Vastu Tips: ವಾಸ್ತು ಪ್ರಕಾರ ಈ ಪ್ರಾಣಿಗಳ ವಿಗ್ರಹ ನಿಮ್ಮ ಮನೆಯಲ್ಲಿದ್ದರೆ ನಿಮ್ಮಷ್ಟು ಅದೃಷ್ಟವಂತರಿಲ್ಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ವಾಸ್ತು ಪ್ರಕಾರ ಈ ಪ್ರಾಣಿಗಳ ವಿಗ್ರಹ ನಿಮ್ಮ ಮನೆಯಲ್ಲಿದ್ದರೆ ನಿಮ್ಮಷ್ಟು ಅದೃಷ್ಟವಂತರಿಲ್ಲ

Vastu Tips: ವಾಸ್ತು ಪ್ರಕಾರ ಈ ಪ್ರಾಣಿಗಳ ವಿಗ್ರಹ ನಿಮ್ಮ ಮನೆಯಲ್ಲಿದ್ದರೆ ನಿಮ್ಮಷ್ಟು ಅದೃಷ್ಟವಂತರಿಲ್ಲ

ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ಪ್ರಾಣಿಗಳ ವಿಗ್ರಹಗಳನ್ನು ಇಡುವುದರಿಂದ ಕುಟುಂಬದಲ್ಲಿ ಶಾಂತಿ, ನೆಮ್ಮದಿ ಹಾಗೂ ಸಂತೋಷ ನೆಲೆಸಿರುತ್ತದೆ. ಇದರಿಂದ ಸಂಪತ್ತು ಕೂಡ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಹಾಗಾದ್ರೆ ಯಾವ ಪ್ರಾಣಿಗಳ ವಿಗ್ರಹ ಅಥವಾ ಮೂರ್ತಿಯನ್ನು ಮನೆಯಲ್ಲಿ ಇಡುವುದು ಉತ್ತಮ? ಇಲ್ಲಿದೆ ಮಾಹಿತಿ.

ವಾಸ್ತು ಪ್ರಕಾರ ಈ ಪ್ರಾಣಿಗಳ ವಿಗ್ರಹ ನಿಮ್ಮ ಮನೆಯಲ್ಲಿದ್ದರೆ ನಿಮ್ಮಷ್ಟು ಅದೃಷ್ಟವಂತರಿಲ್ಲ
ವಾಸ್ತು ಪ್ರಕಾರ ಈ ಪ್ರಾಣಿಗಳ ವಿಗ್ರಹ ನಿಮ್ಮ ಮನೆಯಲ್ಲಿದ್ದರೆ ನಿಮ್ಮಷ್ಟು ಅದೃಷ್ಟವಂತರಿಲ್ಲ

ಮನೆ ಅಲಂಕಾರ ಮಾಡುವುದು ಎಂದರೆ ಮಹಿಳೆಯರಿಗೆ ಎಲ್ಲಿಲ್ಲದ ಪ್ರೀತಿ. ಸುಂದರವಾದ ಗೊಂಬೆಗಳು, ಅಲಂಕಾರಿಕ ವಸ್ತುಗಳಿಂದ ಮನೆಯನ್ನು ಸಿಂಗರಿಸುತ್ತಾರೆ. ಶೋಕೇಸ್‌ನಲ್ಲೂ ಬಣ್ಣ ಬಣ್ಣದ ಹೂಗಳು, ಪ್ರತಿಮೆಗಳನ್ನು ಇರಿಸುತ್ತಾರೆ. ಕೆಲವರು ಪ್ರಾಣಿಗಳ ಆಟಿಕೆಗಳನ್ನೂ ಇಟ್ಟುಕೊಳ್ಳುತ್ತಾರೆ. ಆದರೆ ಪ್ರಾಣಿಗಳ ಪ್ರತಿಮೆ ಅಥವಾ ವಿಗ್ರಹಕ್ಕೂ ವಾಸ್ತುಶಾಸ್ತ್ರಕ್ಕೂ ಸಂಬಂಧವಿದೆ.

ವಾಸ್ತು ಪ್ರಕಾರ ಪ್ರತಿಯೊಂದು ಪ್ರಾಣಿಯು ಯಾವುದಾದರೊಂದು ಗ್ರಹದೊಂದಿಗೆ ಸಂಬಂಧ ಹೊಂದಿದೆ. ಅದಕ್ಕಾಗಿಯೇ ನಾವು ಮನೆಯಲ್ಲಿ ಇಡುವ ಪ್ರಾಣಿಗಳ ಮೂರ್ತಿಗಳು ನಮ್ಮ ಮೇಲೆ ಪರಿಣಾಮ ಬೀರುತ್ತವೆ. ಮನೆಯಲ್ಲಿ ಕೆಲವು ಪ್ರಾಣಿಗಳ ವಿಗ್ರಹಗಳಿದ್ದರೆ, ಧನಾತ್ಮಕ ಶಕ್ತಿ ಹೆಚ್ಚುತ್ತದೆ, ಅಲ್ಲದೆ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಹಾಗಾದರೆ ವಾಸ್ತು ಪ್ರಕಾರ ಮನೆಯಲ್ಲಿ ಯಾವೆಲ್ಲ ಪ್ರಾಣಿಗಳು ಇದ್ದರೆ ಉತ್ತಮ? ಇಲ್ಲಿದೆ ನೋಡಿ ಉತ್ತರ.

ಆನೆ

ಆನೆಯು ಸಾಮರಸ್ಯದ ಸಂಕೇತ. ಒಂದು ಜೊತೆ ಆನೆಯ ಗೊಂಬೆಗಳನ್ನು ಮನೆಯಲ್ಲಿಟ್ಟರೆ ಅದೃಷ್ಟ ಬರುತ್ತದೆ ಎಂಬ ನಂಬಿಕೆ ಇದೆ. ಈ ಮೂರ್ತಿಯನ್ನು ಇರಿಸುವುದರಿಂದ ಕೌಟುಂಬಿಕ ಐಕ್ಯತೆ ಮತ್ತು ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ವಾಸ್ತು ಪ್ರಕಾರ ಬೆಳ್ಳಿ ಅಥವಾ ಹಿತ್ತಾಳೆಯ ಆನೆಯ ವಿಗ್ರಹವನ್ನು ಮನೆಯಲ್ಲಿ ಇಡಬಹುದು.

ಆಮೆ

ವಿಷ್ಣುವಿನ ರೂಪ ಆಮೆ. ಕ್ಷೀರಸಾಗರವನ್ನು ಮಥಿಸುವಾಗ ಲೋಕದ ರಕ್ಷಣೆಗಾಗಿ ಭಗವಾನ್ ವಿಷ್ಣು ಕೂರ್ಮ ರೂಪವನ್ನು ತಳೆದನೆಂದು ಪುರಾಣಗಳು ಹೇಳುತ್ತವೆ. ಮನೆಯಲ್ಲಿ ಆಮೆಯ ಪ್ರತಿಮೆ ಇರುವುದರಿಂದ ಲಕ್ಷ್ಮೀದೇವಿಯ ಆಶೀರ್ವಾದ ಆ ಕುಟುಂಬದ ಮೇಲಿರುತ್ತದೆ ಎಂದು ನಂಬಲಾಗಿದೆ. ಆಮೆಯ ಪ್ರತಿಮೆಯನ್ನು ಇರಿಸಲು ದಿಕ್ಕು ಕೂಡ ಬಹಳ ಮುಖ್ಯ. ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಆಮೆಯ ಪ್ರತಿಮೆಯನ್ನು ಇಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ, ಹಣಕಾಸಿನ ಸಮಸ್ಯೆಗೆ ಬ್ರೇಕ್‌ ಬೀಳುತ್ತದೆ.

ಮೀನು

ನೀರಿನಲ್ಲಿರುವ ಮೀನನ್ನು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಎರಡು ಮೀನುಗಳಿರುವ ಗೊಂಬೆಯನ್ನು ಮನೆಯಲ್ಲಿಟ್ಟರೆ ಸಂಪತ್ತಿಗೆ ಕೊರತೆಯಾಗುವುದಿಲ್ಲ ಎಂಬ ನಂಬಿಕೆ ಇದೆ. ಇದನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಹಿತ್ತಾಳೆ ಅಥವಾ ಬೆಳ್ಳಿಯ ಮೀನಿನ ಪ್ರತಿಮೆಯನ್ನು ಮನೆಯಲ್ಲಿ ಇಡಬಹುದು. ಇದನ್ನು ಮನೆಯ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಿದರೆ, ಸಂತೋಷ, ಸಮೃದ್ಧಿ ಮತ್ತು ಸಂಪತ್ತು ನಿಮ್ಮದಾಗುತ್ತದೆ.

ಹಸು

ಹಿಂದೂಗಳು ಗೋಮಾತೆಯನ್ನು ಅತ್ಯಂತ ಪವಿತ್ರ ಎಂದು ಪೂಜಿಸುತ್ತಾರೆ. ಪುರಾಣಗಳ ಪ್ರಕಾರ, ಮುಕ್ಕೋಟಿ ದೇವರುಗಳು ಗೋವಿನಲ್ಲಿ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಮನೆ ಬಾಗಿಲಿಗೆ ಬಂದ ಹಸುವಿಗೆ ಆಹಾರ ಕೊಟ್ಟು ಕಳುಹಿಸಬೇಕು ಎನ್ನುತ್ತಾರೆ. ಹಸುವಿನ ಬಾಲವನ್ನು ಪೂಜಿಸಲಾಗುತ್ತದೆ. ಮನೆಯಲ್ಲಿ ಗೋವಿನ ವಿಗ್ರಹವನ್ನು ಇಡುವುದರಿಂದ ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ.

ಒಂಟೆ

ಒಂಟೆಯನ್ನು ಯುದ್ಧದಲ್ಲಿ ವಿಜಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯಲ್ಲಿ ಒಂಟೆಯ ಪ್ರತಿಮೆ ಇದ್ದರೆ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ಸಿಗುತ್ತದೆ. ಒಂಟೆಯ ವಾಯುವ್ಯ ದಿಕ್ಕಿನಲ್ಲಿ ಡ್ರಾಯಿಂಗ್ ರೂಮ್ ಅಥವಾ ಲಿವಿಂಗ್ ರೂಮ್ ವ್ಯವಹಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ವೃತ್ತಿಯಲ್ಲಿ ಉತ್ತಮ ಸಾಧನೆಗಳು ದಾಖಲಾಗುತ್ತವೆ.

ಯಾವ ವಿಗ್ರಹಗಳನ್ನು ಮನೆಯಲ್ಲಿ ಇರಿಸಬಾರದು

ಹುಲಿ, ಸಿಂಹದಂತಹ ಕಾಡು ಪ್ರಾಣಿಗಳ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು. ಇದು ಮನೆಗೆ ಅಶುಭ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇವುಗಳನ್ನು ಮನೆಯಲ್ಲಿ ಇರಿಸುವುದರಿಂದ ಕುಟುಂಬದ ಸದಸ್ಯರ ನಡುವೆ ಘರ್ಷಣೆ ಉಂಟಾಗಬಹುದು. ಮನೆಯಲ್ಲಿ ಹಿಂಸಾತ್ಮಕ ಘಟನೆಗಳು ನಡೆಯಬಹುದು.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.