Ramayana: ವಾಲ್ಮೀಕಿ ಯಾರು? ಅವರ ಹಿನ್ನೆಲೆಯೇನು? ರಾಮಾಯಣದ ಬಗ್ಗೆ ನೀವು ತಿಳಿಯಲೇಬೇಕಾದ ಅಪರೂಪದ ಸಂಗತಿಗಳು ಇಲ್ಲಿವೆ
ರಾಮಾಯಣ ಮಹಾಕಾವ್ಯವು ವಾಲ್ಮೀಕಿ ರಾಮಾಯಣ ಎಂದೇ ಖ್ಯಾತಿ ಪಡೆದಿದೆ. ವಾಲ್ಮೀಕಿ ಮಹರ್ಷಿಗಳು ರಾಮಾಯಣ ಗ್ರಂಥವನ್ನು ಬರೆದಿದ್ದಾರೆ. ಹಾಗಾದರೆ ಈ ವಾಲ್ಮೀಕಿ ಮಹರ್ಷಿ ಯಾರು? ಅವರು ರಾಮಾಯಣ ಬರೆಯಲು ಕಾರಣವೇನು? ರಾಮಾಯಣ ಗ್ರಂಥದ ಮಹತ್ವವೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ರಾಮಾಯಣವು ಹಿಂದೂಗಳ ಪ್ರಮುಖ ಧರ್ಮಗ್ರಂಥ. ರಾಮಾಯಣವನ್ನು ಬರೆದವರು ವಾಲ್ಮೀಕಿ ಮಹರ್ಷಿಗಳು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ವಾಲ್ಮೀಕಿ ಯಾರು ಅವರ ಹಿನ್ನೆಲೆಯೇನು, ವಾಲ್ಮೀಕಿ ರಾಮಾಯಣ ಗ್ರಂಥ ರಚಿಸಲು ಕಾರಣವೇನು? ಈ ಬಗ್ಗೆ ಹಲವರಿಗೆ ತಿಳಿದಿಲ್ಲ. ವಾಲ್ಮೀಕಿ ರಾಮಾಯಣ ಓದುವ ಮೊದಲು ಅವರ ಹಿನ್ನೆಲೆ ತಿಳಿಯುವುದು ಅತ್ಯವಶ್ಯಕ.
ವಾಲ್ಮೀಕಿ ಯಾರು?
ಬ್ರಹ್ಮದೇವನು ಮೊದ ಮೊದಲು ಸೃಷ್ಟಿಸಿದ ಋಷಿಗಳಲ್ಲಿ ಪ್ರಾಚೇತಸ ಕೂಡ ಒಬ್ಬ. ಅವನ ಮಗನಾಗಿ ವಾಲ್ಮೀಕಿ ಹುಟ್ಟುತ್ತಾರೆ ಎಂಬುದು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ರಾಮಾಯಣದಂತಹ ಮಹಾಕಾವ್ಯ ರಚಿಸಿದ ವಾಲ್ಮೀಕಿ ಹುಟ್ಟಿನಿಂದ ಉತ್ತಮನೇ ಆಗಿದ್ದರೂ ಬೆಳೆದು ಯುವಕನಾದ ಮೇಲೆ ತಪ್ಪು ದಾರಿ ಹಿಡಿಯುತ್ತಾರೆ. ಕಳ್ಳರು, ದುರ್ಜನರ ಸಹವಾಸ ಮಾಡಿ ದುಮಾರ್ಗದಲ್ಲಿ ನಡೆಯುವ ಅವರಿಗೆ ಖುಷಿಯೊಬ್ಬರು (ನಾರದರು) ಮಂತ್ರೋಪದೇಶ ಮಾಡುತ್ತಾರೆ. ವಾಲ್ಮೀಕಿ ಅದನ್ನು ಧ್ಯಾನಿಸುತ್ತಾ ನಿಶ್ಚಲರಾಗಿ, ಏಕಾಗ್ರಚಿತ್ತರಾಗಿ ಹಲವು ವರ್ಷಗಳ ಕಾಲ ಕಳೆಯುತ್ತಾರೆ. ಆಗ ಅವರ ಮೇಲೆ ಹುತ್ತವೊಂದು ಬೆಳೆಯುತ್ತದೆ. ಸ್ವಲ್ಪ ಸಮಯದ ನಂತರ ಆ ಹುತ್ತ ಜನರ ಕಣ್ಣಿಗೆ ಬೀಳುತ್ತದೆ. ವಲ್ಮೀಕ (ಹುತ್ತ)ದಲ್ಲಿ ಹುಟ್ಟಿದ ಕಾರಣಕ್ಕೆ ಅವರಿಗೆ ವಾಲ್ಮೀಕಿ ಎಂಬ ಹೆಸರು ಬಂತು ಎಂದು ಒಂದು ಕಡೆ ಉಲ್ಲೇಖವಾಗಿದೆ.
ರಾಮಾಯಣದ ಹುಟ್ಟಿನ ಹಿಂದಿದೆ ಹಲವು ಕಥೆ
ವಾಲ್ಮೀಕಿ ಮುನಿಯು ತಮಸಾ ನದಿಯ ದಡದಲ್ಲಿದ್ದಾಗ ಅಲ್ಲಿಗೆ ನಾರದರು ಬರುತ್ತಾರೆ. ಆಗ ಅವರು ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳಿಗೆ ವಿವರಿಸುತ್ತಾರೆ. ಅದನ್ನು ವಾಲ್ಮೀಕಿ ಶ್ಲೋಕರೂಪದಲ್ಲಿ ಪ್ರಸುತ ಪಡಿಸುತ್ತಾರೆ ಎಂಬ ಮಾತು ಇದೆ. ಇದರೊಂದಿಗೆ ತಮಸಾ ನದಿಯ ದಡದಲ್ಲಿ ಸಂತೋಷದಿಂದ ಹಾರಾಡುತ್ತಿದ್ದ ಜೋಡಿ ಕ್ರೌಂಚ ಪಕ್ಷಿಗಳಿಗೆ ಬೇಡನೊಬ್ಬ ಬಾಣ ಹೂಡುತ್ತಾನೆ. ಆಗ ಗಂಡು ಪಕ್ಷಿ ಪ್ರಾಣ ಕಳೆದುಕೊಳ್ಳುತ್ತದೆ. ಹೆಣ್ಣು ಕ್ರೌಂಚ ಪಕ್ಷಿಯ ನೋವು ಕಂಡ ವಾಲ್ಮೀಕಿ ಮಹರ್ಷಿ ಬೇಡನಿಗೆ ಶೋಕದಿಂದ ಶಾಪ ಕೊಡಲು ಮುಂದಾಗುತ್ತಾರೆ, ಶಾಪವನ್ನು ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ. ಇದು ರಾಮಾಯಣ ರಚಿಸಲು ಮೂಲವಾಯಿತು ಎಂಬ ಮಾತು ಇದೆ.
ರಾಮಾಯಣವನ್ನು ಛಂದಸ್ಸಿನ ರೂಪದಲ್ಲಿ ಬರೆಯುವ ವಾಲ್ಮೀಕಿ ಅದನ್ನು ತನ್ನ ಇಬ್ಬರು ಶಿಷ್ಯಂದಿರಿಗೆ ಹಾಡಲು ಹೇಳಿಕೊಡುತ್ತಾರೆ. ಅದನ್ನು ಕೇಳಿದ ಖುಷಿಗಳಿಗೆಲ್ಲಾ ಸಂತಸವಾಗುತ್ತದೆ. ಅವರು ಹಾಡಿದ ಹುಡುಗರನ್ನೂ ಹಾಗೂ ಕೃತಿ ಕರ್ತೃವನ್ನು ಪ್ರಶಂಸಿಸುತ್ತಾರೆ.
ರಾಮಾಯಾಣದ ಎರಡನೇ ಕಾಂಡದಲ್ಲಿ ವಾಲ್ಮೀಕಿ ಆಶ್ರಮದ ವರ್ಣನೆ ಇದೆ. ವನವಾಸಕ್ಕೆ ಹೊರಡುವಾಗ ರಾಮ ವಾಲ್ಮೀಕಿ ಮಹರ್ಷಿಗಳ ಆಶ್ರಮವನ್ನು ದಾಟಿ ಮುಂದಕ್ಕೆ ಹೋಗುತ್ತಾನೆ. ಉತ್ತರ ಕಾಂಡದ ಪ್ರಕಾರ ವಾಲ್ಮೀಕಿ ಸೀತೆಯ ಯೋಗಕ್ಷೇಮ ನೋಡಿಕೊಂಡಿದ್ದರು ಎಂಬ ವಿವರವೂ ಇದೆ. ಸೀತೆಯು ಲವ-ಕುಶರನ್ನು ಹೆರುವ ಸಮಯದಲ್ಲಿ ವಾಲ್ಮೀಕಿ ನೆರವಾದನೆಂದೂ, ನಂತರ ಈ ಅವಳಿ ಮಕ್ಕಳಿಗೆ ಬಿಲ್ವಿದ್ಯೆಯ ಜೊತೆಗೆ ಸಾಹಿತ್ಯ ಸಂಗೀತ ಕೂಡ ಕಲಿಸಿದನೆಂದು ಹೇಳಲಾಗುತ್ತದೆ. ನಂತರ ಲವ-ಕುಶರನ್ನು ರಾಮನ ಆಸ್ಥಾನಕ್ಕೆ ಕಳುಹಿಸುತ್ತಾರೆ. ಹೀಗೆ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ವಾಲ್ಮೀಯ ಬಗ್ಗೆ ಮಾತುಗಳು ಕೇಳಿ ಬರುತ್ತವೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದ ಬಾಲರಾಮನ ಮುಖ ಅನಾವರಣ
ಭಾರತದಲ್ಲಿ ರಾಮಾಯಣ ಗ್ರಂಥದ ಮಹತ್ವ
ರಾಮಾಯಣ ತುಂಬಾ ಜನಪ್ರಿಯವಾದ ಕಾವ್ಯ. ಭಾರತದಲ್ಲಿ ಹಲವರು ಪ್ರತಿದಿನ ಪಾರಾಯಣ ಗ್ರಂಥವಾಗಿ ಇದನ್ನು ಪಠಿಸುತ್ತಾರೆ. ವೇದ ಉಪನಿಷತ್ತುಗಳ ಜೊತೆಗೆ ರಾಮಾಯಣ, ಮಹಾಭಾರತ ಕೂಡ ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿದೆ. ರಾಮಾಯಣದ ಕಥೆ ಹಾಗೂ ಪಾತ್ರಗಳು ಇಂದಿಗೂ ಬದುಕಿನ ಪಾಠವನ್ನು ಹೇಳುವಂತಿದ್ದವು. ಮಹಾಭಾರತಕ್ಕೆ ಹೋಲಿಸಿದರೆ ರಾಮಾಯಣದಲ್ಲೇ ಹೆಚ್ಚು ಭಕ್ತಿಭಾವ ತುಂಬಿದೆ. ಮಹಾಭಾರತದಲ್ಲಿನ ಭಗವದ್ಗೀತೆಯ ಪ್ರಕರಣ ಹೊರತು ಪಡಿಸಿ ಅದರಲ್ಲಿನ ಇನ್ನಾವುದೇ ಭಾಗಕ್ಕಿಂತಲೂ ಹೆಚ್ಚು ರಾಮಾಯಣದ ಸಂಗತಿಗಳಲ್ಲಿ ಗಂಭೀರ ಭಕ್ತಿಭಾವ ಉಂಟಾಗುತ್ತದೆ. ರಾಮಾಯಣದಂತೆಯೇ ಗೀತ ಕೂಡ ಹಿಂದೂ ಜನಾಂಗಕ್ಕೆ ನಿರಂತರವಾಗಿ ಸ್ಫೂರ್ತಿ ಮೂಲವಾಗಿ ಜೀವಗೊಂಡಿದೆ. ರಾಮಭಕ್ತಿ, ಕೃಷ್ಟಭಕ್ತಿ ಈ ಎರಡೂ ಬೇರೆ ಬೇರೆ ಬಗೆಯ ಭಕ್ತಿಗಳು. ರಾಮನನು ಕುರಿತುದು ಹೆಚ್ಚು ನಿಷ್ಠೆಯದು. ಕೃಷ್ಣನಿಗೆ ಸಂಬಂಧಿಸಿದವುಗಳಿಗಿಂತ ರಾಮಮಸಂಬಂಧದ ಮೌಲ್ಯಗಳು ಹೆಚ್ಚು ನಯಸಂಸ್ಕಾರವುಳ್ಳವು. ರಾಮಾನಿಗೂ ರಾಮಾಯಾಣದ ಇತರ ಪಾತ್ರಗಳಿಗೂ ಸಂಬಂಧಿಸಿದ ಕ್ರಿಯೆ, ಮಾತುಗಳ ನೆನಪು ಪುರುಷರು ಹಾಗೂ ಮಹಿಳೆಯರಿಗೆ ಹಲವು ಹೊಸ ಬಗೆಯ ಸ್ವಾಂತನ ತಂದುಕೊಡುವಂತಿದೆ. ಇದು ನಮ್ಮಲ್ಲಿ ಹೊಸ ಹುರುಪು ಮೂಡಿಸುವುದು ಸುಳ್ಳಲ್ಲ. ರಾಮ, ಸೀತೆ, ಲಕ್ಷಣ, ಭರತ, ಹನುಮಂತ ಬೇರೆ ಬೇರೆ ರೀತಿಯಲ್ಲಿ ವಿಶೇಷ ಬಗೆಯ ಗುಣಗಳೊಡನೆ ಕಂಡು ಬಂದು ಸ್ತ್ರೀ ಪುರುಷರಿಗೆ ಆದರ್ಶ ವ್ಯಕ್ತಿಗಳಾಗಿ ಕಾಣುತ್ತಾರೆ.
ರಾಮಾಯಣದ ಇನ್ನೊಂದು ಲಕ್ಷಣ ಯುಗಯುಗಗಳಲ್ಲಿ ಕವಿಗಳಿಗೂ ಇತರ ಸಾಹಿತಿಗಳಿಗೂ ತನ್ನ ಕವಿತಾವೈಭವದಿಂದ ನೀಡಿರುವ ಅದರ ಸ್ಫೂರ್ತಿ. ಆಯಾ ಕೃತಿಕಾರರ ಕಲ್ಪನಾಶಕ್ತಿ, ಉದ್ದೇಶ, ಅರ್ಥಗ್ರಹಣ, ಪರಿಶೀಲನೆಗೆ ತಕ್ಕಂತೆ ರಾಮಾಯಣದ ಕತೆಯ ಹಲವು ವಿಚಿತ್ರ ರೂಪಗಳೂ ಬಳಕೆಯಲ್ಲಿವೆ. ಕೆಲವರಿಗೆ ಅದು ಯಾವುದೊ ಒಂದು ಶುದ್ಧ ಕೇವಲ ಸಂಕೇತಾರ್ಥವನ್ನು ಕೊಡುವಂತಿದೆ. ಭಾರತದಲ್ಲಿ ರಾಮಾಯಣವನ್ನು ಆದರದಿಂದ ಜನ ಕೇಳುತ್ತಾರೆ, ಓದುತ್ತಾರೆ. ರಾಮಾಯಣದಷ್ಟು ಮಹತ್ವ ಮತ್ತೊಂದು ಕಾವ್ಯಾಕ್ಕಿಲ್ಲ. ಹಿಂದೂಗಳಿಗೆ ಇದು ಪವಿತ್ರ ಗ್ರಂಥ, ಇದನ್ನು ಓದುವುದು, ಹೇಳುವುದು ಒಂದು ಪುಣ್ಯಕಾರ್ಯ ಎಂಬ ಭಾವನೆ ನಮ್ಮ ಜನರಲ್ಲಿದೆ.
ವಾಲ್ಮೀಕಿ ಸೌಹಾರ್ದದಿಂದ ಎಲ್ಲವನ್ನೂ ನೋಡುತ್ತಿದ್ದವರು. ಮಾನವ ದೃಷ್ಟಿಯಿಂದ ಕತೆಗೆ ಸಂಬಂಧಿಸಿದ ಘಟನೆಗಳನ್ನು ನಿರೀಕ್ಷಿಸಬಲ್ಲವನಾಗಿದ್ದವರು. ಯಾವ ಮೌಲ್ಯಗಳು ಪರಿಶೀಲನೆಗೆ ಬರುತ್ತಿವೆ ಅಥವಾ ಪ್ರಕಾಶಗೊಳ್ಳುತ್ತವೆ ಎಂಬುದನ್ನು ಅರಿಯವಲ್ಲವರು. ʼನಾ ನೃಷಿಃ ಕುರುತೇ ಕಾವ್ಯಂʼ - ಋಷಿಯಲ್ಲದವನು ಕಾವ್ಯವನ್ನು ನಿರ್ಮಾಣ ಮಾಡಲಾರ - ಎಂಬುದು ಕಾವ್ಯವಿಮರ್ಶೆಯಲ್ಲಿ ಎಲ್ಲರ ಬಳಕೆಗೂ ಬಂದಿರುವ ಮಾತು. ಅದು ವಾಲ್ಮೀಕಿಗೆ ಪರಮ ಅರ್ಥವಂತಿಕೆಯಲ್ಲಿ ಒಪ್ಪುತ್ತದೆ. ತನ್ನ ಕಾಲದ ಜನಜೀವನದಲ್ಲಿ ಯಾವುದನ್ನು ಕವಿ ಅತ್ಯುತ್ತಮವೆಂದು ಭಾವಿಸಿದ್ದನೊ ಅದನ್ನೆಲ್ಲ ರಾಮಾಯಣ ಪ್ರತಿಫಲಿಸುತ್ತದೆ.
(ಆಧಾರ: ವಿಸೀ ಅವರ ವಾಲ್ಮೀಕಿ ರಾಮಾಯಣ ಗ್ರಂಥ ಮತ್ತು ಇತರ ಪುಸ್ತಕಗಳು)