Mahalaya Amavasya 2023: ಮಹಾಲಯಕ್ಕೂ ಮಹಾಭಾರತಕ್ಕೂ ಉಂಟು ನಂಟು; ಮಹಾಲಯದ ಮಹತ್ವ, ಧಾರ್ಮಿಕ ಹಿನ್ನೆಲೆಯಿದು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Mahalaya Amavasya 2023: ಮಹಾಲಯಕ್ಕೂ ಮಹಾಭಾರತಕ್ಕೂ ಉಂಟು ನಂಟು; ಮಹಾಲಯದ ಮಹತ್ವ, ಧಾರ್ಮಿಕ ಹಿನ್ನೆಲೆಯಿದು

Mahalaya Amavasya 2023: ಮಹಾಲಯಕ್ಕೂ ಮಹಾಭಾರತಕ್ಕೂ ಉಂಟು ನಂಟು; ಮಹಾಲಯದ ಮಹತ್ವ, ಧಾರ್ಮಿಕ ಹಿನ್ನೆಲೆಯಿದು

ಮಹಾಲಯ ಶ್ರಾದ್ಧದಲ್ಲಿ ಪೂರ್ವಜರು ನಮ್ಮನ್ನು ಆಶೀರ್ವದಿಸಲು ಪಿತೃಪಕ್ಷದಲ್ಲಿ ಯಮರಾಜನು ಅವಕಾಶ ನೀಡುತ್ತಾನೆಂದು ಪುರಾಣಗಳಲ್ಲಿ ಹೇಳಲಾಗಿದೆ. ಅದರಂತೆ ಬರೀ ಪಿತೃಗಳಲ್ಲ, ದೇವತೆಗಳೂ, ಸಕಲ ಜೀವಿಗಳಿಗೂ ನಾವು ನೀಡುವ ಭೋಜನ, ಅನ್ನದಾನ, ತಲುಪುತ್ತದೆ. ಪಿತೃಗಳು ಸಂತುಷ್ಟಗೊಂಡರೆ ಅವರ ಆಶೀರ್ವಾದದಿಂದ ದುಃಖಗಳು ದೂರಾಗಿ ಧನ, ಧಾನ್ಯ ಪ್ರಾಪ್ತಿಯಾಗುತ್ತದೆ. ಬರಹ: ಎಚ್‌. ಸತೀಶ್‌

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಮಹಾ-ಎಂದರೆ ದೊಡ್ಡ, ಲಯ ಎಂದರೆ- ನಾಶ. ಸಮುದ್ರಮಥನದ ಸಂದರ್ಭದಲ್ಲಿ ಬಹಳಷ್ಟು ಜನ ಋಷಿಗಳು, ದೇವತೆಗಳು ರಾಕ್ಷಸರಿಂದ ಸಂಹರಿಸಲ್ಪಟ್ಟರು. ಈ ಋಷಿಗಳು ನಮ್ಮ ಪೂರ್ವಜರಾಗಿದ್ದುದರಿಂದ ಅವರ ನೆನಪಲ್ಲಿ ಮಹಾಲಯವನ್ನು ಆಚರಿಸುತ್ತೇವೆ. ಅದುವೇ ಪಿತೃಪಕ್ಷ, ಮಹಾಲಯ ಶ್ರಾದ್ಧ. ಪೂರ್ವಜರು ನಮ್ಮನ್ನು ಆಶೀರ್ವದಿಸಲು ಪಿತೃಪಕ್ಷದಲ್ಲಿ ಯಮರಾಜನು ಅವಕಾಶ ನೀಡುತ್ತಾನೆಂದು ಪುರಾಣಗಳಲ್ಲಿ ಹೇಳಲಾಗಿದೆ. ಅದರಂತೆ ಬರೀ ಪಿತೃಗಳಲ್ಲ, ದೇವತೆಗಳೂ, ಸಕಲ ಜೀವಿಗಳಿಗೂ ನಾವು ನೀಡುವ ಭೋಜನ, ಅನ್ನದಾನ, ತಲುಪುತ್ತದೆ. ಪಿತೃಗಳು ಸಂತುಷ್ಟಗೊಂಡರೆ ಅವರ ಆಶೀರ್ವಾದದಿಂದ ದುಃಖಗಳು ದೂರಾಗಿ ಧನ, ಧಾನ್ಯ ಪ್ರಾಪ್ತಿಯಾಗುತ್ತದೆ. ಯಾವ ರೀತಿ ಪಿತೃಪಕ್ಷವನ್ನು ಆಚರಿಸಬೇಕು, ಅದರಿಂದ ಏನು ಪ್ರಯೋಜನವೆಂದು ಹಲವಾರು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.

ಬ್ರಹ್ಮಪುರಾಣದಲ್ಲಿ ತಿಳಿಸಿರುವಂತೆ ಎಲ್ಲಾ ಪಿತೃಗಳನ್ನು ತನ್ನ ಪಾಶದಿಂದ ಮುಕ್ತಗೊಳಿಸುತ್ತಾನೆ. ಕಾರಣ ತನ್ನ ಪರಿವಾರದವರು ಮಾಡುವ ಶ್ರಾದ್ಧದ ಭೋಜನವನ್ನು ಆಘ್ರಾಣಿಸಿ ಬರಲೆಂಬುದು ಇದರ ಉದ್ದೇಶ. ಆದರೆ ಈ ಮಾಸದಲ್ಲಿ ಶ್ರಾದ್ಧ ಮಾಡದೆ ಇರುವವರ ಪಿತೃಗಳು ಅತೃಪ್ತರಾಗಿ ಕೋಪದಿಂದ ಹಿಂದಿರುಗುತ್ತಾರೆ. ಇದು ಪಿತೃಶಾಪಕ್ಕೆ ದಾರಿಯಾಗುತ್ತದೆ.

ಯಮಸ್ಮೃತಿಯ ಪ್ರಕಾರ ಶ್ರಾದ್ಧ ಮಾಡುವಾಗ ತಂದೆ, ತಾತ, ಮುತ್ತಾತರನ್ನು ಸ್ಮರಿಸಿ ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸುವುದರಿಂದ ಪಿತೃಗಳು ಸಂತುಷ್ಟರಾಗಿ ಹರಸುತ್ತಾರೆ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ.

ವಿಷ್ಣು ಪುರಾಣದ ಪ್ರಕಾರ ಶ್ರಾದ್ಧ ಮಾಡುವುದರಿಂದ ಕೇವಲ ಪಿತೃಗಣವಲ್ಲದೆ ಬ್ರಹ್ಮ, ಇಂದ್ರ, ಸೂರ್ಯ, ಅಗ್ನಿ, ವಾಯು, ಋಷಿ, ಮನುಷ್ಯ, ಹಾಗು ಪಶು ಪಕ್ಷಿಗಳೂ ಕೂಡ ತೃಪ್ತಿ ಪಡೆಯುತ್ತವೆ. ಹೀಗಾಗಿ ಎಲ್ಲಾ ದೇವತೆಗಳ ಹಾಗು ಜೀವ ಸಂಕುಲಗಳ ಆಶೀರ್ವಾದವೂ ಲಭಿಸುತ್ತದೆ ಎಂದು ಉಲ್ಲೇಖಿತವಾಗಿದೆ.

ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ ಶ್ರದ್ಧಾ ಪೂರ್ವಕವಾಗಿ ಶುದ್ಧ ಮನಸ್ಸಿನಿಂದ ಶ್ರಾದ್ಧವನ್ನು ಮಾಡಬೇಕು. ಹೀಗೆ ಮಾಡಿದರೆ ಪಿತೃಗಣವು ಆಯುಷ್ಯ, ಪುತ್ರಸಂತಾನ, ಯಶಸ್ಸು, ಮೋಕ್ಷ, ಸ್ವರ್ಗ, ಕೀರ್ತಿ, ಬಲ, ವೈಭವ, ಧನ, ಧಾನ್ಯಗಳು ವೃದ್ಧಿಯಾಗಲೆಂದು ಆಶೀರ್ವದಿಸುತ್ತಾರೆ.

ಪಂಚಮಹಾ ಅಪರ ಪಕ್ಷ

ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯವರೆಗಿನ ಹದಿನೈದು ದಿನವನ್ನು ಪಕ್ಷಮಾಸ, ಪಂಚಮಹಾ ಅಪರ ಪಕ್ಷವೆಂದೂ ಕರೆಯುತ್ತಾರೆ. ಈ ಸಮಯದಲ್ಲಿ ಸೂರ್ಯನು ಕನ್ಯಾರಾಶಿಯಲ್ಲಿರುತ್ತಾನೆ. ಆ ಸಮಯದಲ್ಲಿ ಸಂಕಲ್ಪ ಮಾಡುವಾಗ ಕನ್ಯಾಯನೆ ಎಂದು ಹೇಳಬೇಕು. ಪಕ್ಷಮಾಸ ಆರಂಭವಾದ ನಂತರ ಮಧ್ಯದಲ್ಲಿ ಸೂರ್ಯನು ಕನ್ಯಾರಾಶಿಯಿಂದ ತುಲಾರಾಶಿಯನ್ನು ಪ್ರವೇಶ ಮಾಡಿದರೆ ಅಮಾವಾಸ್ಯೆ ಮುಗಿಯುವವರೆಗೂ ಸಂಕಲ್ಪ ಮಾಡುವಾಗ ಕನ್ಯಾಗತೆ ಎಂದು ಸಂಕಲ್ಪ ಹೇಳಬೇಕು. ಪಕ್ಷಮಾಸದ ವಿಶೇಷವನ್ನು ಎಲ್ಲರೂ ತಿಳಿಯಲೇಬೇಕು. ಅದೇನೆಂದರೆ ಭಾದ್ರಪದ ಶುದ್ಧ ಚತುರ್ದಶಿಯಿಂದಲೇ ಪಿತೃಗಳ ಆತ್ಮವು (ಜೀವ) ಭೂಲೋಕದ ಕಡೆ ಬರತೊಡಗುತ್ತದೆ. ಪಿತೃಗಳ ಆತ್ಮವು ಹಸಿವು, ಬಾಯಾರಿಕೆಗಳಿಂದ ತನ್ನ ಮಕ್ಕಳ ಸುತ್ತಾ ಬಹಳ ಆಸೆ ಹೊತ್ತು ಸುತ್ತುತ್ತವೆ. ತಾವು ಹೆತ್ತು ಬೆಳಸಿದ ಮಕ್ಕಳು ಶ್ರಾದ್ಧ, ತರ್ಪಣಾದಿಗಳನ್ನು ನೇರವೇರಿಸಿ, ಬ್ರಾಹ್ಮಣ ಭೋಜನದ ಮೂಲಕ ತಮ್ಮನ್ನು ತೃಪ್ತಿಪಡಿಸುತ್ತಾರೆ ಎಂದು ನಂಬಿರುತ್ತಾರೆ. ಮಕ್ಕಳಾದವರು ಶ್ರದ್ಧೆಯಿಂದ ಯಾವುದಕ್ಕೂ ಚ್ಯುತಿ ಬರದಂತೆ ಪಿತೃಶ್ರಾದ್ಧವನ್ನು ಮಾಡಿದರೆ, ಅವರಿತ್ತ ಅನ್ನಾದಿಗಳು ಪಿತೃಗಳಿಗೆ ಸುಖರೂಪವಾದ ಆಹಾರವಾಗಿ ದೊರೆತು ಆನಂದವನ್ನು ಉಂಟು ಮಾಡುತ್ತದೆ. ಇದರಿಂದ ಕತೃಗಳಿಗೆ ಪಾರಮಾರ್ಥಿಕ ಫಲ, ಐಹಿಕ ಫಲಗಳು ಲಭಿಸುತ್ತದೆ. ಆರೋಗ್ಯ, ಆಯುಷ್ಯ, ಸೌಂದರ್ಯ, ಸಂತಾನ, ಪಾಂಡಿತ್ಯ, ಪರಬ್ರಹ್ಮ ಪ್ರಾಪ್ತಿ, ರಾಜ್ಯ, ಐಶ್ವರ್ಯಾದಿಗಳು ಪ್ರಾಪ್ತಿಯಾಗಿ ಮೋಕ್ಷಕ್ಕೆ ಸಾಧನವಾಗುವಂತೆ ದಾರಿಯನ್ನು ನೀಡುತ್ತಾರೆ.

ಪಿತೃಪಕ್ಷಕ್ಕೆ ಸಂಬಂಧಿಸಿದಂತೆ ಒಂದು ಕಥೆ

ಮಹಾಭಾರತ ಯುದ್ಧದಲ್ಲಿ ಕರ್ಣನು ವೀರಸ್ವರ್ಗವನ್ನು ಸೇರಿದನು. ದಾನಕ್ಕೆ ಹೆಸರಾಗಿದ್ದ ಕರ್ಣನಿಗೆ ಹಸಿವು ಎಂದಾಗ ಇಂದ್ರನು ಬಂಗಾರವನ್ನು ಆ¨sರಣಗಳನ್ನು ನೀಡತೊಡಗಿದನು. ಹಸಿವನ್ನು ತಾಳಲಾರದೆ ಕರ್ಣನು ಇಂದ್ರನ್ನು ಕರಿತು ನನಗೆ ಹಸಿವು ಎಂದರೆ ಆಹಾರ ನೀಡದೆ ಬಂಗಾರ, ಆಭರಣಗಳನ್ನು ಏಕೆ ನೀಡುತ್ತಿದ್ದೀ? ಎಂದು ಪ್ರಶ್ನಿಸಿದ. ಆಗ ದೇವೇಂದ್ರನು ಕರ್ಣ ನೀನು ಭೂಲೋಕದಲ್ಲಿ ಅನ್ನದಾನ ಮಾಡದೆ ಒಡವೆಗಳನ್ನು, ಬಂಗಾರವನ್ನು ದಾನ ಮಾಡಿದೆ. ಸತ್ತ ನಿನ್ನ ಪಿತೃಗಳಿಗೆ ಶ್ರಾದ್ಧ ಮಾಡಿ ಅನ್ನದಾನ ಮಾಡಿಲ್ಲ. ಅದರಿಂದಾಗಿ ನಿನಗೆ ಅನ್ನ ದೊರೆಯದು ಎಂದನು. ಆಗ ಕರ್ಣನು ನನಗೆ ನನ್ನ ಪಿತೃಗಳು ಯಾರೆಂದು ತಿಳಿದಿರಲಿಲ್ಲ ಎಂದನು. ಅದಕ್ಕೆ ಇಂದ್ರನು ನೀನು ಹದಿನೈದು ದಿನಗಳ ಕಾಲ ಭೂಲೋಕಕ್ಕೆ ಹೋಗಿ ಅಲ್ಲಿ ನಿನ್ನ ಪಿತೃಗಳಿಗೆ ಶ್ರಾದ್ಧವನ್ನು ಮಾಡಿ ಅನ್ನದಾನ ಮಾಡಿ ಬರುವಂತೆ ತಿಳಿಸಿದನು. ಅದನ್ನೇ ಪಿತೃಪಕ್ಷ ಎನ್ನುತ್ತಾರೆ.

ಪಿತೃಕಾರ್ಯಕ್ಕೆ ಶ್ರೇಷ್ಠವಾದ ತೀರ್ಥಕ್ಷೇತ್ರಗಳು

ಅಯೋಧ್ಯ, ಮಥುರಾ, ಮಾಯಾ, ಕಾಶಿ, ಕಾಂಚಿ, ಅವಂತೀ, ಪುರಿ, ದ್ವಾರಕಾ ನಗರಗಳೂ, ವಿಶ್ವೇಶ್ವರ, ಮಾಧವ, ದಂಡಪಾಣಿ, ಭೈರವ ಮುಂತಾದವರು ಆ ಕ್ಷೇತ್ರದ ಅಧಿದೇವತೆಗಳೂ, ಗಂಗಾ, ಭವಾನೀ, ಮಣಿಕರ್ಣಿಕಾ ಮುಂತಾದ ಪುಣ್ಯನದಿಗಳೂ, ಗೋಕರ್ಣ, ರಾಮಸೇತು, ಪ್ರಯಾಗ, ಕಾಶ್ಮೀರ ಸೋಮೇಶ್ವರ, ರುದ್ರಪ್ರಯಾಗ, ಶ್ರೀರಂಗ, ಕೇದಾರ ಮತ್ತು ಕುರುಕ್ಷೇತ್ರ ಇವುಗಳನ್ನು ಮನದಲ್ಲಿ ನೆನದರೆ ಸಾಕು ಆಸ್ಥಳದಲ್ಲಿ ಶ್ರಾದ್ಧ ಮಾಡಿದ ಪುಣ್ಯ ಲಭಿಸುವುದೆಂದು ಪುರಾಣಗಳಲ್ಲಿ ಹೇಳಲ್ಪಟ್ಟಿದೆ.

ಗಮನಿಸಿ: ಎಲ್ಲಾ ಪಂಗಡದವರು ಶ್ರಾದ್ಧವನ್ನು ಮಾಡಲಾಗುವುದಿಲ್ಲ. ತಮ್ಮದೇ ಆದ ಆಚಾರ ವಿಚಾರಗಳು ಅವರಿಗೆ ಇರುತ್ತದೆ. ಅದರ ಅನ್ವಯ ನಡೆದುಕೊಳ್ಳುವುದು ಬಹುಮುಖ್ಯ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.