Ratha Saptami 2025: ಈ ಬಾರಿ ರಥಸಪ್ತಮಿ ಆಚರಣೆ ಯಾವಾಗ, ಆ ದಿನ ಎಕ್ಕದ ಎಲೆಯನ್ನು ತಲೆ ಮೇಲಿಟ್ಟು ಸ್ನಾನ ಮಾಡುವುದೇಕೆ?
Ratha Saptami 2025: ರಥ ಸಪ್ತಮಿ ಎಂದರೆ ಸೂರ್ಯ ಜನಿಸಿದ ದಿನವಲ್ಲ, ಇಂದಿನಿಂದ ಸೂರ್ಯನ ರಥಯಾತ್ರೆ ಆರಂಭವಾಗುತ್ತದೆ. ಪ್ರತಿ ವರ್ಷ, ಮಾಘ ಮಾಸದ ಶುಕ್ಲಪಕ್ಷದಲ್ಲಿ ಬರುವ ಸಪ್ತಮಿ ದಿನದಂದು ಸೂರ್ಯದೇವನಿಗೆ ಪ್ರತ್ಯೇಕ ಪೂಜೆ ಮಾಡಲಾಗುತ್ತದೆ. ಈ ದಿನ ಎಕ್ಕದ ಎಲೆಯನ್ನು ತಲೆ ಮೇಲಿಟ್ಟು ಸ್ನಾನ ಮಾಡುವ ಪದ್ಧತಿ ರೂಢಿಯಲ್ಲಿದೆ.

Ratha Saptami 2025: ಹಿಂದೂ ಧರ್ಮದಲ್ಲಿ ಸೂರ್ಯದೇವನನ್ನು ಆರಾಧಿಸುವ ರಥಸಪ್ತಮಿಗೆ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನ ಸೂರ್ಯನನ್ನು ಪೂಜಿಸುವುದರಿಂದ ವಿಶೇಷ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ. ಪ್ರತಿ ವರ್ಷ ಮಾಘ ಮಾಸದ ಶುಕ್ಲಪಕ್ಷದಲ್ಲಿ ಬರುವ ಸಪ್ತಮಿ ದಿನದಂದು ಸೂರ್ಯದೇವನಿಗೆ ಪ್ರತ್ಯೇಕ ಪೂಜೆ ಮಾಡಲಾಗುತ್ತದೆ. ಈ ದಿನ ದಾನ ಧರ್ಮಗಳನ್ನು ಮಾಡಿದರೆ ಮನಸ್ಸಿನ ಆಸೆಗಳೆಲ್ಲಾ ಈಡೇರಲಿವೆ ಎಂಬ ನಂಬಿಕೆ ಇದೆ.
ರಥಸಪ್ತಮಿ ಶುಭ ಮುಹೂರ್ತ
ಹಿಂದೂ ಕ್ಯಾಲೆಂಡರ್ ಪ್ರಕಾರ ಈ ಬಾರಿ ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ತಿಥಿ 4 ಫೆಬ್ರವರಿ 2025 ಬೆಳಗ್ಗೆ 7:56 ಗಂಟೆಯಿಂದ ಆರಂಭವಾಗಿ ಮರುದಿನ, ಅಂದರೆ 5 ಫೆಬ್ರವರಿ 2025 ಬೆಳಗ್ಗೆ 5:29ವರೆಗೆ ಇರಲಿದೆ. ಉದಯ ತಿಥಿಯ ಆಧಾರದ ಮೇಲೆ ಜೂನ್ 4 ರಂದು ರಥಸಪ್ತಮಿ ಆಚರಿಸಲಾಗುತ್ತಿದೆ.
ಸೂರ್ಯದೇವನು 7 ಕುದುರೆಗಳ ರಥವನ್ನು ಏರಿ ದಕ್ಷಿಣಾಯನವನ್ನು ಮುಗಿಸಿದ ನಂತರ ಪೂರ್ವಕ್ಕೆ ಪ್ರಯಾಣಿಸುತ್ತಾನೆ. ರಥ ಸಪ್ತಮಿ ಎಂದರೆ ಸೂರ್ಯ ಜನಿಸಿದ ದಿನವಲ್ಲ, ಇಂದಿನಿಂದ ಸೂರ್ಯನ ರಥಯಾತ್ರೆ ಆರಂಭವಾಗುತ್ತದೆ. ಮಾಘ ಸಪ್ತಮಿಯಿಂದ ಬರುವ ಆರು ತಿಂಗಳುಗಳನ್ನು ಉತ್ತರಾಯಣ ಪುಣ್ಯಕಾಲವೆಂದು ಪರಿಗಣಿಸಲಾಗಿದೆ. ಸೂರ್ಯನ ಏಳು ಕುದುರೆಗಳು ಏಳು ವಾರಗಳನ್ನು ಸೂಚಿಸುತ್ತದೆ. ಈ ಸಮಯದಲ್ಲಿ ಮೇಷದಿಂದ ಮೀನದವರೆಗೆ ಹನ್ನೆರಡು ರಾಶಿಗಳಲ್ಲಿ ಪ್ರಯಾಣಿಸುತ್ತಾನೆ. ಸೂರ್ಯ ರಥ ಈ 12 ಚಿಹ್ನೆಗಳನ್ನು ಪೂರ್ಣಗೊಳಿಸಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ಸೂರ್ಯನನ್ನು ಪೂಜಿಸಿದರೆ ಹಣಕಾಸು, ಆರೋಗ್ಯ ಸಮಸ್ಯೆಗಳು ದೂರಾಗುತ್ತದೆ. ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ. ಸೂರ್ಯನನ್ನು ಆರಾಧಿಸುವವರಿಗೆ ಅವನ ಅನುಗ್ರಹ ಸದಾ ಇರುತ್ತದೆ. ಈ ದಿನ ಮಾಡುವ ದಾನ ಧರ್ಮಕ್ಕೂ ವಿಶೇಷ ಪ್ರಾಮುಖ್ಯತೆ ಇದೆ.
ರಥಸಪ್ತಮಿ ದಿನ ಎಕ್ಕದ ಎಲೆಗೆ ಇದೆ ಪ್ರಾಮುಖ್ಯತೆ
ರಥಸಪ್ತಮಿ ದಿನ ತಲೆ, ಭುಜ, ಕತ್ತು, ಪಾದ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಎಕ್ಕದ ಎಲೆ ಇಟ್ಟು ಸ್ನಾನ ಮಾಡಿ ಸೂರ್ಯನ 108 ಹೆಸರುಗಳನ್ನು ಉಚ್ಛರಿಸಿ ಸೂರ್ಯ ನಮಸ್ಕಾರ ಮಾಡುವ ಪದ್ಧತಿ ಇದೆ. ಒಂದು ವೇಳೆ 108 ನಾಮಗಳನ್ನು ಪಠಿಸಲು ಸಾಧ್ಯವಾಗದೆ ಇದ್ದರೆ ಇಂದ್ರ, ಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ ಎಂಬ ಸೂರ್ಯನ 12 ನಾಮಗಳನ್ನು ಜಪಿಸಿ ನಮಸ್ಕಾರ ಮಾಡಬಹುದು.
ಎಕ್ಕದ ಎಲೆ ಬಳಸಲು ವೈಜ್ಞಾನಿಕ ಕಾರಣ
ಎಕ್ಕದ ಎಲೆ ಔಷಧೀಯ ಗುಣಗಳನ್ನು ಹೊಂದಿವೆ. ಈ ಎಲೆಗಳನ್ನು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಹೊಟ್ಟೆಯಲ್ಲಿನ ಶಾಖ ಕಡಿಮೆಯಾಗುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೀರಿಕೊಳ್ಳುತ್ತದೆ. ಇದರಲ್ಲಿರುವ ಔಷಧೀಯ ಗುಣದಿಂದ ಕೂದಲು ಉದುರುವುದು ಕಡಿಮೆ ಆಗುತ್ತದೆ. ಗಾಯವನ್ನು ಗುಣಪಡಿಸುವುದಲ್ಲದೆ, ಉರಿಯೂತ, ನೋವಿನಿಂದ ಶಮನ ನೀಡುತ್ತದೆ.
ಆ ದಿನ ರವೆ ಅಥವಾ ಅವಲಕ್ಕಿ ಪಾಯಸ ಮಾಡಿ , ಸೂರ್ಯನಿಗೆ ನೈವೇದ್ಯ ಇಡಲಾಗುತ್ತದೆ. ಒಡಿಶಾದ ಕೊನಾರ್ಕ್ ಸೂರ್ಯ ದೇವಾಲಯ, ಗಯಾದ ದಕ್ಷಿಣಾರ್ಕ ದೇವಸ್ಥಾನ, ರಾಜಸ್ಥಾನದ ರಾನಕ್‌ಪುರ್,ಗುಜರಾತ್‌ನ ಮೊಧೆರಾ, ಮಧ್ಯ ಪ್ರದೇಶದ ಉನಾವು , ಅಸ್ಸಾಮಿನ ಗೋಲ್ಪರ,ಆಂಧ್ರ ಪ್ರದೇಶದ ಅರಸವಲ್ಲಿ, ತಮಿಳುನಾಡಿನ ಕುಂಭಕೋಣಂನಲ್ಲಿರುವ ಸೂರ್ಯನ ದೇವಸ್ಥಾನಗಳಲ್ಲಿ ರಥ ಸಪ್ತಮಿಯ ದಿನ ವಿಶೇಷ ಪೂಜೆ ಏರ್ಪಡಿಸಲಾಗುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲಾ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
