ಸಂಖ್ಯಾಶಾಸ್ತ್ರ ಸಂಖ್ಯೆ 3: ಹಾಸ್ಯಪ್ರಿಯರು, ಸದಾ ಖುಷಿಯಾಗಿರಲು ಬಯಸುವಿರಿ, ಹಿರಿಯರ ಮಾರ್ಗದರ್ಶನದಿಂದ ಸಾಧನೆ ಸಾಧ್ಯ; 2025 ಭವಿಷ್ಯ
Numerology Horoscope 2025: ಜನ್ಮದಿನಾಂಕ ಆಧರಿಸಿ ಭವಿಷ್ಯ, ದೋಷ, ಪರಿಹಾರದ ಬಗ್ಗೆ ಹೇಳುವಂತೆ ಸಂಖ್ಯಾಶಾಸ್ತ್ರದಲ್ಲಿ ಕೂಡಾ ಜನ್ಮದಿನಾಂಕವನ್ನು ಆಧರಿಸಿ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. 1 ರಿಂದ 9 ವರೆಗೆ ವಿವಿಧ ರಾಡಿಕ್ಸ್‌ಗೆ ಸೇರಿದ ಜನರು 2025ರಲ್ಲಿ ಯಾವ ರೀತಿ ಫಲಗಳನ್ನು ಪಡೆಯುತ್ತಾರೆ? ರಾಡಿಕ್ಸ್ ನಂಬರ್ 3ರ ಮುಂದಿನ ವರ್ಷದ ಭವಿಷ್ಯ ಹೇಗಿದೆ ನೋಡೋಣ.
ಸಂಖ್ಯಾಶಾಸ್ತ್ರ ಸಂಖ್ಯೆ 3: ವರ್ಷ ಮುಗಿಯುತ್ತಾ ಬಂತು. ಮೊನ್ನೆ ಮೊನ್ನೆಯಷ್ಟೇ ಹೊಸ ವರ್ಷ ಆಚರಿಸಿದಂತೆ ಇದೆ. ಇನ್ನು 1 ತಿಂಗಳು ಕಳೆದರೆ ಮತ್ತೊಂದು ವರ್ಷಕ್ಕೆ ಕಾಲಿಡುತ್ತೇವೆ. ಹೊಸ ವರ್ಷ ಹತ್ತಿರ ಬರುತ್ತಿದ್ದಂತೆ ಮನಸ್ಸಿನಲ್ಲಿ ನಾನಾ ಪ್ರಶ್ನೆಗಳು ಕಾಡತೊಡಗುತ್ತವೆ. ಈ ವರ್ಷ ನಮಗೆ ಸುಖವೋ, ದುಃಖವೋ ಅಥವಾ ಸಾಮಾನ್ಯವಾಗಿರುವುದಾ? ಏನೆಲ್ಲಾ ಬದಲಾವಣೆಗಳು ನಮ್ಮ ಜೀವನದಲ್ಲಿ ಉಂಟಾಗುತ್ತದೆ? ಈಗ ಎದುರಿಸುತ್ತಿರುವ ಸಮಸ್ಯೆಗಳು ಪರಿಹಾರವಾಗುವುದೋ ಇಲ್ಲವೋ? ಉದ್ಯೋಗ, ವೃತ್ತಿ, ಹಣಕಾಸು, ಸಂಬಂಧ, ಆರೋಗ್ಯ ಹೇಗಿರುತ್ತದೆ? ಈ ಎಲ್ಲಾ ಗೊಂದಲಗಳಿಗೂ ಉತ್ತರ ಇಲ್ಲಿದೆ. 2025 ರಲ್ಲಿ ರಾಡಿಕ್ಸ್ ನಂಬರ್ 3 ಜನರ ಭವಿಷ್ಯ ಈ ರೀತಿ ಇದೆ.
ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜನ್ಮ ದಿನಾಂಕವನ್ನು ಒಟ್ಟುಗೂಡಿಸಿದಾಗ ಬರುವ ಸಂಖ್ಯೆಯೇ ನಿಮ್ಮ ಅದೃಷ್ಟ ಸಂಖ್ಯೆಯಾಗುತ್ತದೆ. ಇದನ್ನು ರಾಡಿಕ್ಸ್ ನಂಬರ್ ಎಂದು ಕರೆಯಲಾಗುತ್ತದೆ.
2025 ರಾಡಿಕ್ಸ್ ನಂಬರ್ 3 ಭವಿಷ್ಯ
ಯಾವುದೇ ತಿಂಗಳ 3, 12, 21, ಅಥವಾ 30 ರಲ್ಲಿ ಜನಿಸಿದ್ದರೆ ನಿಮ್ಮ ಮೂಲ ಸಂಖ್ಯೆ 3 ಆಗಿರುತ್ತದೆ. ಈ ಸಂಖ್ಯೆಯ ಆಡಳಿತ ಗ್ರಹ ಗುರು. ಬೃಹಸ್ಪತಿಯನ್ನು ಬಹಳ ಅನುಭವಿ ಮತ್ತು ಜ್ಞಾನವುಳ್ಳ ಗ್ರಹವೆಂದು ಪರಿಗಣಿಸಲಾಗುತ್ತದೆ. ಅದರಂತೆ ನೀವು ಕೂಡಾ ಜ್ಞಾನ ಮತ್ತು ಅನುಭವಿ ವ್ಯಕ್ತಿತ್ವದವರು. ನಿಮ್ಮನ್ನು ಗುರು ಗ್ರಹ ಆಳುವುದರಿಂದ ನೀವು ಶಿಕ್ಷಣವನ್ನು ಇಷ್ಟಪಡುತ್ತೀರಿ. ಇತರರನ್ನು ನೀವು ಸುಲಭವಾಗಿ ಅರ್ಥ ಮಾಡಿಕೊಳ್ಳುವಿರಿ.
ನೀವು ಶಿಸ್ತಿನ ವಾತಾವರಣದಲ್ಲಿ ಕೆಲಸ ಮಾಡುವುದನ್ನು ಆನಂದಿಸುತ್ತೀರಿ, ಆದರೆ ಯಾರೇ ಆದಲ್ಲಿ ನಿಮ್ಮ ಮೇಲೆ ಅಧಿಕಾರ ಚಲಾಯಿಸಿದಲ್ಲಿ ನೀವು ಸಹಿಸುವುದಿಲ್ಲ. ನಿಮಗೆ ಸೂಕ್ತ ಮಾರ್ಗದರ್ಶನ ನೀಡಲು ಸಮರ್ಥ ವ್ಯಕ್ತಿಗಳನ್ನು ನೀವು ಬಯಸುತ್ತೀರಿ. ಆದರೆ ಅಸಮರ್ಥ ಜನರು ಹಸ್ತಕ್ಷೇಪ ಮಾಡುವುದನ್ನು ನೀವು ಸಹಿಸುವುದಿಲ್ಲ. ನಿಮ್ಮ ಕೌಶಲ್ಯ ಮತ್ತು ಹಿನ್ನೆಲೆಯಿಂದಾಗಿ, ನೀವು ಯಾವುದೇ ಕೆಲಸದವನ್ನು ಸಂತೋಷದಿಂದ ಮಾಡಿ ಅದರಲ್ಲಿ ತೃಪ್ತಿ ಹೊಂದುವಿರಿ.
ಅನುಭವಿಗಳೊಂದಿಗೆ ಕೆಲಸ ಮಾಡುವುದನ್ನು ಆನಂದಿಸುವಿರಿ
ನೀವು ಹಾಸ್ಯಪ್ರಿಯರು. ಸದಾ ಖುಷಿಯಾಗಿರಲು ಬಯಸುವಿರಿ. ಆದರೆ ಮತ್ತೊಬ್ಬರನ್ನು ಅಥವಾ ನಿಮ್ಮನ್ನೇ ಯಾರಾದರೂ ವ್ಯಂಗ್ಯ ಮಾಡಿದರೆ ಅದನ್ನು ನೀವು ಸಹಿಸುವುದಿಲ್ಲ. ಧಾರ್ಮಿಕ ವಿಚಾರಗಳಲ್ಲಿ ನಿಮಗೆ ಹೆಚ್ಚಿನ ಆಸಕ್ತಿ ಇದೆ. ಧಾರ್ಮಿಕ ಪ್ರಯಾಣ ಮತ್ತು ಧಾರ್ಮಿಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಳ್ಳುವುದು ನಿಮಗೆ ಖುಷಿ ನೀಡುತ್ತದೆ. ನೀವು ಹಿರಿಯ ನಾಗರಿಕರು, ಅನುಭವಿ ಶಿಕ್ಷಕರು ಮತ್ತು ಧಾರ್ಮಿಕ ಮುಖಂಡರೊಂದಿಗೆ ಒಟ್ಟಾಗಿ ಕೆಲಸ ಮಾಡುವುದನ್ನು ಆನಂದಿಸುತ್ತೀರಿ.
ಮುಂದಿನ ವರ್ಷ 3, 9, 1, 2 ಮತ್ತು 5 ಸಂಖ್ಯೆಗಳು 2025 ರಲ್ಲಿ ನಿಮ್ಮ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಸಂಖ್ಯೆ 5 ಅನ್ನು ಹೊರತುಪಡಿಸಿ, ಈ ವರ್ಷದ ಹೆಚ್ಚಿನ ಸಂಖ್ಯೆಗಳು ನಿಮ್ಮ ಪರವಾಗಿವೆ. ಮತ್ತೊಂದೆಡೆ, ನೀವು ಸಂಖ್ಯೆ 1 ರೊಂದಿಗೆ ಸಾಧಾರಣ ಫಲಿತಾಂಶಗಳನ್ನು ಪಡೆಯಬಹುದು. ನೀವು ಅನುಭವಿ ಮತ್ತು ತಿಳುವಳಿಕೆಯುಳ್ಳ ವ್ಯಕ್ತಿಯಾಗಿರುವುದರಿಂದ ಸಾಮಾಜಿಕ ಚಟುವಟಿಕೆಗಳಿಂದ ಅತ್ಯುತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ನೀವು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಲಿದ್ದೀರಿ. ಸಮಾಜಸೇವೆಗೆ ಸದಾ ಸಹಾಯಹಸ್ತ ನೀಡಲಿದ್ದೀರಿ. ಮುಂಬರುವ ವರ್ಷ, ನಿಮ್ಮ ಸೃಜನಶೀಲ ಯೋಜನೆಗಳ ಮೇಲೆ ಕೇಂದ್ರೀಕರಿಸಲು ಗಮನಹರಿಸಲಿದ್ದೀರಿ. ಈ ರೀತಿಯ ಪ್ರಯೋಗದೊಂದಿಗೆ, ನಿಮ್ಮ ಯಶಸ್ಸಿನ ಸಾಧ್ಯತೆಗಳು ಬಲವಾಗಿರುತ್ತವೆ.
ಕಷ್ಟದಲ್ಲಿರುವರಿಗೆ ಸ್ಪಂದಿಸುವ ಗುಣವುಳ್ಳವರು
ಅಗತ್ಯ ಸಮಯದಲ್ಲಿ ನೀವು ಒಬ್ಬರಿಗೊಬ್ಬರು ಸಹಾಯ ಮಾಡುತ್ತೀರಿ. ಸ್ನೇಹಿತರ ಕಷ್ಟ ಸುಖಗಳಿಗೆ ಮಿಡಿಯುವಿರಿ. ಸಂಖ್ಯೆ 9 ರ ಬೆಂಬಲವು ನೀವು ಮಾಡುವ ಕೆಲಸದಲ್ಲಿ ಇನ್ನಷ್ಟು ಬಲ, ಯಶಸ್ಸು ತರುತ್ತದೆ. ನಿಮ್ಮ ಸಹಾಯಕ್ಕೆ ನಿಲ್ಲುವ ಅನೇಕರಿದ್ದಾರೆ. ಪರಿಣಾಮವಾಗಿ, ನಿಮ್ಮ ಪ್ರಯತ್ನಗಳಿಗೆ ಅನುಗುಣವಾಗಿ ಸರ್ಕಾರ, ಆಡಳಿತ, ಕೋರ್ಟ್ ಇತ್ಯಾದಿಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ನೋಡಲಿದ್ದೀರಿ. ಸಾಮಾನ್ಯವಾಗಿ, ಮದುವೆ ಮತ್ತು ಪ್ರಣಯ ಸಂಬಂಧಗಳಲ್ಲಿ ಹೊಂದಾಣಿಕೆಯ ಅವಕಾಶವಿದೆ. ಈ ವರ್ಷ, ನೀವು ಹಣದ ವ್ಯವಹಾರಗಳಲ್ಲಿ ದೊಡ್ಡ ಯಶಸ್ಸು ಗಳಿಸಲಿದ್ದೀರಿ. ಒಟ್ಟಾರೆ 2025 ರಲ್ಲಿ ನೀವು ಖುಷಿಯಾಗಿರುವಿರಿ ಎಂಬುದನ್ನು ಇದು ಸೂಚಿಸುತ್ತದೆ. ಸಮಯಕ್ಕೆ ತಕ್ಕಂತೆ ಅನುಭವಿಗಳಿಂದ ದೊರೆಯುವ ಮಾರ್ಗದರ್ಶನವು ನಿಮಗೆ ದುಪ್ಪಟ್ಟು ಬೆಂಬಲ ನೀಡಿದಂತೆ ಆಗುತ್ತದೆ.
ಪರಿಹಾರ: ಪ್ರತಿದಿನ ತಪ್ಪದೆ ಹಣೆ ಮೇಲೆ ಕುಂಕುಮ ಹಚ್ಚಿಕೊಳ್ಳಿ. ನಿತ್ಯವೂ ಅರಿಶಿನ ಮಿಶ್ರಿತ ನೀರನ್ನು ಸೂರ್ಯ ದೇವರಿಗೆ ಅರ್ಪಿಸಿ. ಪ್ರತಿದಿನ, ಹನುಮಾನ್ ಚಾಲೀಸಾ ಪಠಿಸಿ.