Ramayana: ಭಾರತದಲ್ಲಿ ಎಷ್ಟು ರಾಮಾಯಣಗಳಿವೆ? ಬೇರೆ ದೇಶಗಳಲ್ಲಿಯೂ ಶ್ರೀರಾಮನ ಕಥೆ ಹೇಳುವ ಗ್ರಂಥಗಳಿವೆಯೇ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ramayana: ಭಾರತದಲ್ಲಿ ಎಷ್ಟು ರಾಮಾಯಣಗಳಿವೆ? ಬೇರೆ ದೇಶಗಳಲ್ಲಿಯೂ ಶ್ರೀರಾಮನ ಕಥೆ ಹೇಳುವ ಗ್ರಂಥಗಳಿವೆಯೇ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ

Ramayana: ಭಾರತದಲ್ಲಿ ಎಷ್ಟು ರಾಮಾಯಣಗಳಿವೆ? ಬೇರೆ ದೇಶಗಳಲ್ಲಿಯೂ ಶ್ರೀರಾಮನ ಕಥೆ ಹೇಳುವ ಗ್ರಂಥಗಳಿವೆಯೇ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ

Ramayana: ಶ್ರೀರಾಮನನ್ನು ವಿಷ್ಣುವಿನ 7ನೇ ಅವತಾರವೆಂದು ಆಸ್ತಿಕರು ನಂಬುತ್ತಾರೆ. ಈಗ ಪ್ರಚಲಿತದಲ್ಲಿರುವ ಮೂಲ ರಾಮಾಯಣವನ್ನು ಮಹರ್ಷಿ ವಾಲ್ಮೀಕಿ ರಚಿಸಿದ್ದಾರೆ. ಭಾರತದಲ್ಲಿ ಮತ್ತು ವಿಶ್ವದೆಲ್ಲೆಡೆ ಚಾಲ್ತಿಯಲ್ಲಿರುವ ರಾಮಾಯಣಗಳಲ್ಲಿ "ವಾಲ್ಮೀಕಿ ರಾಮಾಯಣ"ಕ್ಕೆ ಮಹತ್ತರ ಸ್ಥಾನವಿದೆ. ಇದಲ್ಲದೇ ಇನ್ನೂ ಎಷ್ಟೋ ರಾಮಾಯಣಗಳಿವೆ.

ರಾಮಾಯಣಕ್ಕೆ ಸಂಬಂಧಿಸಿದ ಪ್ರಾತಿನಿಧಿಕ ಚಿತ್ರ
ರಾಮಾಯಣಕ್ಕೆ ಸಂಬಂಧಿಸಿದ ಪ್ರಾತಿನಿಧಿಕ ಚಿತ್ರ

ರಾಮಾಯಣ ಮತ್ತು ಮಹಾಭಾರತ ಭಾರತದ ಮಹಾಕಾವ್ಯಗಳು. ಇವುಗಳಿಂದ ಮನುಷ್ಯ ತಿಳಿಯಬೇಕಾದದ್ದು, ಕಲಿಯಬೇಕಾದದ್ದು, ಪಾಲಿಸಬೇಕಾದದ್ದು ಹಲವಾರು ಇದೆ. ರಾಮಾಯಣ ಹಿಂದೂಗಳ ಪವಿತ್ರ ಗ್ರಂಥಗಳಲ್ಲೊಂದು. ಅನೇಕ ರಾಮಾಯಣ ಪುಸ್ತಕಗಳಿದ್ದು, ಯಾವ ರಾಮಾಯಣ ಓದಬೇಕು ಎಂದು ಹಲವರಿಗೆ ಗೊಂದಲ ಇರುತ್ತದೆ. ರಾಮಾಯಣಗಳು ಹಲವು ಇವೆ. ಭಾರತದಲ್ಲೇ ಸಂಸ್ಕೃತ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಬರೆದ ಸುಮಾರು 300 ರಾಮಾಯಣಗಳಿವೆ. ಇದಲ್ಲದೇ ಶ್ರೀಲಂಕಾ, ಕಾಂಬೋಡಿಯಾ, ನೇಪಾಳ, ಮ್ಯಾನ್ಮಾರ್, ಇಂಡೋನೇಷಿಯಾ, ಮಲೇಷ್ಯಾ, ಮಾಲಿ ಸೇರಿದಂತೆ ಕೆಲವು ದೇಶಗಳಲ್ಲಿ ಕೂಡ ರಾಮಾಯಣ ಕೃತಿಗಳಿವೆ.

ರಾಮಾಯಣದ ಕಥೆಯು ಭಗವಾನ್​ ಶ್ರೀ ರಾಮ, ಆತನ ಮಡದಿ ಸೀತಾಮಾತೆ, ಹನುಮಾನ್​ ಮತ್ತು ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಕುರಿತದ್ದಾಗಿದೆ. ರಾಮನು ಅಯೋಧ್ಯೆಯ ಸೂರ್ಯ ವಂಶದ ರಾಜನಾದ ದಶರಥನ ಹಿರಿಯ ಮಗ. ರಾಮನನ್ನು ವಿಷ್ಣುವಿನ 7ನೇ ಅವತಾರವೆಂದು ಕರೆಯಲಾಗುತ್ತದೆ. ಮೂಲ ರಾಮಾಯಣವನ್ನು ಮಹರ್ಷಿ ವಾಲ್ಮೀಕಿ ರಚಿಸಿದ್ದಾರೆ. ಹೀಗಾಗಿ ಭಾರತದ ಅಥವಾ ಪ್ರಪಂಚದ ಎಲ್ಲ ರಾಮಾಯಣಗಳ ಪೈಕಿ "ವಾಲ್ಮೀಕಿ ರಾಮಾಯಣ"ಕ್ಕೆ ಮಹತ್ತರ ಸ್ಥಾನವಿದೆ. ಇದರ ಜೊತೆಗೆ ತುಳಸಿದಾಸರ "ರಾಮಚರಿತಮಾನಸ"ಕ್ಕೂ ಪ್ರಮುಖ ಸ್ಥಾನ ನೀಡಲಾಗಿದೆ.

ಪ್ರಚಲಿತದಲ್ಲಿರುವ ಇನ್ನೊಂದು ಕಥೆಯ ಪ್ರಕಾರ, ವಾಲ್ಮೀಕಿಯು ರಾಮಾಯಣವನ್ನು ಬರೆಯುವ ಮೊದಲು ರಾಮನ ಕಥೆಯನ್ನು ಮೊದಲು ಹನುಮನು ಬಂಡೆ ಕಲ್ಲಿನ ಮೇಲೆ ಕೆತ್ತಿದನಂತೆ. ಇದನ್ನು "ಹನುಮಾನ್ ​​ನಾಟಕ" ಎಂದು ಕರೆಯಲಾಗುತ್ತದೆ. ನಂತರ ಹನುಮಂತನು ಈ ಬೃಹದಾಕಾರದ ಬಂಡೆಯನ್ನು ವಾಲ್ಮೀಕಿಯ ಮುಂದೆಯೇ ಸಮುದ್ರಕ್ಕೆ ಎಸೆದನೆಂದು ಹೇಳಲಾಗುತ್ತದೆ.

ಮಷರ್ಷಿ ವಾಲ್ಮೀಕಿಯವರು ತಮ್ಮ ಜೀವಿತಾವಧಿಯಲ್ಲಿ ರಾಮಾಯಣದ ಘಟನೆಗಳನ್ನು ಕಣ್ಣಾರೆ ನೋಡಿದ್ದರು, ಕೇಳಿದ್ದರು ಎಂದು ನಂಬಲಾಗಿದೆ. ವಾಲ್ಮೀಕಿ ರಾಮಾಯಣ ಮೊದಲು 6 ಕಾಂಡಗಳನ್ನು ಒಳಗೊಂಡಿತ್ತು. ಅವುಗಳೆಂದರೆ ಬಾಲ ಕಾಂಡ, ಅಯೋಧ್ಯಾ ಕಾಂಡ, ಅರಣ್ಯ ಕಾಂಡ, ಕಿಷ್ಕಿಂಧಾ ಕಾಂಡ, ಸುಂದರ ಕಾಂಡ ಮತ್ತು ಯುದ್ಧ ಕಾಂಡ. 7ನೇ ಕಾಂಡವಾದ ಉತ್ತರ ಕಾಂಡವನ್ನು ಬುದ್ಧ ಯುಗದಲ್ಲಿ ಸೇರಿಸಲಾಯಿತು.

ಕಳೆದ 2500 ವರ್ಷಗಳಲ್ಲಿ, ರಾಮಾಯಣದ ಮಹತ್ವ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಹರಡಿತು, ಕಾಲಾನಂತರದಲ್ಲಿ ಅದರ ಪ್ರಭಾವವು ಹೆಚ್ಚಾಯಿತು. ಇದೀಗ ಕನ್ನಡ, ತಮಿಳು, ತೆಲುಗು, ಸಂಸ್ಕೃತ, ಅನ್ನಾಮಿ, ಬಾಲಿ, ಬೆಂಗಾಲಿ, ಕಾಂಬೋಡಿಯನ್, ಚೈನೀಸ್, ಗುಜರಾತಿ, ಜಾವಾನೀಸ್, ಕಾಶ್ಮೀರಿ, ಖೋಟಾನಿ, ಮಲೇಷಿಯನ್, ಮರಾಠಿ, ಒಡಿಶಿ, ಪ್ರಾಕೃತ, ಸಂತಾಲಿ, ಸಿಂಹಳೀಸ್, ಥಾಯ್, ಟಿಬೆಟಿಯನ್ ಸೇರಿದಂತೆ ಲೆಕ್ಕವಿಲ್ಲದಷ್ಟು ಭಾಷೆಯಲ್ಲಿ ಅನೇಕ ರಾಮಾಯಣಗಳು ರಚನೆಯಾಗಿವೆ. ವಿವಿಧ ರೀತಿಯನ್ನು ರಾಮಾಯಣವನ್ನು ನಿರೂಪಿಸಿದ್ದರೂ ಕೂಡ ಮೂಲ ವಿಷಯವು ಹೆಚ್ಚು ಕಡಿಮೆ ಒಂದೇ ಆಗಿದೆ.

ಕನ್ನಡದಲ್ಲಿಯೇ ಅಭಿನವ ಪಂಪ ಎಂದೇ ಖ್ಯಾತನಾದ ನಾಗಚಂದ್ರನು “ರಾಮಚಂದ್ರ ಚರಿತಾಪುರಾಣ” ಬರೆದಿದ್ದಾನೆ. ಇದು ವಿದ್ವತ್ ವಲಯದಲ್ಲಿ “ಪಂಪ ರಾಮಾಯಣ” ಎಂದೇ ಪ್ರಸಿದ್ಧವಾಗಿದೆ. ಗಮಕಗಳಿಗೆ ಇಂದಿಗೂ ಬಳಕೆಯಾಗುವ ಷಟ್ಪದಿ ಛಂದಸ್ಸಿನ ಮತ್ತೊಂದು ಮಹತ್ವದ ಕೃತಿ “ತೊರವೆ ರಾಮಾಯಣ”. ಕುಮಾರ ವಾಲ್ಮೀಕಿ ಎಂದೇ ಖ್ಯಾತನಾದ ನರಹರಿ ಹೆಸರಿನ ಕವಿ ಈ ಕೃತಿಯ ಕರ್ತೃ.

ಭಾರತದಲ್ಲಿ ಪ್ರಚಲಿತದಲ್ಲಿರುವ 15 ಪ್ರಮುಖ ರಾಮಾಯಣಗಳಿವು

  1. ವಾಲ್ಮೀಕಿ ರಾಮಾಯಣ

2. ತುಳಸಿದಾಸರ ರಾಮಚರಿತಮಾನಸ

3. ಕುಮಾರದಾಸರ ಜಾನಕಿ ಹರಣ

4. ಅಧ್ಯಾತ್ಮ ರಾಮಾಯಣ

5. ಆನಂದ ರಾಮಾಯಣ

6.ಅದ್ಭುತ ರಾಮಾಯಣ

7. ರಂಗನಾಥ ರಾಮಾಯಣ

8. ರಾಮಜಾತಕ

9. ಭಾನುಭಕ್ತನ ರಾಮಾಯಣ

10. ದಶರಥ ಕಥನಮ್

11. ತೊರವೆ ರಾಮಾಯಣ

12. ರಂಗನಾಥ ರಾಮಾಯಣ

13. ಪಂಪ ರಾಮಾಯಣ

14. ಖೋಟಾನಿ ರಾಮಾಯಣ

15. ಶೇಖ್ ಸಾದಿ ಅವರ ದಾಸ್ತಾನ್-ಎ-ರಾಮ್-ಓ-ಸೀತಾ

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.