ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Rama Navami 2024: ಅಯೋಧ್ಯೆಯಿಂದ ಲಂಕೆವರೆಗೆ, ಹೀಗಿದೆ ಶ್ರೀರಾಮ ನಡೆದು ಹೋದ ಹಾದಿ; ರಾಮನ ಹೆಜ್ಜೆ ಗುರುತಿರುವ ಪ್ರಸಿದ್ಧ ಸ್ಥಳಗಳಿವು

Rama Navami 2024: ಅಯೋಧ್ಯೆಯಿಂದ ಲಂಕೆವರೆಗೆ, ಹೀಗಿದೆ ಶ್ರೀರಾಮ ನಡೆದು ಹೋದ ಹಾದಿ; ರಾಮನ ಹೆಜ್ಜೆ ಗುರುತಿರುವ ಪ್ರಸಿದ್ಧ ಸ್ಥಳಗಳಿವು

ಹಲವು ಸಂಶೋಧಕರು ಹಾಗೂ ಶ್ರೀ ರಾಮಚರಿತಮಾನಸದ ಪ್ರಕಾರ ಶ್ರೀರಾಮನು ತನ್ನ ವನವಾಸವನ್ನು ಅಯೋಧ್ಯೆಯಿಂದ ಪ್ರಾರಂಭಿಸಿ ಲಂಕೆಯಲ್ಲಿ ಕೊನೆಗೊಳಿಸುತ್ತಾನೆ. ಆ ಅವಧಿಯಲ್ಲಿ ರಾಮನು ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದನು. ಅಯೋಧ್ಯೆಯಿಂದ ಲಂಕೆಗೆ ರಾಮ ನಡೆದು ಹೋದ ದಾರಿಯ ಸಂಪೂರ್ಣ ಚಿತ್ರಣ ಇಲ್ಲಿದೆ. (ಬರಹ: ಅರ್ಚನಾ ವಿ. ಭಟ್‌)

ಅಯೋಧ್ಯೆಯಿಂದ ಲಂಕೆಗೆ ರಾಮ ನಡೆದು ಹೋದ ದಾರಿ
ಅಯೋಧ್ಯೆಯಿಂದ ಲಂಕೆಗೆ ರಾಮ ನಡೆದು ಹೋದ ದಾರಿ (Canva )

ಈ ವರ್ಷದ ರಾಮ ನವಮಿ ಬಹಳ ವಿಶೇಷವಾದದ್ದು. ಶ್ರೀರಾಮನ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ಬಾಲರಾಮ ವಿರಾಜಮಾನನಾಗಿದ್ದಾನೆ. ಹಾಗಾಗಿ ದೇಶದಾದ್ಯಂತ ರಾಮ ನವಮಿ ಆಚರಣೆಗೆ ಜೋರಾಗಿ ತಯಾರಿ ನಡೆಯುತ್ತಿದೆ. ರಾಮಾಯಣವು ರಾಮನ ಜೀವನ ಮತ್ತು ಅವನ ಆದರ್ಶಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಅಯೋಧ್ಯೆಯ ರಾಜ ದಶರಥನ ಮಗನಾಗಿ ಜನಿಸಿದ ರಾಮನು 14 ವರ್ಷಗಳ ಕಾಲ ಮಡದಿ ಸೀತಾದೇವಿ ಮತ್ತು ತಮ್ಮ ಲಕ್ಷ್ಮಣನ ಜೊತೆಗೂಡಿ ವನವಾಸಕ್ಕೆ ಹೋಗುವ ಕಥೆ ಎಲ್ಲರಿಗೂ ತಿಳಿದಿದೆ. ರಾಜಕುಮಾರನಾಗಿದ್ದರೂ ಪಿತೃವಾಕ್ಯ ಪರಿಪಾಲಕನಾಗಿ ವೈಭವೋಪೇತ ಅರಮನೆಯ ಜೀವನವನ್ನು ತ್ಯಜಿಸಿ ವನವಾಸಕ್ಕೆ ಹೋಗುತ್ತಾನೆ. ಆ ವನವಾಸದ ಸಮಯದಲ್ಲಿ ಶ್ರೀರಾಮನು ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಾನೆ. ಜೊತೆಗೆ ಕೆಲವು ಸ್ಥಳಗಳಲ್ಲಿ ತಂಗಿದ್ದನು ಎಂಬ ಪುರಾವೆಗಳು ಇವೆ. ರಾಮನು ಅಯೋಧ್ಯೆಯಿಂದ ಲಂಕೆಗೆ ನಡೆದು ಹೋದ ದಾರಿ ಬಹಳ ರೋಚಕವಾಗಿದೆ. ಪ್ರತಿ ಸ್ಥಳವು ಇಂದು ಪ್ರಸಿದ್ಧಿಯನ್ನು ಗಳಿಸಿದೆ. ಹಾಗಾದ್ರೆ ಉತ್ತರ ಪ್ರದೇಶದ ಅಯೋಧ್ಯೆಯಿಂದ ಪ್ರಾರಂಭವಾಗುವ ರಾಮನ ವನವಾಸದಲ್ಲಿ ಬರುವ ಪ್ರಮುಖ ಸ್ಥಳಗಳು ಹೀಗಿವೆ.

ಅಯೋಧ್ಯೆ, ಉತ್ತರ ಪ್ರದೇಶ

ರಾಮ ಜನಿಸಿದ್ದು ಅಯೋಧ್ಯೆಯಲ್ಲಿ, ಅವನ ವನವಾಸ ಪ್ರಾರಂಭವಾಗಿದ್ದು ಕೂಡಾ ಅಲ್ಲಿಂದಲೇ. ರಾಮ ತನ್ನ ಮೂರು ಜನ ಸಹೋದರರೊಂದಿಗೆ ಬಾಲ್ಯವನ್ನು ಕಳೆದಿದ್ದು, ಸೀತಾ ಮಾತೆಯನ್ನು ಮದುವೆಯಾಗಿ ಕರೆತಂದದ್ದು, ಪಟ್ಟಾಭಿಷೇಕಕ್ಕೆ ತಯಾರಿ ನಡೆದದ್ದು ಎಲ್ಲವೂ ಅಯೋಧ್ಯೆಯಲ್ಲಿಯೇ. ಆದರೆ ಕೈಕೇಯಿ ಮತ್ತು ಮಂಥರೆಯ ಕಾರಣದಿಂದ ವನವಾಸಕ್ಕೆ ತೆರಳಿದ್ದು ಕೂಡಾ ಅದೇ ಅಯೋಧ್ಯೆಯಿಂದಲೇ ಅನ್ನುವುದು ವಿಪರ್ಯಾಸ.

ಚಿತ್ರಕೂಟ, ಮಧ್ಯ ಪ್ರದೇಶ

ರಾಮನ ವನವಾಸ ಕಾಲದಲ್ಲಿ ಚಿತ್ರಕೂಟಕ್ಕೆ ಬಹಳ ಮಹತ್ವವಿದೆ. ಅಯೋಧ್ಯೆಯಿಂದ ವನವಾಸಕ್ಕೆ ಹೊರಟ ರಾಮನು ಬಂದು ನೆಲೆಸಿದ್ದು ಚಿತ್ರಕೂಟದಲ್ಲಿ. ಶ್ರೀರಾಮನು ಸೀತಾ ಮಾತೆ ಮತ್ತು ಲಕ್ಷ್ಮಣನ ಜೊತೆಗೂಡಿ 11 ವರ್ಷಗಳ ಕಾಲ ತನ್ನ ವನವಾಸವನ್ನು ಅಲ್ಲಿಯೇ ಕಳೆಯುತ್ತಾನೆ. ರಾಮನು ಅತಿ ಹೆಚ್ಚು ಸಮಯವನ್ನು ಅಲ್ಲಿಯೇ ಕಳೆಯುವುದರಿಂದ ಚಿತ್ರಕೂಟವು ರಾಮನ ವನವಾಸದ ಹಾದಿಯಲ್ಲಿ ಬಹಳ ಮಹತ್ವವನ್ನು ಪಡೆದುಕೊಂಡಿದೆ.

ಪಂಚವಟಿ, ನಾಸಿಕ್‌

ರಾಮಾಯಣದಲ್ಲಿ ನಾಸಿಕದ ಉಲ್ಲೇಖವು ಪಂಚವಟಿಯ ರೂಪದಲ್ಲಿ ಸಿಗುತ್ತದೆ. ಚಿತ್ರಕೂಟದಿಂದ ಮುಂದೆ ಸಾಗುವ ರಾಮನು ಬಂದು ನೆಲೆಸಿದ್ದು ಪಂಚವಟಿಯಲ್ಲಿ. ಇಲ್ಲಿಯೇ ಲಕ್ಷ್ಮಣನು ರಾವಣನ ಸಹೋದರಿಯಾದ ಶೂರ್ಪನಖಿಯ ಮೂಗನ್ನು (ನಾಸಿಕ)ವನ್ನು ಕತ್ತರಿಸುತ್ತಾನೆ.

ಲೇಪಾಕ್ಷೀ, ಆಂಧ್ರ ಪ್ರದೇಶ

ಸಹೋದರಿ ಶೂರ್ಪನಖಿಗೆ ಆದ ಅವಮಾದ ಪ್ರತಿಕಾರಕ್ಕಾಗಿ ರಾವಣನು ಪಂಚವಟಿಯಿಂದ ಸೀತೆಯನ್ನು ಅಪಹರಿಸಿ ಕರೆದುಕೊಂಡು ಹೋಗುವಾಗ ಅದನ್ನು ಜಟಾಯುವು ತಡೆಯುತ್ತಾನೆ. ರಾಮಾಯಣದಲ್ಲಿ ಜಟಾಯುವು ರಾವಣನೊಂದಿಗೆ ಹೋರಾಡಿದ ಸ್ಥಳವೇ ಲೇಪಾಕ್ಷಿ. ಆ ಹೋರಾಟದಲ್ಲಿ ಜಟಾಯುವು ಗಾಯಗೊಂಡು ಇಲ್ಲಿ ಬೀಳುತ್ತಾನೆ. ಮುಂದೆ ಶ್ರೀರಾಮನು ಮಾತೆ ಸೀತೆಯನ್ನು ಹುಡುಕಿಕೊಂಡು ಬಂದಾಗ ಜಟಾಯುವು ಸುಳಿವನ್ನು ನೀಡುತ್ತಾನೆ. ಹಾಗಾಗಿ ರಾಮನ ವನವಾಸದ ಹಾದಿಯಲ್ಲಿ ಲೇಪಾಕ್ಷಿಗೆ ಬಹಳ ಮಹತ್ವವಿದೆ.

ಕಿಷ್ಕಿಂಧೆ, ಕರ್ನಾಟಕ

ರಾಮಾಯಣದಲ್ಲಿ ಕಿಷ್ಕಿಂಧೆ ಬಹಳ ಮಹತ್ವನ್ನು ಪಡೆದುಕೊಂಡಿದೆ. ಇಲ್ಲಿಯೇ ಶ್ರೀರಾಮನು ವಾನರ ಸೈನ್ಯವನ್ನು ಕಟ್ಟಿ, ಲಂಕೆಗೆ ಹೋಗಿ ಬಲಿಷ್ಠ ರಾವಣನನ್ನು ಸೋಲಿಸುತ್ತಾನೆ. ಈಗಿನ ಹಂಪಿಯೇ ರಾಮಾಯಣದ ಕಿಷ್ಕಿಂಧೆ. ರಾಮನು ಸೀತಾ ಮಾತೆಯನ್ನು ಹುಡುಕಿಕೊಂಡು ಬಂದಾಗ ಈ ಸ್ಥಳಕ್ಕೆ ಭೇಟಿ ನೀಡುತ್ತಾನೆ. ವಾನರರ ರಾಜ್ಯವಾದ ಕಿಷ್ಕಿಂಧೆಯಲ್ಲಿಯೇ ಶ್ರೀರಾಮನ ಪರಮ ಭಕ್ತನಾದ ಹನುಮಂತನ ಪರಿಚಯವಾಗುತ್ತದೆ. ಮುಂದೆ ಹನುಮಂತನೇ ಸೀತಾ ಮಾತೆಯು ಲಂಕೆಯ ಅಶೋಕ ವನದಲ್ಲಿರುವುದನ್ನು ಕಂಡುಹಿಡಿಯುತ್ತಾನೆ.

ರಾಮೇಶ್ವರಂ, ತಮಿಳುನಾಡು

ರಾಮನು ಸೀತಾಮಾತೆಯನ್ನು ಕರೆತರಲು ಲಂಕೆಗೆ ಹೋಗಬೇಕಾದಾಗ, ವಾನರರ ಸಹಾಯದಿಂದ ಸಮುದ್ರದ ಮೇಲೆಯೇ ಸೇತುವೆಯನ್ನು ನಿರ್ಮಿಸುತ್ತಾನೆ. ಆ ಸೇತುವೆಯ ಮೂಲಕ ಸಾಗಿ ಲಂಕೆಗೆ ತೆರಳಿ ಅಲ್ಲಿ ರಾವಣನೊಂದಿಗೆ ಯುದ್ಧ ಮಾಡಿ ಮಾತೆ ಸೀತೆಯನ್ನು ಕರೆತರುತ್ತಾನೆ.

ತಲೈಮನ್ನಾರ್‌, ಶ್ರೀಲಂಕಾ

ಶ್ರೀಲಾಂಕಾದ ಇದೇ ಸ್ಥಳದಲ್ಲಿಯೇ ರಾಮ–ರಾವಣರ ಯುದ್ಧ ನಡೆಯಿತು ಎಂದು ಹೇಳಲಾಗುತ್ತದೆ. ದಶಕಂಠನಾದ ರಾವಣನನ್ನು ಸದೆಬಡಿದು, ಸೀತಾಮಾತೆಯನ್ನು ಬಂಧನದಿಂದ ಮುಕ್ತಗೊಳಿಸುತ್ತಾನೆ. ನಂತರ ರಾಮ, ಲಕ್ಷ್ಮಣ ಮತ್ತು ಸೀತೆ ತಮ್ಮ ಪರಿವಾರದ ಸಮೇತ ಅಯೋಧ್ಯೆಗೆ ಪ್ರಯಾಣ ಬೆಳೆಸುತ್ತಾರೆ.

ಇವುಗಳು ರಾಮಾಯಣದಲ್ಲಿ ಬರುವ ಪ್ರಮುಖ ಸ್ಥಳಗಳು. ಇವಿಷ್ಟೇ ಅಲ್ಲದೇ ಅಯೋಧ್ಯೆಯಿಂದ ಹೊರಟ ಶ್ರೀರಾಮನು ತನ್ನ ವನವಾಸ ಕಾಲದಲ್ಲಿ ಅನೇಕ ಸ್ಥಳಗಳಿಗೆ ಭೇಟಿ ನೀಡುವುದರ ಜೊತೆಗೆ ಅನೇಕರನ್ನು ಸಂಧಿಸುತ್ತಾನೆ ಎಂಬ ಉಲ್ಲೇಖವೂ ಇದೆ.