ಧಾರ್ಮಿಕತೆ ಮಾತ್ರವಲ್ಲ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ ಮಹಾಕುಂಭ ಮೇಳ: ರಂಗಸ್ವಾಮಿ ಮೂಕನಹಳ್ಳಿ ಬರಹ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಧಾರ್ಮಿಕತೆ ಮಾತ್ರವಲ್ಲ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ ಮಹಾಕುಂಭ ಮೇಳ: ರಂಗಸ್ವಾಮಿ ಮೂಕನಹಳ್ಳಿ ಬರಹ

ಧಾರ್ಮಿಕತೆ ಮಾತ್ರವಲ್ಲ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ ಮಹಾಕುಂಭ ಮೇಳ: ರಂಗಸ್ವಾಮಿ ಮೂಕನಹಳ್ಳಿ ಬರಹ

ಮಹಾಕುಂಭ ಮೇಳಕ್ಕೆ ನಿರೀಕ್ಷೆಯನ್ನು ಮೀರಿ ಭಕ್ತರು ಆಗಮಿಸುತ್ತಿದ್ದಾರೆ.70 ದೇಶಗಳು ಪ್ರತ್ಯೇಕವಾಗಿ ವರ್ಷದಲ್ಲಿಗಳಿಸಲಾಗದ ಜಿಡಿಪಿ 45 ದಿನಗಳಲ್ಲಿ ಸೃಷ್ಟಿಸುತ್ತೆ. ಇದು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಈ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ಅವರು ಫೇಸ್‌ಬುಕ್‍ನಲ್ಲಿ ಬರೆದಿದ್ದ ಬರಹವನ್ನು ಇಲ್ಲಿ ಮರುಪ್ರಕಟಿಸಲಾಗಿದೆ.

ಧಾರ್ಮಿಕತೆ ಮಾತ್ರವಲ್ಲ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ ಮಹಾಕುಂಭ ಮೇಳ: ರಂಗಸ್ವಾಮಿ ಮೂಕನಹಳ್ಳಿ ಬರಹ
ಧಾರ್ಮಿಕತೆ ಮಾತ್ರವಲ್ಲ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ ಮಹಾಕುಂಭ ಮೇಳ: ರಂಗಸ್ವಾಮಿ ಮೂಕನಹಳ್ಳಿ ಬರಹ (PTI)

ಮಹಾಕುಂಭ ಮೇಳವು ಪ್ರತಿ 144 ವರ್ಷಗಳಿಗೊಮ್ಮೆ ಜರುಗುತ್ತದೆ. ಇದನ್ನು ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆ ಎಂದು ಪರಿಗಣಿಸಲಾಗಿದೆ. ಇದು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. 45 ದಿನ ನಡೆಯಲಿರುವ ಈ ಮಹಾಕುಂಭಮೇಳದಲ್ಲಿ ಸಾವಿರಾರು ಕೋಟಿ ರೂಪಾಯಿ ಹಣ ವಹಿವಾಟು ನಡೆಯುತ್ತದೆ. ಈ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ಅವರು ಫೇಸ್‌ಬುಕ್‍ನಲ್ಲಿ ಬರೆದಿದ್ದ ಬರಹವನ್ನು ಇಲ್ಲಿ ಮರುಪ್ರಕಟಿಸಲಾಗಿದೆ.

ಮಹಾಕುಂಭಮೇಳ 45 ದಿನದಲ್ಲಿ 70 ದೇಶಗಳು ಪ್ರತ್ಯೇಕವಾಗಿ ವರ್ಷದಲ್ಲಿ ಗಳಿಸಲಾಗದ ಜಿಡಿಪಿ ಸೃಷ್ಟಿಸುತ್ತೆ. ಇದು ಕೇವಲ ಧಾರ್ಮಿಕತೆ ಮಾತ್ರವಲ್ಲ, ಬಹು ದೊಡ್ಡ ಆರ್ಥಿಕತೆ !

ನಾವು ಮಹಾಕುಂಭಮೇಳಕ್ಕೆ ಸಾಕ್ಷಿಯಾಗುತ್ತಿದ್ದೇವೆ! ಪ್ರತಿ ಆರು ವರ್ಷಕ್ಕೆ ಅರ್ಧ ಕುಂಭಮೇಳ, ಪ್ರತಿ ಹನ್ನೆರೆಡು ವರ್ಷಕ್ಕೆ ಕುಂಭಮೇಳ ಮತ್ತು ಪ್ರತಿ 144 ವರ್ಷಕ್ಕೆ ಮಹಾಕುಂಭ ಮೇಳ ಜರುಗುತ್ತದೆ. ಈ ನಿಟ್ಟಿನಲ್ಲಿ ಮಹಾಕುಂಭಮೇಳ ಅತ್ಯಂತ ವಿಶೇಷವಾದದ್ದು. ಹಿಂದಿನ ಮಹಾಕುಂಭವನ್ನು ನೋಡಿದವರ ಲೆಕ್ಕ ನಮ್ಮ ಬಳಿ ಇಲ್ಲ. ಮುಂದಿನ ಮಹಾಕುಂಭ ಬರುವುದು 144 ವರ್ಷಗಳ ನಂತರ! ಅಲ್ಲಿಯವರೆಗೆ ಇಂದಿನ ಮಹಾಕುಂಭಕ್ಕೆ ಸಾಕ್ಷಿಯಾದವರು ಇರುತ್ತಾರೆ ಎನ್ನುವ ಸಾಧ್ಯತೆ ಕೂಡ ಇಲ್ಲ! ಹೀಗಾಗಿ ಇದು ಬಹಳ ವಿಶೇಷ.

ನೀವು ನಮ್ಮ ಭಾರತೀಯ ಇತಿಹಾಸ, ಪರಂಪರೆಯನ್ನು ಗಮನಿಸುತ್ತಾ ಬನ್ನಿ. ನಮ್ಮ ದೇವಾಲಯಗಳು ಬ್ಯಾಂಕಿನ ರೀತಿಯಲ್ಲಿ, ಕೋರ್ಟಿನ ರೀತಿಯಲ್ಲಿ ಕೆಲಸ ಮಾಡುತ್ತಿದ್ದವು. ರಾಜ ಮಹಾರಾಜರು ಆಡಳಿತಕ್ಕೆ ಬೇಕಾದ ಹಣವನ್ನು ಮೀರಿದ ಹಣವನ್ನು ಸದಾ ದೇವಾಲಯಗಳಲ್ಲಿ ಇಡುತ್ತಿದ್ದರು. ರಾಜನ ಸಮ್ಮುಖದಲ್ಲಿ, ಊರಿನ ಮುಖ್ಯಸ್ಥರ ಸಮ್ಮುಖದಲ್ಲಿ ತೀರ್ಮಾನ ಆಗದ ಎಷ್ಟೋ ವ್ಯಾಜ್ಯಗಳು ದೇವಾಲಯದಲ್ಲಿ ತೀರ್ಮಾನ ಆಗುತ್ತಿದ್ದವು. ಧರ್ಮದಲ್ಲಿ, ದೇವರಲ್ಲಿ ಜನರ ನಂಬಿಕೆಯ ಶಕ್ತಿಯದು!

ಇಂತಹ ನಂಬಿಕೆ ಶತಶತಮಾನಗಳಿಂದ ಮುಂದುವರೆದುಕೊಂಡು ಬಂದಿದೆ. ಈ ಕಾರಣದಿಂದ ಜನವರಿ 13, 2025ರಿಂದ ಫೆಬ್ರವರಿ 26, 2025ರ ವರೆಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‍ನಲ್ಲಿ ಮಹಾಕುಂಭ ಮೇಳ ಜರುಗುತ್ತಿದೆ. ನೀವು ನಮ್ಮ ಇತಿಹಾಸವನ್ನು ಗಮನಿಸಿ. ನಮ್ಮ ಹಬ್ಬಗಳು, ನಮ್ಮ ಮೇಳಗಳು, ನಮ್ಮ ಧಾರ್ಮಿಕ ರಿವಾಜುಗಳು ಕೇವಲ ಧಾರ್ಮಿಕತೆಯನ್ನು ಮಾತ್ರ ಬೋಧಿಸುತ್ತಿರಲಿಲ್ಲ. ಅದರ ಜೊತೆ ಜೊತೆಗೆ ಅದು ರಾಜ್ಯದ, ಜನರ ಆರ್ಥಿಕತೆಯನ್ನು ಕೂಡ ವೃದ್ಧಿಸುವ ಕೆಲಸವನ್ನು ಮಾಡುತ್ತಿತ್ತು. ಇವತ್ತಿನ ಈ ಬರಹದಲ್ಲಿ ಸ್ಥೂಲವಾಗಿ ಕುಂಭಮೇಳದ ಆರ್ಥಿಕ ಪರಿಣಾಮಗಳನ್ನು ತಿಳಿದುಕೊಳ್ಳೋಣ.

ಕುಂಭಮೇಳದ ನಂಟು ಅಮೃತ ಮಥನದ ಜೊತೆಗೆ ಬೆಸೆದುಕೊಂಡಿದೆ. ದೇವ ಮತ್ತು ಅಸುರರು ಅಮೃತ ಮಥನವನ್ನು ಮಾಡಿ ಅಮೃತವನ್ನು ಸೃಷ್ಟಿಸುತ್ತಾರೆ. ಅಮೃತ ಒಂದು ಕುಂಭದಲ್ಲಿ ಅಂದರೆ ಮಡಿಕೆಯಲ್ಲಿ ಇರುತ್ತದೆ. ಇದು ರಾಕ್ಷಸರ ಕೈಗೆ ಸಿಗಬಾರದು ಎಂದು ಮಹಾವಿಷ್ಣು ಮೋಹಿನಿಯ ರೂಪವನ್ನು ಧರಿಸಿ ಅದನ್ನು ಅಪಹರಿಸಿ ಓಡುವಾಗ ಕುಂಭದಿಂದ ನಾಲ್ಕು ಹನಿ ಅಮೃತ ಭೂಮಿಗೆ ಚೆಲ್ಲುತ್ತದೆ. ಆ ನಾಲ್ಕು ಹನಿಗಳು ಬಿದ್ದ ಜಾಗದಲ್ಲಿ ಇಂದಿಗೆ ಕುಂಭಮೇಳ ನಡೆಯುತ್ತಿದೆ. ಪ್ರಯಾಗ್ ರಾಜ್, ಹರಿದ್ವಾರ, ಉಜ್ಜಯಿನಿ ಮತ್ತು ನಾಶಿಕ್ ಆ ಸ್ಥಳಗಳು.

ಮಹಾಕುಂಭದಲ್ಲಿ ಪಾಲ್ಗೊಂಡು ಇಲ್ಲಿ ಸ್ನಾನ ಮಾಡಿದರೆ, ಇದನ್ನು ಶನಿಸ್ನಾನ ಎಂದು ಕರೆಯುತ್ತಾರೆ. ಮರುಜನ್ಮ ಇರುವುದಿಲ್ಲ, ಮೋಕ್ಷ ಸಿದ್ಧಿಸುತ್ತದೆ ಎನ್ನುವ ನಂಬಿಕೆಯಿದೆ. ಹೀಗಾಗಿ ಕೋಟ್ಯಂತರ ಭಕ್ತರು, ನಂಬಿಕೆ ಉಳ್ಳವರು ಜಗತ್ತಿನ ಎಲ್ಲೆಡೆಯಿಂದ ಬಂದು ಇಲ್ಲಿ ಸೇರುತ್ತಾರೆ. ಇದನ್ನು ನಾವು ಇನ್ನೊಂದು ದೃಷ್ಟಿಯಿಂದ ಕೂಡ ನೋಡಬಹುದು. ಭಾರತಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಸಮಾರಂಭ ಆಯೋಜಿಸುವ ಶಕ್ತಿಯಿದೆ! ಮತ್ತು ಬಹುತೇಕ ಇದು ಶಾಂತಿಯುತವಾಗಿ ಮುಗಿದು ಹೋಗುತ್ತದೆ. ಗಮನಿಸಿ ಒಂದು ದಿನಕ್ಕೆ ಕನಿಷ್ಠ ಎರಡೂವರೆ ಕೋಟಿ ಜನ ಸೇರುತ್ತಾರೆ! ಇಷ್ಟು ದೊಡ್ಡ ಜನಸಂಖ್ಯೆ ನಿಯಂತ್ರಕ್ಕೆ ಇರುವುದು ಕೇವಲ ನಲವತ್ತು ಸಾವಿರ ಪೊಲೀಸರು ಎನ್ನುವುದು ಭಾರತೀಯ ಪರಂಪರೆ ಶಾಂತಿ ಪ್ರಿಯ ಎನ್ನುವುದನ್ನು ಜಗತ್ತಿಗೆ ಸಾರುತ್ತಿದೆ.

ಮಹಾಕುಂಭ ಮೇಳ 4 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಆಯೋಜಿಸಲಾಗಲಿದೆ. ಒಂದೂವರೆ ಲಕ್ಷ ಟೆಂಟುಗಳನ್ನು ನಿರ್ಮಿಸಲಾಗಿದೆ. ಇದೊಂದು ತಾತ್ಕಾಲಿಕ ನಗರವನ್ನು ಕಟ್ಟಿದಂತೆ ಎನ್ನುವುದು ಉತ್ಪ್ರೇಕ್ಷೆಯ ಮಾತಾಗುವುದಿಲ್ಲ. 45 ದಿನಗಳು ನಡೆಯುವ ಈ ಮಹಾಕುಂಭ ಮೇಳಕ್ಕೆ ಸರಕಾರ ತೆಗೆದಿರಿಸಿರುವ ಅಂದಾಜು ಹಣ 6800 ಕೋಟಿಯಿಂದ 7500 ಕೋಟಿ ರೂಪಾಯಿ. ಇದು ಬಹಳ ದೊಡ್ಡ ಮೊತ್ತ. ಇದನ್ನು ಈ ರೀತಿ ಧರ್ಮಕ್ಕೆ, ಧಾರ್ಮಿಕತೆ ಬಳಸುವ ಅವಶ್ಯಕತೆಯೇನಿತ್ತು ಎನ್ನುವ ಪ್ರಶ್ನೆ ಯಾರಲ್ಲಾದರೂ ಮೂಡಿದ್ದರೆ ಅದಕ್ಕೆ ಉತ್ತರ ಮುಂದಿನ ಸಾಲುಗಳಲ್ಲಿದೆ.

ಕುಂಭಮೇಳದ 45 ದಿನಗಳ ಆಚರಣೆಯಲ್ಲಿ ಒಟ್ಟು 40 ರಿಂದ 45 ಕೋಟಿ ಜನರು ಭಾಗಿಯಾಗುವ ನಿರೀಕ್ಷೆಯಿದೆ. ಇದರಲ್ಲಿ ಸರಿಸುಮಾರು ಹತ್ತು ಲಕ್ಷಕ್ಕೂ ಮೀರಿದ ವಿದೇಶಿ ಪ್ರಜೆಗಳು ಭಾಗಿಯಾಗಲಿದ್ದಾರೆ. ಇವೆರಲ್ಲಿ ಎಲ್ಲರೂ 45 ದಿನ ಕೂಡ ಇರುವುದಿಲ್ಲ, ಬಂದು ಹೋಗುವರ ಸಂಖ್ಯೆ ಹೆಚ್ಚಿರುತ್ತದೆ. ಹೀಗಿದ್ದೂ ಕೂಡ ಪ್ರತಿ ದಿನದ ಸರಾಸರಿ ಎರಡೂವರೆ ಕೋಟಿ ಜನ ಎನ್ನಲಾಗುತ್ತದೆ. ಪ್ರತಿಯೊಬ್ಬರ ಸರಾಸರಿ ಖರ್ಚು ಐದರಿಂದ ಆರು ಸಾವಿರ ರೂಪಾಯಿ ಎಂದಿಟ್ಟುಕೊಂಡರು ಕೂಡ ಈ 45 ದಿನಗಳಲ್ಲಿ ಆಗುವ ಒಟ್ಟು ವಹಿವಾಟು ಎರಡೂವರೆ ಲಕ್ಷ ಕೋಟಿ ರೂಪಾಯಿ ಮೀರುತ್ತದೆ. ನಿಮಗೆಲ್ಲಾ ಗೊತ್ತಿರಲಿ, ಇದು ಕೇವಲ ಅಂದಾಜು ಸಂಖ್ಯೆ . ಈ ಸಂಖ್ಯೆಯನ್ನು ಮೀರಿದ ವಹಿವಾಟು ಖಂಡಿತ ಆಗುತ್ತದೆ.

ಡಾಲರ್ ಲೆಕ್ಕಾಚಾರದಲ್ಲಿ 30 ಬಿಲಿಯನ್ ಮೀರಿಸುತ್ತದೆ. ಈ ಸಂಖ್ಯೆ ಎಷ್ಟು ದೊಡ್ಡದು ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ಕೊಡುತ್ತೇನೆ. ಕಳೆದ ವರ್ಷದ ಜಿಡಿಪಿ ಲೆಕ್ಕಾಚಾರದಲ್ಲಿ ನೋಡುವುದಾದರೆ ಸರಿಸುಮಾರು 70ಕ್ಕೂ ಹೆಚ್ಚು ದೇಶಗಳ ಜಿಡಿಪಿ 30 ಬಿಲಿಯನ್ ಡಾಲರ್‌ಗಿಂತ ಕಡಿಮೆಯಿದೆ. ಅಂದರೆ ಗಮನಿಸಿ ಇಡೀ ದೇಶದ ವರ್ಷ ಪೂರ್ತಿಯ ವಹಿವಾಟು 30 ಬಿಲಿಯನ್ ಡಾಲರ್‌ಗಿಂತ ಕಡಿಮೆ! ಇದನ್ನು ಭಾರತದ ಒಂದು ಧಾರ್ಮಿಕ ಮೇಳ ಕೇವಲ 45 ದಿನಗಳಲ್ಲಿ ಸಾಧಿಸಿ ಬಿಡುತ್ತದೆ. ಇದು ಭಾರತದ ತಾಕತ್ತು. ಭಾರತವನ್ನು ಇಂದಿಗೂ 5ನೆಯ ಅತಿ ದೊಡ್ಡ ಆರ್ಥಿಕತೆ ಎನ್ನುತ್ತೇವೆ. ಆದರೆ ನಿಮಗೆ ಗೊತ್ತಿರಲಿ ಲೆಕ್ಕಕ್ಕೆ ಸಿಕ್ಕ ಹಣವನ್ನು ಮಾತ್ರ ಜಿಡಿಪಿ ಲೆಕ್ಕಾಚಾರದಲ್ಲಿ ಪರಿಗಣಿಸಲಾಗುತ್ತದೆ. ಭಾರತದಂತಹ ಅತಿ ದೊಡ್ಡ ದೇಶದಲ್ಲಿ ಲೆಕ್ಕಕ್ಕೆ ಸಿಗದ ಅಂದರೆ ನಗದು ಮೂಲಕ ಮಾಡಿದ ಖರ್ಚನ್ನು ಟ್ರೇಸ್ ಮಾಡುವುದಾದರೂ ಹೇಗೆ? ಆ ಲೆಕ್ಕಾಚಾರದಲ್ಲಿ ನಾವು ಮೂರನೇ ಆರ್ಥಿಕತೆ ಅಥವಾ ಎರಡನೇ ಆರ್ಥಿಕತೆ ಎಂದರೂ ತಪ್ಪಾಗುವುದಿಲ್ಲ.

ಭಾರತದ ಬಹುತೇಕ ಎಲ್ಲಾ ಮಹಾನಗರಗಳಿಂದ ಪ್ರಯಾಗ್ ರಾಜ್‌ಗೆ ಹೋಗಲು ವಿಮಾನದ ಸೌಲಭ್ಯ ಕಲ್ಪಿಸಲಾಗಿದೆ. ವಿಮಾನ ದರಗಳಲ್ಲಿ 10 ರಿಂದ 400 ಪ್ರತಿಶತ ಏರಿಕೆ ಕಂಡಿದೆ. ವಿಮಾನ ಸಂಸ್ಥೆಗಳು ಮುಂದಿನ 45 ದಿನದಲ್ಲಿ ವರ್ಷದ ಲಾಭವನ್ನು ಪಡೆದುಕೊಳ್ಳಲಿವೆ. 2019ರ ಕುಂಭ ಮೇಳಕ್ಕೆ ಬಂದಿದ್ದ ಜನರಿಗಿಂತ ಐದು ಪಟ್ಟು ಹೆಚ್ಚು ಜನರು ಬರುವ ಅಂದಾಜು ಮಾಡಲಾಗಿದೆ. ಹೀಗೆ ಬಂದವರು 2019 ಕ್ಕಿಂತ 20 ಪಟ್ಟು ಹೆಚ್ಚು ಹಣವನ್ನು ಈ ಬಾರಿ ಖರ್ಚು ಮಾಡಲಿದ್ದಾರೆ. ಭಾರತದ ದೊಡ್ಡ ಹಬ್ಬವಾದ ದೀಪಾವಳಿ ಮತ್ತು ಒಟ್ಟಾರೆ ದೇಶದಲ್ಲಿ ನಡೆಯುವ ಮದುವೆ ಬಜೆಟ್ ಎರಡನ್ನೂ ಸೇರಿಸಿದರೆ ಅದರ 60 ರಿಂದ 70 ಪ್ರತಿಶತ ಕುಂಭಮೇಳದಲ್ಲಿ 45 ದಿನಗಳಲ್ಲಿ ಉತ್ಪತ್ತಿಯಾಗಲಿದೆ. ಹತ್ತು ಲಕ್ಷಕ್ಕೂ ಮೀರಿದ ವಿದೇಶಿ ಭಕ್ತರು ಭಾರತಕ್ಕೆ ಫಾರಿನ್ ಎಕ್ಸ್ಚೇಂಜ್ ಹೆಚ್ಚಳಕ್ಕೆ ಕಾರಣವಾಗಲಿದ್ದಾರೆ. ಇದರಿಂದ ಹೆಚ್ಚು ಕಡಿಮೆ 40 ಸಾವಿರ ಕೋಟಿ ರೂಪಾಯಿ ಆದಾಯ ಬರುವ ಸಾಧ್ಯತೆಯಿದೆ. ಇದರಲ್ಲಿ 5 ಸಾವಿರ ಕೋಟಿ ರೂಪಾಯಿಯನ್ನು ಈ ನಾಲ್ಕೂ ನಗರಗಳಲ್ಲಿನ ಮೂಲಭೂತ ಸೌಲಭ್ಯ ಹೆಚ್ಚಳಕ್ಕೆ ಬಳಸಿಕೊಳ್ಳುವ ಇರಾದೆಯನ್ನು ಸರಕಾರ ವ್ಯಕ್ತಪಡಿಸಿದೆ.

ಇಷ್ಟೊಂದು ಜನ ಸೇರಿದ ಮೇಲೆ ಊಟ, ತಿಂಡಿ ವ್ಯವಸ್ಥೆ ಕೂಡ ಬೇಕಲ್ಲ. 45 ದಿನದಲ್ಲಿ ಊಟ ತಿಂಡಿಯ ವಹಿವಾಟು 20 ಸಾವಿರ ಕೋಟಿ ರೂಪಾಯಿ ಮೀರುತ್ತದೆ. ಇದೆಷ್ಟು ದೊಡ್ಡ ಆರ್ಥಿಕತೆ ಎಂದರೆ ಧಾರ್ಮಿಕ ವಸ್ತುಗಳಾದ ದೀಪ, ಧೊಪ, ಕರ್ಪೂರ, ಅರಿಶಿಣ, ಕುಂಕುಮ, ದಾರ, ತಾಯಿತಗಳು, ನೆನಪಿನ ಕಾಣಿಕೆಗಳು ಇವುಗಳ ವಹಿವಾಟು 20 ಸಾವಿರ ಕೋಟಿ ರೂಪಾಯಿ ಮೀರುತ್ತದೆ. ಕರಕುಶಲ ವಸ್ತುಗಳು ಅಂದರೆ ಹ್ಯಾಂಡಿ ಕ್ರಾಫ್ಟ್ ಮಾರಾಟ 5 ಸಾವಿರ ಕೋಟಿ ರೂಪಾಯಿ ಮೀರುತ್ತದೆ ಎನ್ನಲಾಗಿದೆ.

ಬೇರೆ ನಗರಗಳಿಂದ ಬಂದು ಹೋಗುವ ಖರ್ಚು ಪಕ್ಕಕ್ಕಿಡಿ, ಕೇವಲ ಕುಂಭಮೇಳದಲ್ಲಿನ ಓಡಾಟ ಅಂದರೆ ಬೋಟ್ ರೈಡ್, ಹೆಲಿಕಾಪ್ಟರ್ ಪ್ರದಕ್ಷಿಣೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಟದ ಖರ್ಚು, ಹೀಗೆ ಒಟ್ಟಾರೆ ಟ್ರಾನ್ಸ್ಪೋರ್ಟಷನ್‍ನಿಂದ ಹತ್ತು ಸಾವಿರ ಕೋಟಿ ರೂಪಾಯಿ ಆದಾಯವನ್ನು ನಿರೀಕ್ಷಿಸಲಾಗುತ್ತಿದೆ. ಹೀಗೆ ಸಣ್ಣಪುಟ್ಟ ವ್ಯಾಪಾರಿಗಳಿಂದ ದೊಡ್ಡ ವ್ಯಾಪಾರಿಗಳವರೆಗೆ ಎಲ್ಲರಿಗೂ ಮಹಾಕುಂಭ ಅಮೃತವನ್ನು ಹಂಚುತ್ತಿದೆ. ಆಟೋ ಡ್ರೈವರ್‌ನಿಂದ ದೊಡ್ಡ ಹೋಟೆಲ್ ಮಾಲೀಕರವರೆಗೆ ಎಲ್ಲರಿಗೂ ವರ್ಷದ ವಹಿವಾಟು 45 ದಿನದಲ್ಲಿ ಆಗುವುದು ಮಾತ್ರ ಗ್ಯಾರಂಟಿ.

ಹೋಗುವ ಮುನ್ನ ಭಾರತದ ಇತಿಹಾಸವನ್ನು ಒಮ್ಮೆ ಗಮನಿಸಿ ನೋಡಿ. ಧಾರ್ಮಿಕತೆ ಮತ್ತು ಆರ್ಥಿಕತೆ ಎರಡೂ ಸದಾ ಒಂದರ ಕೈ ಇನ್ನೊಂದು ಹಿಡಿದುಕೊಂಡು ಹೊರಟಿರುವುದು ವೇದ್ಯವಾಗುತ್ತದೆ. ಧಾರ್ಮಿಕತೆ, ಧರ್ಮ ಎಂದು ಹೀಗೆಳೆಯುವಂತಿಲ್ಲ, ಅದು ಆರ್ಥಿಕತೆಗೆ ಕೂಡ ಚೈತನ್ಯ ನೀಡುತ್ತದೆ. ಜಗತ್ತಿನ ಒಂದಲ್ಲ ಎರಡಲ್ಲ ನೂರಾರು ದೇಶಗಳ ಒಂದು ವರ್ಷದ ಪ್ರತ್ಯೇಕ ಪೂರ್ಣ ವಹಿವಾಟಿನ ಮೊತ್ತವನ್ನು ಭಾರತದ ಒಂದು ಧಾರ್ಮಿಕ ಕಾರ್ಯಕ್ರಮ ಕೇವಲ 45 ದಿನಗಳಲ್ಲಿ ಸಾಧಿಸಿ ಬಿಡುತ್ತದೆ ಎನ್ನುವುದು ನಾವೆಷ್ಟು ಬಲಿಷ್ಠ ರಾಷ್ಟ್ರ ಎನ್ನುವುದನ್ನು ತೋರಿಸುತ್ತದೆ. ನಮ್ಮಲಿರುವ ಒಂದಷ್ಟು ಋಣಾತ್ಮಕ ಅಂಶಗಳನ್ನು ತಿದ್ದಿಕೊಂಡರೆ ಭಾರತ ಮರಳಿ ವಿಶ್ವಗುರುವಾಗಬಹುದು. ಅದಕ್ಕೂ ಮುನ್ನ ನಮ್ಮದು ಎನ್ನುವ ಸಾತ್ವಿಕ ಹೆಮ್ಮೆ ನಮ್ಮಲ್ಲಿ ಮೂಡಬೇಕು. ಜಗತ್ತಿನಲ್ಲಿರುವ 197 ದೇಶಗಳಲ್ಲಿ ನಾವು ನೂರಾರು ದೇಶಕ್ಕಿಂತ ಉತ್ತಮವಾಗಿದ್ದೇವೆ. ನಮಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮದು ಜಗತ್ತಿನ ಅತಿ ಪುರಾತನ ಸಂಸ್ಕೃತಿ ಎನ್ನುವ ಹೆಮ್ಮೆ, ವಿಶ್ವಾಸ ನಮ್ಮಲ್ಲಿ ಹೆಚ್ಚು ಬೇರೂರಬೇಕು. ಆಗ ವಿಶ್ವದ ನಂಬರ್ ಒನ್ ಆರ್ಥಿಕತೆಯಾಗಿ ಭಾರತ ಹೊರಹೊಮ್ಮುವುದರಲ್ಲಿ ಅತಿಶಯೋಕ್ತಿ ಇರುವುದಿಲ್ಲ.

ರಂಗಸ್ವಾಮಿ ಮೂಕನಹಳ್ಳಿ

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.