ಸಂಖ್ಯಾಶಾಸ್ತ್ರ ಸಂಖ್ಯೆ 4: ಪ್ರಣಯ ಸಂಬಂಧಗಳಲ್ಲಿ ಮುಕ್ತ ಮಾತುಕತೆ ಅವಶ್ಯಕ, ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿರಲಿದೆ; 2025 ಭವಿಷ್ಯ
Numerology Horoscope 2025: ಜನ್ಮದಿನಾಂಕ ಆಧರಿಸಿ ಭವಿಷ್ಯ, ದೋಷ, ಪರಿಹಾರದ ಬಗ್ಗೆ ಹೇಳುವಂತೆ ಸಂಖ್ಯಾಶಾಸ್ತ್ರದಲ್ಲಿ ಕೂಡಾ ಜನ್ಮದಿನಾಂಕವನ್ನು ಆಧರಿಸಿ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. 1 ರಿಂದ 9 ವರೆಗೆ ವಿವಿಧ ರಾಡಿಕ್ಸ್‌ಗೆ ಸೇರಿದ ಜನರು 2025ರಲ್ಲಿ ಯಾವ ರೀತಿ ಫಲಗಳನ್ನು ಪಡೆಯುತ್ತಾರೆ? ರಾಡಿಕ್ಸ್ ನಂಬರ್ 4ರ ಮುಂದಿನ ವರ್ಷದ ಭವಿಷ್ಯ ಹೇಗಿದೆ ನೋಡೋಣ.
ಸಂಖ್ಯಾಶಾಸ್ತ್ರ ಸಂಖ್ಯೆ 4: ವರ್ಷ ಮುಗಿಯುತ್ತಾ ಬಂತು. ಮೊನ್ನೆ ಮೊನ್ನೆಯಷ್ಟೇ ಹೊಸ ವರ್ಷ ಆಚರಿಸಿದಂತೆ ಇದೆ. ಇನ್ನು 1 ತಿಂಗಳು ಕಳೆದರೆ ಮತ್ತೊಂದು ವರ್ಷಕ್ಕೆ ಕಾಲಿಡುತ್ತೇವೆ. ಹೊಸ ವರ್ಷ ಹತ್ತಿರ ಬರುತ್ತಿದ್ದಂತೆ ಮನಸ್ಸಿನಲ್ಲಿ ನಾನಾ ಪ್ರಶ್ನೆಗಳು ಕಾಡತೊಡಗುತ್ತವೆ. ಈ ವರ್ಷ ನಮಗೆ ಸುಖವೋ, ದುಃಖವೋ ಅಥವಾ ಸಾಮಾನ್ಯವಾಗಿರುವುದಾ? ಏನೆಲ್ಲಾ ಬದಲಾವಣೆಗಳು ನಮ್ಮ ಜೀವನದಲ್ಲಿ ಉಂಟಾಗುತ್ತದೆ? ಈಗ ಎದುರಿಸುತ್ತಿರುವ ಸಮಸ್ಯೆಗಳು ಪರಿಹಾರವಾಗುವುದೋ ಇಲ್ಲವೋ? ಉದ್ಯೋಗ, ವೃತ್ತಿ, ಹಣಕಾಸು, ಸಂಬಂಧ, ಆರೋಗ್ಯ ಹೇಗಿರುತ್ತದೆ? ಈ ಎಲ್ಲಾ ಗೊಂದಲಗಳಿಗೂ ಉತ್ತರ ಇಲ್ಲಿದೆ. 2025 ರಲ್ಲಿ ರಾಡಿಕ್ಸ್ ನಂಬರ್ 4 ಜನರ ಭವಿಷ್ಯ ಈ ರೀತಿ ಇದೆ.
ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜನ್ಮ ದಿನಾಂಕವನ್ನು ಒಟ್ಟುಗೂಡಿಸಿದಾಗ ಬರುವ ಸಂಖ್ಯೆಯೇ ನಿಮ್ಮ ಅದೃಷ್ಟ ಸಂಖ್ಯೆಯಾಗುತ್ತದೆ. ಇದನ್ನು ರಾಡಿಕ್ಸ್ ನಂಬರ್ ಎಂದು ಕರೆಯಲಾಗುತ್ತದೆ.
ಸಂಖ್ಯೆ 4ರ ಆಡಳಿತ ಗ್ರಹ ರಾಹು
ನೀವು ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದರೆ, ನಿಮ್ಮ ಮೂಲ ಸಂಖ್ಯೆ 4 ಆಗಿರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಸಂಖ್ಯೆ 4 ರಾಹು ಗ್ರಹಕ್ಕೆ ಸಂಬಂಧಿಸಿದೆ. ರಾಹುವಿನ ಪ್ರಭಾವದಿಂದಾಗಿ, ನಿಮ್ಮ ಜೀವನದಲ್ಲಿ ನೀವು ಹೆಚ್ಚು ಗೊಂದಲ ಅನುಭವಿಸುವ ಸಾಧ್ಯತೆ ಹೆಚ್ಚು. ಆದರೂ ನಿಮ್ಮ ಜೀವನದಲ್ಲಿ ನಿರೀಕ್ಷಿತ ಗುರಿಗಳನ್ನು ಸಾಧಿಸಲು ನಿಮಗೆ ಅವಕಾಶವಿದೆ.
ನೀವು ಉನ್ನತ ಮತ್ತು ಕ್ರಾಂತಿಕಾರಿ ಗುರಿಗಳನ್ನು ಹೊಂದಿದ್ದರೂ ಸಹ, ಅನುಭವಿ ಮಾರ್ಗದರ್ಶಕರ ಪ್ರಾಮಾಣಿಕ ಮಾರ್ಗದರ್ಶನವಿಲ್ಲದೆ ನೀವು ಅವುಗಳನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ರಾಹುವಿನ ಪ್ರಭಾವದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ನೀವು ಸಮಸ್ಯೆ ಅನುಭವಿಸಬಹುದು. ನೀವು ಸಜ್ಜನರ ಸಹವಾಸದೊಂದಿಗೆ, ಒಳ್ಳೆಯ ಆಲೋಚನೆಗಳೊಂದಿಗೆ ಮುನ್ನಡೆದರೆ, ನಿಸ್ಸಂದೇಹವಾಗಿ ನೀವು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ನಿಮ್ಮ ಕುಟುಂಬಕ್ಕೆ ನಿಮ್ಮ ಸಂಪೂರ್ಣ ಗಮನ ನೀಡಬೇಕು.
ಅರ್ಹ ವ್ಯಕ್ತಿಯ ಮೇಲ್ವಿಚಾರಣೆಯಲ್ಲಿ ಕೆಲಸ
ನಿಮ್ಮ ಆತ್ಮೀಯರು ಯಾರೇ ಆಗಿರಲಿ, ನಿಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರೆ ಆ ವ್ಯಕ್ತಿಯೊಂದಿಗೆ ಎಲ್ಲಾ ಸಂಪರ್ಕವನ್ನು ನೀವು ಕಡಿದುಕೊಂಡು ಸಂಬಂಧದಿಂದ ಹೊರ ಬರುವಿರಿ. ನಿಮ್ಮ ಸುತ್ತಮುತ್ತಲಿನ ಜನರಿಂದಲೇ ನೀವು ಅಂದುಕೊಂಡಿದ್ದನ್ನು ಸಾಧಿಸುವಲ್ಲಿ ಹಿಂದುಳಿಯುವಿರಿ. ಅಂದುಕೊಂಡಿದ್ದನ್ನು ಸಾಧಿಸಲು, ನಿಮಗೆ ಅನುಭವಿ ವ್ಯಕ್ತಿಗಳ ಉತ್ತಮ ಮಾರ್ಗದರ್ಶನ ಬೇಕಾಗುತ್ತದೆ. 2025 ರಲ್ಲಿ 4, 9, 1, 3, ಮತ್ತು 5 ಸಂಖ್ಯೆಗಳು ನಿಮ್ಮ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತವೆ ಎಂದು ಸಂಖ್ಯಾಶಾಸ್ತ್ರದ ಜಾತಕ 2025 ಹೇಳುತ್ತದೆ. ಈ ವರ್ಷ, ಅತ್ಯಂತ ಮಹತ್ವದ ಸಂಖ್ಯೆ 4 ನಿಮಗೆ ಅನುಕೂಲಕರವಾಗಿದೆ. ಆದ್ದರಿಂದ ನಿಮ್ಮ ಭವಿಷ್ಯ ಮುಂದಿನ ವರ್ಷ ಸಾಮಾನ್ಯವಾಗಿದೆ. ನಿಮ್ಮ ಗುರಿಗಳನ್ನು ಸಾಧಿಸಲು ಅರ್ಹ ವ್ಯಕ್ತಿಯ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡಬೇಕಾಗುತ್ತದೆ.
2025ರಲ್ಲಿ ನೀವು ಸಾಕಷ್ಟು ಶಕ್ತಿ ಮತ್ತು ಉತ್ಸಾಹವನ್ನು ಹೊಂದಿರುತ್ತೀರಿ, ಆದರೆ ಈ ಭಾವನೆಗಳನ್ನು ನಿಭಾಯಿಸಲು ನೀವು ಕಲಿಯಬೇಕಾಗುತ್ತದೆ. ಅತಿಯಾದ ಉತ್ಸಾಹ ನಿಮಗೆ ಯಾವ ರೀತಿಯೂ ಪ್ರಯೋಜನಾಕಾರಿಯಲ್ಲ. ಯಾವುದೇ ವಿಚಾರವಾದರೂ, ಯಾವುದೇ ಕೆಲಸವಾದರೂ ಅವಶ್ಯಕತೆಗೆ ತಕ್ಕಂತೆ ಶ್ರಮ ವ್ಯಯಿಸಿದರೆ ಸಾಕು. ನಿಮ್ಮ ಖ್ಯಾತಿಗೆ ಹಾನಿಯುಂಟುಮಾಡುವ ಯಾವುದೇ ವಿಚಾರಗಳಿಂದ ದೂರವಿದ್ದರೆ ಒಳ್ಳೆಯದು. ಸಂಖ್ಯೆ 1 ರ ಪ್ರಭಾವವು ಈ ವರ್ಷ ಸರ್ಕಾರ ಮತ್ತು ಆಡಳಿತಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕೆಲವು ಅಡೆತಡೆಗಳನ್ನು ಉಂಟುಮಾಡಬಹುದು ಎಂದು ಸೂಚಿಸುತ್ತದೆ. ಈ ವರ್ಷ ಸರ್ಕಾರಿ ಆಡಳಿತದ ಕೆಲಸವನ್ನು ನಿರ್ವಹಿಸಲು ನಿಮಗೆ ಸಾಧ್ಯವಾಗುವುದಿಲ್ಲ ಎಂದೆನಿಸಿದರೆ ಅರ್ಹ ವ್ಯಕ್ತಿಯ ಸಹಾಯ ಪಡೆಯಬಹುದು. ನಿಮಗೆ ಎಷ್ಟೇ ಅನುಭವ ಇದ್ದರೂ, ನೀವು ಎಷ್ಟೇ ಜ್ಞಾನಿಗಳಾಗಿದ್ದರೂ ನಿಮಗಿಂತ ಅನುಭವಿಗಳ ಮಾರ್ಗದರ್ಶನವನ್ನು ಅಲ್ಲಗಳೆಯುವಂತಿಲ್ಲ.
ಭೂಮಿ , ವಾಹನ ಖರೀದಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ
ನೀವು ಸಂಬಂಧದಲ್ಲಿರುವವರಾದರೆ ಪ್ರಣಯ ಸಂಬಂಧಗಳಲ್ಲಿ ಮುಕ್ತ ಮಾತುಕತೆ ಅತ್ಯಗತ್ಯವಾಗಿರುತ್ತದೆ. ಮದುವೆಯ ನಂತರವೂ ಒಬ್ಬರನ್ನೊಬ್ಬರು ನಂಬುವುದು ಬಹಳ ಅವಶ್ಯತ್ಯ. ಭೂಮಿ, ಕಟ್ಟಡ, ವಾಹನ ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಕೂಲಂಕಷವಾಗಿ ತನಿಖೆ ಮಾಡಿದ ನಂತರವೇ ವಿಷಯವನ್ನು ಮುಂದಕ್ಕೆ ಕೊಂಡೊಯ್ಯುವುದು ಉತ್ತಮ. ಈ ವರ್ಷ ಹಣಕಾಸಿನ ಪರಿಸ್ಥಿತಿ ಕೂಡಾ ಸಾಮಾನ್ಯವಾಗಿರುತ್ತದೆ. ಆದ್ದರಿಂದ ಆರ್ಥಿಕ ನಿರ್ವಹಣೆಯತ್ತ ಹೆಚ್ಚಿನ ಗಮನ ಹರಿಸುವುದು ಅನಿವಾರ್ಯ.
ಪರಿಹಾರ: ಪ್ರತಿದಿನ ದೇವರ ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳಿ. ಪ್ರತಿ ಮಂಗಳವಾರ, ಆಂಜನೇಯನ ದೇವಸ್ಥಾನಕ್ಕೆ ತೆರಳಿ ಕೆಂಪು ಹಣ್ಣುಗಳು ಅಥವಾ ಕೆಂಪು ಸಿಹಿತಿಂಡಿಗಳನ್ನು ದಾನ ಮಾಡಿ. ನಿಮ್ಮ, ಹೊರಗಿನ ಹಿರಿಯ ವ್ಯಕ್ತಿಗಳನ್ನು ಗೌರವಿಸಿ ಅವರ ಸೇವೆ ಮಾಡುವ ಮೂಲಕ ಆಶೀರ್ವಾದ ಪಡೆಯಿರಿ.