ಮೀನ ರಾಶಿ ಭವಿಷ್ಯ 2025: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಉದ್ಯೋಗದಲ್ಲಿ ಒತ್ತಡ, ವಾಸ ಸ್ಥಳ ಬದಲಿಸುವ ಸಾಧ್ಯತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೀನ ರಾಶಿ ಭವಿಷ್ಯ 2025: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಉದ್ಯೋಗದಲ್ಲಿ ಒತ್ತಡ, ವಾಸ ಸ್ಥಳ ಬದಲಿಸುವ ಸಾಧ್ಯತೆ

ಮೀನ ರಾಶಿ ಭವಿಷ್ಯ 2025: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಉದ್ಯೋಗದಲ್ಲಿ ಒತ್ತಡ, ವಾಸ ಸ್ಥಳ ಬದಲಿಸುವ ಸಾಧ್ಯತೆ

Pisces Horoscope 2025: ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಿದ್ದಂತೆ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸ ವರ್ಷ ಬರುತ್ತಿದ್ದಂತೆ ತಮ್ಮ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. 2025 ರಲ್ಲಿ ಮೀನ ರಾಶಿಯವರ ಭವಿಷ್ಯ ಹೇಗಿದೆ ನೋಡೋಣ. (ಬರಹ: ಎಚ್. ಸತೀಶ್, ಜ್ಯೋತಿಷಿ)

ಮೀನ ರಾಶಿ ಭವಿಷ್ಯ 2025
ಮೀನ ರಾಶಿ ಭವಿಷ್ಯ 2025 (PC: canva)

ಮೀನ ರಾಶಿ ಭವಿಷ್ಯ 2025: ಆರಂಭಿಸುವ ಕೆಲಸ ಕಾರ್ಯಗಳು ನಿಧಾನವಾಗಿ ಸಾಗಲಿದೆ. ದೃಢ ಮನಸ್ಸು ಇರದ ಕಾರಣ ಅಡೆತಡೆಗಳು ಸಾಮಾನ್ಯವಾಗಿರುತ್ತವೆ. ಒತ್ತಡಕ್ಕೆ ಮಣಿಯದೆ ಸಹನೆಯಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಅರ್ಧಕ್ಕೆ ನಿಂತ ಕೆಲಸಗಳನ್ನು ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡುವಿರಿ. ನಿಮ್ಮ ಯಶಸ್ಸನ್ನು ಕಂಡು ಅಸೂಯೆ ಪಡುವ ಜನರು ಸುತ್ತಮುತ್ತ ಇದ್ದಾರೆ. ಯಾರೊಂದಿಗೂ ನಿಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವುದಿಲ್ಲ. ದೈಹಿಕವಾಗಿ ದುರ್ಬಲರಾದರೂ ನಿಮ್ಮ ಕಾರ್ಯ ಯೋಜನೆಯು ಉತ್ತಮವಾಗಿರುತ್ತದೆ.

ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಗುರಿ ತಲುಪುತ್ತಾರೆ

ಇರುವ ಆದಾಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಪ್ರಯತ್ನ ಮಾಡುವಿರಿ. ಸುಖ ಸಂತೋಷದಿಂದ ಜೀವನವನ್ನು ನಡೆಸುವಿರಿ. ಅನಾವಶ್ಯಕವಾಗಿ ಹಣ ಖರ್ಚು ಮಾಡುವುದಿಲ್ಲ. ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ ಇರುತ್ತದೆ. ಇದರಿಂದಾಗಿ ಹಣದ ಕೊರತೆ ಇರುವುದಿಲ್ಲ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸದೆ ಹೋದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಬಹುದು. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ನಿರೀಕ್ಷಿತ ಗುರಿ ತಲುಪಲಿದ್ದಾರೆ. ಗುರು ಹಿರಿಯರ ಸಕಾಲಿಕ ಮಾರ್ಗದರ್ಶನ ನಿಮಗೆ ಅನುಕೂಲಕರವಾಗಲಿದೆ. ಮನದಲ್ಲಿರುವ ಒತ್ತಡದಿಂದ ಉನ್ನತ ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆ ಕಂಡು ಬರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಮಟ್ಟದ ಯಶಸ್ಸು ದೊರೆಯುತ್ತದೆ. ಹೆಚ್ಚಿನ ಅಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶ ಗಳಿಸುವಿರಿ.

ನಿಮ್ಮಲ್ಲಿರುವ ವಿಶೇಷ ಪಾಂಡಿತ್ಯಕ್ಕೆ ಎಲ್ಲರ ಮೆಚ್ಚುಗೆ ಗಳಿಸುವಿರಿ. ಸಂಗೀತ ನಾಟ್ಯದಂತಹ ಸಾಂಪ್ರದಾಯಿಕ ಕಲೆ ನಿಮಗೆ ಒಲಿದಿರುತ್ತದೆ. ಸಂಧಾನ ಸಭೆಗಳಿಂದ ವಾದ ವಿವಾದಗಳನ್ನು ಬಗೆಹರಿಸುವಿರಿ. ಸಮಾಜದಲ್ಲಿ ಗೌರವಾನ್ವಿತ ಸ್ಥಾನ ನಿಮಗೆ ಲಭಿಸುತ್ತದೆ. ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರದ ಜವಾಬ್ದಾರಿ ದೊರೆಯುತ್ತದೆ. ಜಗಳಗಳಿಂದ ದೂರವಿದ್ದು ಶಾಂತಿ ನೆಮ್ಮದಿ ಕಾಪಾಡುವಿರಿ. 

ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಏರುಪೇರು ಇರುತ್ತದೆ. ಎಚ್ಚರಿಕೆಯಿಂದ ಇರಿ. ಸಾಮಾನ್ಯವಾಗಿ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆ ಇರುತ್ತದೆ. ಹಿರಿಯ ವ್ಯಕ್ತಿಗಳಿಗೆ ಮಾನಸಿಕ ಒತ್ತಡವೇ ದೊಡ್ಡ ಸವಾಲಾಗುತ್ತದೆ. ವಾಕಿಂಗ್‌,ಸರಳ ದೈಹಿಕ ವ್ಯಾಯಾಮಗಳಿಂದ ಉತ್ತಮ ಆರೋಗ್ಯ ಮರಳಿ ಗಳಿಸುವಿರಿ.

ದಿಢೀರ್ ಲಾಭಕ್ಕೆ ದುರಾಸೆಪಟ್ಟರೆ ಹಣ ಕಳೆದುಕೊಳ್ಳಬೇಕಾದೀತು ಎಚ್ಚರಿಕೆ ಇರಲಿ. ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾದರೂ ಧೃತಿಗೆಡುವುದಿಲ್ಲ. ಆದಾಯದ ವಿಚಾರದಲ್ಲಿ ಮನೆ ಮಂದಿಯ ಸಲಹೆ ತೆಗೆದುಕೊಳ್ಳುವಿರಿ. ವಾಸಸ್ಥಳ ಬದಲಿಸುವಿರಿ. ಸ್ವಂತ ಮನೆ ಉಳ್ಳವರು ಆಧುನಿಕತೆಗೆ ತಕ್ಕಂತೆ ಮನೆಯನ್ನು ನವೀಕರಿಸುವಿರಿ. ನವ ದಂಪತಿ ಜೀವನದಲ್ಲಿ ಹಿರಿಯರ ಹಸ್ತಕ್ಷೇಪ ಇರುವ ಕಾರಣ ನೆಮ್ಮದಿಯ ಜೀವನ ಇರುವುದಿಲ್ಲ. ಪಾಲುದಾರಿಕೆಯ ವ್ಯಾಪಾರದಲ್ಲಿ ಸುಲಭವಾಗಿ ಯಾರನ್ನೂ ನಂಬುವುದಿಲ್ಲ.

ಅವಕಾಶ ದೊರೆತರೂ ಉದ್ಯೋಗ ಬದಲಿಸಲು ಸಾಧ್ಯವಾಗುವುದಿಲ್ಲ

ಇರುವ ಹಣವನ್ನು ಸದ್ವಿನಿಯೋಗ ಮಾಡಲು ಸಾಧ್ಯವಾಗುವುದಿಲ್ಲ. ಒಲ್ಲದ ಮನಸ್ಸಿನಿಂದ ಕೆಲವರಿಗೆ ಹಣ ಸಹಾಯ ಮಾಡುವಿರಿ. ಉದ್ಯೋಗದ ವಿಚಾರದಲ್ಲಿಯೂ ಪರಿಸ್ಥಿತಿಯ ಕೈಗೊಂಬೆಯಾಗುವಿರಿ. ಮಹತ್ತರ ಅವಕಾಶ ದೊರೆತರೂ ಉದ್ಯೋಗ ಬದಲಿಸಲು ಸಾಧ್ಯವಾಗುವುದಿಲ್ಲ. ಸ್ವಂತ ನಿರ್ಧಾರಗಳಿಗೆ ಬದ್ಧರಾದಲ್ಲಿ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ ಉಂಟಾಗುತ್ತವೆ. ನೀವೇ ಮಾಡಿದ ತಪ್ಪು ನಿರ್ಧಾರಗಳಿಗೆ ಬೇರೆಯವರನ್ನು ಹೊಣೆ ಮಾಡುವಿರಿ. ಉಪಯೋಗವಿಲ್ಲದ ವಿಚಾರಗಳಿಗಾಗಿ ಓಡಾಟ ಇರುತ್ತದೆ. ಎಷ್ಟೇ ಶಾಂತ ಚಿತ್ತರಾದರೂ ಪರಿಸ್ಥಿತಿಯ ಬದಲಾವಣೆ ಮತ್ತು ಒತ್ತಡದಿಂದ ಕೋಪಕ್ಕೆ ಒಳಗಾಗುವಿರಿ. ಆತ್ಮೀಯರೂ ನಿಮ್ಮಿಂದ ದೂರವಾಗಬಹುದು. ಅಧಿಕಾರಿಗಳಿಗೆ ಕೆಲಸದ ಒತ್ತಡ ಅಧಿಕವಾಗಿರುತ್ತದೆ. ವಿಶ್ರಾಂತಿ ಇಲ್ಲದ ಕೆಲಸದಿಂದ ದೈಹಿಕವಾಗಿ ಬಳಲುವಿರಿ. ಗೃಹಿಣಿಯರಿಗೆ ಎಲ್ಲಾ ರೀತಿಯ ಅನುಕೂಲಗಳು ದೊರೆಯುತ್ತವೆ. ಕುಟುಂಬದಲ್ಲಿ ವಿಶೇಷವಾದ ಗೌರವ ದೊರೆಯುತ್ತದೆ. ಹಿರಿಯ ವಯಸ್ಸಿನವರು ತಮ್ಮ ಮಕ್ಕಳ ಮೇಲೆ ಅವಲಂಬಿತರಾಗುತ್ತಾರೆ. ಆದರೆ ತಮಗೆ ಅವಶ್ಯಕತೆ ಇರುವಷ್ಟು ಹಣವನ್ನು ಸಂಪಾದಿಸಲು ಶಕ್ತರಾಗುತ್ತಾರೆ. ಹಿರಿಯರ ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಯನ್ನು ಹೊರತುಪಡಿಸಿ ಯಾವುದೇ ರೀತಿಯ ಸಮಸ್ಯೆಗೆ ಎದುರಾಗುವುದಿಲ್ಲ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.