Palm Astrology: ಅಂಗೈಯಲ್ಲಿದೆ ನಮ್ಮ ಗುಣಧರ್ಮ; ಹಸ್ತ ಸಮತಟ್ಟಾಗಿರುವವರು ಜೀವನದಲ್ಲಿ ಹೇಗೆ ಬದುಕುತ್ತಾರೆ? ಇಲ್ಲಿದೆ ವಿವರ
Palm Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಹಸ್ತ ನೋಡಿ ಕೂಡಾ ಜಾತಕ ಹೇಳಲಾಗುತ್ತದೆ. ಹಾಗೇ ಅಂಗೈ ಸಮತಟ್ಟಾಗಿರುವವರ ಗುಣ ಹೇಗಿರುತ್ತದೆ ಎಂದು ಇಲ್ಲಿ ವಿವರಿಸಲಾಗಿದೆ. ಖರ್ಚು ವೆಚ್ಚದ ವಿಚಾರದಲ್ಲಿ ದೃಢವಾದ ನಿರ್ಧಾರ ಇರುವುದಿಲ್ಲ. ಹಣ ಉಳಿಸಬೇಕೆಂಬ ಮನಸಿದ್ದರೂ ಸಾಧ್ಯವಾಗುವುದಿಲ್ಲ. ಒಟ್ಟಾರೆ ಇವರದು ಆರಕ್ಕೇರದ ಮೂರಕ್ಕಿಳಿಯದ ವ್ಯಕ್ತಿತ್ವ.
Palm Horoscope: ಕೈ ನೋಡಿ ಜ್ಯೋತಿಷ್ಯ ಹೇಳುವುದು ಸಾಮಾನ್ಯ. ಆದರೆ ನಮ್ಮ ಅಂಗೈಗಳ ಆಕಾರವನ್ನು ಅನುಸರಿಸಿ ನಮ್ಮ ಗುಣ ಧರ್ಮವನ್ನು ತಿಳಿಯಬಹುದು ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಮುಖ್ಯವಾಗಿ ಅಂಗೈ ಸಮತಟ್ಟಾಗಿರುವುದು, ಅಂಗೈ ಒಳ ಹೋದಂತೆ ಇರುವುದು ಮತ್ತು ಅಂಗೈ ಉಬ್ಬಿಕೊಂಡತೆ ಇರುವುದು, ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ.
ಅಂಗೈ ಸಮತಟ್ಟಾಗಿದ್ದರೆ ಅವರ ಮನಸ್ಸಿನಲ್ಲಿ ಯಾವುದೇ ರೀತಿಯ ಸ್ವಾರ್ಥದ ಭಾವನೆ ಇರುವುದಿಲ್ಲ. ಆದರೆ ಇವರು ನೇರವಾಗಿ ತಮ್ಮ ಮನದಲ್ಲಿ ಇರುವ ವಿಚಾರವನ್ನು ತಿಳಿಸುವುದಿಲ್ಲ. ಆದರೆ ಅವಶ್ಯಕತೆ ಇದ್ದಲ್ಲಿ ಯಾವುದೇ ವಿಚಾರವನ್ನು ತಿಳಿಸಲು ಭಯ ಪಡುವುದೂ ಇಲ್ಲ. ಇವರ ಜೀವನವು ಹೆಚ್ಚು ಬದಲಾವಣೆಗಳನ್ನು ಕಾಣದೆ ಒಂದೇ ರೀತಿಯಲ್ಲಿ ಸಾಗುತ್ತದೆ. ಕೇವಲ ತಾವು ಒಬ್ಬರೇ ಸಂತೋಷ ಜೀವನ ನಡೆಸುವುದಲ್ಲದೆ ಪ್ರತಿಯೊಬ್ಬರ ಸುಖಮಯ ಜೀವನಕ್ಕೆ ದಾರಿದೀಪವಾಗುತ್ತಾರೆ. ಸೋಲು ಗೆಲುವನ್ನು ಒಂದೇ ದೃಷ್ಟಿಯಿಂದ ಸ್ವೀಕರಿಸುವುದು ಇವರ ಹೆಗ್ಗಳಿಕೆ. ಸೋಲಿಗೆ ಕುಗ್ಗುವುದು ಇಲ್ಲ ಗೆಲುವಿಗೆ ಉಬ್ಬುವುದು ಇಲ್ಲ. ಆರೋಗ್ಯವು ಉತ್ತಮ ಮಟ್ಟದಲ್ಲಿ ಇರುತ್ತವೆ.
ಸಾಮಾನ್ಯವಾಗಿ ಇವರು ಅತಿ ಸಣ್ಣಗೆ ಅಥವಾ ಅತಿ ದಪ್ಪನೆಯ ದೇಹವನ್ನು ಹೊಂದಿರುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರೂ ತಮ್ಮ ದೇಹದ ಆಕಾರವನ್ನು ಬದಲಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಭೆ ಸಮಾರಂಭಗಳಲ್ಲಿ ಎಲ್ಲರೊಡನೆ ಬೆರೆತರೂ ಯಾವುದೇ ವಿಚಾರದಲ್ಲಿ ಸ್ವಂತ ಅಭಿಪ್ರಾಯ ತಿಳಿಸುವುದಿಲ್ಲ. ಇವರ ಮನಸ್ಸು ಮತ್ತು ಇವರ ನಿರ್ಧಾರಗಳು ಆಯಾ ಸಮಯಕ್ಕೆ ತಕ್ಕಂತೆ ಇರುತ್ತದೆ. ತೆಗೆದುಕೊಂಡ ತೀರ್ಮಾನಗಳನ್ನು ಬಹಳ ಸುಲಭವಾಗಿ ಬದಲಿಸುತ್ತಾರೆ. ಇವರು ಯಾರಿಗೂ ಮೋಸ ಮಾಡದೆ ಹೋದರೂ, ಉಂಟಾಗುವ ತೊಂದರೆಗೆ ಪರೋಕ್ಷವಾಗಿ ಕಾರಣರಾಗುತ್ತಾರೆ.
ಉದ್ಯೋಗದ ವಿಚಾರದಲ್ಲಿ ಎಲ್ಲರಿಗೂ ಇವರು ಸ್ನೇಹಿತರೇ. ಮೊದಲ ಆದ್ಯತೆಯನ್ನು ತಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ನೀಡುತ್ತಾರೆ. ಪುರುಷರಿಗಿಂತಲೂ ಸ್ತ್ರೀಯರು ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸುತ್ತಾರೆ. ವಿನಾಕಾರಣ ಉದ್ಯೋಗ ಬದಲಿಸುವುದು ಇಷ್ಟವಾಗದ ವಿಚಾರ. ಇರುವ ಉದ್ಯೋಗದಲ್ಲಿಯೇ ತಮ್ಮ ಪ್ರತಿಭೆಯನ್ನು ತೋರಬೇಕೆಂಬ ಹಟ ಇವರದ್ದು. ಕುಟುಂಬದಲ್ಲಿ ಇರುವ ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡುತ್ತಾರೆ. ಎಲ್ಲರಿಂದಲೂ ಸಹಾಯ ಪಡೆಯುತ್ತಾರೆ. ಆದರೆ ಯಾರಿಗೂ ಇವರು ಸಹಾಯ ಮಾಡುವುದಿಲ್ಲ.
ಖರ್ಚು ವೆಚ್ಚದ ವಿಚಾರದಲ್ಲಿ ದೃಢವಾದ ನಿರ್ಧಾರ ಇರುವುದಿಲ್ಲ. ಹಣ ಉಳಿಸಬೇಕೆಂಬ ಮನಸಿದ್ದರೂ ಸಾಧ್ಯವಾಗುವುದಿಲ್ಲ. ಒಟ್ಟಾರೆ ಇವರದು ಆರಕ್ಕೇರದ ಮೂರಕ್ಕಿಳಿಯದ ವ್ಯಕ್ತಿತ್ವ. ಬೇರೆಯವರನ್ನು ನಂಬಿ ಯಾವುದೇ ಕೆಲಸ ಮಾಡುವುದಿಲ್ಲ. ತಮ್ಮ ಮೇಲೆ ವಿಶ್ವಾಸ ಹೆಚ್ಚು. ಕೇವಲ ಬೇರೆಯವರಿಂದ ಸಹಾಯವನ್ನಷ್ಟೇ ಪಡೆಯುತ್ತಾರೆ. ಇವರು ಸುಲಭವಾಗಿ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಆದರೆ, ಯಾರಿಗೂ ಇವರನ್ನು ಕಂಡರೆ ಭಯವಿರುವುದಿಲ್ಲ. ಹಾಗೆಯೇ ಕನಿಕರವೂ ಹುಟ್ಟುವುದಿಲ್ಲ. ಇವರಲ್ಲಿನ ನಿರ್ಲಿಪ್ತ ಮನೋಭಾವನೆ ಎಲ್ಲರ ಗಮನ ಸೆಳೆಯುತ್ತದೆ.
ಮುಖ್ಯವಾಗಿ ವಿದ್ಯಾರ್ಥಿಗಳು ಯಾವುದೇ ಅಮಿಷಕ್ಕೆ ಒಳಗಾಗುವುದಿಲ್ಲ. ಹಾಗೆಯೇ ಯಾವುದೇ ರೀತಿಯ ದೌರ್ಜನ್ಯಕ್ಕೂ ಬೆದರುವುದಿಲ್ಲ. ತಮ್ಮ ಅನುಕೂಲಕ್ಕಾಗಿ ಪಕ್ಷ ಬದಲಿಸುವ ಬುದ್ದಿವಂತರು. ಪರೀಕ್ಷೆ ಆರಂಭವಾಗುವ ಮುನ್ನ ದೇವರಲ್ಲಿ ಗೆಲುವಿಗಾಗಿ ಪ್ರಾರ್ಥಿಸುವುದಿಲ್ಲ. ಪರೀಕ್ಷೆಯ ನಂತರ ಇಂತಿಷ್ಟೇ ಅಂಕ ಕೊಡಿಸು ಎಂಬ ರೀತಿಯಲ್ಲಿ ದೇವರಲ್ಲಿ ಬೇಡಿಕೊಳ್ಳುವ ಗುಣವಿರುವವರು. ಆರೋಗ್ಯದಲ್ಲಿ ತೊಂದರೆ ಎದುರಾಗದು. ತೊಂದರೆ ಆದರೂ ಔಷಧಿಗಳನ್ನು ಸೇವಿಸದೆ ದೈಹಿಕ ವ್ಯಾಯಾಮದಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ಪರಿ ತಿಳಿದಿರುತ್ತದೆ. ವೈವಾಹಿಕ ಜೀವನದಲ್ಲಿ ಸಂಗಾತಿಗೆ ಕಷ್ಟ ನೀಡುವುದಿಲ್ಲ. ತಮ್ಮ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸುವ ರೀತಿಯೇ ಬೇರೆ. ಸಂಗಾತಿಯ ಬಾಯಲ್ಲಿ ಸಕಾರಾತ್ಮಕ ಉತ್ತರ ಬರುವವರೆಗೂ ಬುದ್ದಿವಂತಿಕೆಯಿಂದ ಮಾತನಾಡುತ್ತಾರೆ. ಸ್ನೇಹಿತರ ಮನೆಗೂ ಸಂಬಂಧಿಕರ ಮನೆಗೆ ಹೋಗಿ ದಿನಗಟ್ಟಲೆ ತಂಗುವುದು ಕನಸಿನ ಮಾತು. ಇವರಿಗೆ ಸ್ವಂತ ಮನೆಯಲ್ಲಿ ಶಾಂತಿ ಇರಬೇಕು. ದೇಗುಲ ಪ್ರವಾಸದ ವಿಚಾರಕ್ಕೆ ಬಂದರೆ ಇವರನ್ನು ಒಪ್ಪಿಸಿ ಕರೆದೊಯ್ಯುವುದೇ ಕಷ್ಟ. ಕಥೆಗಳನ್ನು ಬರೆಯುವುದು ಕವಿತೆಗಳನ್ನು ರಚಿಸುವುದು ಇವರ ಹವ್ಯಾಸ. ಒಟ್ಟಾರೆ ಇವರು ಸಂತೋಷದಿಂದ ಜೀವನ ನಡೆಸುತ್ತಾರೆ. ಇವರೊಂದಿಗೆ ಸ್ನೇಹ ಸಂಬಂಧ ಬೆಳೆಸಿದವರು ನಿಜವಾಗಿಯೂ ಪುಣ್ಯವಂತರು.
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).