ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಮಾಯಣ ಉತ್ತರಕಾಂಡ: ಆಗ ಅಪಹರಣ, ಈಗ ಪರಿತ್ಯಾಗ; ಸೀತಾ-ರಾಮರ ವಿಯೋಗ, ಭೂತಾಯಿಯ ಮಡಿಲು ಸೇರಿದ ಜಗನ್ಮಾತೆ -ಶ್ರೀರಾಮನವಮಿ ವಿಶೇಷ

ರಾಮಾಯಣ ಉತ್ತರಕಾಂಡ: ಆಗ ಅಪಹರಣ, ಈಗ ಪರಿತ್ಯಾಗ; ಸೀತಾ-ರಾಮರ ವಿಯೋಗ, ಭೂತಾಯಿಯ ಮಡಿಲು ಸೇರಿದ ಜಗನ್ಮಾತೆ -ಶ್ರೀರಾಮನವಮಿ ವಿಶೇಷ

ರಾಮಾಯಣದಲ್ಲಿ ಉತ್ತರಕಾಂಡದ ಮಹತ್ವ: ರಾಮಾಯಣದ ಉತ್ತರಕಾಂಡದಲ್ಲಿ ಶ್ರೀರಾಮನ ಆಡಳಿತದ ವಿವರಗಳಿವೆ. ಇದರ ಜೊತೆಗೆ ಸೀತೆಗೆ ಮತ್ತೊಮ್ಮೆ ಪ್ರಾಪ್ತಿಯಾಗುವ ವನವಾಸ ಮತ್ತು ರಾಮಾವತಾರದ ಸಮಾಪ್ತಿಯ ವಿವರಗಳಿವೆ (ಬರಹ: ಎಚ್‌.ಸತೀಶ್, ಜ್ಯೋತಿಷಿ).

ಉತ್ತರಕಾಂಡ: ಆಗ ಅಪಹರಣ, ಈಗ ಪರಿತ್ಯಾಗ; ಸೀತಾ-ರಾಮರ ವಿಯೋಗ, ಭೂತಾಯಿಯ ಮಡಿಲು ಸೇರಿದ ಜಗನ್ಮಾತೆ
ಉತ್ತರಕಾಂಡ: ಆಗ ಅಪಹರಣ, ಈಗ ಪರಿತ್ಯಾಗ; ಸೀತಾ-ರಾಮರ ವಿಯೋಗ, ಭೂತಾಯಿಯ ಮಡಿಲು ಸೇರಿದ ಜಗನ್ಮಾತೆ

ಉತ್ತರಕಾಂಡದ ಕಥೆ: ಉತ್ತರಕಾಂಡವನ್ನು ಮಹರ್ಷಿ ವಾಲ್ಮೀಕಿಗಳು ಬರೆದಿಲ್ಲ ಎಂದು ಹಲವರು ವಾದಿಸುತ್ತಾರೆ. ರಾಮಾಯಣದ ಪಾರಾಯಣ ಪದ್ಧತಿಯಲ್ಲಿಯೂ ಯುದ್ಧಕಾಂಡ ಮತ್ತು ಉತ್ತರಕಾಂಡಗಳು ಇಲ್ಲ. ಸುಂದರಕಾಂಡಕ್ಕೆ ಹೆಚ್ಚು ಪ್ರಾಮುಖ್ಯ ಇದೆ. ಲಂಕೆಯಲ್ಲಿ ರಾವಣನ ಸಂಹಾರದ ನಂತರದ ಕಥೆಯನ್ನು ಉತ್ತರಕಾಂಡದಲ್ಲಿ ವಿವರಿಸಲಾಗಿದೆ. ಇತ್ತೀಚೆಗೆ ಎಸ್‌.ಎಲ್.ಭೈರಪ್ಪನವರು 'ಉತ್ತರಕಾಂಡ'ದ ಹೆಸರಿನಲ್ಲಿ ಕಾದಂಬರಿಯನ್ನೂ ಬರೆದಿದ್ದಾರೆ. ಈ ಅಂಶವನ್ನೂ ಇಲ್ಲಿ ಸ್ಮರಿಸಬಹುದು.

ರಾಮಾಯಣದ ಉತ್ತರಕಾಂಡದಲ್ಲಿ ಭರತನ ಮನಃಸ್ಥಿತಿ ಮತ್ತು ಅಣ್ಣನ ಮೇಲೆ ಅವನಿಗಿದ್ದ ಪ್ರೀತಿಯಲ್ಲಿ ತುಂಬಾ ಅಚ್ಚುಕಟ್ಟಾಗಿ ವಿವರಿಸಲಾಗಿದೆ. ಕೇವಲ ಸಾಮಂತ ರಾಜನಂತಿದ್ದ ಭರತನು ಶ್ರೀರಾಮನ ಪಾದುಕೆಗಳನ್ನು ರಾಮನ ಬದಲಾಗಿ ಸಿಂಹಾಸನದ ಮೇಲೆ ಇಟ್ಟಿರುತ್ತಾನೆ. ಎಲ್ಲರ ಆಸೆಯಂತೆ ಶ್ರೀರಾಮನಿಗೆ ಪಟ್ಟಾಭಿಷೇಕವೂ ಆಗುತ್ತದೆ. ಶ್ರೀರಾಮನ ಆಳ್ವಿಕೆಯಲ್ಲಿ ಅಯೋಧ್ಯೆಯಲ್ಲಿ ಸುಖ, ಸಮೃದ್ಧಿಗಳು ನೆಲಸುತ್ತವೆ. ರಾಜ್ಯದ ಸಾಮಾನ್ಯ ಪ್ರಜೆಗಳು ಸಹ ಶಾಂತಿ, ನೆಮ್ಮದಿ, ಆನಂದದಿಂದ ಜೀವನ ನಡೆಸಿರುತ್ತಾರೆ. ಆದರೆ ಈ ನೆಮ್ಮದಿ ಶಾಶ್ವತವಾಗಿ ಉಳಿಯುವುದಿಲ್ಲ.

ಒಂಟಿಯಾಗಿ ರಾವಣನ ಸೆರೆಯಲ್ಲಿ ಬಹಳ ಕಾಲವಿದ್ದ ಸೀತೆಯ ಪಾವಿತ್ರ್ಯದ ಬಗ್ಗೆ ಕೆಲಜನರು ಅನುಮಾನದಿಂದ ಕೆಟ್ಟ ಅಭಿಪ್ರಾಯವನ್ನು ನೀಡುತ್ತಾರೆ. ಈ ವಿಷಯವು ಶ್ರೀರಾಮನ ಕಿವಿಗೆ ಬೀಳುತ್ತದೆ. ಆಗ ಶ್ರೀರಾಮನು ತನ್ನ ಗೂಢಚಾರರಿಂದ ನಿಜಾಂಶವನ್ನು ತಿಳಿಯುತ್ತಾನೆ. ಅಕಾಲಿಕ ಮಳೆಯ ಕಾರಣ ಅಯೋಧ್ಯೆಗೆ ಬರಗಾಲ ಬರುತ್ತದೆ. ಜನಸಾಮಾನ್ಯರೂ ರಾಜ್ಯದಲ್ಲಿ ಉಂಟಾದ ಬರಗಾಲಕ್ಕೂ ಸೀತೆಯ ತಪ್ಪೇ ಕಾರಣ ಎಂದು ಆಡಿಕೊಳ್ಳುತ್ತಾರೆ. ರಾಜ್ಯದಲ್ಲಿ ಆಗುವ ಪ್ರತಿಯೊಂದಕ್ಕೂ ಸೀತೆಯಿಂದಾಗಿರುವ ತಪ್ಪೇ ಕಾರಣವೆಂದು ಜನ ಗುಸುಗುಸು ಮಾತನಾಡತೊಡಗುತ್ತಾರೆ. ಇದರಿಂದ ಬೇಸತ್ತ ಶ್ರೀರಾಮನು ಸೀತೆಯನ್ನು ಪರಿತ್ಯಜಿಸುವ ನಿರ್ಧಾರಕ್ಕೆ ಬರುತ್ತಾನೆ.

ಸೀತೆಗೆ ಮತ್ತೊಮ್ಮೆ ವನವಾಸ, ಬಲವಂತದ ಏಕಾಂತ

ಹಿಂದಿನ ವನವಾಸದಲ್ಲಿ ಸೀತೆಯು ಶ್ರೀರಾಮನೊಡನೆ ಸಂತೋಷದಿಂದ ಕಾಲ ಕಳೆಯುತ್ತಾಳೆ. ಆದರೆ ಈ ಬಾರಿ ಅರಣ್ಯಕ್ಕೆ ಒಬ್ಬಳೇ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆ ವೇಳೆಗೆ ಸೀತಾಮಾತೆಯು ತುಂಬು ಗರ್ಭಿಣಿಯಾಗಿರುತ್ತಾಳೆ. ತನ್ನನ್ನು ರಾಮನು ತ್ಯಜಿಸುತ್ತಿದ್ದಾನೆ ಎಂಬ ಸುಳಿವೂ ಇಲ್ಲದ ಸೀತೆಯನ್ನು, ವಿಹಾರದ ನೆಪ ಹೇಳಿ ರಾಮನು ಲಕ್ಷ್ಮಣನೊಂದಿಗೆ ಕಳುಹಿಸುತ್ತಾನೆ. ಲಕ್ಷ್ಮಣನಿಗೆ ಸೀತೆಯನ್ನು ಕಾಡಿನಲ್ಲಿಯೇ ಬಿಟ್ಟು ಬರುವಂತೆ ತಿಳಿಸುತ್ತಾನೆ. ಮಾಡುತ್ತಿರುವ ಕೆಲಸವು ತನ್ನ ಮನಸ್ಸಿಗೆ ತಪ್ಪೆಂದು ತೋರಿದರೂ ಪ್ರಜೆಗಳ ಮಾತನ್ನು ಗೌರವಿಸಬೇಕೆಂಬ ಉದ್ದೇಶದಿಂದ ಶ್ರೀರಾಮನು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾನೆ. ಜನಾಪವಾದದಿಂದ ರಾಮ ತನ್ನನ್ನು ತ್ಯಜಿಸಿರುವನೆಂಬ ಸುದ್ದಿಯು ಸೀತೆಗೆ ತಿಳಿದು ದುಃಖತಪ್ತಳಾಗುತ್ತಾಳೆ.

ರಾಮನಿಂದ ದೂರವಾದ ಸೀತೆಗೆ ವಾಲ್ಮೀಕಿ ಮುನಿಯ ಆಶ್ರಮದಲ್ಲಿ ಆಶ್ರಯ ದೊರೆಯುತ್ತದೆ. ಸೀತೆಯು ವಾಲ್ಮೀಕಿ ಮುನಿಯ ಆಶ್ರಮದಲ್ಲಿ ಲವ ಮತ್ತು ಕುಶ ಎಂಬ ಅವಳಿ-ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಸೀತೆಯು ವಾಲ್ಮೀಕಿ ಮುನಿಯ ಆಶ್ರಯದಲ್ಲಿ ಮಕ್ಕಳನ್ನು ದೊಡ್ಡವರನ್ನಾಗಿ ಮಾಡುತ್ತಾಳೆ. ವಾಲ್ಮೀಕಿ ಲವ-ಕುಶರಿಗೆ ಗುರುವಾಗಿ ಸಕಲ ವಿದ್ಯೆಗಳನ್ನು ಹೇಳಿಕೊಡುತ್ತಾರೆ. ಪರಿಪೂರ್ಣ ವಿಧ್ಯಾವಂತರಾದ ಲವ ಕುಶರು ಆಶ್ರಮದಲ್ಲಿ ನೆಮ್ಮದಿಯ ಜೀವನ ನಡೆಸುತ್ತಾರೆ.

ರಾಮನ ಅಶ್ವಮೇಧ ಕುದುರೆ ಕಟ್ಟಿಹಾಕಿದ ಮಕ್ಕಳು

ರಾವಣನನ್ನು ಕೊಂದ ಕಾರಣಕ್ಕೆ ತನಗೆ ಬಂದಿರಬಹುದಾದ ಬ್ರಹ್ಮಹತ್ಯೆ ಎಂಬ ಪಾಪವನ್ನು ಕಳೆದುಕೊಳ್ಳಲು ಹೋಮಗಳನ್ನು ಮಾಡಲು ಶ್ರೀರಾಮನು ನಿಶ್ಚಯಿಸುತ್ತಾನೆ. ಗುರುಗಳ ಆದೇಶದಂತೆ ಅಶ್ವಮೇಧ ಯಾಗ ಮಾಡಲು ಮುಂದಾಗುತ್ತಾನೆ. ಯಾಗಕ್ಕೆ ತನ್ನ ದೇಶದ ಎಲ್ಲಾ ಪ್ರಜೆಗಳನ್ನೂ, ಋಷಿ ಮುನಿಗಳನ್ನೂ ಆಹ್ವಾನಿಸುತ್ತಾನೆ. ಒಮ್ಮೆ ವಾಲ್ಮೀಕಿ ಮುನಿಗಳು ಲವ-ಕುಶರೊಡನೆ ಅಯೋಧ್ಯೆಗೆ ಹೋಗಿರುತ್ತಾರೆ. ಅರಮನೆಯಲ್ಲಿ ಅತಿಥಿ ಅಭ್ಯಾಗತರ ಸಮ್ಮುಖದಲ್ಲಿ ಲವ-ಕುಶರು ಶ್ರೀರಾಮನ ಎದುರು ವಾಲ್ಮೀಕಿ ಋಷಿಗಳಿಂದ ರಚಿತವಾಗಿರುವ ರಾಮಾಯಣವನ್ನು ಹಾಡುತ್ತಾರೆ. ಇದನ್ನು ಕೇಳಿದ ರಾಮನಿಗೆ ಆಶ್ಚರ್ಯವಾಗುತ್ತದೆ. ಮತ್ತು ಕುತೂಹಲವೂ ಉಂಟಾಗುತ್ತದೆ.

ಶ್ರೀರಾಮನ ಅಶ್ವಮೇಧಯಾಗದ ಕುದುರೆಯನ್ನು ಲವಕುಶರು ಕಟ್ಟಿಹಾಕುತ್ತಾರೆ. ಶ್ರೀರಾಮನ ಸೈನ್ಯವನ್ನು ಸೋಲಿಸುವುದಲ್ಲದೆ ಶ್ರೀರಾಮನನ್ನೇ ಯುದ್ದಕ್ಕೆ ಆಹ್ವಾನಿಸುತ್ತಾರೆ. ಯುದ್ದದ ಕಲೆ ಈ ಮಕ್ಕಳಿಗೆ ಸಿದ್ಧಿಸಿರುವುದನ್ನು ಕಂಡ ಶ್ರೀರಾಮನ ಸೋದರರು ಮೂಕವಿಸ್ಮಿತರಾಗುತ್ತಾರೆ. ಆಗ ವಾಲ್ಮೀಕಿಯಿಂದ ರಾಮನಿಗೆ ಲವ, ಕುಶರು ತನ್ನ ಮಕ್ಕಳೆಂದು ತಿಳಿಯುತ್ತದೆ. ಸೀತೆಯು ವಾಲ್ಮೀಕಿ ಮುನಿಗಳ ಆಶ್ರಮದಲ್ಲಿರುವ ವಿಷಯ ತಿಳಿದು, ಅವಳನ್ನು ತಾನಿರುವಲ್ಲಿಗೆ ಬರುವಂತೆ ವಿನಂತಿಸಿಕೊಳ್ಳುತ್ತಾನೆ. ವಾಲ್ಮೀಕಿ ಮುನಿಯು ಸೀತೆಯನ್ನು ಆಶ್ರಮದಿಂದ ಕರೆದುಕೊಂಡು ಬರುತ್ತಾರೆ. ಆಗ ರಾಮನು ಸೀತೆಯನ್ನು ಕುರಿತು ತನ್ನ ಮೇಲಿರುವ ಕಳಂಕದಿಂದ ದೂರಾಗಬೇಕೆಂದು ಹೇಳುತ್ತಾನೆ. ರಾಮನ ಮಾತುಗಳನ್ನು ಕೇಳಿ ಸೀತೆಯಲ್ಲಿ ದುಃಖ ಮತ್ತು ಬೇಸರ ಉಂಟಾಗುತ್ತದೆ.

ಭೂದೇವಿಯ ಮಡಿಲು ಸೇರಿದ ಸೀತೆ

ಪತಿಯ ವರ್ತನೆಯಿಂದ ಸಹನೆ ಕಳೆದುಕೊಂಡ ಸೀತೆಯು ತನ್ನ ತಾಯಿಯಾದ ಭೂದೇವಿಯಲ್ಲಿ ತಾನು ನಿಜವಾದ ಪತಿವ್ರತೆಯೇ ಆಗಿದ್ದಲ್ಲಿ, ತಾನು ನಿಂತಿರುವ ಭೂಮಿಯು ಬಾಯ್ದೆರೆದು ನನ್ನನ್ನು ಸ್ವೀಕರಿಸಲಿ ಎಂದು ಹೇಳುತ್ತಾಳೆ. ಭೂತಾಯಿಯ ಮಗಳಾದ ಕಾರಣ ತನ್ನ ತಾಯಿಯನ್ನು ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು ಎಂದು ಕೇಳಿಕೊಳ್ಳುತ್ತಾಳೆ. ಆ ಕ್ಷಣದಲ್ಲಿ ಎಲ್ಲರೂ ನೋಡುತ್ತಿರುವಂತೆಯೇ ಭೂಮಿ ದೊಡ್ಡ ಸದ್ದಿನೊಂದಿಗೆ ಬಾಯಿ ಬಿಡುತ್ತದೆ. ಭೂಮಿಯ ಒಳಭಾಗದಿಂದ ಸೀತೆಗಾಗಿ ವಜ್ರಖಚಿತ ಸಿಂಹಾಸನವೊಂದು ಪ್ರತ್ಯಕ್ಷವಾಗುತ್ತದೆ. ಸೀತೆಯ ತಾಯಿಯಾದ ಭೂದೇವಿಯನ್ನು ತನ್ನ ಮಗಳನ್ನು ಅಪ್ಪಿಕೊಂಡು ಭೂಮಿಯ ಒಳಗೆ ಕರೆದುಕೊಂಡು ಹೋಗುತ್ತಾಳೆ. ತಕ್ಷಣವೇ ಬಾಯ್ದೆರೆದ ಭೂಮಿ ಮುಚ್ಚಿಕೊಳ್ಳುತ್ತದೆ.

ಶ್ರೀರಾಮನು ಜಗವನ್ನೇ ಮರೆತು ಸಾಮಾನ್ಯ ಮಾನವನಂತೆ ಸೀತಾ ಎಂದು ಕೂಗುತ್ತಾ ಸೀತೆಯ ತಲೆಯ ಕೂದಲನ್ನು ಕೈಯಲ್ಲಿ ಹಿಡಿಯುತ್ತಾನೆ. ಶ್ರೀರಾಮನು ತಾನು ಸೀತೆಯನ್ನು ಅನುಮಾನಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಾನೆ. ಆಗ ಋಷಿಮುನಿಗಳು ರಾವಣನ ಸಂಹಾರದ ನಿಮಿತ್ತಕ್ಕಾಗಿ ಸೀತೆಯ ಅವತಾರವಾಗಿತ್ತು. ತನ್ನ ಕಾರ್ಯ ಮುಗಿದಿದ್ದರಿಂದ ಅವಳು ಭೂದೇವಿಯೊಂದಿಗೆ ಲೀನವಾಗಿದ್ದಾಳೆ. ವಿಷ್ಣುರೂಪಿಯಾದ ನಿನ್ನ ಅವತಾರವೂ ಸಧ್ಯದಲ್ಲಿಯೇ ಕೊನೆಯಾಗಲಿದೆ. ನೀನು ದುಃಖಿಸಬೇಡ ಎಂದು ರಾಮನನ್ನು ಸಮಾಧಾನಿಸುತ್ತಾರೆ.

ರಾಮಾಯಣ ಪಾರಾಯಣದಿಂದ ಸಕಲರಿಗೂ ಮಂಗಳವಾಗಲಿ

ವಾಲ್ಮೀಕಿ ಮುನಿ ವಿರಚಿತ ರಾಮಾಯಣವನ್ನು ಪಾರಾಯಣ ಮಾಡುವ ಹಲವು ಪದ್ಧತಿಗಳು ಕರ್ನಾಟಕದಲ್ಲಿ ಚಾಲ್ತಿಯಲ್ಲಿವೆ. ಕುವೆಂಪು ಅವರ 'ಜನಪ್ರಿಯ ವಾಲ್ಮೀಕಿ ರಾಮಾಯಣ', ಸಿದ್ದವನಹಳ್ಳಿ ಕೃಷ್ಣಶರ್ಮರ 'ರಾಮಾವತಾರ', ವಿದ್ವಾನ್ ಎನ್.ರಂಗನಾಥ ಶರ್ಮಾ ಅವರ 'ಶ್ರೀಮದ್ ವಾಲ್ಮೀಕಿ ರಾಮಾಯಣ' ಜನಪ್ರಿಯ ಕೃತಿಗಳು. ಪಾರಾಯಣದ ದೃಷ್ಟಿಯಿಂದ ಆಸ್ತಿಕರು ಬೆಂಗಳೂರು ತ್ಯಾಗರಾಜನಗರದ 'ಭಾರತ ದರ್ಶನ ಮುದ್ರಣಾಲಯ' ಪ್ರಕಟಿಸಿರುವ 'ಶ್ರೀಮದ್ವಾಲ್ಮೀಕಿರಾಮಾಯಣ' ಸರಣಿಯನ್ನು ಇಷ್ಟಪಡುತ್ತಾರೆ. 11 ಸಂಪುಟಗಳಲ್ಲಿ ಸಮಗ್ರ ರಾಮಾಯಣದ ಸಂಸ್ಕೃತ ಶ್ಲೋಕಗಳು ಮತ್ತು ಕನ್ನಡದ ಅನುವಾದ ಈ ಸರಣಿಯಲ್ಲಿದೆ. ಎಲ್ಲ ಸಂಸ್ಕೃತಿ ಪ್ರಿಯರ ಮನೆಗಳಲ್ಲಿ ರಾಮಾಯಣದ ಗ್ರಂಥ ಇರಬೇಕು, ಅನುದಿನ ಈ ಪವಿತ್ರ ಗ್ರಂಥದ ಪಾರಾಯಣ ಮಾಡಬೇಕು. ರಾಮಾಯಣದ ಪಾರಾಯಣದಿಂದ, ರಾಮನ ಆದರ್ಶಗಳ ಪಾಲನೆಯಿಂದ ಎಲ್ಲರಿಗೂ ಸದಾ ಒಳಿತೇ ಆಗುತ್ತದೆ. ಈ ಬರಹದೊಂದಿಗೆ ರಾಮಾಯಣ ಪರಿಚಯದ ಸರಣಿಯನ್ನು ಮುಗಿಸುತ್ತಿದ್ದೇನೆ. ಶ್ರೀರಾಮಾರ್ಪಣಮಸ್ತು.

ರಾಮಾಯಣದ ಸಮಗ್ರ ಕೃತಿಗಳಿಗೆ: ಭಾರತ ದರ್ಶನ ಮುದ್ರಣಾಲಯ, ನಂ 163, ಮಂಜುನಾಥ ರಸ್ತೆ, 2ನೇ ಬ್ಲಾಕ್, ತ್ಯಾಗರಾಜನಗರ, ಬೆಂಗಳೂರು - 560 028 ವಿಳಾಸ ಸಂಪರ್ಕಿಸಬಹುದು. ದೂರವಾಣಿ: 080 26765381.

ಬರಹ: ಎಚ್‌.ಸತೀಶ್, ಜ್ಯೋತಿಷಿ