ರಕ್ಷಾ ಬಂಧನ 2024: ಸಹೋದರ-ಸಹೋದರಿಯರಿಗೆಂದೇ ಸಮರ್ಪಿತವಾದ ಭಾರತದ ದೇವಾಲಯಗಳಿವು; ಅಕ್ಕ ತಂಗಿಯರೊಂದಿಗೆ ಒಮ್ಮೆ ಭೇಟಿ ಕೊಡಿ
ಇಂದು ದೇಶಾದ್ಯಂತ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನ ಸಹೋದರ-ಸಹೋದರಿಯರು ಒಟ್ಟಿಗೆ ದೇವಸ್ಥಾನಕ್ಕೆ ಹೋಗಿ ದೇವರನ್ನು ಪ್ರಾರ್ಥಿಸುತ್ತಾರೆ. ಆದರೆ ದೇಶದಲ್ಲಿ ಒಡಹುಟ್ಟಿದವರಿಗೆಂದೇ ಕೆಲವೊಂದು ದೇವಾಲಯಗಳಿವೆ. ಆ ದೇವಾಲಯಗಳ ಬಗ್ಗೆ ಇಲ್ಲಿದೆ ಮಾಹಿತಿ.
ರಕ್ಷಾ ಬಂಧನ 2024: ಭಾರತವು ಅನೇಕ ದೇವಾಲಯಗಳ ನೆಲೆಯಾಗಿದೆ. ಅವುಗಳಲ್ಲಿ ಹಲವು ವಿಚಿತ್ರ ಮತ್ತು ವಿಶೇಷ ದೇವಾಲಯಗಳಿವೆ. ಸಾಮಾನ್ಯವಾಗಿ ದೇವಸ್ಥಾನದಲ್ಲಿ ದೇವರ ವಿಗ್ರಹಗಳನ್ನು, ಪವಾಡ ಪುರುಷರನ್ನು ಪೂಜಿಸಲಾಗುತ್ತದೆ. ಆದರೆ ಕೆಲವೊಂದು ದೇವಾಲಯಗಳಲ್ಲಿ ಸಹೋದರ ಸಹೋದರಿಯರಿಗೆ ಪೂಜೆ ಸಲ್ಲಿಸಲಾಗುತ್ತದೆ.
ಒಡಿಶಾದ ಪುರಿ ಜಗನ್ನಾಥ ದೇವಾಲಯದ ಮಾತ್ರವಲ್ಲದೆ ಸಹೋದರ ಸಹೋದರಿಯರನ್ನು ಪೂಜಿಸುವ ಇತರ ದೇವಾಲಯಗಳಿವೆ. ಅವುಗಳಲ್ಲಿ ಕೆಲವು ರಕ್ಷಾ ಬಂಧನಕ್ಕೆ ಸಂಬಂಧಿಸಿವೆ. ಈ ದೇವಾಲಯಗಳಿಗೆ ಭೇಟಿ ನೀಡಿದರೆ ಆ ಸಹೋದರಿಯರ ಜೀವನ ಯಾವುದೇ ಕಷ್ಟವಿಲ್ಲದೆ ಸುಖಮಯವಾಗಿ ಸಾಗುತ್ತದೆ.
ಪುರಿ ಜಗನ್ನಾಥ ದೇವಾಲಯ
ಒಡಿಶಾದ ಪುರಿ ಕರಾವಳಿಯಲ್ಲಿರುವ ಜಗನ್ನಾಥ ದೇವಾಲಯವು ಬಹಳ ಪ್ರಸಿದ್ಧವಾಗಿದೆ. ಈ ದೇವಾಲಯದಲ್ಲಿ, ಸುಭದ್ರೆಯು ಮಧ್ಯ ಭಾಗದಲ್ಲಿದ್ದರೆ, ಭಗವಾನ್ ಕೃಷ್ಣ ಮತ್ತು ಬಲಭದ್ರರು ಬಲ ಮತ್ತು ಎಡಭಾಗದಲ್ಲಿದ್ದಾರೆ. ದೇವಾಲಯದ ಒಳಗಿನ ಗರ್ಭ ಗುಡಿಯಲ್ಲಿ ಈ ಮೂರೂ ದೇವತೆಗಳ ವಿಗ್ರಹಗಳಿವೆ. ಪ್ರತಿ ವರ್ಷ ಆಷಾಢ ಮಾಸದಲ್ಲಿ ಪುರಿ ಜಗನ್ನಾಥ ರಥಯಾತ್ರೆಯನ್ನು ವಿಜೃಂಭಣೆಯಿಂದ ಆಯೋಜಿಸಲಾಗುತ್ತದೆ.
ಯಮುನಾ, ಯಮನ ದೇವಸ್ಥಾನ
ಇದು ಮಥುರಾದ ಯಮುನಾ ನದಿಯ ದಡದಲ್ಲಿರುವ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ದ್ವಾರಕಾಧೀಶ ದೇವಾಲಯದ ಬಳಿ ವಿಶ್ರಮ್ ಘಾಟ್‌ನಿಂದ ಕೆಲವು ಮೀಟರ್ ದೂರದಲ್ಲಿದೆ. ಯಮುನಾ ಮತ್ತು ಯಮನನ್ನು ಇಲ್ಲಿ ಪೂಜಿಸಲಾಗುತ್ತದೆ. ಆದ್ದರಿಂದ ಈ ದೇವಾಲಯವನ್ನು ಧರ್ಮರಾಜ ದೇವಾಲಯ ಎಂದೂ ಕರೆಯುತ್ತಾರೆ. ಇಲ್ಲಿ ಯಮುನಾ ಮತ್ತು ಯಮನ ವಿಗ್ರಹಗಳನ್ನು ಕಪ್ಪು ಕಲ್ಲಿನಿಂದ ಮಾಡಲಾಗಿದೆ. ಸುಮಾರು 4900 ವರ್ಷಗಳ ಹಿಂದೆ ಶ್ರೀಕೃಷ್ಣನ ಮೊಮ್ಮಗ ವಜ್ರನಾಭನು ಈ ದೇವತೆಗಳನ್ನು ಸ್ಥಾಪಿಸಿದನು ಎಂದು ಹೇಳಲಾಗುತ್ತದೆ. ಇದು ಸಹೋದರ ಮತ್ತು ಸಹೋದರಿಯರಿಗೆ ಸಮರ್ಪಿತವಾದ ದೇವಾಲಯವಾಗಿದೆ.
ಭಾಯಿ ಧುಜ್ ದಿನದಂದು ಯಮುನಾ ತನ್ನ ಸಹೋದರ ಯಮನನ್ನು ಊಟಕ್ಕೆ ಆಹ್ವಾನಿಸಿದಳು. ಊಟದ ನಂತರ, ಹಿಂದೂ ಸಂಪ್ರದಾಯದ ಪ್ರಕಾರ, ಯಮನು ಯಮುನಾಗೆ ನಿನ್ನ ಆಸೆ ಏನಿದೆ ಎಂದು ಕೇಳುತ್ತಾನೆ. ಭಾಯಿ ಧುಜ್ ದಿನದಂದು ತಮ್ಮ ಸಹೋದರರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿ ಯಮುನಾ ನದಿಯಲ್ಲಿ ಸ್ನಾನ ಮಾಡುವ ಎಲ್ಲಾ ಸಹೋದರಿಯರ ಪಾಪಗಳನ್ನು ಕಳೆಯುವಂತೆ ಆಶೀರ್ವದಿಸುವಂತೆ ಕೇಳಿಕೊಳ್ಳುತ್ತಾಳೆ. ಯಮನು ಸಹೋದರಿಯ ಕೋರಿಕೆಯನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತಾನೆ. ಆದ್ದರಿಂದಲೇ ಈ ದೇವಾಲಯಕ್ಕೆ ಭೇಟಿ ನೀಡಿ ಯಮುನಾ ನದಿಯಲ್ಲಿ ಪುಣ್ಯಸ್ನಾನ ಮಾಡಿದವರ ಕಷ್ಟಗಳೆಲ್ಲಾ ದೂರವಾಗುತ್ತದೆ ಎಂಬ ನಂಬಿಕೆ ಇದೆ.
ಸಂತೋಷಿ ಮಾತಾ ದೇವಾಲಯ
ಉಜ್ಜಯಿನಿ ನಗರವನ್ನು ದೇವಾಲಯಗಳ ರಾಜಧಾನಿ ಎಂದು ಕರೆಯಲಾಗುತ್ತದೆ. ಇಲ್ಲಿ ಅನೇಕ ದೇವಾಲಯಗಳಿವೆ. ಇವುಗಳಲ್ಲಿ ಸಂತೋಷಿ ಮಾತಾ, ಶುಭ್ ಲಾಭ್ ದೇವಾಲಯ ಕೂಡಾ ಇದೆ. ಈ ದೇವಾಲಯವು ಅಸ್ತಾ ಗಾರ್ಡನ್ ಹಿಂಭಾಗದ ಜೀವನ್ ಖೇಡಿ ಗ್ರಾಮದಲ್ಲಿದೆ. ಪುರಾಣದ ಪ್ರಕಾರ ಗಣೇಶನಿಗೆ ಶುಭ್ ಲಾಭ್ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಒಂದು ದಿನ ರಕ್ಷಾಬಂಧನದ ದಿನ, ಗಣೇಶನ ಸಹೋದರಿ ಮಾನಸ ಅಣ್ಣನಿಗೆ ರಾಖಿ ಕಟ್ಟಲು ಬಂದಳು. ನಮಗೂ ರಾಖಿ ಕಟ್ಟುವ ತಂಗಿ ಬೇಕು ಎಂದು ಶುಭ್ ಲಾಭ್ ಆಸೆ ವ್ಯಕ್ತಿಪಡಿಸಿದರು. ಅವರ ಆಸೆಯನ್ನು ಪೂರೈಸಿದ ಗಣೇಶನು ಸಂತೋಷಿ ಮಾತೆಯನ್ನು ಸೃಷ್ಟಿಸಿದನು. ಅಂದಿನಿಂದ, ಸಂತೋಷಿ ಮಾತೆಯು ಶುಭ್ ಮತ್ತು ಲಾಭ್ ಅವರ ಸಹೋದರಿಯಾಗಿ ನೆಲೆಸಿದ್ದಾಳೆ. ಈ ದೇವಾಲಯವು ಅವರಿಗೆ ಸಮರ್ಪಿತವಾಗಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.