೆ ನೀಡುವವರು; 31ನೇ ತಾರೀಖಿನಂದು ಜನಿಸಿದವರ ಸ್ವಭಾವ (PC: Canva)

ಈ ದಿನಾಂಕದಲ್ಲಿ ಜನಿಸಿದವರಿಗೆ ಸ್ವಲ್ಪವೂ ಸ್ವಾರ್ಥ ಇರುವುದಿಲ್ಲ. ಕುಟುಂಬದವರಿಗೆ ಸಹಾಯ ಮಾಡುವುದಲ್ಲದೆ ಇತರರಿಗೂ ಇವರು ಸಹಾಯ ಮಾಡುತ್ತಾರೆ. ವಯಸ್ಸಿನ ಅಥವಾ ಯಾವುದೇ ರೀತಿಯ ತಾರತಮ್ಯ ಇವರಿಗೆ ಇರುವುದಿಲ್ಲ. ಕಷ್ಟಪಟ್ಟು ದುಡಿದ ಹಣದ ಒಂದು ಪಾಲನ್ನು ಜನಸೇವೆಗಾಗಿ ಮೀಸಲಿಡುತ್ತಾರೆ. ಮುಖ್ಯವಾಗಿ ಇವರಿಗೆ ಕುಟುಂಬದ ಹಿರಿಯರ ಸಹಾಯ ಸಹಕಾರ ದೊರೆಯುವುದಿಲ್ಲ. ಇವರಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಆದರೆ ಅಧಿಕಾರಿಗಳಿಗೆ ಸರಿ ಸಮಾನವಾದಂತಹ ಸ್ಥಾನಮಾನ ದೊರೆಯುತ್ತದೆ.

ಉದ್ಯೋಗದಲ್ಲಿ ಇವರ ವಿರುದ್ಧ ಯಾವುದೇ ಬದಲಾವಣೆಗಳು ಉಂಟಾದರೂ ಕಡೆಗೆ ಇವರಿಗೆ ಸಹಕಾರಿಯಾಗಿರುತ್ತದೆ. ಉದ್ಯೋಗ ದೊರೆಯದೇ ಹೋದರೂ ಜೀವನ ನಡೆಸಲು ಯಾವುದೇ ತೊಂದರೆ ಇರುವುದಿಲ್ಲ. ಕಷ್ಟ ನಷ್ಟಗಳಿಗೆ ಬೆದರದ ಇವರು ಸದಾಕಾಲ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಾರೆ. ಕಷ್ಟಪಟ್ಟು ದುಡಿಯುವವರಿಗೆ ಸಂಪೂರ್ಣ ಸಹಕಾರ ನೀಡುತ್ತಾರೆ. ತಮ್ಮ ಆತ್ಮೀಯರಿಗಾಗಿ ಸಣ್ಣ ಪ್ರಮಾಣದ ಉದ್ದಿಮೆಯನ್ನು ಆರಂಭಿಸುವ ಸಾಹಸಕ್ಕೆ ಕೈ ಹಾಕುತ್ತಾರೆ. ಸಣ್ಣ ಪ್ರಮಾಣದ ಕೆಲಸ ಮಾಡುತ್ತಾರೆ. ಸುಲಭವಾಗಿ ಬೇರೆಯವರ ಹಣಕಾಸಿನ ವ್ಯವಹಾರದಲ್ಲಿ ಮಧ್ಯವರ್ತಿಗಳಾಗುವುದಿಲ್ಲ.

ದೊಡ್ಡ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ

ಇವರಿಗೆ ದೊಡ್ಡ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಕೆಲವರು ಸರ್ಕಾರದ ಅನುದಾನದ ಸಹಾಯದಿಂದ ಸ್ವಂತ ವ್ಯಾಪಾರ ಆರಂಭಿಸುತ್ತಾರೆ. ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ತಾವಾಗಿಯೇ ವಹಿಸಿಕೊಳ್ಳುತ್ತಾರೆ. ಇವರನ್ನು ಗೌರವಿಸುವವರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುತ್ತಾರೆ. ಐಷಾರಾಮಿ ಜೀವನ ನಡೆಸಲು ಸಾಧ್ಯವಾಗದೇ ಹೋದರೂ ಆಡಂಬರದ ಜೀವನ ಇಷ್ಟಪಡುತ್ತಾರೆ. ಉನ್ನತ ಅಧಿಕಾರ ಹೊಂದಿರುವ ವ್ಯಕ್ತಿಯೊಂದಿಗೆ ಇವರ ವಿವಾಹವಾಗುತ್ತದೆ. ಆರಂಭದಲ್ಲಿ ಸರಳವಾದ ಜೀವನ ನಡೆಸುತ್ತಿದ್ದರೂ ಮಧ್ಯ ವಯಸ್ಸಿನ ನಂತರ ಉನ್ನತ ಮಟ್ಟ ತಲುಪುತ್ತಾರೆ.

ಇವರ ಮನಸ್ಸು ಮಾತ್ರ ಶುದ್ದಿಯಾಗಿರದೆ ಮಾಡುವ ಕೆಲಸ ಕಾರ್ಯಗಳಲ್ಲಿಯೂ ಶುದ್ಧ ಮನಸ್ಸಿನಿಂದ ಮುಂದುವರೆಯುತ್ತಾರೆ. ಬೇರೆಯವರ ಹಣ ಅಥವಾ ಅಧಿಕಾರವನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಮಾಡುವುದಿಲ್ಲ. ವೈವಾಹಿಕ ಜೀವನ ಸಾಮಾನ್ಯವಾಗಿರುತ್ತದೆ. ದಂಪತಿ ನಡುವೆ ಮನಸ್ತಾಪ ಇರದೇ ಹೋದರೂ ಉತ್ತಮ ಅನ್ಯೋನ್ಯತೆ ಬೆಳೆಯುವುದಿಲ್ಲ. ಯಾವುದೇ ಕೆಲಸ ಕಾರ್ಯಗಳಾದರೂ ನಿಧಾನಗತಿಯಲ್ಲಿ ಸಾಗಲಿವೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ. ಇವರ ಮತ್ತು ಇವರ ಮಕ್ಕಳ ನಡುವೆ ಅನಾವಶ್ಯಕವಾದ ವಾದ ವಿವಾದ ನಡೆಯುತ್ತದೆ. ಉತ್ತಮ ಆರೋಗ್ಯ ಗಳಿಸಲು ದೈಹಿಕ ವ್ಯಾಯಾಮ ಅವಲಂಬಿಸುತ್ತಾರೆ.

ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ನೀಡುವಲ್ಲಿ ಎತ್ತಿದ ಕೈ

ವಂಶಕ್ಕೆ ಸೇರಿದ ಆಸ್ತಿ ಅಥವಾ ಹಣದ ಬಗ್ಗೆ ಆಸೆ ಇರುವುದಿಲ್ಲ. ಆದರೆ ತಾನಾಗಿಯೇ ದೊರೆವ ಅನುಕೂಲತೆಗಳನ್ನು ದೂರ ತಳ್ಳುವುದಿಲ್ಲ. ತಂದೆ ತಾಯಿ ಬಗ್ಗೆ ವಿಶೇಷ ಪ್ರೀತಿ ಗೌರವ ಇವರಲ್ಲಿ ಇರುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಸ್ವಂತ ವಾಹನ ಮತ್ತು ಸ್ವಂತ ಮನೆ ಗಳಿಸುತ್ತಾರೆ. ರಾಜಕಾರಣಿಗಳು, ವೈದ್ಯರು ಅಥವಾ ಇನ್ನೂ ಯಾವುದೇ ಜನಸೇವೆಗೆ ಸಂಬಂಧಿಸಿದ ಉದ್ಯೋಗವು ಇವರಿಗೆ ಹೊಂದಾಣಿಕೆಯಾಗುತ್ತದೆ. ಅತಿಯಾದ ಹಣದ ಆಸೆ ಇರುವುದಿಲ್ಲ. ಒಂದೇ ರೀತಿಯ ಉದ್ಯೋಗವನ್ನು ಮಾಡಲು ಇಷ್ಟಪಡುವುದಿಲ್ಲ.

ಸದಾಕಾಲ ಇವರಲ್ಲಿ ಧನಾತ್ಮಕ ಚಿಂತನೆ ತುಂಬಿರುತ್ತದೆ. ಸಂಘಸಂಸ್ಥೆಗಳ ಒಡೆತನ ಇವರಿಗೆ ದೊರೆಯುತ್ತದೆ. ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ನೀಡುವಲ್ಲಿ ಎತ್ತಿದ ಕೈ. ಕಷ್ಟ ನಷ್ಟಗಳಿಗೆ ಎಂದಿಗೂ ಬೆದರುವುದಿಲ್ಲ. ಒಳ್ಳೆಯ ದಿನಗಳಿಗಾಗಿ ಕಾಯುತ್ತಾ ಸಂತಸದಿಂದ ದಿನ ಕಳೆಯುತ್ತಾರೆ. ಇಳಿ ವಯಸ್ಸಿನಲ್ಲಿ ಇವರು ಸರಳವಾದ ಜೀವನವನ್ನು ನಡೆಸುತ್ತಾರೆ. ಹಿಂದಿನ ಕಾಲದಿಂದ ನಡೆದುಕೊಂಡು ಬಂದ ಆಚಾರ ವಿಚಾರಗಳನ್ನು ಮುಂದುವರೆಸುತ್ತಾರೆ. ತಾವು ಕೆಲಸ ಮಾಡದೆ ದೇವರನ್ನು ಅವಲಂಬಿಸುವುದು ಇವರಿಗೆ ಇಷ್ಟವಾಗುವುದಿಲ್ಲ. ತನ್ನ ಮಕ್ಕಳಿಗೆ ಎಲ್ಲಾ ರೀತಿಯ ಅನುಕೂಲತೆಗಳನ್ನು ಕಲ್ಪಿಸುತ್ತಾರೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).