ರಾಮಾಯಣ: ಶ್ರೀ ರಾಮ, ಲಕ್ಷ್ಮಣರಿಂದ ಮಿಥಿಲಾನಗರಕ್ಕೆ ಪ್ರಯಾಣ; ಶಿವ ಧನಸ್ಸಿನ ಬಗ್ಗೆ ಹೆಚ್ಚಾಯ್ತು ಕುತೂಹಲ
ವಿಶ್ವಾಮಿತ್ರರ ಅಪ್ಪಣೆಯನ್ನು ಬೇಡಿ ರಾಮನಿಗೆ ಮುಖ್ಯವಾದ ವಿಚಾರವನ್ನು ತಿಳಿಸುತ್ತಾರೆ. ಮಿಥಿಲಾನಗರದ ಅಧಿಪತಿಯ ಹೆಸರು ಜನಕ. ಅವನು ಬಹಳ ನಿಷ್ಠೆಯಿಂದ ಅಪರೂಪವಾದಂತಹ ಯಜ್ಞವೊಂದನ್ನು ನಡೆಸಲಿದ್ದಾನೆ. ಆದ್ದರಿಂದ ನಾವೆಲ್ಲರೂ ಅದರಲ್ಲಿ ಭಾಗವಹಿಸಲು ಮಿಥಿಲಾ ನಗರಕ್ಕೆ ತೆರಳಲಿದ್ದೇವೆ. (ಬರಹ: ಎಚ್.ಸತೀಶ್, ಜ್ಯೋತಿಷಿ)
ಶ್ರೀ ರಾಮಾ ಲಕ್ಷ್ಮಣರ ಸಾಹಸ ವಿಶ್ಮಾಮಿತ್ರರ ಸಹಿತ ಎಲ್ಲರ ಸಂತಸಕ್ಕೆ ಕಾರಣವಾಗುತ್ತದೆ. ಆ ದಿನ ರಾಮ ಲಕ್ಷ್ಮಣರು ವಿಶ್ವಾಮಿತ್ರರ ಯಾಗಶಾಲೆಯಲ್ಲಿಯೇ ದಿನ ಕಳೆಯುತ್ತಾರೆ. ರಾತ್ರಿ ಕಳೆದು ಬೆಳಗಾದ ನಂತರ ಸ್ನಾನವನ್ನು ಮಾಡಿ ಸೂರ್ಯೋಪಾಸನೆಯಲ್ಲಿ ಮುಳುಗುತ್ತಾರೆ. ವಿಶ್ವಾಮಿತ್ರರು ಸೂರ್ಯನಿಗೆ ಅರ್ಘ್ಯ ನೀಡಿದಲ್ಲಿ ಮಾತ್ರ ಮಾಡಿದ ಪಾಪ ಶೇಷಗಳಿಂದ ನಿವೃತ್ತಿ ಆಗಬಹುದು ಎಂದು ತಿಳಿಸಿರುತ್ತಾರೆ. ಬೆಳಗಿನ ಧಾರ್ಮಿಕ ವಿಧಿಗಳ ಆನಂತರ ವಿಶ್ವಾ ಮಿತ್ರರನ್ನು ಭೇಟಿ ಮಾಡಿದ ರಾಮ ಲಕ್ಷ್ಮಣರು, ಅವರ ಚರಣಗಳಿಗೆ ವಂದಿಸಿ, ನಮ್ಮ ಮುಂದಿನ ಕಾರ್ಯದ ಬಗ್ಗೆ ತಿಳಿಸಿದರೆ ನಮ್ಮ ಕರ್ತವ್ಯ ಪಾಲಿಸಲು ಅನುಕೂಲವಾಗುತ್ತದೆ ಎಂದು ವಿನಮ್ರತಯಿಂದ ಕೇಳುತ್ತಾರೆ. ನಾವೀಗ ನಿಮ್ಮ ಸೇವಕರು ನಿಮ್ಮ ಆಜ್ಞೆಯನ್ನು ಪರಿಪಾಲಿಸುವುದಷ್ಟೇ ನಮ್ಮ ಕೆಲಸ. ನಿಮ್ಮ ಮನದ ಸಂಕಲ್ಪವನ್ನು ದಯಮಾಡಿ ತಿಳಿಸಬೇಕೆಂದು ಕೋರುತ್ತಾರೆ.
ಮಿಥಿಲಾನಗರದ ಅಧಿಪತಿಯ ಹೆಸರು ಜನಕ
ಆಗ ಅಲ್ಲಿಯೇ ಇದ್ದ ಮಹರ್ಷಿಗಳೊಬ್ಬರು ವಿಶ್ವಾಮಿತ್ರರ ಅಪ್ಪಣೆಯನ್ನು ಬೇಡಿ ರಾಮನಿಗೆ ಮುಖ್ಯವಾದ ವಿಚಾರವನ್ನು ತಿಳಿಸುತ್ತಾರೆ. ಮಿಥಿಲಾನಗರದ ಅಧಿಪತಿಯ ಹೆಸರು ಜನಕ. ಅವನು ಬಹಳ ನಿಷ್ಠೆಯಿಂದ ಅಪರೂಪವಾದಂತಹ ಯಜ್ಞವೊಂದನ್ನು ನಡೆಸಲಿದ್ದಾನೆ. ಆದ್ದರಿಂದ ನಾವೆಲ್ಲರೂ ಅದರಲ್ಲಿ ಭಾಗವಹಿಸಲು ಮಿಥಿಲಾ ನಗರಕ್ಕೆ ತೆರಳಲಿದ್ದೇವೆ. ದೈವಾನುಗ್ರಹದಿಂದ ನೀನೂ ಸಹ ಅದನ್ನು ನೋಡಬಹುದು. ಅವನಲ್ಲಿ ಜಗತ್ಪ್ರಸಿದ್ಧವಾದ ಮತ್ತು ಶ್ರೇಷ್ಠವಾಗಿರುವ ಧನಸ್ಸು ಇದೆ. ಅದನ್ನು ಸಹ ನೀವು ನೋಡಬಹುದು ಎಂದು ಹೇಳುತ್ತಾರೆ.
ಧನಸ್ಸಿಗೂ ಸಾಕ್ಷಾತ್ ಪರಶಿವನಿಗೂ ಸಂಬಂಧವಿದೆ
ಆಗ ರಾಮನು ಹಾಗಾದರೆ ದಯಮಾಡಿ ನಮಗೆ ಆ ಧನಸ್ಸಿನ ವಿಶೇಷತೆಯ ಬಗ್ಗೆ ತಿಳಿಸಿ. ಅದನ್ನು ತಿಳಿಯುವ ಹಂಬಲ ಮತ್ತು ಕುತೂಹಲ ನಮಗಿದೆ ಎಂದು ತಿಳಿಸುತ್ತಾನೆ. ಈ ಧನಸ್ಸಿಗೂ ಸಾಕ್ಷಾತ್ ಪರಶಿವನಿಗೂ ಸಂಬಂಧವಿದೆ. ಹೇಗೆಂದರೆ ಇದೇ ಧನಸ್ಸಿನ ಸಹಾಯದಿಂದ ಪರಮೇಶ್ವರನು ದಕ್ಷನು ಮಾಡುತ್ತಿದ್ದ ಯಜ್ಞವನ್ನು ದ್ವಂಸ ಮಾಡಿದ್ದಾನೆ. ಆನಂತರ ದಿನ ಕಳೆದಂತೆ ಮಿಥಿಲ ನಗರವನ್ನು ಆಳುತ್ತಿದ್ದ ದೇವರಾತನೆಂಬ ರಾಜನಿಗೆ ಸಾಕ್ಷತ್ ಶಿವನೇ ಈ ಧನಸ್ಸನ್ನು ನೀಡುತ್ತಾನೆ. ಅವನ ವಂಶದಲ್ಲಿ ಹುಟ್ಟಿದ ಜನಕ ಮಹಾರಾಜವನ್ನು ಯಜ್ಞ ಒಂದನ್ನು ಮಾಡುತ್ತಾನೆ. ಅದರಿಂದ ಸುಪ್ರೀತರಾದ ದೇವತೆಗಳು ಆ ಯಜ್ಞಮಂಟಪದಲ್ಲಿ ಜನಕರಾಜನಿಗೆ ಶಿವ ಧನಸ್ಸನ್ನು ಬಹುಮಾನವಾಗಿ ನೀಡಿದ್ದಾರೆ. ಅದರಲ್ಲಿನ ವಿಶೇಷವಾದ ವಿಚಾರವೆಂದರೆ ಆಕಸ್ಮಿತ್ ಬಿಲ್ಲಿಗೆ ಕಟ್ಟಿದ್ದ ದಾರವು ತುಂಡಾಗಿದೆ.
ಎಷ್ಟೇ ಪ್ರಯತ್ನ ಪಟ್ಟರು ಅದನ್ನು ಪುನಃ ಕಟ್ಟಲು ದೇವಾನುದೇವತೆಗಳಿಗೆ ಏಕೆ ರಾಕ್ಷಸರಿಂದಲೂ ಸಾಧ್ಯವಾಗಿಲ್ಲ. ಇಡೀ ಪ್ರಪಂಚವೇ ಹೊಗಳುವ ಅನೇಕ ರಾಜ ಮಹಾರಾಜರು ಆ ಪ್ರಯತ್ನದಲ್ಲಿ ಸೋತು ಹೋಗಿದ್ದಾರೆ. ಆದ್ದರಿಂದ ನೀನು ನಮ್ಮೊಡನೆ ಬಂದಲ್ಲಿ ಆ ಶಿವ ಧನಸ್ಸನ್ನು ನೋಡಬಹುದು ಮತ್ತು ಅಪರೂಪವಾದಂತಹ ಅದ್ಭುತವಾದಂತಹ ಯಜ್ಞವನ್ನು ನೋಡಬಹುದು ಎಂದು ಹೇಳುತ್ತಾರೆ. ಇಂದಿಗೂ ಶಿವಧನಸ್ಸಿಗೆ ಪ್ರತಿದಿನವೂ ವಿಶೇಷವಾದಂತಹ ಪೂಜೆ ನಡೆಯುತ್ತಿದೆ.
ಮುನಿಗಳ ಜೊತೆ ಮಿಥಿಲ ನಗರಕ್ಕೆ ಹೊರಡಲು ಸಿದ್ದರಾಗುತ್ತಾರೆ
ಅದರಿಂದ ಕುತೂಹಲಗೊಂಡ ರಾಮ ಲಕ್ಷ್ಮಣರು ಮತ್ತೊಮ್ಮೆ ಮಹಾಮಂತ್ರಗಳ ಪಟನೆ ಮಾಡಿ ವಿಶ್ವಾಮಿತ್ರ ಮತ್ತು ಅವರ ಜೊತೆ ಇರುವ ಮುನಿಗಳ ಜೊತೆ ಮಿಥಿಲ ನಗರಕ್ಕೆ ಹೊರಡಲು ಸಿದ್ದರಾಗುತ್ತಾರೆ. ವಿಶ್ವಾಮಿತ್ರರು ಸಿದ್ದಾಶ್ರಮವನ್ನು ಪ್ರದಕ್ಷಿಣೆ ಬಂದು ಎಲ್ಲರೊಡನೆ ಉತ್ತರ ದಿಕ್ಕಿನ ಪ್ರಯಾಣವನ್ನು ಆರಂಭಿಸುತ್ತಾರೆ. ವಿಶ್ವಾಮಿತ್ರರನ್ನು ತೊರೆದು ಇರಲಾರದೆ ಸಿದ್ದಾಶ್ರಮದ ಸಮೀಪವಿದ್ದ ಮೃಗ ಪಕ್ಷಿಗಳು ಸಹ ಅವರನ್ನು ಹಿಂಬಾಲಿಸುತ್ತವೆ. ಆದರೆ ನಿರಾಶೆಯಿಂದ ವಿಶ್ವಾಮಿತ್ರರ ಆಜ್ಞೆಯಂತೆ ಸ್ವಸ್ಥಾನಕ್ಕೆ ಹಿಂತಿರುಗುತ್ತವೆ. ಸೂರ್ಯನು ಮುಳುಗಿದ ಕಾರಣ ಎಲ್ಲರೂ ಶೋಣಾ ನದಿಯ ದಡದಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾರೆ. ನೋಡಲು ಅತಿ ಸುಂದರವಾದ ಪರಿಸರವಿರುವ ಅನೇಕ ವನಗಳಿಂದ ಕೂಡಿರುವ ದೇಶವೊಂದು ಕಂಡು ಬರುತ್ತದೆ. ರಾಮ ಲಕ್ಷ್ಮಣರಿಗೆ ಇದರ ಬಗ್ಗೆ ಕುತೂಹಲ ಉಂಟಾಗಿ ಅದರ ಬಗ್ಗೆ ತಿಳಿಯುವ ಹಂಬಲ ಉಂಟಾಗುತ್ತದೆ. ಆದ್ದರಿಂದ ವಿಶ್ವಾಮಿತ್ರರಿಗೆ ಕೈ ಮುಗಿದು ಮಹರ್ಷಿಗಳೇ ದಯಮಾಡಿ ನಮಗೆ ಈ ಸುಂದರವಾದ ದೇಶದ ಬಗ್ಗೆ ತಿಳಿಸಿಕೊಡಿ ಎಂದು ಕೇಳುತ್ತಾರೆ.
ವಿಭಾಗ