ರಾಮಾಯಣ: ತಾಟಕಿಯ ಎದೆಗೆ ನಾಟಿತು ರಾಮ ಬಿಟ್ಟ ಬಾಣ; ಇದು ದೇವಾನು ದೇವತೆಗಳಿಗೆ ಸಂತಸದ ಕ್ಷಣ
ತಾಟಕಿ ಮರಣ: ವಿಶ್ವಾಮಿತ್ರರ ಮಾತಿನಿಂದ ಪ್ರೇರಿತನಾದ ಶ್ರೀರಾಮನು ತಾಟಕಿಯ ಆರ್ಭಟವನ್ನು ತಡೆಯುತ್ತಾನೆ. ಇದರಿಂದ ಮತ್ತಷ್ಟು ಕೋಪಗೊಂಡ ತಾಟಕಿಯು ರಾಮ ಲಕ್ಷ್ಮಣರ ಮೇಲೆ ಆಕ್ರಮಣ ಮಾಡುತ್ತಾಳೆ. ಆದರೆ ರಾಮ ಲಕ್ಷ್ಮಣರು ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ತಾಟಕಿಯ ಮೇಲೆ ಮರು ಆಕ್ರಮಣ ಮಾಡಿ ಕೊಲ್ಲುತ್ತಾರೆ (ಬರಹ: ಎಚ್. ಸತೀಶ್, ಜ್ಯೋತಿಷಿ)
ವಿಶ್ವಾಮಿತ್ರರ ಮಾತುಗಳನ್ನು ಕೇಳಿದ ಶ್ರೀರಾಮನು ಒಮ್ಮೆ ಚಿಂತಾಕ್ರಾಂತನಾಗುತ್ತಾನೆ. ಅರಮನೆಯಿಂದ ಬರುವ ವೇಳೆ ತಂದೆಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳುವುದು ರಾಮನಿಗೆ ಮುಖ್ಯ ಕೆಲಸವಾಗಿತ್ತು. ಹಾಗೆಯೇ ವಿಶ್ವಾಮಿತ್ರ ಹೇಳಿದ ಕೆಲಸಗಳನ್ನು ಮಾಡಲು ದಶರಥನ ಆದೇಶವು ಇತ್ತು. ಆದ್ದರಿಂದ ವಿಶ್ವಾಮಿತ್ರ ಹೇಳಿದ ತಾಟಕಿಯ ಸಂಹಾರ ಮಾಡುವುದು ಅನಿವಾರ್ಯವಾಯಿತು. ಇಲ್ಲದೇ ಹೋದಲ್ಲಿ ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲನಾದ ಎಂಬ ಕೆಟ್ಟ ಹೆಸರು ಸಹ ಶ್ರೀರಾಮನಿಗೆ ಬರುತ್ತಿತ್ತು. ಈ ಕಾರಣದಿಂದ ತನ್ನ ಕರ್ತವ್ಯದ ಬಗ್ಗೆ ಯೋಚಿಸಿದ ಶ್ರೀರಾಮನು ವಿಶ್ವಾಮಿತ್ರರಿಗೆ ಕೈಮುಗಿದು ನಾನು ನಿಮ್ಮ ಆಜ್ಞೆಯನ್ನು ಪರಿಪಾಲಿಸಲು ಸಿದ್ಧನಿದ್ದೇನೆ. ಇಡೀ ಲೋಕಕ್ಕೆ ಕಂಟಕಪ್ರಾಯವಾದ ತಾಟಕಿಯನ್ನು ಸಂಹಾರ ಮಾಡುತ್ತೇನೆ. ಇದರಲ್ಲಿ ನಿಮಗೆ ಯಾವುದೇ ಶಂಕೆ ಬೇಡ. ಈ ದೇಶದ ಹಿತವೇ ನನ್ನ ಪ್ರಮುಖ ಗುರಿಯಾಗಿದೆ ಎಂದು ಹೇಳುತ್ತಾನೆ.
ಕಾಡಿನ ತುಂಬ ಬಿಲ್ಲಿನ ಶಬ್ಧ
ಆ ತಕ್ಷಣವೇ ಶ್ರೀರಾಮನು ತನ್ನ ಧನುಸ್ಸನ್ನು ಎಡಗೈಯಲ್ಲಿ ಬಿಗಿಯಾಗಿ ಹಿಡಿದು ಬಲಗೈಯಿಂದ ಶಬ್ದವನ್ನು ಹೊರಡಿಸುತ್ತಾನೆ. ಒಂದು ಕ್ಷಣ ಈ ಶಬ್ದವನ್ನು ಕೇಳಿದ ತಾಟಕಿಯ ಹಿಂಬಾಲಕರು ಭಯಗೊಳ್ಳುತ್ತಾರೆ. ಆದರೆ ಈ ಶಬ್ದವನ್ನು ಕೇಳಿದ ತಾಟಕಿಗೆ ಅತೀವ ಕೋಪ ಬರುತ್ತದೆ. ಆ ಕ್ಷಣವೇ ಅವಳು ಆ ಶಬ್ದ ಬಂದ ಸ್ಥಳವನ್ನು ಹುಡುಕುತ್ತಾ ರಾಮ ಲಕ್ಷ್ಮಣರು ಇದ್ದ ಸ್ಥಳಕ್ಕೆ ಬರುತ್ತಾಳೆ.
ವಿಕಾರ ರೂಪ ತೋರಿದ ತಾಟಕಿ
ನೋಡಲು ವಿಕಾರವಾದ ಮುಖವುಳ್ಳ, ಅತಿಯಾದ ಎತ್ತರವಿದ್ದ, ಕೋಪದಿಂದ ಭಯಂಕರ ಸದ್ದು ಮಾಡುತ್ತಾ ಬರುವ ತಾಟಕಿಯನ್ನು ರಾಮ ಲಕ್ಷ್ಮಣರು ನೋಡುತ್ತಾರೆ. ರಾಮನು ಲಕ್ಷ್ಮಣನನ್ನು ಕುರಿತು ಇವಳು ರಾಕ್ಷಸಿಯೇ ಆದರು ಇವಳೊಬ್ಬ ಸ್ತೀ. ಆದ್ದರಿಂದ ನಾನು ಇವಳನ್ನು ಕೊಲ್ಲಲಾರೆ. ಆದ್ದರಿಂದ ಕಿವಿ ಮೂಗುಗಳನ್ನು ಕತ್ತರಿಸಿ ಇವಳು ತನ್ನ ಸ್ಥಳಕ್ಕೆ ಮರಳುವಂತೆ ಮಾಡುತ್ತೇನೆ. ರಾಮ ಲಕ್ಷ್ಮಣರು ಪರಸ್ಪರ ಮಾತನಾಡುತ್ತಿರುವಾಗಲೇ ತಾಟಕಿಯು ಜೋರಾಗಿ ಶಬ್ದ ಮಾಡುತ್ತಾ ರಾಮನ ಕಡೆ ನುಗ್ಗಿ ಬರುತ್ತಾಳೆ. ಇದನ್ನು ಕಂಡ ವಿಶ್ವಾಮಿತ್ರರು ರಾಮ ಲಕ್ಷ್ಮಣರೆ ನಿಮಗೆ ಜಯವಾಗಲಿ ಎಂದು ಜೋರಾಗಿ ಹೇಳುತ್ತಾರೆ.
ಮಾಯಾ ಯುದ್ಧ ಆರಂಭ
ಆ ಕ್ಷಣವೆ ಎಲ್ಲೆಡೆ ಧೂಳು ತುಂಬಿ ಏನು ಕಾಣದಂತಾಗುತ್ತದೆ. ತಾಟಕಿಯು ಮಾಯ ಯುದ್ಧವನ್ನು ಆರಂಭಿಸುತ್ತಾಳೆ. ರಾಮ ಲಕ್ಷ್ಮಣರಿಗೆ ತಿಳಿಯದಂತೆ ಕಲ್ಲಿನ ಮಳೆಯನ್ನೇ ಸುರಿಸುತ್ತಾರೆ. ಆದರೆ ಶ್ರೀರಾಮನು ಆ ಕಲ್ಲುಗಳು ತಮಗೆ ತಾಗದಂತೆ ಬಾಣಗಳಿಂದ ಗೋಡೆಗಳನ್ನು ನಿರ್ಮಿಸುತ್ತಾನೆ. ತನ್ನ ಬಳಿ ರಭಸದಿಂದ ಬರುತ್ತಿದ್ದ ತಾಟಕಿಯ ಎರಡು ತೋಳುಗಳನ್ನು ಕತ್ತರಿಸಿ ಹಾಕುತ್ತಾನೆ. ಲಕ್ಷ್ಮಣ ಅವಳ ಮೂಗು ಮತ್ತು ಕಿವಿಗಳನ್ನು ಕತ್ತರಿಸುತ್ತಾನೆ. ಆದರೂ ತಾಟಕಿಯು ಧ್ಯರ್ಯಗೆಡುವುದಿಲ್ಲ. ಕ್ಷಣಮಾತ್ರದಲ್ಲಿಯೇ ಮಾಯೆಯಿಂದ ಬೇರೆ ಬೇರೆ ವೇಷಗಳಿಂದ ಅಲ್ಲಿ ಸಂಚರಿಸುತ್ತಾಳೆ. ಇದರಿಂದ ರಾಮ ಲಕ್ಷ್ಮಣರಿಗೆ ಗಲಿಬಿಲಿ ಉಂಟಾಗುತ್ತದೆ. ಆಗ ವಿಶ್ವಾಮಿತ್ರರು ಭಯಪಡಬೇಡಿ ಇವರಿಗೆ ಸಂಧ್ಯಾಕಾಲವಾದ ನಂತರ ಹೆಚ್ಚಿನ ಶಕ್ತಿ ಬರುತ್ತದೆ. ಆದ್ದರಿಂದ ಸೂರ್ಯನು ಮುಳುಗುವ ಮುನ್ನ ಇವಳ ಅವಸಾನವಾಗಲೇ ಬೇಕು ಎಂದು ಹೇಳುತ್ತಾರೆ.
ತಾಟಕಿಯ ಎದೆಗೆ ನಾಟಿದ ಬಾಣ
ವಿಶ್ವಾಮಿತ್ರರ ಮಾತಿನಿಂದ ಪ್ರೇರಿತನಾದ ಶ್ರೀರಾಮನು ತಾಟಕಿಯ ಆರ್ಭಟವನ್ನು ತಡೆಯುತ್ತಾನೆ. ಇದರಿಂದ ಮತ್ತಷ್ಟು ಕೋಪಗೊಂಡ ತಾಟಕಿಯು ರಾಮ ಲಕ್ಷ್ಮಣರ ಮೇಲೆ ಆಕ್ರಮಣ ಮಾಡುತ್ತಾಳೆ. ಆದರೆ ರಾಮ ಲಕ್ಷ್ಮಣರು ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ತಾಟಕಿಯ ಮೇಲೆ ಮರು ಆಕ್ರಮಣ ಮಾಡುತ್ತಾರೆ. ಶ್ರೀರಾಮನು ಆತ್ಮವಿಶ್ವಾಸದಿಂದ ಸರಿಯಾಗಿ ಗುರಿ ಇಟ್ಟು ಬಾಣ ಪ್ರಯೋಗ ಮಾಡುತ್ತಾನೆ. ಆ ಬಾಣವು ತಾಟಕಿಯ ಎದೆಗೆ ಬಲವಾಗಿ ನಾಟುತ್ತದೆ. ತಕ್ಷಣವೇ ಜೋರಾಗಿ ಚೀರುತ್ತಾ ನೆಲದ ಮೇಲೆ ಬೀಳುತ್ತಾಳೆ. ಕೊನೆಗೂ ಸತ್ಯಕ್ಕೆ ಜಯ ದೊರೆಯುತ್ತದೆ. ದೇವಾನು ದೇವತೆಗಳು ಸಂತಸಗೊಳ್ಳುತ್ತಾರೆ. ರಾಮ ಲಕ್ಷ್ಮಣರನ್ನು ಅಭಿನಂದಿಸುವುದಲ್ಲದೆ ವಿಶ್ವಾಮಿತ್ರರನ್ನು ಗೌರವದಿಂದ ವಂದಿಸುತ್ತಾರೆ. ವಿಶ್ವಾಮಿತ್ರರು ರಾಮ ಲಕ್ಷ್ಮಣರ ಜೊತೆಗೂಡಿ ಆ ದಿನವನ್ನು ನೆಮ್ಮದಿಯಿಂದ ಅಲ್ಲಿಯೆ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ.
ವಿಭಾಗ