ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Numerology: ಕುಟುಂಬಕ್ಕಾಗಿ ಯಾವುದೇ ತ್ಯಾಗಕ್ಕೆ ಸಿದ್ಧ, ಜ್ಞಾನ ಹಂಚಲು ಸದಾ ಮುಂದು; 21ನೇ ತಾರೀಖಿನಂದು ಜನಿಸಿದವರ ಗುಣ ಲಕ್ಷಣ

Numerology: ಕುಟುಂಬಕ್ಕಾಗಿ ಯಾವುದೇ ತ್ಯಾಗಕ್ಕೆ ಸಿದ್ಧ, ಜ್ಞಾನ ಹಂಚಲು ಸದಾ ಮುಂದು; 21ನೇ ತಾರೀಖಿನಂದು ಜನಿಸಿದವರ ಗುಣ ಲಕ್ಷಣ

Birth Date Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ವ್ಯಕ್ತಿಯ ಜಾತಕ ಬರೆಯಬೇಕಾದರೂ, ರಾಶಿಫಲ ನೋಡಬೇಕಾದರೂ ಜನ್ಮ ದಿನಾಂಕ ಪರಿಗಣಿಸುವುದು ಸಹಜ. ಇದರ ಆಧಾರದ ಮೇಲೆ ಆ ವ್ಯಕ್ತಿ ಗುಣಧರ್ಮವನ್ನೂ ಅಂದಾಜಿಸಲಾಗುತ್ತದೆ. ಇಲ್ಲಿ 21 ನೇ ತಾರೀಖಿನಂದು ಜನಿಸಿದವರ ಗುಣಧರ್ಮವನ್ನು ತಿಳಿಯೋಣ. (ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು)

21ನೇ ತಾರೀಖಿನಂದು ಜನಿಸಿದವರ ಗುಣ ಲಕ್ಷಣ
21ನೇ ತಾರೀಖಿನಂದು ಜನಿಸಿದವರ ಗುಣ ಲಕ್ಷಣ (canva)

ಈ ತಾರೀಖಿನಂದು ಜನಿಸಿದವರು ಆತ್ಮೀಯರ ಮನದಲ್ಲಿರುವ ಋಣಾತ್ಮಕ ಭಾವನೆಗಳನ್ನು ದೂರ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಕೆಲಸ ಕಾರ್ಯಗಳನ್ನು ಆರಂಭಿಸುವ ಬಗ್ಗೆ ದಿಢೀರ್ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಕೆಲವೊಮ್ಮೆ ಇವರು ತಮ್ಮ ಸ್ವಂತ ಕೆಲಸ ಕಾರ್ಯಗಳನ್ನು ಮರೆತು ಬೇರೆಯವರಿಗೆ ಸಹಾಯ ಮಾಡುತ್ತಾರೆ. ಬೇರೆಯವರ ಯಶಸ್ಸಿನಲ್ಲಿ ಮುಖ್ಯ ಪಾತ್ರವಹಿಸುತ್ತಾರೆ. ಇವರ ಜೀವನದಲ್ಲಿ ಸದಾಕಾಲ ಒಳ್ಳೆಯ ಬದಲಾವಣೆಗಳು ಕಂಡುಬರುತ್ತವೆ.

ಈ ದಿನಾಂಕದಂದು ಜನಿಸಿದವರು ಕುಟುಂಬದ ಪ್ರತಿಷ್ಠೆಯನ್ನು ಉಳಿಸಲು ಯಾವುದೇ ತ್ಯಾಗ ಮಾಡುತ್ತಾರೆ. ಆದರೆ ನಿಮ್ಮ ಕೆಲಸ ಕಾರ್ಯದ ವೈಖರಿಯನ್ನು ಕಂಡು ಹೊಟ್ಟೆಕಿಚ್ಚು ಪಡುವ ಮಂದಿ ಸುತ್ತಮುತ್ತ ಇರುತ್ತಾರೆ. ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಸುಲಭವಾದ ಯಶಸ್ಸು ದೊರೆಯುತ್ತದೆ. ಸಮಾಜದ ಒಳಿತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ. ಓದಲಾಗದ ಜನರಿಗೆ ಹಣದ ಸಹಾಯ ಮಾತ್ರವಲ್ಲದೆ ತಮ್ಮಲ್ಲಿರುವ ಜ್ಞಾನವನ್ನು ಹಂಚುತ್ತಾರೆ. ಅಶಕ್ತ ವಯೋವೃದ್ಧರಿಗೆ ಊರುಗೋಲಾಗಿ ಜನರ ಮನಸ್ಸನ್ನು ಗೆಲ್ಲುವಿರಿ. ಮಾಡುವ ತಪ್ಪನ್ನು ಧೈರ್ಯದಿಂದ ಒಪ್ಪಿಕೊಳ್ಳುವ ಬುದ್ಧಿ ನಿಮ್ಮಲ್ಲಿ ಇರುತ್ತದೆ. ಉಪಯೋಗವೇ ಇಲ್ಲದಂತಹ ಕೆಲಸವನ್ನು ಮಾಡಲು ಇಚ್ಛೆ ಪಡುವುದಿಲ್ಲ. ಯಾವುದೇ ಕೆಲಸ ಆರಂಭಿಸುವ ಮೊದಲು ಆದರೆ ಪೂರ್ವಾಪರ ಸತ್ಯ ಅಸತ್ಯಗಳನ್ನು ತಿಳಿದು ನೋಡುವಿರಿ.

ಸಮಯ ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ

ಸದಾ ಕಾಲ ಒಳ್ಳೆಯದನ್ನು ಯೋಚನೆ ಮಾಡುವಿರಿ. ಕುಟುಂಬದಲ್ಲಿ ಅನೇಕ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಇವರಿಗೆ ಇಷ್ಟವೆನಿಸುವ ತಿಂಡಿ ತಿನಿಸುಗಳನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಇವರ ಬಾಲ್ಯದಲ್ಲಿ ಅಚ್ಚರಿ ಮೂಡಿಸುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಕೇವಲ ವಿದ್ಯಾಭ್ಯಾಸವೊಂದೇ ಇವರ ಗುರಿ ಆಗಿರುವುದಿಲ್ಲ. ಕಲಿಕೆಯೊಂದಿಗೆ ಕ್ರೀಡಾ ಸ್ಪರ್ಧೆಗಳಲ್ಲಿಯೂ ಮುಂದಿರುತ್ತಾರೆ. ಯಾವುದೋ ಒಂದೇ ವಿಚಾರದಲ್ಲಿ ಸಮಯವನ್ನು ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ.

ಕುಟುಂಬದಲ್ಲಿನ ಸಮಸ್ಯೆಗಳನ್ನು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಸರಿಪಡಿಸುತ್ತಾರೆ. ಅನಾಥಾಶ್ರಮಕ್ಕೆ ಹಣ ಮತ್ತು ದಿನಸಿ ಪದಾರ್ಥಗಳನ್ನು ನೀಡುತ್ತಾರೆ. ಇವರ ವಯಸ್ಸಿನ ಗುಂಪಿಗೆ ನಾಯಕರಾಗಿ ಮೆರೆಯುತ್ತಾರೆ. ಧರ್ಮ ಪ್ರಚಾರ ಮಾಡುವಲ್ಲಿ ಇವರೇ ಮೊದಲಿಗರು. ಸುಲಭವಾಗಿ ಎಲ್ಲರೊಂದಿಗೆ ಸ್ನೇಹ ಬೆಳೆಸುವುದಿಲ್ಲ. ಬೇರೆಯವರು ಮಾಡುವ ತಪ್ಪನ್ನು ಸರಿಪಡಿಸುವುದರಲ್ಲಿ ವೇಳೆ ಕಳೆಯುತ್ತಾರೆ. ವೇದಾಂತ ಹೇಳುವಲ್ಲಿ ಇವರಿಗೆ ಸಂತೋಷ ದೊರೆಯಲಿದೆ. ತಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ಬೇರೆಯವರನ್ನು ಆಶ್ರಯಿಸುವುದಿಲ್ಲ. ಕುಟುಂಬದ ಹಿರಿಯರ ಮನಸ್ಸನ್ನು ನೋಯಿಸದೆ ಹಿರಿಯರ ಇಚ್ಛೆಯಂತೆ ವಿವಾಹವಾಗುತ್ತಾರೆ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ರೂಪುಗೊಳ್ಳುತ್ತದೆ ಇವರ ಮಕ್ಕಳಿಗೂ ಇವರಲ್ಲಿರುವ ಬುದ್ದಿಯೇ ಇರುತ್ತದೆ. ಎಂದಿಗೂ ಆಡಂಬರದ ಜೀವನ ನಡೆಸುವುದಿಲ್ಲ.

ಒಂದೇ ಉದ್ಯೋಗದಲ್ಲಿ ನಿಲ್ಲುವುದಿಲ್ಲ

ಕುಟುಂಬದ ಸದಸ್ಯರ ಜೊತೆ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಲ್ಲಿ ಸಂತೋಷ ಪಡುತ್ತಾರೆ. ತಮ್ಮ ವ್ಯಾಪಾರ ವ್ಯವಹಾರಗಳನ್ನು ದೇಶ ವ್ಯಾಪಿ ವಿಸ್ತರಿಸಲು ಪ್ರಯತ್ನಿಸುತ್ತಾರೆ. ಉದ್ಯೋಗದಲ್ಲಿಯೂ ಸಹ ಒಂದೇ ಸ್ಥಳದಲ್ಲಿ ಬಹುದಿನ ನಿಲ್ಲುವುದಿಲ್ಲ. ಕೆಲವರು ಪದೇ ಪದೆ ಉದ್ಯೋಗ ಬದಲಾಯಿಸುತ್ತಾರೆ. ಸ್ವಂತ ಉದ್ದಿಮೆ ಇದ್ದಲ್ಲಿ ಹೆಚ್ಚಿನ ಹಣ ಗಳಿಸುತ್ತಾರೆ. ಕಷ್ಟ ಎದುರಾದಾಗ ಬುದ್ಧಿವಂತಿಕೆಯಿಂದ ಪಾರಾಗುವಿರಿ. ಮಕ್ಕಳ ಬಗ್ಗೆ ವಿನಾಕಾರಣ ಯೋಚನೆ ಇರುತ್ತದೆ. ಸಂತಾನ ದೋಷವಿರುತ್ತದೆ. ಜೀವನದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಹೊಂದುವರು.

21ನೇ ತಾರೀಖಿನಂದು ಹುಟ್ಟಿದವರು ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಾರೆ. ಶಾಲಾ ಕಾಲೇಜುಗಳು ಅಥವಾ ಧಾರ್ಮಿಕ ಸಂಸ್ಥೆಗಳ ಆಡಳಿತ ನಿಮ್ಮದಾಗಲಿದೆ. ಆರೋಗ್ಯದಲ್ಲಿ ತೊಂದರೆ ಇರಲಿದೆ. ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಬೇರೆ ಬೇರೆ ಬಾಳುವುದಕ್ಕಿಂತ ಕೂಡು ಕುಟುಂಬವನ್ನು ಇಷ್ಟಪಡುವರು. ಮಗಳಿಗೆ ಸಂಬಂಧದಲ್ಲಿ ಉತ್ತಮ ವರನೊಂದಿಗೆ ವಿವಾಹವಾಗುತ್ತದೆ. ಇಳಿ ವಯಸ್ಸಿನಲ್ಲಿಯೂ ಬೇರೆಯವರ ಮೇಲೆ ಅವಲಂಬಿತರಾಗದೆ ಸ್ವಂತಂತ್ಯ್ರ ಜೀವನ ನಿರ್ವಹಿಸುವರು. ಜನ ಸಾಮಾನ್ಯರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಕೆಲಸ ಆರಂಭಿಸುವರು. ಸರಳವಾದ ಆಹಾರ ಕ್ರಮವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಆರೋಗ್ಯದೊಂದಿಗೆ ಬಾಳುತ್ತಾರೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).