ವರ ಮಹಾಲಕ್ಷ್ಮಿ ಹಬ್ಬದ ದಿನ ವ್ರತಾಚರಣೆ ಮಾಡಬೇಕು ಯಾಕೆ? ಇದನ್ನು ನಿಲ್ಲಿಸಿದರೆ ಏನಾಗುತ್ತೆ -Vara Mahalakshmi Vrata
ಸಾಮಾನ್ಯವಾಗಿ ಹಣಕಾಸಿನ ಪ್ರಗತಿಗಾಗಿ ವರ ಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತೇವೆ. ಆದರೆ ಆ ದಿನ ಮೂಲಾ ನಕ್ಷತ್ರವಿದೆ. ಆದ್ದರಿಂದ ಅಂದು ಮಾಡುವ ಪೂಜೆಯಿಂದ ಹಲವು ಪ್ರಯೋಜನಗಳಿವೆ. ವರ ಮಹಾಲಕ್ಷ್ಮಿ ಹಬ್ಬದಂದೇ ವ್ರತಾಚರಣೆ ಯಾಕೆ ಮಾಡಬೇಕು ಅನ್ನೋದನ್ನು ತಿಳಿಯಿರಿ.

ಪ್ರತಿ ಸಂವತ್ಸರದಲ್ಲಿಯೂ ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿನ ಎರಡನೆ ಶುಕ್ರವಾರದ ದಿನ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತೇವೆ. ಪೂಜೆ ಎಂದರೆ ಒಮ್ಮೆ ಆಚರಿಸದೆ ಹೋದರೂ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ವ್ರತ ಎಂದರೆ ಕೇವಲ ನಿಗದಿಗೊಳಿಸಿದ ದಿನದಂದು ಆಚರಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಯಾವುದೇ ವ್ರತವನ್ನು ಮಾಡದೆ ನಿಲ್ಲಿಸಬಾರದು. ಕೆಲವು ಧಾರ್ಮಿಕ ಗ್ರಂಥಗಳ ಅನುಸಾರ ವ್ರತವನ್ನು ಆಚರಿಸಲು ಸಾಧ್ಯವಾಗದೆ ಇದ್ದರೂ ಆತ್ಮೀಯರ ಅಥವಾ ಸಂಬಂಧಿಕರಿಂದ ಪೂಜೆಮಾಡಿಸಿದ ದಾರವನ್ನು ಧರಿಸುವುದು ಒಳ್ಳೆಯದು.
2024 ರ ಆಗಸ್ಟ್ 16 ರ ಶುಕ್ರವಾರ ವರ ಮಹಾಲಕ್ಷ್ಮಿ ವ್ರತವನ್ನು ಆಚರಿಸಬೇಕು. ದ್ವಾದಶಿ ಇರುವ ಕಾರಣ ವ್ರತಾಚಾರಣೆಯಿಂದ ಮನೆಯಲ್ಲಿನ ಆಹಾರದ ಸಮಸ್ಯೆ ನೀಗುತ್ತದೆ. ಸಾಮಾನ್ಯವಾಗಿ ಹಣಕಾಸಿನ ಪ್ರಗತಿಗಾಗಿ ವರಮಹಾಲಕ್ಶ್ಮಿಯ ವ್ರತವನ್ನು ಆಚರಿಸುತ್ತೇವೆ. ಆದರೆ ಆ ದಿನ ಮೂಲಾ ನಕ್ಷತ್ರವಿದೆ. ಆದ್ದರಿಂದ ಅಂದು ಮಾಡುವ ಪೂಜೆಯಿಂದ ವಿದ್ಯಾಬುದ್ಧಿಯೂ ಲಭಿಸುತ್ತದೆ. ಕೆಲವೆಡೆ ಸಾಮೂಹಿಕವಾಗಿ ಲಕ್ಷ್ಮಿ ಸಮೇತ ಸತ್ಯನಾರಾಯಣಸ್ವಾಮಿಯ ಪೂಜೆ ಮಾಡುವ ವಾಡಿಕೆಯಿದೆ. ವರ ಮಹಾಲಕ್ಷ್ಮಿ ವ್ರತಾಚರಣೆಯಂದು ಪೂಜೆ ಮಾಡುವುದರಿಂದ ವಿಶೇಷವಾದ ಫಲಗಳನ್ನು ಪಡೆಯಬಹುದು. ಲಕ್ಷ್ಮಿಯನ್ನು ಪ್ರಜ್ವಲಿಸುತ್ತಿರುವ ದೀಪದಲ್ಲಿ ಕಾಣುತ್ತೇವೆ. ಆರೋಗ್ಯಪೂರ್ಣ ವಿಳ್ಳೆದೆಲೆಯಲ್ಲಿ ಕಾಣುತ್ತೇವೆ. ಹಾಗೆಯೇ ಅರಿಶಿಣದ ದಾರ ಅಥವಾ ಬಟ್ಟೆಯಲ್ಲಿ ಕಟ್ಟಿರುವ ಅರಿಶಿಣದ ಕೊಂಬಿನಲ್ಲಿಯೂ ಕಾಣುತ್ತೇವೆ. ಆದರೆ ಈ ವ್ರತದಲ್ಲಿ ಕಳಶವನ್ನು ಇಟ್ಟು ಪೂಜಿಸುತ್ತೇವೆ.
ಇದನ್ನೂ ಓದಿ: ವರಮಹಾಲಕ್ಷ್ಮಿ ವ್ರತಾಚರಣೆಯ ಉಪವಾಸದ ನಿಯಮಗಳೇನು?
ವರಮಹಾಲಕ್ಶ್ಮಿಯ ಕಳಶದ ವಿಶೇಷ
ಕೆಲವರು ಕಳಶದಲ್ಲಿ ನೀರನ್ನು ಹಾಕುತ್ತಾರೆ. ಆದರೆ ಧಾರ್ಮಿಕ ಗ್ರಂಥಗಳ ಪ್ರಕಾರ ಕಳಶದಲ್ಲಿ 5 ರ ಪ್ರಮಾಣದಲ್ಲಿ ಅಂದರೆ ಐದು ಹಿಡಿ ಇಲ್ಲವೆ ಐದು ಬಟ್ಟಲಲ್ಲಿ ಅಕ್ಕಿಯನ್ನು ಹಾಕಬೇಕು. ಇದರೊಂದಿಗೆ ಐದು ರೀತಿಯ ಕುಡಿಗಳನ್ನು ಹಾಕಬೇಕು. ಉದಾಹರಣೆ ದಾಳಿಂಬೆಯ ಕುಡಿ ಮತ್ತು ಚೇಪೆಯ ಕುಡಿ. ಇದರ ಜೊತೆಯಲ್ಲಿ ಐದು ರೀತಿಯ ಹಣ್ಣುಗಳನ್ನು ಅಂದರೆ ಬಾದಾಮಿ, ಗೋಡಂಬಿ, ಸೀಬೆಹಣ್ಣು ಮುಂತಾದುವುಗಳನ್ನು ಹಾಕಬೇಕು. ಇದರ ಜೊತೆ ಕೆಂಪು ಕಲ್ಲು ಸಕ್ಕರೆಯನ್ನು ಬೆರಸಬೇಕು. ಇದಾದನಂತರ ಶುಭ್ರವಾದ ತೆಂಗಿನ ಕಾಯಿಯನ್ನು ಶುಚಿಗೊಳಿಸಿ ಕಳಸದ ಮೇಲ್ಬಾಗದಲ್ಲಿ ಇಡಬೇಕು. ಇದು ಮಹಾಲಕ್ಷ್ಮಿಯನ್ನು ಸೂಚಿಸುತ್ತದೆ ಎಂದು ತಿಳಿದುಬರುತ್ತದೆ. ಇದರಲ್ಲಿ ಮಹಾಲಕ್ಷ್ಮಿಯನ್ನು ಆಹ್ವಾನಿಸಿ ಪೂಜೆಮಾಡುವುದು ಹಿಂದಿನಿಂದ ಬಂದಿರುವ ನಮ್ಮ ಸಂಪ್ರದಾಯವಾಗಿದೆ. ಇದರೊಂದಿಗೆ 12 ಎಳೆ ಮತ್ತು 12 ಗಂಟಿರುವ ದಾರಕ್ಕೆ ಅರಿಶಿಣವನ್ನು ಹಚ್ಚಿ ಪೂಜಿಸುವುದು ಸಂಪ್ರದಾಯ.
ಮನೆಯ ಹೊರಗಡೆ ತುಳಸಿಗಿಡದ ಬಳಿ ಯಮುನಾ ಪೂಜೆಯನ್ನು ಮಾಡಿ ಆ ನೀರನ್ನು ಕಳಸದ ನೀರಿನೊಂದಿಗೆ ಬೆರಸಬೇಕು. ಆ ದಿನ ಮಾಡುವ ಹಬ್ಬದ ಅಡುಗೆಯನ್ನು ಸಂಪೂರ್ಣವಾಗಿ ಸೇವಿಸಬಾರದು. ಉಳಿದ ಆಹಾರವನ್ನು ಮಾರನೆಯ ದಿನದಂದು ಎಲ್ಲರೂ ಸೇವಿಸಬೇಕು. ಕನಿಷ್ಠ ಪಕ್ಷ ಪ್ರತಿ ಶುಕ್ರವಾರದಂದು ಮನೆಯಲ್ಲಿ ಆಹಾರದ ಸ್ವಲ್ಪಭಾಗವನ್ನು ಉಳಿಸುವುದು ಒಳ್ಳೆಯದು. ಕಾರಣ ಕೆಲವು ಕತೆಗಳ ಅನ್ವಯ ಯಾವ ಮನೆಯಲ್ಲಿ ಆಹಾರವನ್ನು ಉಳಿಸುವರೋ ಆ ಮನೆಯಲ್ಲಿ ಲಕ್ಷ್ಮಿಯು ಶಾಶ್ವತವಾಗಿ ನೆಲೆಸಿರುತ್ತಾಳೆ.
ಇದನ್ನೂ ಓದಿ: ಸೂತ ಮಹರ್ಷಿ ಹೇಳಿದ ವರಮಹಾಲಕ್ಷ್ಮಿ ವ್ರತದ ಪೌರಾಣಿಕ ಕಥೆ
ಮೊದಲು ದೀಪಾರಾಧನೆಯ ನಂತರ ಕುಲದೇವರ ಪೂಜೆಯನ್ನು ಮಾಡಬೇಕು. ಆ ನಂತರ ಶ್ರೀಗಣಪತಿ ಮತ್ತು ಯಮುನಾಪೂಜೆ ಮಾಡಬೇಕು. ಆನಂತರ ಪೂಜಾಗೃಹದಲ್ಲಿ ಶ್ರೀಲಕ್ಶ್ಮಿಯ ಕಳಶವನ್ನು ಪ್ರತಿಷ್ಠಾಪಿಸಬೇಕು. ಆ ನಂತರ ನಿತ್ಯಪೂಜೆಯಂತೆ ಶೋಡಚೋಪಚಾರ ಪೂಜೆಯನ್ನು ಮಾಡಬೇಕಾಗುತ್ತದೆ. ಈ ಪೂಜೆಯಲ್ಲಿನ ವಿಶೇಷವೆಂದರೆ ಶ್ರೀ ವರಮಹಾಲಕ್ಶ್ಮಿಗೆ ಬಳೆ ಬಿಚ್ಚೋಲೆ ಮತ್ತು ಕಪ್ಪು ಕಾಡಿಗೆಯನ್ನು ಅರ್ಪಿಸಲಾಗುತ್ತದೆ. ಪೂಜೆಯೆಲ್ಲವೂ ಮುಗಿದ ನಂತರ ಪೂಜಿಸಿದ ದಾರವನ್ನು ದೇವರ ಪ್ಲ್ರಸಾದದ ಹೂವಿನ ಜೊತೆ ಬಲಗೈಯಲ್ಲಿ ಧರಿಸಬೇಕು. ಆನಂತರ ಉಪಾಯನದಾನವನ್ನು ನೀಡುವ ಮೂಲಕ ಈ ವ್ರತವು ಸಂಪೂರ್ಣಗೊಳ್ಳುತ್ತದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
