Paush Purnima 2025: ಪುಷ್ಯ ಹುಣ್ಣಿಮೆ ಯಾವಾಗ, ಈ ದಿನ ಯಾವ ದೇವರನ್ನು ಪೂಜಿಸಬೇಕು, ಏನು ಫಲ ದೊರೆಯುತ್ತದೆ?
Paush Purnima 2025: ಜನವರಿ 13 ರಂದು ಪುಷ್ಯ ಮಾಸದ ಹುಣ್ಣಿಮೆ ಇದೆ. ಇದೇ ದಿನ ಆಂಧ್ರ ಹಾಗೂ ತೆಲಂಗಾಣದಲ್ಲಿ ಭೋಗಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಶುಭದಿನ ಶಿವ ಪಾರ್ವತಿ, ವಿಷ್ಣು ಲಕ್ಷ್ಮೀ ಪೂಜೆ ಮಾಡಿದಲ್ಲಿ ಭಕ್ತರಿಗೆ ವಿವಿಧ ಫಲ ದೊರೆಯುತ್ತದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಪುಷ್ಯ ಮಾಸದ ಹುಣ್ಣಿಮೆಯನ್ನು ಉತ್ತರ ಭಾರತದಲ್ಲಿ ಪೌಷ್ ಪೂರ್ಣಿಮ ಎನ್ನುತ್ತಾರೆ. 2025 ಜನವರಿ 13 ರಂದು ಪೌಷ್ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಈ ದಿನ ವಿಶೇಷವಾಗಿ ಬನಶಂಕರಿ ಪೂಜೆ ಮಾಡುತ್ತಾರೆ. ಆದ್ದರಿಂದ ಇದನ್ನು ಬನದ ಹುಣ್ಣುಮೆ ಎಂದೂ ಕರೆಯುತ್ತಾರೆ. ಈ ದಿನ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಭೋಗಿ ಹಬ್ಬ ಕೂಡಾ ಆಚರಿಸಲಾಗುತ್ತಿದೆ.
ಶಿವ ಪಾರ್ವತಿ, ಲಕ್ಷ್ಮೀ ವಿಷ್ಣುವನ್ನು ಆರಾಧಿಸುವ ದಿನ
ಪುಷ್ಯ ಹುಣ್ಣಿಮೆಯಂದು ಬಹಳಷ್ಟು ಕಡೆ ಶಿವ ಪಾರ್ವತಿಯರನ್ನು ಪೂಜಿಸಲಾಗುತ್ತದೆ. ಶಿವಲಿಂಗಕ್ಕೆ ಅಭಿಷೇಕ ಪೂಜೆ, ಬಿಲ್ವಪತ್ರೆ ಪೂಜೆ ಮಾಡುವುದರಿಂದ ಕಷ್ಟಗಳು ಪರಿಹಾರವಾಗುತ್ತದೆ, ದೀರ್ಘಾಯಸ್ಸು ದೊರೆಯುತ್ತದೆ ಎಂಬ ನಂಬಿಕೆ ಇದೆ.ಇದೇ ದಿನ ಮಹಾಕುಂಭವು ಆರಂಭವಾಗುತ್ತದೆ. ಇದರ ಅಂಗವಾಗಿ ಹುಣ್ಣಿಮೆಯಂದು ವಿಷ್ಣು ಮತ್ತು ಮಹಾಲಕ್ಷ್ಮಿಯ ಪೂಜೆ ಸಲ್ಲಿಸುತ್ತಾರೆ. ವಿಷ್ಣು ಮತ್ತು ಲಕ್ಷ್ಮಿಯನ್ನು ಹಣಕಾಸಿನ ವಿಚಾರವಾಗಿ ಮಾತ್ರವಲ್ಲ, ಅವಿವಾಹಿತರು ವಿವಾಹ ಭಾಗ್ಯ ನೀಡಲೆಂದು ಪ್ರಾರ್ಥಿಸಿ ಪೂಜಿಸುತ್ತಾರೆ. ಕುಟುಂಬದಲ್ಲಿ ಮನಸ್ತಾಪ ದೂರವಾಗಿ ಸೌಹಾರ್ದಯುತ ವಾತಾವರಣ ಉಂಟಾಗುತ್ತದೆ. ಅಲ್ಲದೆ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಜೊತೆಗೆ ದೀರ್ಘಕಾಲದಿಂದ ಇದ್ದ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ. ನಿಯಮಾನುಸಾರ ಪೂಜೆ ಮಾಡಿದಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತದೆ.
ಪಂಚಾಂಗದ ಪ್ರಕಾರ ಹುಣ್ಣಿಮೆ ಬೆಳಗಿನ ಜಾವ ಆರಂಭವಾಗುತ್ತದೆ. ದಿನಪೂರ್ತಿ ಹುಣ್ಣಿಮೆ ಇರುತ್ತದೆ. ಹಣಕಾಸಿನ ಸಮಸ್ಯೆ ಎದುರಿಸುತ್ತಿರುವವರು ಶ್ರೀಲಕ್ಷ್ಮಿ ಸಮೇತ ವಿಷ್ಣುವನ್ನು ಪೂಜಿಸಬೇಕು. ಅಕ್ಕಿಯಿಂದ ತಯಾರಿಸಿದ ಪಾಯಸ ಹಾಗೂ ಇನ್ನಿತರ ಅಡುಗೆಯನ್ನು ದೇವರಿಗೆ ನೇವೇದ್ಯವಾಗಿ ಅರ್ಪಿಸಬೇಕು. ಸಂಜೆ ಸೂರ್ಯಾಸ್ತದ ನಂತರ, ದೀಪವನ್ನು ಬೆಳಗಿಸಿ ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ ನಿಂಬೆಹಣ್ಣಿನ ಪಾನಕ ಮತ್ತು ಕೋಸಂಬರಿ ನೀಡಬೇಕು. ಆ ನಂತರ ದಕ್ಷಿಣೆ ಸಮೇತ ಹಣ್ಣಿನೊಂದಿಗೆ ತಾಂಬೂಲ ನೀಡಬೇಕು. ದಂಪತಿಗಳಿಗೆ ಭೋಜನ ವ್ಯವಸ್ಥೆ ಮಾಡುವುದು ಇನ್ನೂ ಒಳ್ಳೆಯದು. ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹಣ ಉಳಿಸಲು ಸಾಧ್ಯವಾಗುತ್ತದೆ.
ಶಿವನಿಗೆ ಪಂಚಾಮೃತ ಅಭಿಷೇಕ ಮಾಡಿದರೆ ಶುಭಫಲ
ಕುಟುಂಬದಲ್ಲಿ ಉತ್ತಮ ಅನ್ಯೋನ್ಯತೆ ಇರದೆ ಹೋದಲ್ಲಿ, ಶಿವ ಪಾರ್ವತಿಯನ್ನು ಪೂಜಿಸಬೇಕು. ಪಂಚಾಮೃತ ಅಭಿಷೇಕ ಮಾಡಬೇಕು. ಶಾಲ್ಯಾನ್ನವನ್ನು ನೇವೇದ್ಯವಾಗಿ ಅರ್ಪಿಸಬೇಕು. ಇದರಿಂದಾಗಿ ಕುಟುಂಬದಲ್ಲಿ ಮನಸ್ತಾಪ ದೂರವಾಗಿ ನಾಂತಿ ನೆಮ್ಮದಿ ನೆಲೆಸುತ್ತದೆ. ಮಾನಸಿಕ ಒತ್ತಡ ದೂರವಾಗುತ್ತದೆ. ಕುಟುಂಬದ ಹಿರಿಯರಿಗೆ ಬಹಳ ದಿನಗಳಿಂದ ಅನಾರೋಗ್ಯ ಬಾಧಿಸುತ್ತಿದ್ದಲ್ಲಿ ತುಳಸಿ ಗಿಡದಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಇರಿಸಿ ಪೂಜಿಸಬೇಕು. ಸೂರ್ಯೋದಯದಿಂದ ಸೂರ್ಯಾಸ್ತವಾಗುವ ಒಳಗೆ ಈ ಪೂಜೆಯನ್ನು ಸಲ್ಲಿಸಬೇಕು. ತುಳಸಿ ಗಿಡಕ್ಕೆ ಮತ್ತು ಶ್ರೀ ಕೃಷ್ಣನಿಗೆ ಹಸಿ ಹಾಲನ್ನು ಅರ್ಪಿಸಬೇಕು. ರೋಗಿಗಳಿಗೆ ಅಥವಾ ಅವಶ್ಯಕತೆ ಇದ್ದವರಿಗೆ ಅನ್ನದಾನ ಮಾಡುವುದರಿಂದ ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ.
ಮಕ್ಕಳು ಸರಿಯಾಗಿ ಊಟ ಮಾಡದಿದ್ದಲ್ಲಿ ಬೆಣ್ಣೆಕೃಷ್ಣನಿಗೆ ಪೂಜೆ ಸಲ್ಲಿಸಬೇಕು. ಮನೆಯ ಸಮೀಪವಿರುವ ವಿಷ್ಣುವಿನ ದೇಗುಲಕ್ಕೆ ಈ ಬೆಣ್ಣೆ ನೀಡಬೇಕು. ಸಮಾನ ವಯಸ್ಕ ಮಕ್ಕಳಿಗೆ ಅವರು ಇಷ್ಟಪಡುವ ತಿಂಡಿ ತಿನಿಸು ನೀಡಬೇಕು. ಇದರಿಂದ ಮಕ್ಕಳಲ್ಲಿದ್ದ ಆಹಾರ ಸೇವನೆಯ ತೊಂದರೆಯು ದೂರವಾಗುತ್ತದೆ. ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿದಿರುವವರು ಪಂಚಮುಖಿ ಗಣಪತಿ ಮತ್ತು ಬಾಲಕೃಷ್ಣನ ಪೂಜೆ ಮಾಡಿದಲ್ಲಿ ವಿದ್ಯಾಭ್ಯಾಸದಲ್ಲಿ ಉನ್ನತಿ ಉಂಟಾಗುತ್ತದೆ. ಇದೇ ದಿನ ಐವರು ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಲೇಖನಿ ನೀಡುವುದು ಒಳ್ಳೆಯದು. ಜೊತೆಗೆ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣದಿಂದ ಸಕಲ ಸೌಭಾಗ್ಯವೂ ಲಭಿಸುತ್ತದೆ. ಪಠಿಸಲು ಸಾಧ್ಯವಿಲ್ಲವಾದಲ್ಲಿ ವಿಷ್ಣು ಸಹಸ್ರನಾಮ ಕೇಳುವುದು ಒಳ್ಳೆಯದು.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
ಮೊಬೈಲ್: 8546865832