ವಿದ್ಯೆ ಹಂಚುವುದರಲ್ಲಿ ಸಂತೋಷ, ಹಣದ ಬಗ್ಗೆ ವ್ಯಾಮೋಹವೇ ಇಲ್ಲ; 27ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಿದ್ಯೆ ಹಂಚುವುದರಲ್ಲಿ ಸಂತೋಷ, ಹಣದ ಬಗ್ಗೆ ವ್ಯಾಮೋಹವೇ ಇಲ್ಲ; 27ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ

ವಿದ್ಯೆ ಹಂಚುವುದರಲ್ಲಿ ಸಂತೋಷ, ಹಣದ ಬಗ್ಗೆ ವ್ಯಾಮೋಹವೇ ಇಲ್ಲ; 27ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ

Birth Date Astrology: ಯಾವುದೇ ವ್ಯಕ್ತಿಯ ಗ್ರಹಗತಿಗಳನ್ನು ನೋಡುವಾಗ ಜನ್ಮ ದಿನಾಂಕವನ್ನು ಪರಿಗಣಿಸಲಾಗುತ್ತದೆ. ಅದರ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಹೇಗಿರಬಹುದು ಎಂದು ಅಂದಾಜಿಸಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆಯೂ ಅವರ ಗುಣಧರ್ಮ ಹೇಗಿದೆ ಎಂಬುದನ್ನು ಹೇಳಬಹುದು. 27ನೇ ತಾರೀಕಿನಂದು ಜನಿಸಿದವರ ಗುಣಲಕ್ಷಣ ತಿಳಿಯಿರಿ.

ವಿದ್ಯೆ ಹಂಚುವುದರಲ್ಲಿ ಸಂತೋಷ, ಹಣದ ಬಗ್ಗೆ ವ್ಯಾಮೋಹವೇ ಇಲ್ಲ; 27ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ
ವಿದ್ಯೆ ಹಂಚುವುದರಲ್ಲಿ ಸಂತೋಷ, ಹಣದ ಬಗ್ಗೆ ವ್ಯಾಮೋಹವೇ ಇಲ್ಲ; 27ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ (PC: Canva)

ಈ ದಿನಾಂಕದಂದು ಜನಿಸಿದವರಿಗೆ ಸಾಮಾನ್ಯವಾಗಿ ಚಂಚಲ ಸ್ವಭಾವವಿರುತ್ತದೆ. ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ಮನಸ್ಸಿನಲ್ಲಿ ಭಯ ಆವರಿಸುತ್ತದೆ. ತಪ್ಪು ಅಭಿಪ್ರಾಯದಿಂದ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಆದರೆ ಈ ದಿನಾಂಕವು ಮಹಿಳೆಯರಿಗೆ ವಿಶೇಷವಾಗಿರುತ್ತದೆ. ವಂಶದ ಹಿರಿಯರು ತಮ್ಮ ಜವಾಬ್ದಾರಿಯನ್ನು ಸುಲಭವಾಗಿ ಪೂರೈಸುತ್ತಾರೆ. ಶ್ರೀ ದುರ್ಗಾ ಮಾತೆ ಮತ್ತು ಮಹಾಲಕ್ಷ್ಮಿಯಲ್ಲಿ ಹೆಚ್ಚಿನ ನಂಬಿಕೆ ಇರುತ್ತದೆ.

ಯಾವುದೇ ಕೆಲಸ ಆರಂಭಿಸುವ ಮೊದಲು ದುರ್ಗೆಯನ್ನು ಪೂಜಿಸುತ್ತಾರೆ. ಯಾವುದೇ ವಿಚಾರವಾದರೂ ಒಮ್ಮೆ ಓದಿದರೆ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳಾಗಿದ್ದಾಗಲೇ ಸಹಪಾಠಿಗಳು ಇವರನ್ನು ಅವಲಂಬಿಸಿರುತ್ತಾರೆ. ತಾವು ಕಲಿತ ವಿಷಯಗಳನ್ನು ಬೇರೆಯವರಿಗೆ ಹೇಳಿಕೊಡುವುದೇನೆಂದರೆ ಎಲ್ಲಿಲ್ಲದ ಸಂತೋಷ. ಜೀವನದಲ್ಲಿ ಒಳ್ಳೆಯ ಅವಕಾಶಗಳು ಎದುರಾದಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಇವರು ತೆಗೆದುಕೊಳ್ಳುವ ತೀರ್ಮಾನಗಳು ಬಹಳ ನಿಧಾನವಾಗುತ್ತದೆ. 

ಯಾರೊಂದಿಗೂ ಶತ್ರುತ್ವ ಬೆಳೆಸಿಕೊಳ್ಳುವುದಿಲ್ಲ

ಶ್ರೀ ದುರ್ಗಾಮಾತೆಯ ಪೂಜೆಯಿಂದ ಮಾತ್ರ ಮನದಲ್ಲಿ ಇರುವ ಅಂಜಿಕೆಯು ದೂರವಾಗುತ್ತದೆ. ಇವರು ಸಂಪ್ರದಾಯಗಳನ್ನು ಮರೆಯದೆ ಒಳ್ಳೆ ದಾರಿಯಲ್ಲಿ ಮುಂದುವರೆಯುತ್ತಾರೆ. ಸಾಮಾನ್ಯವಾಗಿ ಇವರಿಗೆ ವಂಶದ ಹಿರಿಯರ ಗುಣ ಧರ್ಮಗಳು ಬಂದಿರುತ್ತವೆ. ಯಾರೊಂದಿಗೂ ಶತ್ರುತ್ವವನ್ನು ಬೆಳೆಸಿಕೊಳ್ಳದೆ ಎಲ್ಲರ ಪ್ರೀತಿ ವಿಶ್ವಾಸದಿಂದ ಇರುತ್ತಾರೆ.

ಬಾಲ್ಯದಲ್ಲಿಯೇ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಅಶಕ್ತರ ಸೇವೆ ಮಾಡುವಲ್ಲಿ ಇವರೇ ಮೊದಲಿಗರು. ಹೆತ್ತತಾಯಿಯೇ ಇವರಿಗೆ ಮೊದಲ ಗುರುವಾಗುತ್ತಾರೆ. ಹೆತ್ತವರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ತಂದೆ ಅಥವಾ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಸಹಾಯ ಸಹಕಾರ ದೊರೆಯುತ್ತದೆ. ಯಾರನ್ನು ಅಗೌರವದಿಂದ ಕಾಣದ ಇವರು ಎಲ್ಲರಿಂದ ತಾವೂ ಗೌರವವನ್ನು ನಿರೀಕ್ಷಿಸುತ್ತಾರೆ. ಮನೆಯಲ್ಲಿರುವ ಹೆಣ್ಣು ಮಕ್ಕಳು ಮಾತ್ರವಲ್ಲದೆ ಹೊರಗಿನವರನ್ನು ಸೋದರತ್ವದಿಂದ ಸಲಹುತ್ತಾರೆ. ರಾಜಕೀಯದಲ್ಲಿ ಉತ್ತಮ ಅವಕಾಶ ದೊರೆತರೂ ಒಪ್ಪದ ಇವರು ಜನಸೇವೆಯಲ್ಲಿ ನಿರತರಾಗುತ್ತಾರೆ. 

ವಿವಿಧ ಭಾಷೆಗಳಲ್ಲಿ ಪರಿಣಿತರು

ಒಂದು ಭಾಷೆಯಿಂದ ಬೇರೆ ಭಾಷೆಗೆ ಸುಲಭವಾಗಿ ಕಲಿತ, ಓದಿದ ವಿಚಾರಗಳನ್ನು ಭಾಷಾಂತರಿಸುತ್ತಾರೆ. ಸ್ವಲ್ಪ ಪ್ರಯತ್ನ ಪಟ್ಟಲ್ಲಿ ವಿದೇಶಿ ಭಾಷೆಯು ನಿಮಗೆ ಕರಗತವಾಗುತ್ತದೆ. ಆದರೆ ಮನದಲ್ಲಿ ಸ್ವಲ್ಪ ಹಿಂಜರಿಕೆ ಇರುತ್ತದೆ. ಸದಾಕಾಲ ಧನಾತ್ಮಕವಾಗಿ ಯೋಚಿಸಿದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ನಿಮ್ಮಲ್ಲಿರುವ ಕ್ಷಮಾಗುಣವು ಸಂಗಾತಿಯು ಸುಲಭವಾಗಿ ಸೋಲುವಂತೆ ಮಾಡುತ್ತದೆ. ನಿಮ್ಮ ಜೀವಿತಾವಧಿಯ ಕಾಲದಲ್ಲಿಯೇ ನಿಮ್ಮ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನ ಮತ್ತು ಗೌರವವನ್ನು ಗಳಿಸುತ್ತಾರೆ.

ಈ ದಿನಾಂಕದಲ್ಲಿ ಜನಿಸಿದ ಮಹಿಳಾ ಅಧಿಕಾರಿಗಳು ಅನಾವಶ್ಯಕವಾದ ವಾದ ವಿವಾದಗಳನ್ನು ಎದುರಿಸುತ್ತಾರೆ. ಸೋದರ ಸೋದರಿಯ ಜೊತೆ ಸಂತೋಷದಿಂದ ಜೀವನ ನಡೆಸುತ್ತಾರೆ. ಬೇರೆಯವರು ಆಡುವ ಮಾತನ್ನು ತೂಗಿ ನೋಡುವ ಸ್ವಭಾವದವರು. ಯಾವುದೇ ಮುಚ್ಚು ಮರೆ ಇಲ್ಲದೆ ಬೇರೆಯವರ ತಪ್ಪು ಒಪ್ಪುಗಳನ್ನು ಹೇಳುವಿರಿ. ವಿದ್ಯಾರ್ಥಿಗಳು ಉನ್ನತಮಟ್ಟದ ಸಾಧನೆ ಮಾಡುತ್ತಾರೆ. ಇವರ ಬಳಿ ದೊಡ್ಡ ಗ್ರಂಥಾಲಯವೇ ಇರುತ್ತದೆ. ಬೇರೆಯವರು ತಪ್ಪು ದಾರಿಯಲ್ಲಿ ನಡೆದಾಗ ಅದನ್ನು ಸರಿಪಡಿಸುವಲ್ಲಿ ಸಂತೋಷ ಕಾಣುತ್ತಾರೆ. ಜೀವನದಲ್ಲಿ ತಮ್ಮದೇ ಆದ ಕಟ್ಟುಪಾಡುಗಳನ್ನು ವಿಧಿಸಿಕೊಳ್ಳುತ್ತಾರೆ. 

ಹಣದ ವ್ಯಾಮೋಹವಿರುವುದಿಲ್ಲ

ಸ್ವಂತ ವ್ಯಾಪಾರ ವ್ಯವಹಾರಗಳಿದ್ದಲ್ಲಿ ಹೆಚ್ಚಿನ ವರಮಾನ ನಿರೀಕ್ಷಿಸುವುದಿಲ್ಲ. ದಿನನಿತ್ಯದ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಪ್ರಯತ್ನಿಸುತ್ತಾರೆ. ಅನಾವಶ್ಯಕವಾಗಿ ಯಾವುದೇ ವಿಚಾರಗಳಿಗೂ ಹಣ ಖರ್ಚು ಮಾಡುವುದಿಲ್ಲ. ಕಷ್ಟಕಾಲಕ್ಕೆಂದು ಹಣ ಉಳಿಸುತ್ತಾರೆ. ತಾವು ದುಡಿದ ಹಣದಿಂದ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಾರೆ. ಕೆಲವೊಮ್ಮೆ ಬೇರೆಯವರ ಮಾತನ್ನು ನಂಬಿ ತಂದೆಯೊಂದಿಗೆ ವಾದ ವಿವಾದದಲ್ಲಿ ತೊಡಗುತ್ತಾರೆ. ತಮ್ಮ ತಪ್ಪನ್ನು ಒಪ್ಪಿಕೊಂಡು ಸರಿಯಾಗಿ ನಡೆಯುವುದು ಇವರ ಗುಣ. ಒಟ್ಟಾರೆ ಇವರಿಗೆ ವಿದ್ಯೆಯಿಂದಲೇ ಜೀವನ. ತಮ್ಮಲ್ಲಿರುವ ವಿದ್ಯೆಯನ್ನು ಹಂಚುವುದರಲ್ಲಿ ಸಂತೋಷ ಕಾಣುತ್ತಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.