Numerology: ನಿಮ್ಮ ಅದೃಷ್ಟದ ಸಂಖ್ಯೆ ಪ್ರಕಾರ ಫೋನ್ ವಾಲ್‌ಪೇಪರ್‌ನಲ್ಲಿ ಯಾವ ಚಿತ್ರವಿರಬೇಕು? ಇಲ್ಲಿದೆ ನೋಡಿ ಮಾಹಿತಿ
Numerology: ಜನರ ಜೀವನದ ಮೇಲೆ ಸಂಖ್ಯಾ ಶಾಸ್ತ್ರ ಕೂಡಾ ಸಾಕಷ್ಟು ಪ್ರಭಾವ ಬೀರುತ್ತದೆ. ನೀವು ಪ್ರತಿದಿನ ಬಳಸುವ ಫೋನ್‌ನಲ್ಲಿ ನೀವು ಯಾವ ವಾಲ್ ಪೇಪರ್ ಬಳಸಿದರೆ ಸೂಕ್ತ ಎನ್ನುವುದನ್ನು ನ್ಯೂಮರಾಲಜಿ ಪ್ರಕಾರ ನಿರ್ಣಯಿಸಬಹುದು. ನಿಮ್ಮ ಅದೃಷ್ಟದ ಸಂಖ್ಯೆ ಪ್ರಕಾರ ನೀವು ಯಾವ ರೀತಿಯ ವಾಲ್ ಪೇಪರನ್ನು ಫೋನ್‌ಗೆ ಬಳಸಬಹುದು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
Numerology: ಪ್ರಸ್ತುತ, ಈ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಫೋನ್ ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯವೇ ಸರಿ. ಬಹುತೇಕ ಮಂದಿ ಬೆಳಗ್ಗೆ ಎದ್ದಾಗ ಮೊದಲು ನೋಡುವುದೇ ಮೊಬೈಲ್ ಫೋನ್. ರಾತ್ರಿ ಮಲಗುವ ಮುನ್ನ, ಬೆಳಗ್ಗೆ ಎದ್ದಾಗ, ವಾಶ್ ರೂಮ್, ಟ್ರಾವೆಲ್ ಮಾಡುವಾಗ ಹೀಗೆ ಎಲ್ಲೆಂದರಲ್ಲಿ ಬಳಸುವ ಸಾಧನವೇ ಮೊಬೈಲ್ ಫೋನ್. ಈ ಸಂಚಾರವಾಣಿ ಮೂಲಕ ಜಗತ್ತಿನ ಯಾವ ಮೂಲೆಯಿಂದಲೂ ನಮಗೆ ಬೇಕಾದವರ ಜೊತೆ ಮಾತನಾಡಬಹುದು, ವಿಡಿಯೋ ಕಾಲ್ ಮಾಡಬಹುದು, ಸಂದೇಶ ಕಳುಹಿಸಬಹುದು. ಹೀಗಾಗಿ ನಮ್ಮ ಜೀವನದ ಅವಿಭಾಜ್ಯ ಅಂಗದಂತೆ ಆಗಿದೆ ಸಂಚಾರವಾಣಿ.
ಕರೆ ಮಾಡುವುದು ಮಾತ್ರವಲ್ಲ, ಆನ್‌ಲೈನ್ ಪಾವತಿಗಳನ್ನು ಮಾಡುವುದು, ಆಹಾರವನ್ನು ಆರ್ಡರ್ ಮಾಡುವುದು, ಇಮೇಲ್ ಕಳುಹಿಸುವುದು, ಬೇಜಾರಾದ ಗೇಮ್ಸ್ ಕೂಡ ಆಡಬಹುದು. ಪ್ರಸ್ತುತ ಕಾಲಘಟ್ಟದಲ್ಲಿ ನಮಗೆ ಇದು ಅನಿವಾರ್ಯವಾಗಿಬಿಟ್ಟಿದೆ. ಮೊಬೈಲ್ ಫೋನ್‌ಗೆ ತಮಗಿಷ್ಟವಾದ ಬ್ಯಾಕ್ ಕವರ್ ಅನ್ನು ಹಾಕುತ್ತಾರೆ. ಹಾಗೆಯೇ ವಾಲ್ ಪೇಪರ್ ಕೂಡ ತಮಗಿಷ್ಟವಾದವರ ಅಥವಾ ಪ್ರಕೃತಿ ಹೀಗೆ ಸುಂದರವಾದ ಚಿತ್ರಗಳನ್ನು ಹಾಕುವುದು ಸಾಮಾನ್ಯ. ಈ ವಾಲ್ ಪೇಪರ್ ಎಷ್ಟು ಮುಖ್ಯ? ಇದು ಸಂಖ್ಯಾಶಾಸ್ತ್ರದೊಂದಿಗೆ ಸಂಬಂಧಿಸಿದೆ ಎಂದು ನಿಮಗೆ ತಿಳಿದಿದೆಯೇ?
ಹೌದು, ನೀವು ಆಯ್ಕೆ ಮಾಡುವ ವಾಲ್‌ಪೇಪರ್ ನಿಮ್ಮ ಫೋನ್‌ಗಳಲ್ಲಿ ಸುಂದರವಾಗಿ ಕಾಣುವುದಕ್ಕಿಂತ ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ವಾಲ್‌ಪೇಪರ್‌ನಿಂದ ಕೆಲವರು ಧನಾತ್ಮಕ ಪರಿಣಾಮಗಳನ್ನು ಪಡೆದರೆ, ಇನ್ನೂ ಕೆಲವರು ಋಣಾತ್ಮಕ ಪರಿಣಾಮಗಳನ್ನು ಪಡೆಯಬಹುದು. ಹೀಗಾಗಿ ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಬ್ಬರೂ ಸರಿಯಾದ ವಾಲ್‌ಪೇಪರ್ ಅನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ. ಅದಕ್ಕೂ ಮುನ್ನ ನೀವು ನಿಮ್ಮ ಅದೃಷ್ಟದ ಸಂಖ್ಯೆ ಯಾವುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ಅದೃಷ್ಟದ ಸಂಖ್ಯೆ ಎಂದರೇನು? ಅದನ್ನು ಹೇಗೆ ಲೆಕ್ಕ ಹಾಕುವುದು?
ಅದೃಷ್ಟದ ಸಂಖ್ಯೆಯು ನಮ್ಮ ಜನ್ಮ ದಿನಾಂಕದಲ್ಲಿನ ಎಲ್ಲಾ ಸಂಖ್ಯೆಗಳನ್ನು ಸೇರಿಸಿದ ನಂತರ ಪಡೆಯುವ ಏಕ ಅಂಕಿಯ ಸಂಖ್ಯೆಯಾಗಿದೆ. ಉದಾಹರಣೆಗೆ: ಜನ್ಮ ದಿನಾಂಕ 14/09/1990 ಆಗಿದ್ದರೆ, ಅದು 1+4+0+9+1+9+9+0 = 33,3+3= 6 ಆಗಿರುತ್ತದೆ. ಇಲ್ಲಿ ಸಂಖ್ಯೆ 6 ಆ ವ್ಯಕ್ತಿಯ ಡೆಸ್ಟಿನಿ ನಂಬರ್ ಆಗಿರುತ್ತದೆ. ಹಾಗಿದ್ದರೆ, ನಿಮ್ಮ ಡೆಸ್ಟಿನಿ ಪ್ರಕಾರ ಯಾವ ವಾಲ್‌ಪೇಪರ್ ಉತ್ತಮ ಎಂಬ ಬಗ್ಗೆ ಇಲ್ಲಿ ತಿಳಿಯಿರಿ.
ಅದೃಷ್ಟದ ಸಂಖ್ಯೆ 1 ಇದ್ದರೆ ವಾಲ್‌ಪೇಪರ್ ಹೀಗಿರಲಿ
ಅದೃಷ್ಟದ ಸಂಖ್ಯೆ 1 ಹೊಂದಿರುವ ಜನರು ಉದಯಿಸುವ ಸೂರ್ಯನ (sunrise) ವಾಲ್‌ಪೇಪರ್ ಆಯ್ಕೆ ಮಾಡಬಹುದು. ಅಥವಾ ತಂದೆಯ ಚಿತ್ರವನ್ನು ಸಹ ವಾಲ್ ಪೇಪರ್‌ನಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೆ ಗುಲಾಬಿ ಅಥವಾ ಹಳದಿ ಬಣ್ಣದ ವಾಲ್‌ಪೇಪರ್ ಕೂಡಾ ಆಯ್ಕೆ ಮಾಡಬಹುದು.
ಸಂಖ್ಯೆ 2
ಅದೃಷ್ಟದ ಸಂಖ್ಯೆ 2 ಹೊಂದಿರುವ ಜನರು ಹುಣ್ಣಿಮೆಯ ವಾಲ್‌ಪೇಪರ್ ಆಯ್ಕೆಗೆ ಆದ್ಯತೆ ನೀಡಬೇಕು. ತಾಯಿಯೊಂದಿಗಿನ ಚಿತ್ರವನ್ನು ಸಹ ಆಯ್ಕೆ ಮಾಡಬಹುದು. ಅಲ್ಲದೆ ಬಿಳಿ ಅಥವಾ ಬೆಳ್ಳಿಯ (silver) ಬಣ್ಣದ ವಾಲ್‌ಪೇಪರ್ ಅನ್ನು ಸಹ ಆಯ್ಕೆ ಮಾಡಬಹುದು.
ಸಂಖ್ಯೆ 3
ಅದೃಷ್ಟದ ಸಂಖ್ಯೆ 3 ಇದ್ದವರು ಧಾರ್ಮಿಕ ಸ್ಥಳ ಅಥವಾ ಗ್ರಂಥಾಲಯದ ವಾಲ್‌ಪೇಪರ್ ಅನ್ನು ಆಯ್ಕೆ ಮಾಡಲು ಆದ್ಯತೆ ನೀಡಬೇಕು. ಕುಟುಂಬದ ಹಿರಿಯರೊಂದಿಗಿನ ಚಿತ್ರವನ್ನು ಸಹ ಆಯ್ಕೆ ಮಾಡಬಹುದು. ಅಲ್ಲದೆ ಹಳದಿ ಅಥವಾ ಚಿನ್ನದ ಬಣ್ಣದ ವಾಲ್ ಪೇಪರ್ ಕೂಡಾ ಆಯ್ಕೆ ಮಾಡಬಹುದು. ಹಳದಿ ಅಥವಾ ಕಿತ್ತಳೆ ಬಣ್ಣದ ವಾಲ್ ಪೇಪರ್ ಅನ್ನು ಸಹ ಆಯ್ಕೆ ಮಾಡಬಹುದು.
ಸಂಖ್ಯೆ 4
ಡೆಸ್ಟಿನಿ ಸಂಖ್ಯೆ 4 ಇದ್ದವರು, ಪರ್ವತಗಳ ವಾಲ್‌ಪೇಪರ್, ಹಚ್ಚ ಹಸಿರಿನ ಅರಣ್ಯ ಅಥವಾ ಅಜ್ಜ/ಅಜ್ಜಿಯೊಂದಿಗಿನ ಚಿತ್ರಗಳನ್ನಿಡಲು ಆದ್ಯತೆ ನೀಡಬೇಕು. ಅಲ್ಲದೆ, ತಿಳಿ ನೀಲಿ ಅಥವಾ ಬೂದು ಬಣ್ಣದ ವಾಲ್‌ಪೇಪರ್, ಆಕಾಶ ಅಥವಾ ಭೂಮಂಡಲದ ಚಿತ್ರವನ್ನು ಸಹ ಆಯ್ಕೆ ಮಾಡಬಹುದು.
ಸಂಖ್ಯೆ 5
ಸಂಖ್ಯೆ 5 ಅನ್ನು ಹೊಂದಿರುವ ಜನರು ದಟ್ಟಾರಣ್ಯದ ನಡುವೆ ಇಬ್ಬನಿ ಬೀಳುತ್ತಿರುವ ವಾಲ್ ಪೇಪರ್ ಇಡಬಹುದು. ಜೊತೆಗೆ ಸಹೋದರಿ ಅಥವಾ ಚಿಕ್ಕಮ್ಮ (ತಾಯಿಯ ಸಹೋದರಿ) ಇರುವ ಚಿತ್ರವನ್ನು ಆಯ್ಕೆ ಮಾಡಬಹುದು. ಅಲ್ಲದೆ, ತಿಳಿ ಹಸಿರು ಅಥವಾ ನೀಲಿ ಬಣ್ಣದ ವಾಲ್‌ಪೇಪರ್, ಬಿದಿರನ್ನು ಸಹ ಆರಿಸಿಕೊಳ್ಳಬಹುದು.
ಸಂಖ್ಯೆ 6
ಸಂಗಾತಿ ಮತ್ತು ಕುಟುಂಬ ಅಥವಾ ಕರೆನ್ಸಿ ಅಥವಾ ವಜ್ರದ ಚಿತ್ರಗಳನ್ನು ಸಂಖ್ಯೆ 6 ಇರುವವರು ಆಯ್ಕೆ ಮಾಡಬೇಕು. ಅಲ್ಲದೆ, ನೀಲಿ ಬಣ್ಣದ ವಾಲ್‌ಪೇಪರ್ ಅನ್ನು ಸಹ ಆರಿಸಿಕೊಳ್ಳಬಹುದು.
ಸಂಖ್ಯೆ 7
ಸಂಖ್ಯೆ 7 ಕ್ಕಾಗಿ ಹಿಮವಿರುವ ಪರ್ವತದ ತುದಿ, ಯಾವುದೇ ಧಾರ್ಮಿಕ ದೇವಾಲಯದ ಮೇಲ್ಭಾಗ, ಧ್ವಜ ಅಥವಾ ಅಜ್ಜ/ಅಜ್ಜಿಯೊಂದಿಗಿನ ಚಿತ್ರಗಳ ವಾಲ್ ಪೇಪರ್ ಸಹ ಬಳಸಬಹುದು. ಅಲ್ಲದೆ, ತಿಳಿ ಹಸಿರು ಅಥವಾ ಬಿಳಿ ಬಣ್ಣದ ವಾಲ್‌ಪೇಪರ್ ಕೂಡಾ ಆಯ್ಕೆ ಮಾಡಬಹುದು. ಸಂಖ್ಯಾಶಾಸ್ತ್ರದ ಪ್ರಕಾರ, ಆಧ್ಯಾತ್ಮಿಕ ವಾಲ್‌ಪೇಪರ್‌ಗಳನ್ನು ಇರಿಸುವುದು ಎಲ್ಲಕ್ಕಿಂತ ಉತ್ತಮ ಎಂದು ಪರಿಗಣಿಸಲಾಗಿದೆ.
ಸಂಖ್ಯೆ 8
ಸಂಖ್ಯೆ 8 ಹೊಂದಿರುವ ಜನರು ವ್ಯಾಯಾಮದ ವಾಲ್‌ಪೇಪರ್ ಆರಿಸಿಕೊಳ್ಳಬೇಕು. ಬೂದು ಅಥವಾ ನೇರಳೆ ಬಣ್ಣದ ವಾಲ್ ಪೇಪರ್ ಕೂಡಾ ಆಯ್ಕೆ ಮಾಡಬಹುದು.
ಸಂಖ್ಯೆ 9
ಡೆಸ್ಟಿನಿ ಸಂಖ್ಯೆ 9 ಇರುವವರು ತಮ್ಮ ಫೋನ್ ಪರದೆಯ ಮೇಲೆ ಕೆಂಪು ಹರಳು ಕೆಂಪು ಎಲೆಗಳನ್ನು ಹೊಂದಿರುವ ಕಾಡಿನ ವಾಲ್‌ಪೇಪರ್ ಅಥವಾ ಕೆಂಗುಲಾಬಿ (ಕೆಂಪು ಬಣ್ಣದ ಗುಲಾಬಿ) ಚಿತ್ರವನ್ನು ಆಯ್ಕೆ ಮಾಡಬೇಕು. ಅಲ್ಲದೆ ಗುಲಾಬಿ ಬಣ್ಣ, ಕೆಂಪು ಬಣ್ಣದ ವಾಲ್‌ಪೇಪರ್ ಅನ್ನು ಸಹ ಆಯ್ಕೆ ಮಾಡಬಹುದು. ಆದರೆ, ಕೆಂಪು ಬಣ್ಣಕ್ಕೆ ಹೆಚ್ಚಿನ ಮಹತ್ವ ನೀಡಿದರೆ ಒಳಿತು.
ಮೇಲೆ ತಿಳಿಸಿದ ಸಲಹೆಗಳನ್ನು ಅನುಸರಿಸುವ ಮೂಲಕ, ಜೀವನದಲ್ಲಿ ಹಣ, ಪ್ರೀತಿ, ಸುಖ ಮತ್ತು ಸಮೃದ್ಧಿ ತರುತ್ತದೆ ಎಂದು ನಂಬಲಾಗಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.