ಸಂಖ್ಯಾಶಾಸ್ತ್ರ ಸಂಖ್ಯೆ 1: ರಾಜಕೀಯದಲ್ಲಿ ಇರುವವರಿಗೆ ಅತ್ಯುನ್ನತ ಹುದ್ದೆ ಪ್ರಾಪ್ತಿ, ಪ್ರೀತಿ ವ್ಯಕ್ತಪಡಿಸುವಲ್ಲಿ ಸೋಲುವಿರಿ; 2025 ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಂಖ್ಯಾಶಾಸ್ತ್ರ ಸಂಖ್ಯೆ 1: ರಾಜಕೀಯದಲ್ಲಿ ಇರುವವರಿಗೆ ಅತ್ಯುನ್ನತ ಹುದ್ದೆ ಪ್ರಾಪ್ತಿ, ಪ್ರೀತಿ ವ್ಯಕ್ತಪಡಿಸುವಲ್ಲಿ ಸೋಲುವಿರಿ; 2025 ಭವಿಷ್ಯ

ಸಂಖ್ಯಾಶಾಸ್ತ್ರ ಸಂಖ್ಯೆ 1: ರಾಜಕೀಯದಲ್ಲಿ ಇರುವವರಿಗೆ ಅತ್ಯುನ್ನತ ಹುದ್ದೆ ಪ್ರಾಪ್ತಿ, ಪ್ರೀತಿ ವ್ಯಕ್ತಪಡಿಸುವಲ್ಲಿ ಸೋಲುವಿರಿ; 2025 ಭವಿಷ್ಯ

Numerology Horoscope 2025: ಜನ್ಮದಿನಾಂಕ ಆಧರಿಸಿ ಭವಿಷ್ಯ, ದೋಷ, ಪರಿಹಾರದ ಬಗ್ಗೆ ಹೇಳುವಂತೆ ಸಂಖ್ಯಾಶಾಸ್ತ್ರದಲ್ಲಿ ಕೂಡಾ ಜನ್ಮದಿನಾಂಕವನ್ನು ಆಧರಿಸಿ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. 1 ರಿಂದ 9 ವರೆಗೆ ವಿವಿಧ ರಾಡಿಕ್ಸ್‌ಗೆ ಸೇರಿದ ಜನರು 2025ರಲ್ಲಿ ಯಾವ ರೀತಿ ಫಲಗಳನ್ನು ಪಡೆಯುತ್ತಾರೆ? ರಾಡಿಕ್ಸ್‌ ನಂಬರ್‌ 1ರ ಮುಂದಿನ ವರ್ಷದ ಭವಿಷ್ಯ ಹೇಗಿದೆ ನೋಡೋಣ.

ಸಂಖ್ಯಾಶಾಸ್ತ್ರ 2025: ರಾಡಿಕ್ಸ್‌ ಸಂಖ್ಯೆ 1 ಭವಿಷ್ಯ
ಸಂಖ್ಯಾಶಾಸ್ತ್ರ 2025: ರಾಡಿಕ್ಸ್‌ ಸಂಖ್ಯೆ 1 ಭವಿಷ್ಯ (PC: Canva)

ಸಂಖ್ಯಾಶಾಸ್ತ್ರ ಸಂಖ್ಯೆ 1: ವರ್ಷ ಮುಗಿಯುತ್ತಾ ಬಂತು. ಮೊನ್ನೆ ಮೊನ್ನೆಯಷ್ಟೇ ಹೊಸ ವರ್ಷ ಆಚರಿಸಿದಂತೆ ಇದೆ. ಇನ್ನು 1 ತಿಂಗಳು ಕಳೆದರೆ ಮತ್ತೊಂದು ವರ್ಷಕ್ಕೆ ಕಾಲಿಡುತ್ತೇವೆ. ಹೊಸ ವರ್ಷ ಹತ್ತಿರ ಬರುತ್ತಿದ್ದಂತೆ ಮನಸ್ಸಿನಲ್ಲಿ ನಾನಾ ಪ್ರಶ್ನೆಗಳು ಕಾಡತೊಡಗುತ್ತವೆ. ಈ ವರ್ಷ ನಮಗೆ ಸುಖವೋ, ದುಃಖವೋ ಅಥವಾ ಸಾಮಾನ್ಯವಾಗಿರುವುದಾ? ಏನೆಲ್ಲಾ ಬದಲಾವಣೆಗಳು ನಮ್ಮ ಜೀವನದಲ್ಲಿ ಉಂಟಾಗುತ್ತದೆ? ಈಗ ಎದುರಿಸುತ್ತಿರುವ ಸಮಸ್ಯೆಗಳು ಪರಿಹಾರವಾಗುವುದೋ ಇಲ್ಲವೋ? ಉದ್ಯೋಗ, ವೃತ್ತಿ, ಹಣಕಾಸು, ಸಂಬಂಧ, ಆರೋಗ್ಯ ಹೇಗಿರುತ್ತದೆ? ಈ ಎಲ್ಲಾ ಗೊಂದಲಗಳಿಗೂ ಉತ್ತರ ಇಲ್ಲಿದೆ. 2025 ರಲ್ಲಿ ರಾಡಿಕ್ಸ್‌ ನಂಬರ್‌ 1 ಜನರ ಭವಿಷ್ಯ ಈ ರೀತಿ ಇದೆ.

ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜನ್ಮ ದಿನಾಂಕವನ್ನು ಒಟ್ಟುಗೂಡಿಸಿದಾಗ ಬರುವ ಸಂಖ್ಯೆಯೇ ನಿಮ್ಮ ಅದೃಷ್ಟ ಸಂಖ್ಯೆಯಾಗುತ್ತದೆ. ಇದನ್ನು ರಾಡಿಕ್ಸ್‌ ನಂಬರ್‌ ಎಂದು ಕರೆಯಲಾಗುತ್ತದೆ.

2025 ರಾಡಿಕ್ಸ್‌ ನಂಬರ್‌ 1 ಭವಿಷ್ಯ

ನೀವು ಯಾವುದೇ ತಿಂಗಳ 1, 10, 19 ಅಥವಾ 28 ರಂದು ಜನಿಸಿದ್ದರೆ, ನಿಮ್ಮ ಮೂಲ ಸಂಖ್ಯೆ ಅಥವಾ ರಾಡಿಕ್ಸ್‌ ನಂಬರ್‌ 1 ಆಗಿರುತ್ತದೆ. ಸೂರ್ಯನು ಮೂಲ ಸಂಖ್ಯೆ ಒಂದರ ಆಡಳಿತ ಗ್ರಹವಾಗಿದೆ. ಆದ್ದರಿಂದ ಸೂರ್ಯನು ನಿಮ್ಮ ಮೇಲೆ ಮಹತ್ವದ ಪ್ರಭಾವ ಬೀರುತ್ತಾನೆ. ಈ ಸಂಖ್ಯೆಯ ಜನರು ಸ್ವಾಭಿಮಾನಿಗಳಾಗಿರುತ್ತಾರೆ. ಆದರೆ ಕೆಲವೊಮ್ಮೆ ನಿಮ್ಮ ಸ್ವಾಭಿಮಾನವು ಅಹಂಕಾರವಾಗಿ ಬದಲಾಗಬಹುದು. ಪರಿಣಾಮವಾಗಿ, ಜನರು ನಿಮ್ಮನ್ನು ದುರಹಂಕಾರಿ ಎಂದು ಪರಿಗಣಿಸಬಹುದು. ಈ ರೀತಿಯ ಪರಿಸ್ಥಿತಿಯಲ್ಲಿ ಸಂದರ್ಭಾನುಸಾರ ನಡೆದುಕೊಂಡರೆ ಒಳ್ಳೆಯದು.

ನೀವು ಗೌರವಾನ್ವಿತ ವ್ಯಕ್ವಿತ್ವವರು. ಉತ್ತಮ ನಾಯಕತ್ವದ ಗುಣಲಕ್ಷಣಗಳನ್ನು ಹೊಂದಿರುವವರು. ಸೂರ್ಯನ ಪ್ರಭಾವದಿಂದಾಗಿ ನಿಮಗೆ ಕೋಪ ಹೆಚ್ಚಾಗುತ್ತದೆ. ಕೆಲವು ಕಾರಣಗಳಿಂದ ನೀವು ಇತರರಿಗೆ ಅಹಂಕಾರಿಯಾಗಿ ಕಾಣಿಸಿಕೊಂಡರೆ, ನಿಮ್ಮ ಸ್ವಾಭಿಮಾನವನ್ನು ಸಾಬೀತುಪಡಿಸಲು, ಸ್ವಾಭಿಮಾನವನ್ನು ಕಾಪಾಡಿಕೊಳ್ಳಲು ಮತ್ತು ಅನಗತ್ಯ ಕೋಪವನ್ನು ತಪ್ಪಿಸಲು ನೀವು ತಾಳ್ಮೆಯಿಂದ ಇರಬೇಕು. ನಿಮ್ಮ ಜ್ಞಾನ, ಪ್ರಯತ್ನ ಮತ್ತು ಪ್ರತಿಭೆಯನ್ನು ಬಳಸಿಕೊಂಡರೆ ನೀವು ಉತ್ತಮ ನಾಯಕರಾಗುತ್ತೀರಿ. ನಿಮ್ಮ ಕನಸುಗಳನ್ನು ಸಾಧಿಸಲು ನೀವು ಶ್ರಮಿಸುತ್ತೀರಿ. ಜೀವನವನ್ನು ಆನಂದಿಸಲಿದ್ದೀರಿ, ಸ್ನೇಹಿತರೊಂದಿಗೆ ದೂರದ ಊರಿಗೆ ಪ್ರವಾಸಕ್ಕೆ ತೆರಳುವಿರಿ ನಿಮ್ಮ ಸ್ನೇಹಿತರಿಂದ ಪ್ರೀತಿಯನ್ನು ಮಾತ್ರವಲ್ಲ, ಅವರಿಂದ ಗೌರವವನ್ನು ಸಹ ನಿರೀಕ್ಷಿಸುವಿರಿ. ನೀವು ಎಲ್ಲಿಗೆ ಹೋದರೂ ಜನರ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತೀರಿ.

ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ಹಿಂಜರಿಯುವಿರಿ

ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ನೀವು ಸ್ವಲ್ಪ ಹಿಂದುಳಿದಿದ್ದರೂ, ಪ್ರೀತಿಸುವಲ್ಲಿ ನೀವು ಹಿಂದೆ ಬೀಳುವುದಿಲ್ಲ. ಪ್ರೀತಿಯಲ್ಲಿ, ನೀವು ಯಾವಾಗಲೂ ಮುಂಚೂಣಿಯಲ್ಲಿರುತ್ತೀರಿ. ನಿಮ್ಮ ಪ್ರೀತಿಯನ್ನು ಮಾತಿನ ಮೂಲಕ ವ್ಯಕ್ತಪಡಿಸಲು ಸಾಧ್ಯವಾಗದಿದ್ದರೂ ಆಕೆ/ಆತನಿಗಾಗಿ ನೀವು ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧರಿದ್ದೀರಿ, ಆದರೆ ನೀವು ಅವರನ್ನು ಎಷ್ಟು ಕಾಳಜಿ ವಹಿಸುತ್ತೀರಿ ಎಂಬುದನ್ನು ಅವರಿಗೆ ತೋರಿಸಲು ನೀವು ಹಿಂಜರಿಯುತ್ತೀರಿ. ನೀವು ಶಿಸ್ತಿನ ವ್ಯಕ್ತಿ ಮತ್ತು ಈ ಶಿಸ್ತಿನ ಸಹಾಯದಿಂದ ಮಾತ್ರ ಯಶಸ್ಸನ್ನು ಸಾಧಿಸುವಿರಿ. ಶಿಸ್ತುಬದ್ಧವಾಗಿ ಉಳಿಯುವುದು ಮತ್ತು ನಿಯಮಗಳಿಗೆ ಬದ್ಧವಾಗಿರುವುದು ನಿಮ್ಮ ಉದ್ದೇಶವನ್ನು ಮುನ್ನಡೆಸಲು ಮತ್ತು ಸಾಧಿಸಲು ಸಹಾಯ ಮಾಡುತ್ತದೆ.

ಸಂಖ್ಯಾಶಾಸ್ತ್ರದ ಪ್ರಕಾರ 2025 ರಲ್ಲಿ 1, 9, 2 ಮತ್ತು 5 ಸಂಖ್ಯೆಗಳು ನಿಮ್ಮ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತವೆ. ಆದರೂ ನಿಮಗೆ ಸಂಖ್ಯೆ 9 ತಟಸ್ಥವಾಗಿದೆ. ಈ ವರ್ಷ ಯಾವುದೇ ಗ್ರಹವು ನಿಮಗೆ ವಿರುದ್ಧವಾಗಿಲ್ಲದಿರುವುದು ಅನುಕೂಲವಾಗಿದೆ. ಈ ಎಲ್ಲಾ ಅಂಶಗಳಿಂದಾಗಿ, ಈ ವರ್ಷ ನಿಮಗೆ ಹೊಸದನ್ನು ಪ್ರಯತ್ನಿಸಲು ಮತ್ತು ನಿಮ್ಮ ಸಂಪೂರ್ಣ ಜೀವನವನ್ನು ಅದಕ್ಕಾಗಿ ಮೀಸಲಿಡುವ ಅವಕಾಶವನ್ನು ನೀಡುತ್ತದೆ.

ಸಾಮಾಜಿಕ ವಲಯದಲ್ಲಿ ಗೌರವಾದರಗಳು ದೊರೆಯಲಿದೆ

ಸಾಮಾಜಿಕ ಪ್ರತಿಷ್ಠೆಯ ದೃಷ್ಟಿಯಿಂದ, 2025 ವರ್ಷವು ನಿಮಗೆ ಅತ್ಯುತ್ತಮ ಫಲಿತಾಂಶಗಳನ್ನು ನೀಡಬಹುದು. ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ ಮತ್ತು ಸಮಾಜದಲ್ಲಿ ಇತರರಿಂದ ಗೌರವವನ್ನು ಪಡೆಯಬಹುದು. ಮತ್ತೊಂದೆಡೆ, ನೀವು ರಾಜಕೀಯ ವ್ಯಕ್ತಿಯಾಗಿದ್ದರೆ, ಈ ವರ್ಷ ನೀವು ರಾಜಕೀಯ ಹುದ್ದೆಯನ್ನು ಸಹ ಪಡೆಯಬಹುದು. ಸಂಖ್ಯೆ 2 ರ ಪ್ರಭಾವವು ನಿಮ್ಮ ಸಂಬಂಧಿಕರೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ಈ ವರ್ಷ ಸಂಬಂಧಗಳು ನಿಮ್ಮೊಂದಿಗೆ ಉತ್ತಮವಾಗಿರುತ್ತದೆ. ನಿಮ್ಮ ಸಹೋದರರೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ.

ಹಣಕಾಸಿನ ಪರಿಸ್ಥಿತಿ ಕೂಡಾ ಚೆನ್ನಾಗಿದೆ. ಸಾಮಾನ್ಯವಾಗಿ, ಈ ವರ್ಷ ಸ್ನೇಹ, ಮದುವೆ ಮತ್ತು ಪಾಲುದಾರಿಕೆ ಬಿಸ್ನೆಸ್‌ ಒಳಗೊಂಡಂತೆ ನಿಕಟ ಸಂಬಂಧಗಳಿಗೆ ಅನುಕೂಲಕರವಾಗಿರುತ್ತದೆ. ಆದರೆ 1 ಮತ್ತು 9 ಸಂಖ್ಯೆಗಳ ಪರಿಣಾಮದಿಂದಾಗಿ, ನಿಮ್ಮ ಉದ್ವೇಗ ಮತ್ತು ಕೋಪವನ್ನು ನಿಯಂತ್ರಿಸುವುದು ಅಗತ್ಯ. ಸಂಖ್ಯೆ 5 ರ ಪ್ರಭಾವವು ಸಮತೋಲನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಒಟ್ಟಿನಲ್ಲಿ ನೀವು ಈ ವರ್ಷ ಹೆಚ್ಚಿನ ಕ್ಷೇತ್ರಗಳಲ್ಲಿ ಯಶಸ್ವಿಯಾಗುವಿರಿ.

ಪರಿಹಾರ: ಮುಂಬರುವ ನವರಾತ್ರಿಯಂದು ನೀವು ಪುಟ್ಟ ಹೆಣ್ಣುಮಕ್ಕಳನ್ನು ಪೂಜಿಸಬೇಕು. ಶಿವನನ್ನು ಆರಾಧಿಸಬೇಕು. ಪ್ರತಿದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿದ ನಂತರ ಸೂರ್ಯ ದೇವರಿಗೆ ಕುಂಕುಮ ಬೆರೆಸಿದ ನೀರನ್ನು ಅರ್ಪಿಸುವುದು ನಿಮಗೆ ಜೀವನದಲ್ಲಿ ಇನ್ನಷ್ಟು ಉತ್ತಮ ಫಲ ದೊರೆಯುತ್ತದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.