ಹೆಬ್ಬೆರಳಿನಲ್ಲಿ ಚಕ್ರಾಕಾರವಾಗಿ ಇರುವ ರೇಖೆಗಳು 3ಡಿ ಯಂತೆ ಕಾಣಿಸಿದರೆ ನಿಮ್ಮ ಗುಣಗಳು ಹೇಗಿರುತ್ತವೆ -ಹಸ್ತಸಾಮುದ್ರಿಕ
ಪ್ರತಿಯೊಬ್ಬ ವ್ಯಕ್ತಿಯ ಕೈಯಲ್ಲಿ ವಿಭಿನ್ನ ರೇಖೆಗಳು ಇರುತ್ತವೆ. ಈ ಕೆಲವು ಗೆರೆಗಳು ವ್ಯಕ್ತಿಯ ವೃತ್ತಿಜೀವನದ ಏರಳಿತಗಳ ಬಗ್ಗೆ ಸೂಚಿಸುತ್ತವೆ. ಹೆಬ್ಬೆರಳಿನಲ್ಲಿ ಚಕ್ರಾಕಾರದ ರೇಖೆಗಳಿದ್ದರೆ ನಿಮ್ಮ ಗುಣ ಹೇಗಿರುತ್ತೆ ತಿಳಿಯಿರಿ.

ವ್ಯಕ್ತಿಯ ಅಂಗೈಯಲ್ಲಿ ಅನೇಕ ರೀತಿಯ ಗೆರೆಗಳಿರುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿನ ಕೆಲವು ರೇಖೆಗಳು ವ್ಯಕ್ತಿಯ ಗುಣಗಳನ್ನು ತಿಳಿಸುತ್ತವೆ. ಕೆಲವರ ಹೆಬ್ಬೆರಳಿನಲ್ಲಿ ಚಕ್ರಾಕಾರವಾಗಿ ಇರುವ ರೇಖೆಗಳು 3D ಯಂತೆ ಕಂಡು ಬರುತ್ತದೆ. ರೇಖೆಗಳು ಬೇರೊಂದು ವಸ್ತು ಅಥವಾ ಪ್ರಾಣಿಯ ಮೇಲೆ ಜೋಡಿಸಿ ಇಟ್ಟಂತೆ ವಿವಿಧ ಪದರುಗಳಲ್ಲಿ ಇರುವಂತೆ ಕಂಡುಬರುತ್ತದೆ. ಇವರು ಹೆಚ್ಚಿನ ಪ್ರತಿಫಲಾಕ್ಷೆ ಇಲ್ಲದೆ ಸತತ ಪ್ರಯತ್ನದಿಂದ ತಮ್ಮ ಪಾಲಿನ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುತ್ತಾರೆ. ಇವರಲ್ಲಿ ಆಕ್ರಮಣಶಾಲಿ ವ್ಯಕ್ತಿತ್ವವು ಕಂಡು ಬರುತ್ತದೆ. ಇವರಿಗೆ ಇಷ್ಟವಾದ ಕೆಲಸ ಕಾರ್ಯಗಳನ್ನು ಮಾತ್ರ ಆಯ್ಕೆ ಮಾಡುತ್ತಾರೆ. ಧೈರ್ಯ ಸಾಹಸದ ಗುಣ ಇರುತ್ತದೆ.
ಅಂಗೈಯಲ್ಲಿ ಈ ರೀತಿಯ ರೇಖೆಗಳನ್ನು ಹೊಂದಿರುವವರಿಗೆ ಸಾಮಾನ್ಯವಾಗಿ ಕೋಪ ಇರುವುದಿಲ್ಲ. ಆದರೆ ಕೋಪಗೊಂಡಲ್ಲಿ ಸುಲಭವಾಗಿ ಸಮಾಧಾನ ಹೊಂದುವುದಿಲ್ಲ. ಇವರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆತರೆ ಅನುಕೂಲತೆಯೇ ಹೆಚ್ಚು. ಸೇಡಿನ ಸ್ವಭಾವವಿರುತ್ತದೆ. ದೊರೆಯುವ ಅವಕಾಶವನ್ನು ತಮಗೆ ಅನುಕೂಲವಾಗುವಂತೆ ಪರಿವರ್ತಿಸಿಕೊಳ್ಳಬಲ್ಲರು. ಇವರಿಗೆ ಸಂಬಂಧಿಸಿದ ಪ್ರತಿಯೊಂದು ವಿಚಾರವನ್ನು ಬೇರೆಯವರಿಗೆ ತಿಳಿಸುವುದಿಲ್ಲ. ಬೇರೆಯವರ ಮನಸ್ಸನ್ನು ಸಂತೋಷಪಡಿಸಲು ಆಯ್ದ ವಿಚಾರಗಳನ್ನು ಚರ್ಚಿಸುತ್ತಾರೆ. ಜೀವನದಲ್ಲಿ ಇವರು ಸ್ವಂತ ಮನೆ ಅಥವಾ ಸ್ವಂತ ಜಮೀನನ್ನು ಹೊಂದಲು ಸಾಧ್ಯವಾಗುತ್ತದೆ. ಅನಾವಶ್ಯಕ ಓಡಾಟವನ್ನು ಇಷ್ಟಪಡುವುದಿಲ್ಲ. ಸದಾಕಾಲ ಶುಚಿಯಾದ ಮತ್ತು ರುಚಿಯಾದ ಭೋಜನವನ್ನು ಸೇವಿಸುತ್ತಾರೆ. ಆಹಾರ ಸೇವನೆಯಲ್ಲಿ ಇತಿಮಿತಿ ಇಲ್ಲದೆ ಹೋದಲ್ಲಿ ಅನಾರೋಗ್ಯಕ್ಕೆ ಈಡಾಗುತ್ತಾರೆ ಎಂಬ ಜ್ಞಾನ ಇವರಿಗೆ ಇರುತ್ತೆ.
ಸುಖವಾದ ನಿದ್ದೆ, ರುಚಿಕರ ಭೋಜನ ಇವರ ಹವ್ಯಾಸ
ಹೆಬ್ಬೆರಳಿನಲ್ಲಿ ಚಕ್ರಾಕಾರವಾಗಿ ಇರುವ ರೇಖೆಗಳು 3ಡಿ ಯಂತೆ ಕಂಡು ಬರುವ ವ್ಯಕ್ತಿಗಳು ಬಿಡುವಿಲ್ಲದೆ ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಒತ್ತಡದ ಸನ್ನಿವೇಶದಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಬೇರೆಯವರಿಂದ ಒತ್ತಡವನ್ನು ಸಹಿಸುವುದಿಲ್ಲ ಅಥವಾ ಬೇರೆಯವರ ಮೇಲೆ ಒತ್ತಡವನ್ನು ಹೇರುವುದು ಇಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಶ್ರಮಕ್ಕೆ ತಕ್ಕಂತೆ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಸುಖವಾದ ನಿದ್ದೆ ಮತ್ತು ರುಚಿಕರ ಭೋಜನ ಇವರ ಹವ್ಯಾಸವಾಗಿರುತ್ತದೆ. ಬೇರೆಯವರಿಂದ ಇವರಿಗೆ ಕೇವಲ ಹಣವಲ್ಲದೆ ಸ್ಥಿರಾಸ್ತಿಯು ಲಭಿಸುತ್ತದೆ. ಇವರಿಗೆ ಅರಿಯದಂತೆ ಕಾನೂನಿನ ವಿಚಾರದಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಇವರು ಕಾರ್ಯನಿರ್ವಹಿಸುವ ರೀತಿ ಎಲ್ಲರಿಗೂ ಇಷ್ಟವಾಗುತ್ತದೆ.
ಇವರಿಗೆ ಕುಟುಂಬದಲ್ಲಿ ವಿಶೇಷವಾದ ಸ್ಥಾನವಿರುತ್ತದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆ ಇರುತ್ತದೆ. ಆದರೆ ಅದಕ್ಕೆ ಸರಿಸಮನಾದ ಖರ್ಚು ವೆಚ್ಚಗಳಿರುತ್ತದೆ. ಸುಲಭವಾಗಿ ಹಣಕಾಸಿನ ವಿಚಾರದಲ್ಲಿ ಬೇರೆಯವರನ್ನು ನಂಬುವುದಿಲ್ಲ. ಇವರಿಗೆ ಹಠದ ಗುಣವಿರುತ್ತದೆ. ಆತ್ಮ ಶಕ್ತಿಯಲ್ಲದೆ ದೈಹಿಕ ಶಕ್ತಿಯು ಇವರಿಗೆ ವಿಶೇಷವಾಗಿರುತ್ತದೆ. ಸಮಯಕ್ಕೆ ತಕ್ಕಂತೆ ಮಾತನಾಡುವ ಬುದ್ಧಿ ಇರುತ್ತದೆ. ಇವರ ಪ್ರತಿಭೆಗೆ ತಕ್ಕಂತೆ ಅವಕಾಶಗಳು ದೊರೆಯುತ್ತವೆ. ಐಷಾರಾಮಿ ಜೀವನವನ್ನು ನಡೆಸಲು ಪ್ರಯತ್ನಿಸುತ್ತಾರೆ. ಆದರೆ ಇವರಿಗೆ ಹೊಂದಾಣಿಕೆಯ ಗುಣ ಇರುವುದಿಲ್ಲ.
ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರುತ್ತದೆ. ಆದಾಯದಲ್ಲಿ ನಷ್ಟವಾಗುವ ಸಂಭವವಿರುತ್ತದೆ. ಮಕ್ಕಳನ್ನು ವಿಶೇಷ ಪ್ರೀತಿಯಿಂದ ಬೆಳೆಸುತ್ತಾರೆ. ಬಾಲ್ಯದಲ್ಲಿ ಅನಾರೋಗ್ಯ ಇರುತ್ತದೆ. ಇಳಿ ವಯಸ್ಸಿನಲ್ಲಿ ಸಹ ಯಾರೊಬ್ಬರ ಅಧೀನದಲ್ಲಿ ಇರಲು ಬಯಸುವುದಿಲ್ಲ. ಮಕ್ಕಳ ಸಹಕಾರವಿದ್ದರೂ ಸ್ವತಂತ್ರವಾಗಿ ಜೀವನ ನಡೆಸುತ್ತಾರೆ. ಶಾಂತಿ ಮತ್ತು ನೆಮ್ಮದಿ ಇವರ ಜೀವನದಲ್ಲಿ ಸದಾ ಇರುತ್ತದೆ. ದಿನ ಕಳೆದಂತೆ ಕ್ರಮೇಣವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ. ಇವರಿಗೆ ವಿಶಾಲವಾದ ಮನಸ್ಥಿತಿ ಇರುತ್ತದೆ. ದಾಂಪತ್ಯ ಜೀವನದಲ್ಲಿ ಸಂತೃಪ್ತಿ ಇರುವುದಿಲ್ಲ. ಅನಗತ್ಯವಾಗಿ ವಾದ ವಿವಾದಗಳು ಎದುರಾಗುತ್ತವೆ. ಒಳ್ಳೆಯ ವಿಚಾರವನ್ನಾಗಲಿ ಕೆಟ್ಟ ವಿಚಾರವನ್ನಾಗಲಿ ಮನದಲ್ಲಿ ಮುಚ್ಚಿಡಲು ಸಾಧ್ಯವಾಗುವುದಿಲ್ಲ. ಭಾವುಕರಾಗಿ ವರ್ತಿಸುತ್ತಾರೆ. ಹೊಗಳಿಕೆಗೆ ಮರುಳಾಗಿ ತೊಂದರೆಗೆ ಸಿಲುಕುತ್ತಾರೆ. ಮನೆ ಚಿಕ್ಕದಾಗಿದ್ದರು ಅದನ್ನು ನವೀಕರಿಸುವ ರೀತಿ ಎಲ್ಲರ ಮನಗೆಲ್ಲುತ್ತಾರೆ. ದುರಾಸೆ ಇರುವುದಿಲ್ಲ. ಆದರೆ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಬೇರೆಯವರಿಗೆ ಸಹಾಯ ಮಾಡುವಲ್ಲಿ ಸಂತಸ ಕಾಣುತ್ತಾರೆ. ತಪ್ಪಾದ ಮಾಹಿತಿಯಿಂದ ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಸಾಲದ ವ್ಯವಹಾರದಿಂದ ದೂರ ಉಳಿಯುತ್ತಾರೆ. ಸ್ನೇಹಿತರನ್ನು ಪ್ರೀತಿ ವಿಶ್ವಾಸದಿಂದ ಮತ್ತು ನಂಬಿಕೆಯಿಂದ ಕಾಣುತ್ತಾರೆ.
(ಬರಹ: ಎಚ್ ಸತೀಶ್, ಜ್ಯೋತಿಷಿ)