ಯಾವ ಗ್ರಹಗಳು ಯಾವ ಬಣ್ಣವನ್ನು ಪ್ರತಿನಿಧಿಸುತ್ತವೆ, ಆಯಾ ಬಣ್ಣಗಳ ವಸ್ತುಗಳನ್ನು ಬಳಸುವುದರಿಂದ ಏನು ಫಲ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಯಾವ ಗ್ರಹಗಳು ಯಾವ ಬಣ್ಣವನ್ನು ಪ್ರತಿನಿಧಿಸುತ್ತವೆ, ಆಯಾ ಬಣ್ಣಗಳ ವಸ್ತುಗಳನ್ನು ಬಳಸುವುದರಿಂದ ಏನು ಫಲ?

ಯಾವ ಗ್ರಹಗಳು ಯಾವ ಬಣ್ಣವನ್ನು ಪ್ರತಿನಿಧಿಸುತ್ತವೆ, ಆಯಾ ಬಣ್ಣಗಳ ವಸ್ತುಗಳನ್ನು ಬಳಸುವುದರಿಂದ ಏನು ಫಲ?

Planets Colors: ಜ್ಯೋತಿಷ್ಯಶಾಸ್ತ್ರದಲ್ಲಿ ಬಣ್ಣಗಳಿಗೂ, ಗ್ರಹಗಳಿಗೂ ಸಂಬಂಧವಿದೆ. ಪ್ರತಿ ಗ್ರಹಗಳೂ ನಿರ್ದಿಷ್ಟ ಬಣ್ಣವನ್ನು ಪ್ರತಿನಿಧಿಸುತ್ತದೆ. ಆಯಾ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ, ವಸ್ತುಗಳನ್ನು ಬಳಸುವುದರಿಂದ ದಾನ ಮಾಡುವುದರಿಂದ ಶುಭ ಫಲ ದೊರೆಯುತ್ತದೆ.

ನವಗ್ರಹಗಳಿಗೆ ಸಂಬಂಧಿಸಿದ ಬಣ್ಣಗಳು
ನವಗ್ರಹಗಳಿಗೆ ಸಂಬಂಧಿಸಿದ ಬಣ್ಣಗಳು (PC: Canva)

ಬಣ್ಣಗಳ ಹೆಸರು ಕೇಳಿದರೆ ಮನಸಿನಲ್ಲಿ ನಾನಾ ಭಾವಗಳು ಮೂಡುತ್ತವೆ. ಇಷ್ಟ ಪಡುವ ಬಣ್ಣಗಳು, ಇಷ್ಟವಿಲ್ಲದ ಬಣ್ಣಗಳು, ಆ ಬಣ್ಣಗಳ ಬಟ್ಟೆಗಳು, ನೀವು ಬಳಸುವ ವಸ್ತುಗಳು ನೆನಪಿಗೆ ಬರುತ್ತದೆ, ಒಬ್ಬೊಬ್ಬರಿಗೆ ಒಂದೊಂದು ಬಣ್ಣ ಇಷ್ಟ. ಕೆಲವರಿಗೆ ಜ್ಯೋತಿಷ್ಯದ ಪ್ರಕಾರ ನಿರ್ದಿಷ್ಟ ಬಣ್ಣ ಅದೃಷ್ಟ ತರುತ್ತದೆ. ಜ್ಯೋತಿಷ್ಯಶಾಸ್ತ್ರವನ್ನು ಅನುಸರಿಸಿ ಆಯಾ ಬಣ್ಣವನ್ನು ಅನುಸರಿಸಿದರೆ ಜೀವನದಲ್ಲಿ ಖಂಡಿತ ಯಶಸ್ಸು ನಿಮಗೆ ಒಲಿಯುತ್ತದೆ.

ಹಾಗೇ ಗ್ರಹಗಳಿಗೂ ಬಣ್ಣಗಳಿಗೂ ಅವಿನಾಭಾವ ಸಂಬಂಧವಿದೆ. ಒಂದೊಂದು ಬಣ್ಣಗಳೂ ಒಂದೊಂದು ಗ್ರಹವನ್ನು ಪ್ರತಿನಿಧಿಸುತ್ತವೆ. ಈ ಬಣ್ಣಗಳಿಗೆ ಸಂಬಂಧಿಸಿದ ಬಟ್ಟೆಗಳನ್ನು ಧರಿಸುವುದು, ಆ ಬಣ್ಣಗಳ ವಾಹನಗಳನ್ನು ಖರೀದಿಸುವುದು, ಆ ಬಣ್ಣದ ವಸ್ತುಗಳನ್ನು ದಾನ ಮಾಡುವುದರಿಂದ ಗ್ರಹಗಳ ದೋಷ ನಿವಾರಣೆಯಾಗುತ್ತದೆ. ಯಾವ ಗ್ರಹಗಳು ಯಾವ ಬಣ್ಣವನ್ನು ಸೂಚಿಸುತ್ತದೆ? ನಿಮ್ಮ ರಾಶಿಗೆ, ಜನ್ಮ ನಕ್ಷತ್ರಕ್ಕೆ ಹೊಂದುವ ಬಣ್ಣ ಯಾವುದು? ಇಲ್ಲಿದೆ ಮಾಹಿತಿ

ಗ್ರಹಗಳು ಹಾಗೂ ಅವರು ಪ್ರತಿನಿಧಿಸುವ ಬಣ್ಣಗಳು

ಸೂರ್ಯ

ಸೂರ್ಯನು ಚಿನ್ನದ ಬಣ್ಣವನ್ನು ಪ್ರತಿನಿಧಿಸುತ್ತಾನೆ. ಇದು ಚೈತನ್ಯ, ಯಶಸ್ಸು ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತದೆ. ಆತ್ಮ ವಿಶ್ವಾಸ ಮತ್ತು ವೈಯಕ್ತಿಕ ಶಕ್ತಿಯನ್ನು ನಿಯಂತ್ರಿಸುತ್ತದೆ. ಸೂರ್ಯನಿಗೆ ಪ್ರಿಯವಾದ ಈ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಶುಭ ಫಲಗಳು ಉಂಟಾಗುತ್ತವೆ. ಪ್ರಮುಖ ಕಾರ್ಯಗಳಿಗಾಗಿ ಹೊರಗೆ ಹೋಗುವಾಗ ಈ ಬಣ್ಣವನ್ನು ಧರಿಸುವುದರಿಂದ ಆ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ ಎಂಬ ನಂಬಿಕೆ ಇದೆ.

ಚಂದ್ರ

ಚಂದ್ರನು ಬೆಳ್ಳಿ ಅಥವಾ ಬಿಳಿ ಬಣ್ಣವನ್ನು ಪ್ರತಿನಿಧಿಸುತ್ತಾನೆ. ಇದು ಭಾವನಾತ್ಮಕ ಸಮತೋಲನ, ಅಂತಃಪ್ರಜ್ಞೆಯನ್ನು ಉತ್ತೇಜಿಸುತ್ತದೆ. ಬೆಳ್ಳಿಯು ಕಿರೀಟ ಚಕ್ರದೊಂದಿಗೆ ಸಂಪರ್ಕಿಸುತ್ತದೆ, ಇದು ಆಧ್ಯಾತ್ಮಿಕ ಸಂಪರ್ಕ ಮತ್ತು ಜ್ಞಾನೋದಯವನ್ನು ನಿಯಂತ್ರಿಸುತ್ತದೆ. ಪ್ರಯಾಣ, ವ್ಯಾಪಾರ ವಹಿವಾಟು, ಒಪ್ಪಂದಗಳು ಮುಂತಾದ ಪ್ರಮುಖ ಕಾರ್ಯಗಳಲ್ಲಿ ಯಶಸ್ಸಿಗೆ ಈ ಬಣ್ಣಗಳನ್ನು ಬಳಸುವುದು ತುಂಬಾ ಒಳ್ಳೆಯದು.

ಮಂಗಳ

ಮಂಗಳವು ಕೆಂಪು ಬಣ್ಣವನ್ನು ಪ್ರತಿನಿಧಿಸುತ್ತದೆ. ಇದು ಧೈರ್ಯ, ಶಕ್ತಿ ಮತ್ತು ಉತ್ಸಾಹವನ್ನು ಉತ್ತೇಜಿಸುತ್ತದೆ. ಕೆಂಪು ಮೂಲ ಚಕ್ರದೊಂದಿಗೆ ಸಂಪರ್ಕಿಸುತ್ತದೆ. ಈ ಬಣ್ಣದ ವಾಹನಗಳನ್ನು ಬಳಸುವುದರಿಂದ ಶುಭ ಫಲಿತಾಂಶ ದೊರೆಯುತ್ತದೆ. ಪ್ರಮುಖ ವ್ಯವಹಾರಗಳಿಗೆ, ತುರ್ತು ಕೆಲಸಗಳಿಗೆ, ಶುಭ ಕಾರ್ಯಗಳಿಗೆ ಈ ಬಣ್ಣದ ಬಟ್ಟೆಗಳೊಂದಿಗೆ ಹೋಗುವುದರಿಂದ ನಿಮ್ಮ ಕೆಲಸ ಕೈಗೂಡುತ್ತದೆ.

ಬುಧ

ಬುಧನು ಹಸಿರು ಬಣ್ಣವನ್ನು ಪ್ರತಿನಿಧಿಸುತ್ತಾನೆ. ಇದು ಸಂವಹನ, ಕಲಿಕೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹಸಿರು ಬಣ್ಣ ಹೃದಯ ಚಕ್ರದೊಂದಿಗೆ ಸಂಪರ್ಕಿಸುತ್ತದೆ, ಪ್ರೀತಿ ಮತ್ತು ಸಹಾನುಭೂತಿಯನ್ನು ನಿಯಂತ್ರಿಸುತ್ತದೆ. ಹಸಿರು ಬಣ್ಣವನ್ನು ಬಳಸುವುದರಿಂದ, ಶಿಕ್ಷಣ, ವೈದ್ಯಕೀಯ, ಉದ್ಯೋಗ ಮತ್ತು ಆರ್ಥಿಕ ಪ್ರಯತ್ನಗಳು ಯಶಸ್ವಿಯಾಗುವುದು ಖಚಿತ. ದೀರ್ಘ ಪ್ರಯಾಣಗಳು ಅಥವಾ ವಿದೇಶಿ ಪ್ರವಾಸದ ಸಮಯದಲ್ಲಿ ಈ ಬಣ್ಣಗಳನ್ನು ಬಳಸುವುದರಿಂದ, ಧನಾತ್ಮಕ ಫಲಿತಾಂಶಗಳು ದೊರೆಯುತ್ತದೆ.

ಗುರು

ಗುರುವಿಗೆ ಹಳದಿ ಬಣ್ಣವೆಂದರೆ ಇಷ್ಟ. ಇದು ಆಶಾವಾದ, ವಿಸ್ತರಣೆ ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತದೆ. ಇದು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಹಳದಿ ಬಟ್ಟೆಗಳನ್ನು ಧರಿಸುವುದು ಅಥವಾ ಈ ಬಣ್ಣಗಳನ್ನು ಹೊಂದಿರುವ ವಾಹನಗಳನ್ನು ಬಳಸುವುದು ಆಯಾ ರಾಶಿಚಕ್ರ ಚಿಹ್ನೆಗಳಿಗೆ ಖಂಡಿತವಾಗಿಯೂ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಶುಭ ಕಾರ್ಯಗಳು, ದೂರ ಪ್ರಯಾಣ, ಹಣಕಾಸಿನ ಪ್ರಯತ್ನಗಳು, ಹೊಸ ವೃತ್ತಿಪರ ಉದ್ಯೋಗ, ವಿದ್ಯಾಭ್ಯಾಸದಂಥ ಪ್ರಯತ್ನಗಳಿಗೆ ಹೊರಡುವಾಗ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಧನಾತ್ಮಕ ಫಲಿತಾಂಶ ದೊರೆಯುತ್ತದೆ.

ಶುಕ್ರ

ಶುಕ್ರವು ಗುಲಾಬಿ ಅಥವಾ ಬಿಳಿ ಬಣ್ಣದೊಂದಿಗೆ ಸಂಪರ್ಕ ಹೊಂದಿದೆ, ಇದು ಪ್ರೀತಿ, ಸೌಂದರ್ಯ ಮತ್ತು ಸಾಮರಸ್ಯವನ್ನು ಉತ್ತೇಜಿಸುತ್ತದೆ. ಪ್ರೀತಿ ಮತ್ತು ಸಹಾನುಭೂತಿಯನ್ನು ನಿಯಂತ್ರಿಸುವ ಹೃದಯ ಚಕ್ರದೊಂದಿಗೆ ಗುಲಾಬಿ ಕೂಡ ಸಂಪರ್ಕಿಸುತ್ತದೆ. ಪ್ರವಾಸ, ಶಿಕ್ಷಣ, ಕೆಲಸದ ಪ್ರಯತ್ನಗಳು, ಪ್ರೀತಿ ಪ್ರೇಮದ ವಿಚಾರಳಿಗೆ ಪ್ರಯತ್ನಿಸುವಾಗ ಈ ಬಣ್ಣದ ಬಟ್ಟೆಗಳು ಅಥವಾ ವಸ್ತುಗಳು ಉತ್ತಮ ಫಲಿತಾಂಶ ನೀಡುತ್ತದೆ. ಸಕಾರಾತ್ಮಕ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ಜಾತಕ ಚಕ್ರದ ಪ್ರಕಾರ ಶುಕ್ರದೆಸೆ ನಡೆಯುತ್ತಿರುವಾಗ, ಶುಕ್ರನು ಲಗ್ನದಲ್ಲಿದ್ದಾಗ, ಶುಕ್ರನು ನಿಮ್ಮದ ರಾಶಿಯಲ್ಲಿ ಸಂಕ್ರಮಿಸುವಾಗ ಈ ಬಣ್ಣಗಳ ಬಳಕೆಯು ಖಂಡಿತವಾಗಿಯೂ ಅದೃಷ್ಟ ತರುತ್ತದೆ.

ಶನಿ

ಶನಿಯು ಕಪ್ಪು ಬಣ್ಣದೊಂದಿಗೆ ಸಂಪರ್ಕಿಸುತ್ತದೆ, ಇದು ಶಿಸ್ತು ಮತ್ತು ಸ್ಥಿರತೆಯನ್ನು ಉತ್ತೇಜಿಸುತ್ತದೆ. ಕಪ್ಪು ಬಣ್ಣ, ಮೂಲ ಚಕ್ರದೊಂದಿಗೆ ಸಂಪರ್ಕಿಸುತ್ತದೆ. ಶನೈಶ್ಚರನ ಪ್ರಭಾವದಲ್ಲಿರುವ ರಾಶಿಯವರು ಈ ಬಣ್ಣದ ವಸ್ತುಗಳನ್ನು ದಾನ ಮಾಡಿದರೆ ಶುಭ ಉಂಟಾಗುತ್ತದೆ. ಕಬ್ಬಿಣ, ಲೋಹ, ವಿತರಣೆ ಸೇರಿದಂತೆ ಇತ್ಯಾದಿ ಕ್ಷೇತ್ರದಲ್ಲಿರುವವರು ಈ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.

ರಾಹು

ಕಡು ಕೆಂಪು ಮತ್ತು ಗುಲಾಬಿ ಬಣ್ಣಗಳನ್ನು ರಾಹು ಪ್ರತಿನಿಧಿಸುತ್ತಾನೆ. ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ, ಬ್ಯಾಂಕ್ ವ್ಯವಹಾರಗಳಿಗೆ ಹೋಗುವಾಗ, ಪ್ರಮುಖ ಒಪ್ಪಂದಗಳಿಗೆ ಸಹಿ ಮಾಡುವಾಗ, ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸೆಗೆ ಹೋಗುವಾಗ, ಶಿಕ್ಷಣ ಸಂಸ್ಥೆಗೆ ಸೇರುವಾಗ ಈ ಬಣ್ಣಗಳ ಬಟ್ಟೆ ಅಥವಾ ವಸ್ತುಗಳನ್ನು ಬಳಸುವುದು ತುಂಬಾ ಒಳ್ಳೆಯದು.

ಕೇತು

ತಿಳಿ ಕೆಂಪು, ಬಿಳಿ ಮತ್ತು ಹಳದಿ ಬಣ್ಣಗಳು ಕೇತುವಿಗೆ ಇಷ್ಟವಾದ ಬಣ್ಣಗಳು. ಕೇತು ದಶಾ, ಕೇತು ಅಂತರದಶಾ, ಹೊಂದಿರುವ ಜನರು, ಈ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ, ಕೇತುವಿಗೆ ಸಂಬಂಧಿಸಿದ ಅನೇಕ ದೋಷಗಳು ನಿವಾರಣೆ ಆಗುವ ಸಾಧ್ಯತೆಯಿದೆ. ಹಣಕಾಸಿನ ಪ್ರಯತ್ನ, ಮದುವೆಯ ಪ್ರಯತ್ನಗಳು ಯಶಸ್ವಿಯಾಗುತ್ತದೆ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆ ಪರಿಹಾರವಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.