ಜ್ಯೋತಿಷ್ಯಶಾಸ್ತ್ರಕ್ಕೂ ಬಣ್ಣಗಳಿಗೂ ಏನು ಸಂಬಂಧ? ವ್ಯಕ್ತಿಯ ಭವಿಷ್ಯ ನಿರ್ಧರಿಸುವಲ್ಲಿ ಬಣ್ಣಗಳು ಹೇಗೆ ಪಾತ್ರ ವಹಿಸುತ್ತವೆ?
ಜ್ಯೋತಿಷ್ಯಕ್ಕೂ ಬಣ್ಣಗಳಿಗೂ ಸಂಬಂಧವಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಬಣ್ಣಗಳು, ಜೀವನದಲ್ಲಿ ಅದೃಷ್ಟವನ್ನು ತರುತ್ತವೆ. ವ್ಯಕ್ತಿಯ ಭವಿಷ್ಯ ನಿರ್ಧರಿಸುವಲ್ಲಿ , ವ್ಯಕ್ತಿಯ ಸೋಲು, ಯಶಸ್ಸನ್ನು ನಿರ್ಧರಿಸುವಲ್ಲಿ ಬಣ್ಣಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬ ನಂಬಿಕೆ ಇದೆ.

ದಿನ ಬೆಳಗಾದರೆ ಬಹಳಷ್ಟು ಜನರು ಟಿವಿ, ಪೇಪರ್‌ಗಳಲ್ಲಿ ತಮ್ಮ ಇಂದಿನ ಭವಿಷ್ಯ ಹೇಗೆಂದು ತಿಳಿದು ದಿನವನ್ನು ಆರಂಭಿಸುತ್ತಾರೆ. ಜ್ಯೋತಿಷ್ಯದಲ್ಲಿ ನಿಮ್ಮ ಜನ್ಮದಿನಾಂಕದ ಆಧಾರದ ಮೇಲೆ ಭವಿಷ್ಯ ಹೇಳಲಾಗುತ್ತದೆ, ಹಾಗೇ ಸಮಸ್ಯೆಗಳಿದ್ದರೆ, ಯಾವುದೇ ಕೆಲಸಗಳಿಗೆ ಅಡೆತಡೆಗಳಿದ್ದರೆ ಅದಕ್ಕೆ ಪರಿಹಾರವನ್ನೂ ಹೇಳಲಾಗುತ್ತದೆ. ಆ ಪರಿಹಾರಗಳಲ್ಲಿ ಅದೃಷ್ಟದ ದಿಕ್ಕು, ಅದೃಷ್ಟದ ಸಂಖ್ಯೆಗಳಂತೆ ಅದೃಷ್ಟದ ಬಣ್ಣ ಕೂಡಾ ಪ್ರಮುಖವಾಗಿದೆ.
ಜೀವನದಲ್ಲಿ ಅದೃಷ್ಟ ತರಲಿರುವ ಬಣ್ಣಗಳು
ಬಣ್ಣಗಳು, ಜೀವನದಲ್ಲಿ ಅದೃಷ್ಟವನ್ನು ತರುತ್ತವೆ ಎಂದು ಹಲವರು ನಂಬುತ್ತಾರೆ. ನೀವು ಯಾವ ಬಣ್ಣದ ಬಟ್ಟೆಗಳನ್ನು ಧರಿಸುತ್ತೀರಿ, ನಿಮ್ಮ ಬೆರಳಿಗೆ ಯಾವ ಬಣ್ಣದ ಹರಳುಗಳ ಉಂಗುರವನ್ನು ಹಾಕುವಿರಿ, ನೀವು ಯಾವ ಬಣ್ಣದ ಚಪ್ಪಲಿಗಳನ್ನು ಧರಿಸುತ್ತೀರಿ, ನೀವು ಯಾವ ಬಣ್ಣವನ್ನು ಇಷ್ಟಪಡುತ್ತೀರಿ ಎಂಬುದರ ಮೇಲೆ ಜೀವನವು ಅವಲಂಬಿತವಾಗಿರುತ್ತದೆ. ಭಾರತದಲ್ಲಿ ಮಾತ್ರವಲ್ಲದೆ ಇದನ್ನು ಇತರ ದೇಶಗಳಲ್ಲಿಯೂ ಅನೇಕ ಜನರು ಬಲವಾಗಿ ನಂಬುತ್ತಾರೆ. ಬಣ್ಣಗಳ ಆಧಾರದ ಮೇಲೆಯೂ ವ್ಯಕ್ತಿಯ ಜೀವನ ಮತ್ತು ಭವಿಷ್ಯದ ಬಗ್ಗೆ ಹೇಳಬಹುದು ಎಂದು ನಂಬಲಾಗಿದೆ. ಯಾರು ಯಾವ ಬಣ್ಣವನ್ನು ಬಳಸುತ್ತಾರೆ ಎಂಬುದರ ಆಧಾರದ ಮೇಲೆ ಅವರ ಸೋಲು ಅಥವಾ ಯಶಸ್ಸು ನಿರ್ಧಾರವಾಗುತ್ತದೆ.
ಕಪ್ಪು ಬಣ್ಣವನ್ನು ಹೆಚ್ಚು ಬಳಸದಿರಲು ಕಾರಣವೇನು?
ಉದಾಹರಣೆಗೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕಪ್ಪು ಬಣ್ಣವನ್ನು ಅಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೆಲವರು ದೃಷ್ಟಿಯನ್ನು ತಪ್ಪಿಸಲು ಕಪ್ಪು ಬಣ್ಣದ ದಾರವನ್ನು ಕಾಲಿಗೆ ಕಟ್ಟಿಕೊಳ್ಳುತ್ತಾರೆ. ಜ್ಯೋತಿಷ್ಯದ ಪ್ರಕಾರ ಕಪ್ಪು ಬಣ್ಣವು ರಾಹುಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ವಿಶೇಷ ಸ್ಥಳಗಳಲ್ಲಿ ಕಪ್ಪು ಬಣ್ಣವನ್ನು ಬಳಸಬಾರದು. ಬಳಸಿದರೆ ಅನಗತ್ಯ ನಷ್ಟವಾಗುತ್ತದೆ. ಅಶುಭದ ಜೊತೆಗೆ ಆರ್ಥಿಕ ಕೊರತೆಯೂ ಉಂಟಾಗುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಆವರಿಸುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಆದಷ್ಟು ಕಪ್ಪು ಬಣ್ಣವನ್ನು ಬಳಸದಿರಲು ಸೂಚನೆ ನೀಡಲಾಗುತ್ತದೆ.
ಇದನ್ನೂ ಓದಿ: ಕುಜದೋಷ ಕಡಿಮೆ ಮಾಡಲು ಈ ವಸ್ತುಗಳನ್ನು ದಾನ ಮಾಡಿ
ದೇಹದಲ್ಲಿ ಶಕ್ತಿಕೇಂದ್ರಕ್ಕೆ ಸಂಬಂಧಿಸಿದ ಬಣ್ಣಗಳು
ಪ್ರತಿಯೊಂದು ಬಣ್ಣವು ದೇಹದಲ್ಲಿ ನಿರ್ದಿಷ್ಟ ಚಕ್ರ ಅಥವಾ ಶಕ್ತಿ ಕೇಂದ್ರಕ್ಕೆ ಸಂಬಂಧಿಸಿದೆ. ಉದಾಹರಣೆಗೆ, ಕೆಂಪು ಬಣ್ಣವು ಮೂಲ ಚಕ್ರದೊಂದಿಗೆ ಸಂಪರ್ಕಿಸುತ್ತದೆ. ಇದು ಬೆನ್ನುಮೂಳೆಯ ತಳದಲ್ಲಿ ನೆಲೆಗೊಂಡಿದೆ. ಕಿತ್ತಳೆ ಬಣ್ಣವು ಹೊಟ್ಟೆಯ ಕೆಳಭಾಗದಲ್ಲಿದೆ ಮತ್ತು ಸೃಜನಶೀಲತೆ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ. ಹಳದಿ ಬಣ್ಣವು ಹೊಟ್ಟೆಯ ಮೇಲ್ಭಾಗದಲ್ಲಿದೆ ಮತ್ತು ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಉತ್ತೇಜಿಸುತ್ತದೆ. ಹಸಿರು ಬಣ್ಣವು ಹೃದಯ ಚಕ್ರದೊಂದಿಗೆ ಸಂಪರ್ಕಿಸುತ್ತದೆ. ಇದು ಎದೆಯ ಮಧ್ಯಭಾಗದಲ್ಲಿದೆ ಮತ್ತು ಪ್ರೀತಿ ಮತ್ತು ಸಹಾನುಭೂತಿಯನ್ನು ಉತ್ತೇಜಿಸುತ್ತದೆ.
ನೀಲಿ ಬಣ್ಣವು ಗಂಟಲಿನ ಚಕ್ರದೊಂದಿಗೆ ಸಂಪರ್ಕಿಸುತ್ತದೆ. ಇದು ಗಂಟಲಿನ ಪ್ರದೇಶದಲ್ಲಿದೆ ಮತ್ತು ಸಂವಹನ ಮತ್ತು ಸ್ವಯಂ ಅಭಿವ್ಯಕ್ತಿಯನ್ನು ಹೆಚ್ಚಿಸುತ್ತದೆ. ಇಂಡಿಗೊ ಬಣ್ಣವು ಮೂರನೇ ಕಣ್ಣಿನ ಚಕ್ರದೊಂದಿಗೆ ಸಂಪರ್ಕಿಸುತ್ತದೆ. ಇದು ಹಣೆಯ ಮಧ್ಯಭಾಗದಲ್ಲಿದೆ ಮತ್ತು ಅಂತಃಪ್ರಜ್ಞೆ ಮತ್ತು ಆಧ್ಯಾತ್ಮಿಕ ಅರಿವನ್ನು ಹೆಚ್ಚಿಸುತ್ತದೆ. ನೇರಳೆ ಬಣ್ಣವು ಕಿರೀಟ ಚಕ್ರದೊಂದಿಗೆ ಸಂಪರ್ಕಿಸುತ್ತದೆ. ಇದು ತಲೆಯ ಮೇಲ್ಭಾಗದಲ್ಲಿದೆ ಮತ್ತು ಆಧ್ಯಾತ್ಮಿಕ ಸಂಪರ್ಕ ಮತ್ತು ಜ್ಞಾನೋದಯವನ್ನು ಉತ್ತೇಜಿಸುತ್ತದೆ.
ಹೀಗೆ ಜ್ಯೋತಿಷ್ಯಶಾಸ್ತ್ರಕ್ಕೂ ಬಣ್ಣಗಳಿಗೂ ಅವಿನಾಭಾವ ಸಂಬಂಧವಿದೆ. ತಮ್ಮ ಜನ್ಮದಿನಾಂಕಕ್ಕೆ ಸೂಕ್ತವಾಗಿ ಹೊಂದುವ ಬಣ್ಣಗಳನ್ನು ಬಳಸಿದರೆ ಜೀವನದಲ್ಲಿ ಧನಾತ್ಮಕ ಬದಲಾವಣೆ ಕಂಡುಬರುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
