ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Numerology: ಬುದ್ಧಿ ಹೇಳುವುದರಲ್ಲಿ ನಿಸ್ಸೀಮರು, ಇವರಿದ್ದ ಕಡೆ ಹಾಸ್ಯಕ್ಕೆ ಕೊರತೆ ಇರುವುದಿಲ್ಲ; 17ನೇ ತಾರೀಖಿನಂದು ಹುಟ್ಟಿದವರ ಗುಣ ಲಕ್ಷಣ

Numerology: ಬುದ್ಧಿ ಹೇಳುವುದರಲ್ಲಿ ನಿಸ್ಸೀಮರು, ಇವರಿದ್ದ ಕಡೆ ಹಾಸ್ಯಕ್ಕೆ ಕೊರತೆ ಇರುವುದಿಲ್ಲ; 17ನೇ ತಾರೀಖಿನಂದು ಹುಟ್ಟಿದವರ ಗುಣ ಲಕ್ಷಣ

Numerology: ಸಂಖ್ಯಾಶಾಸ್ತ್ರದಲ್ಲಿ ಜನ್ಮ ದಿನಾಂಕದ ಆಧಾರದ ಮೇಲೆ ಭವಿಷ್ಯ ಹೇಳಲಾಗುತ್ತದೆ. ಒಂದೊಂದು ದಿನಾಂಕದಲ್ಲಿ ಹುಟ್ಟಿರುವವರು ಒಂದೊಂದು ರೀತಿಯ ಗುಣಗಳನ್ನು ಹೊಂದಿರುತ್ತಾರೆ. 17ನೇ ದಿನಾಂಕದಂದು ಜನಿಸಿದ ಜನರ ಗುಣ ಲಕ್ಷಣಗಳು ಹೇಗಿರುತ್ತವೆ ನೋಡೋಣ.

17ನೇ ದಿನಾಂಕದಂದು ಹುಟ್ಟಿದವರ ಗುಣ ಲಕ್ಷಣ
17ನೇ ದಿನಾಂಕದಂದು ಹುಟ್ಟಿದವರ ಗುಣ ಲಕ್ಷಣ (PC: Freepik)

ಸಂಖ್ಯಾಶಾಸ್ತ್ರ: 17ನೇ ದಿನಾಂಕದಲ್ಲಿ ಹುಟ್ಟಿದ ಜನರಲ್ಲಿ ವಿಶೇಷ ಆತ್ಮವಿಶ್ವಾಸವಿರುತ್ತದೆ. ಆತ್ಮಸ್ಥೈರ್ಯದಿಂದ ಯಾವುದೇ ಕಠಿಣವಾದ ಕೆಲಸವನ್ನು ಮಾಡಬಲ್ಲವರಾಗಿರುತ್ತಾರೆ. ಆದರೆ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಅಡಚಣೆ ಉಂಟಾದಲ್ಲಿ ಮನದಲ್ಲಿ ವೈರಾಗ್ಯ ಭಾವನೆ ಮೂಡುತ್ತದೆ.

ಆತ್ಮೀಯರಿಂದ ಸಹಾಯ ಸಹಕಾರ ದೊರೆಯುತ್ತದೆ. ತಡವಾದರೂ ಕೆಲಸ ಕಾರ್ಯಗಳು ಪೂರ್ಣಗೊಳಿಸುತ್ತಾರೆ. ಬಿಡುವಿನ ವೇಳೆಯಲ್ಲಿ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ. ಕೆಲಸ ಕಾರ್ಯದ ಒತ್ತಡ ಹೆಚ್ಚಾದ ವೇಳೆಯಲ್ಲಿ ಜ್ಞಾನೋದಯವಾಗುತ್ತದೆ. ಇವರಲ್ಲಿನ ವಿಶೇಷತೆ ಎಂದರೆ ವಯಸ್ಸಿನ ತಾರತಮ್ಯ ತೋರದೆ ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸುತ್ತಾರೆ. ಆದ್ದರಿಂದ ಇವರಿಗೆ ಸಹಾಯ ಮಾಡಲು ಜನರಿಗೆ ಕೊರತೆ ಇರುವುದಿಲ್ಲ.

ಪ್ರಾಣಿಗಳೆಂದರೆ ಅಪಾರ ಪ್ರೀತಿ

ಅವಶ್ಯಕವಾದ ವಿಚಾರಗಳನ್ನುಸಂಗ್ರಹಿಸುವುದು, ಮನಸ್ಸಿಗೆ ಒಪ್ಪುವ ವಸ್ತುಗಳನ್ನು ಸಂಗ್ರಹಿಸುವುದು, ಇಷ್ಟವೆನಿಸುವ ವಸ್ತುಗಳನ್ನು ಖರೀದಿಸುವುದು ಇವರ ಹವ್ಯಾಸ. ಇವರಲ್ಲಿ ಸ್ವಾರ್ಥದ ಮನೋಭಾವನೆ ಇರುವುದಿಲ್ಲ. ತಮ್ಮಲ್ಲಿರುವ ವಸ್ತುಗಳನ್ನು ಆತ್ಮೀಯರಿಗೆ ನೀಡಲು ಹಿಂಜರಿಯುವುದಿಲ್ಲ. ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸಿದರೂ ಆರಂಭದಲ್ಲಿ ವಿಘ್ನಗಳನ್ನು ಎದುರಿಸುತ್ತಾರೆ. ಆದರೆ ಶ್ರೀ ಗಣಪತಿ ಪೂಜೆಯಿಂದ ಯಶಸ್ಸನ್ನು ಗಳಿಸುತ್ತಾರೆ. ಇವರಿಗೆ ಪ್ರಾಣಿಗಳೆಂದರೆ ಅತಿ ಪ್ರೀತಿ. ಪ್ರಾಣಿಗಳಿಗೆ ಆಹಾರ ನೀಡುವಲ್ಲಿಇವರೇ ಮೊದಲು. ಈ ಸಂಖ್ಯೆಯಲ್ಲಿ ಜನಿಸಿರುವ ಗರ್ಭಿಣಿಯರು ಅತಿ ಎಚ್ಚರಿಕೆಯಿಂದ ಇರಬೇಕು. ಸಾಮಾನ್ಯವಾಗಿ ಇವರು ಚುರುಕುತನದಿಂದ ಇರುವ ಮಕ್ಕಳೊಂದಿಗೆ ವೇಳೆ ಕಳೆಯಲು ಪ್ರಯತ್ನಿಸುತ್ತಾರೆ.

ಈ ತಾರೀಖೀನಂದು ಜನಿಸಿದವರಿಗೆ ಪಂಚಮುಖಿ ಗಣಪತಿ, ಪಂಚಮುಖಿ ಆಂಜನೇಯ, ವರಾಹ ಸ್ವಾಮಿ, ಲಕ್ಷ್ಮಿ ನರಸಿಂಹ ಸ್ವಾಮಿಯಂಥ ವಿಶೇಷ ರೂಪದ ದೇವರಲ್ಲಿ ನಂಬಿಕೆ ಇರುತ್ತದೆ. ಪುರುಷರು ಚೆನ್ನಾಗಿ ಹಣ ಸಂಪಾದಿಸುತ್ತಾರೆ. ಆದರೆ ಕೂಡಿಟ್ಟ ಹಣವನ್ನು ಒಂದೇ ಸಮ ಖರ್ಚು ಮಾಡುತ್ತಾರೆ. ಆದರೂ ಕಡಿಮೆ ಖರ್ಚಿನಲ್ಲಿ ದೊಡ್ಡ ಕೆಲಸವನ್ನು ಮಾಡಬಲ್ಲರು. ಹಣಕಾಸಿನ ವ್ಯವಹಾರದಲ್ಲಿ ವಿಶೇಷವಾದ ಜ್ಞಾನ ಇವರಿಗೆ ಇರುತ್ತದೆ. ಎಷ್ಟೇ ಕಷ್ಟ ಎನಿಸಿದರು ಬೇರೆಯವರಿಗೆ ನೀಡಿದ ಹಣವನ್ನು ಮರಳಿ ಗಳಿಸುತ್ತಾರೆ. ಸುಖಾ ಸುಮ್ಮನೆ ಯಾರ ಮೇಲೂ ಇವರಿಗೆ ಕನಿಕರ ಉಂಟಾಗುವುದಿಲ್ಲ.

ಪ್ರಾಮಾಣಿಕರಿಗೆ ಸಹಾಯ ಮಾಡುತ್ತಾರೆ

ಇವರಿಂದ ಸಹಾಯ ಪಡೆಯಬೇಕೆಂದರೆ ಮೊದಲು ಇವರ ಮನಸ್ಸನ್ನು ಗೆಲ್ಲಬೇಕು. ನ್ಯಾಯದ ಮಾರ್ಗದಲ್ಲಿ ಸಾಗುವವರಿಗೆ ಸಂಪೂರ್ಣ ಸಹಕಾರ ನೀಡುತ್ತಾರೆ. ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಇವರು ಹಸರು ಗಳಿಸುತ್ತಾರೆ. ಕಷ್ಟದಲ್ಲಿ ಇದ್ದವರಿಗೆ ಯಾವುದೇ ರೀತಿಯ ಶಿಫಾರಸು ಮಾಡಲು ಅಥವಾ ಬೇರೆ ರೀತಿಯಲ್ಲಿ ಸಹಾಯ ಮಾಡಲು ಹಿಂಜರಿಯುವುದಿಲ್ಲ. ಜ್ಯೋತಿಷ್ಯ, ವಾಸ್ತು, ವೇದ, ಉಪನಿಷತ್ತು ಮುಂತಾದ ಪ್ರಾಚೀನ ಕಾಲದ ವಿಚಾರಗಳನ್ನು ಅಧ್ಯಯನ ಮಾಡುವಲ್ಲಿ ಆಸಕ್ತಿ ತೋರುತ್ತಾರೆ. ಇವರಲ್ಲಿರುವ ವಿದ್ಯೆಯು ಹಲವಾರು ಜನರಿಗೆ ಉಪಯೋಗವಾಗುತ್ತದೆ.

ಉನ್ನತ ಅಧಿಕಾರ ದೊರೆತರೂ ಯಾರಿಗೂ ತೊಂದರೆ ಮಾಡುವುದಿಲ್ಲ. ಅಧಿಕಾರವನ್ನು ಉಳಿಸಿಕೊಳ್ಳಲು ಯಾರೊಂದಿಗೂ ರಾಜಿಯಾಗುವುದಿಲ್ಲ. ಬಂದದ್ದನ್ನು ಸ್ವೀಕರಿಸುವ ಬುದ್ಧಿ ಇವರಲ್ಲಿ ಇರುತ್ತದೆ. ಆದರೆ ತಮ್ಮ ಅಧಿಕಾರದ ಅವಧಿಯಲ್ಲಿ ಸಾಧ್ಯವಾದಷ್ಟು ಎಲ್ಲರಿಗೂ ಸಹಾಯ ಮಾಡುತ್ತಾರೆ. ಕೇವಲ ಕುಟುಂಬದ ಹಿರಿಯರಿಗಲ್ಲದೆ, ಪರಿಚಯವಿಲ್ಲದ ಹಿರಿಯರನ್ನೂ ಸಹ ಗೌರವದಿಂದ ಕಾಣುತ್ತಾರೆ. ಬೇರೆಯವರಿಗೆ ಮನ ಮುಟ್ಟುವಂತೆ ಬುದ್ಧಿವಾದ ಹೇಳುವಲ್ಲಿ ನಿಸ್ಸೀಮರು. ಬುದ್ಧಿವಾದ ಹೇಳುವುದೆಂದರೆ ಬಹಳ ಪ್ರೀತಿ. ಇವರಿಂದ ಯಾರಾದರೂ ತಮ್ಮ ಜೀವನ ರೂಪಿಸಿಕೊಂಡರೆ ಹೆಮ್ಮೆಪಡುವ ಮಂದಿ. ದುಡುಕುತನದಿಂದ ತಪ್ಪನ್ನು ಮಾಡಿ ಪಶ್ಚಾತಾಪ ಪಡುತ್ತಾರೆ. ತಾವು ತಪ್ಪು ಮಾಡಲು ಇಚ್ಚಿಸುವುದಿಲ್ಲ. ಹಾಗೆ ಬೇರೆಯವರ ತಪ್ಪನ್ನು ಒಪ್ಪುವುದೂ ಇಲ್ಲ.

ಇವರಿದ್ದ ಕಡೆ ಹಾಸ್ಯದ ಹೊನಲು ಹರಿಯುತ್ತದೆ

ಇವರ ಕುಟುಂಬದಲ್ಲಿ ಶಾಂತಿ ನೆಮ್ಮದಿ ತುಂಬಿರುತ್ತದೆ. ಇವರು ಇದ್ದ ಕಡೆ ಹಾಸ್ಯಕ್ಕೆ ಕೊರತೆ ಇರುವುದಿಲ್ಲ. ವಿದ್ಯೆಗಿಂತಲೂ ಮೀರಿದ ವಿಶೇಷವಾದ ಬುದ್ಧಿಶಕ್ತಿ ಇವರಲ್ಲಿ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಪ್ರಯತ್ನ ಪಡದೆ ದೇವರ ಮೇಲೆ ಜವಾಬ್ದಾರಿ ಹಾಕುವುದಿಲ್ಲ. ಬೇರೆಯವರಿಗೆ ಸ್ಪೂರ್ತಿ ಆಗುವಂತೆ ನೆಮ್ಮದಿಯ ದಾಂಪತ್ಯ ಜೀವನ ನಡೆಸಲಿದ್ದಾರೆ. ತಮ್ಮಂತೆ ಬೇರೆಯವರಿಗೆ ಸಹಾಯ ಮಾಡುವ ಮಟ್ಟಕ್ಕೆ ಮಕ್ಕಳನ್ನು ಬೆಳೆಸುತ್ತಾರೆ. ಒಟ್ಟಾರೆ ಒಮ್ಮೆ ಇವರ ಮನಸ್ಸನ್ನು ಗೆದ್ದರೆ ಎಲ್ಲರೊಂದಿಗೆ ಬೆರೆತು ಬಾಳುವ ಮನಸ್ಥಿತಿ ಇರುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ಜ್ಯೋತಿಷ್ಯ ಕುರಿತಾದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ