ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Numerology: ವೈದ್ಯರಾಗಲು ಆಸಕ್ತಿ, ವಿದೇಶಿ ಭಾಷೆಗಳನ್ನು ಕಲಿಯುವಲ್ಲಿ ಪರಿಣಿತರು; 18ನೇ ತಾರೀಖಿನಂದು ಹುಟ್ಟಿದವರ ಗುಣ ಲಕ್ಷಣ

Numerology: ವೈದ್ಯರಾಗಲು ಆಸಕ್ತಿ, ವಿದೇಶಿ ಭಾಷೆಗಳನ್ನು ಕಲಿಯುವಲ್ಲಿ ಪರಿಣಿತರು; 18ನೇ ತಾರೀಖಿನಂದು ಹುಟ್ಟಿದವರ ಗುಣ ಲಕ್ಷಣ

Numerology: ಸಂಖ್ಯಾಶಾಸ್ತ್ರದಲ್ಲಿ ಜನ್ಮ ದಿನಾಂಕದ ಆಧಾರದ ಮೇಲೆ ಭವಿಷ್ಯ ಹೇಳಲಾಗುತ್ತದೆ. ಒಂದೊಂದು ದಿನಾಂಕದಲ್ಲಿ ಹುಟ್ಟಿರುವವರು ಒಂದೊಂದು ರೀತಿಯ ಗುಣಗಳನ್ನು ಹೊಂದಿರುತ್ತಾರೆ. 18ನೇ ದಿನಾಂಕದಂದು ಜನಿಸಿದ ಜನರ ಗುಣ ಲಕ್ಷಣಗಳು ಹೇಗಿರುತ್ತವೆ ನೋಡೋಣ.

18ನೇ ತಾರೀಖಿನಂದು ಹುಟ್ಟಿದವರ ಗುಣ ಲಕ್ಷಣ
18ನೇ ತಾರೀಖಿನಂದು ಹುಟ್ಟಿದವರ ಗುಣ ಲಕ್ಷಣ (PC: Freepik)

ಸಂಖ್ಯಾಶಾಸ್ತ್ರ: 18 ನೇ ದಿನಾಂಕದಂದು ಜನಿಸಿದವರು ಸದಾ ಕಾಲ ಹೊಸ ವಿಚಾರವನ್ನು ಕಲಿಯಲು ನಿರತರಾಗುತ್ತಾರೆ. ತಮಗೆ ತಿಳಿದಿರುವ ಎಲ್ಲಾ ವಿಚಾರಗಳನ್ನು ಬೇರೆಯವರಿಗೆ ಕಲಿಸಲು ಪ್ರಯತ್ನಿಸುತ್ತಾರೆ. ಇವರಿಗೆ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಆದರೆ ಯಾವುದೇ ಕೆಲಸ ಕಾರ್ಯಗಳಾದರೂ ತಡವಾಗಿ ಆರಂಭಿಸುತ್ತಾರೆ. ಕೆಲವೊಮ್ಮೆ ಇವರಿಗೆ ಬೇರೆಯವರ ಸಹಾಯವಿಲ್ಲದೆ ಹೋದರೂ ಸ್ಪೂರ್ತಿಯ ಅಗತ್ಯ ಕಂಡುಬರುತ್ತದೆ. ಇವರಿಗೆ ತಂದೆ ಅಥವಾ ವಂಶದ ಹಿರಿಯರ ವೃತ್ತಿ ಅಥವಾ ವ್ಯಾಪಾರವನ್ನು ಮುಂದುವರಿಸುವ ಆಸೆ ಇರುತ್ತದೆ.

ಈ ತಾರೀಖಿನಂದು ಜನಿಸಿದವರು ಚಿಕ್ಕ ವಯಸ್ಸಿನಲ್ಲಿಯೇ ಸಮಾಜ ತಿದ್ದುವ ಕೆಲಸವನ್ನು ಆರಂಭಿಸುತ್ತಾರೆ. ಇವರಿಗೆ ತಂದೆ ಎಂದರೆ ಅಪರಿಮಿತ ಪ್ರೀತಿ ಮತ್ತು ಭಕ್ತಿ. ಹಾಗೆಯೇ ತಾಯಿಯ ಜೊತೆ ಚಿಕ್ಕಮ್ಮ ದೊಡ್ಡಮ್ಮ ಎಂದರು ಹೆಚ್ಚಿನ ಪ್ರೀತಿ ಮತ್ತು ವಿಶ್ವಾಸ ಇರುತ್ತದೆ. ಕುಟುಂಬದಲ್ಲಿ ಯಾವುದಾದರೂ ಒಂದು ಒಳ್ಳೆಯ ಮಂಗಳ ಕಾರ್ಯಗಳನ್ನು ಸದಾ ಕಾಲ ಆಯೋಜಿಸುತ್ತಾರೆ. ಅದೃಷ್ಟದಲ್ಲಿ ನಂಬಿಕೆ ಇರುತ್ತದೆ. ಶಿಕ್ಷಕರಾದ ಇವರಿಗೆ ಸಮಾಜದಲ್ಲಿ ವಿಶೇಷವಾದಂತಹ ಪ್ರಾತಿನಿಧ್ಯ ಲಭಿಸುತ್ತದೆ. ಕುಟುಂಬದ ಮತ್ತು ಸುತ್ತಮುತ್ತಲಿನ ಪರಿಸರದ ಲೋಪ ದೋಷಗಳನ್ನು ತಿದ್ದುವುದೆಂದರೆ ಇವರಿಗೆ ಭಾರಿ ಸಂತಸ. ಒಮ್ಮೊಮ್ಮೆ ಇವರು ತಮ್ಮಲ್ಲಿರುವ ಬುದ್ಧಿಶಕ್ತಿ ಮತ್ತು ಸಾಮರ್ಥ್ಯವನ್ನು ಮರೆತು ತಮಗೆ ಏನೂ ತಿಳಿಯದವರಂತೆ ವರ್ತಿಸುತ್ತಾರೆ.

ಕಥೆ ಹೇಳುವಲ್ಲಿ ಮೊದಲಿಗರು

ಅಪಾಯದ ಅಂಚಿನಲ್ಲಿ ಇದ್ದರೂ ಬುದ್ದಿವಂತಿಕೆಯಿಂದ ಸಹಜ ಸ್ಥಿತಿಗೆ ಮರಳುತ್ತಾರೆ. ಕುಟುಂಬಕ್ಕೆ ಸಂಬಂಧಿಸಿದ ಭೂ ವಿವಾದವಾಗಲಿ ಅಥವಾ ಹಣದ ವಿವಾದವಾಗಲಿ ಇವರಿಂದ ಪರಿಹಾರವಾಗುತ್ತದೆ. ದೇವರ ಪೂಜೆ ಮಾಡಿದರೆ ಎದುರಾಗುವ ತೊಂದರೆಗಳು ಸುಲಭವಾಗಿ ಮರೆ ಆಗುತ್ತವೆ. ಧಾರ್ಮಿಕತೆಗೆ ಸಂಬಂಧಿಸಿದ ಕಥೆ ಕೇಳುವಲ್ಲಿ ಮತ್ತು ಕಥೆ ಹೇಳುತ್ತಾರೆ. ವಯಸ್ಸಿನ ಅಂತರವಿಲ್ಲದೆ ಸದಾ ಕಾಲ ಎಲ್ಲರೊಂದಿಗೆ ಬೆರೆತು ಇರಲು ಇಷ್ಟಪಡುತ್ತಾರೆ. ಶಿಕ್ಷಕರು ಅಥವಾ ಮಕ್ಕಳ ವೈದ್ಯರಾಗಲು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಇವರು ತಮ್ಮ ಮನಸ್ಸಿಗೆ ಇಷ್ಟವೆನಿಸುವ ವಿಚಾರಗಳನ್ನು ಗಳಿಸಿಕೊಳ್ಳುತ್ತಾರೆ. ಕೇವಲ ಮಾತೃಭಾಷೆ ಮಾತ್ರವಲ್ಲದೆ ವಿದೇಶಿ ಭಾಷೆಗಳನ್ನು ಸುಲಭವಾಗಿ ಕಲಿತು ಬಳಸಲು ಸಶಕ್ತರಾಗಿರುತ್ತಾರೆ. ಮಂತ್ರ ತಂತ್ರಗಳಲ್ಲಿ ಆಸಕ್ತಿ ಮೂಡುತ್ತದೆ. ಸ್ವತ: ಉದ್ಯಮಿಗಳಾಗಿದ್ದಲ್ಲಿ ಯಾವುದೇ ರೀತಿಯ ಏರಿಳಿತಗಳು ಕಂಡುಬರುವುದಿಲ್ಲ. ಸಾಮಾನ್ಯವಾಗಿ ಇವರು ಮಾತನಾಡುವುದಿಲ್ಲ. ಆದರೆ ಮಾತನಾಡಲು ಆರಂಭಿಸಿದರೆ ಕೊನೆ ಮೊದಲಿರುವುದಿಲ್ಲ.

ಪುಸ್ತಕ ಪ್ರಕಾಶಕರು ಅಥವಾ ಲೇಖಕರಾದಲ್ಲಿ ಸರ್ಕಾರದಿಂದ ವಿಶೇಷವಾದಂತಹ ಗೌರವ ಮತ್ತು ಅವಕಾಶಗಳು ದೊರೆಯುತ್ತದೆ. 40 ವರ್ಷಗಳ ನಂತರ ಇವರಿಗೆ ಸಮಾಜದ ನಾಯಕರ ಸ್ಥಾನಮಾನ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಸಾಮಾನ್ಯವಾಗಿ ಇವರ ಸಂಗಾತಿಯು ಇವರ ಎಲ್ಲ ಮಾತುಗಳನ್ನು ಒಪ್ಪುತ್ತಾರೆ. ಇಲ್ಲವಾದಲ್ಲಿ ಇವರ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇವರ ಮನಸ್ಸನ್ನು ಅರಿತು ನಡೆವ ಸಂಗಾತಿ ದೊರೆಯುತ್ತಾರೆ. ಇವರ ಮಕ್ಕಳಿಗೂ ಸಾಮಾನ್ಯ ಬಹುತೇಕ ಇವರಲ್ಲಿರುವ ಗುಣ ಧರ್ಮಗಳೇ ಇರುತ್ತವೆ. ಯಾವುದೇ ವಿಶೇಷವಾದ ಅನುಕೂಲತೆ ಅಥವಾ ಐಷಾರಾಮಿ ಜೀವನ ಇಷ್ಟ ಪಡುವುದಿಲ್ಲ .ಇವರಿಗೆ ವಿಶೇಷವಾದ ಮತ್ತು ಉತ್ತಮ ವಿದ್ಯಾಭ್ಯಾಸವಿರುತ್ತದೆ. ಆದರೆ ದೊಡ್ಡಮಟ್ಟದ ಬುದ್ಧಿಶಕ್ತಿಯನ್ನು ಇವರಲ್ಲಿ ಕಾಣಬಹುದು.

ಕಥೆ ಕವನಗಳನ್ನು ಬರೆಯುತ್ತಾರೆ

ವಂಶದ ಹಿರಿಯರು ಕಟ್ಟಿಸಿದ ಮನೆ ಅಥವಾ ಧಾರ್ಮಿಕ ಕೇಂದ್ರವನ್ನು ಪುನರುಜ್ಜೀವನಗೊಳಿಸುತ್ತಾರೆ. ಹಾಳಾದ ವಸ್ತುಗಳನ್ನು ಸರಿ ಪಡಿಸುವುದು ಇವರಿಗೆ ಇಷ್ಟವಾದ ವಿಚಾರ. ಇವರಿಗೆ ಅರಿಯದ ವಿಚಾರ ಯಾವುದು ಇರುವುದಿಲ್ಲ. ಕುಳಿತಲ್ಲಿಯೇ ಕಥೆ ಕವನಗಳನ್ನು ಬರೆಯುವಲ್ಲಿ ಮೊದಲಿಗರು. ಮಕ್ಕಳನ್ನು ವಿದೇಶದಲ್ಲಿ ಓದಿಸುವ ಸಂಕಲ್ಪ ತೊಟ್ಟಿರುತ್ತಾರೆ. ಅತಿಯಾದ ಆಸೆ ಇರದೆ, ಯಾವುದೇ ರೀತಿಯ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಮನಸಿರುತ್ತದೆ. ದೊಡ್ಡವರಾಗಲಿ ಅಥವಾ ಚಿಕ್ಕವರಾಗಲಿ ಒಂದೇ ರೀತಿಯ ಗೌರವವನ್ನು ನೀಡುತ್ತಾರೆ. ಇವರಿಗೆ ನೀಡಬೇಕಾದ ಗೌರವದಲ್ಲಿ ಕಡಿಮೆಯಾದಲ್ಲಿ ಕೋಪ ವ್ಯಕ್ತಪಡಿಸುತ್ತಾರೆ. ಇವರು ಪ್ರವಾಸ ಪ್ರಿಯರು.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).