Deepawali 2023: ಹತ್ತಿರ ಬರ್ತಿದೆ ದೀಪಾವಳಿ, ಶುರುವಾಗಲಿ ಸಿದ್ಧತೆ: ಪ್ರಮುಖ ದಿನ, ಆಚರಣೆ, ಮುಹೂರ್ತದ ವಿವರಗಳು ಇಲ್ಲಿವೆ
ದೀಪಾವಳಿ ಬೆಳಕಿನ ಹಬ್ಬ, ಬದುಕಿನ ಕತ್ತಲನ್ನು ದೂರಾಗಿಸಿ, ಬೆಳಕನ್ನು ಪಸರಿಸುವ ಪವಿತ್ರ ಹಬ್ಬ. ಈ ಹಬ್ಬವನ್ನು ದೇಶದಾದ್ಯಂತ ಬಹಳ ಸಂಭ್ರಮ, ಸಡಗರ, ಭಕ್ತಿಭಾವದಿಂದ ಆಚರಿಸುತ್ತಾರೆ. ಈ ಬಾರಿ ನವೆಂಬರ್ 12ರಂದು ದೀಪಾವಳಿ ಇದೆ. ನಾಲ್ಕೈದು ದಿನಗಳ ಕಾಲ ನಡೆಯುವ ಈ ಹಬ್ಬದ ವೈಶಿಷ್ಟ್ಯ ಹಾಗೂ ಮಹತ್ವ ಇಲ್ಲಿದೆ.
ದೀಪಾವಳಿ ಹಬ್ಬವೆಂದರೆ ಅದೇನೋ ಸಂಭ್ರಮ, ಸಡಗರ. ಹಿರಿಯರಿಗೆ ಪೂಜೆ, ಸಂಪ್ರದಾಯ ಪಾಲಿಸುವ ಖುಷಿಯಾದರೆ, ಕಿರಿಯರಿಗೆ ಪಟಾಕಿ ಹೊಡೆಯುವ ಸಂಭ್ರಮ. ಭಾರತ ದೇಶದಾದ್ಯಂತ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೀಪಾವಳಿಯು ಸಾಮಾಜಿಕ-ಸಾಂಸ್ಕೃತಿಕ ಹಬ್ಬವಾಗಿದೆ.
ದೀಪಾವಳಿ ಎಂದರೆ ದೀಪಗಳನ್ನು ಬೆಳಗಿಸುವ ಹಬ್ಬ. ದೀಪ ಎನ್ನುವುದು ಸಂಸ್ಕೃತ ಶಬ್ದ, ದೀಪ ಬೆಳಗಿಸುವುದು ಶುಭ ಸಂಕೇತವಾಗಿದೆ. ಆವಳಿ ಎಂದರೆ ಸಾಲು, ಶ್ರೇಣಿ ಎಂದರ್ಥ. ಹಾಗಾಗಿ ದೀಪಾವಳಿ ಎಂದರೆ ದೀಪಗಳ ಸಾಲನ್ನು ಬೆಳಗುವುದು ಎಂದರ್ಥ. ದೀಪಾವಳಿಯಂದು ಸಾಲು ಸಾಲು ದೀಪಗಳನ್ನು ಬೆಳಗಿಸುವ ಮೂಲಕ ಕತ್ತಲನ್ನು ದೂರವಾಗಿಸುತ್ತೇವೆ.
ದೀಪಾವಳಿ ಆಚರಣೆಯ ಹಿಂದೆ ಹಲವು ಧಾರ್ಮಿಕ ನಂಬಿಕೆಗಳಿವೆ. ಶ್ರೀರಾಮನು 14 ವರ್ಷಗಳ ಕಾಲ ವನವಾಸ ಮುಗಿಸಿ ಆಯೋಧ್ಯೆಗೆ ಮರಳಿದಾಗ ಆ ಸಂತೋಷಕ್ಕಾಗಿ ದೀಪಾವಳಿ ಆಚರಿಸಲಾಗಿತ್ತು ಎಂಬ ಐತಿಹ್ಯವಿದೆ. ಅದೇ ಮುಂದೆ ದೀಪಾವಳಿ ಆಚರಣೆಗೆ ಕಾರಣವಾಯಿತು ಎಂಬುದು ಎಂದು ನಂಬಿಕೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿಯನ್ನು ಪೂಜಿಸುವ ದಿನವೂ ದೀಪಾವಳಿ.
ಸುಮಾರು 5 ದಿನಗಳ ಕಾಲ ನಡೆಯುವ ದೀಪಾವಳಿ ಹಬ್ಬದ ಸಮಯದಲ್ಲಿ ನರಕಚತುರ್ದಶಿ, ಬಲಿಪ್ಯಾಡಮಿ, ಗೂಪೂಜೆಗಳು ನೆರವೇರಿಸಲಾಗುತ್ತದೆ. ಈ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಅದೇನೇ ಇದ್ದರೂ ದೀಪಾವಳಿ ಹಬ್ಬದ ಮಹತ್ವ ಎಲ್ಲಾ ಕಡೆಯೂ ಒಂದೇ ರೀತಿಯಲ್ಲಿದೆ. ದೀಪಾವಳಿ ಎಂದರೆ ಕತ್ತಲೆಯ ವಿರುದ್ಧ ಬೆಳಕಿನ ವಿಜಯ. ಅಂದರೆ ಅಜ್ಞಾನವನ್ನು ತೊಡೆದು ಹಾಕಿ ಒಳ್ಳೆಯದ್ದನ್ನು ಪ್ರತಿಷ್ಠಾಪಿಸುವ ಹಬ್ಬ.
2023ರಲ್ಲಿ ದೀಪಾವಳಿ ಯಾವಾಗ?
ದೀಪಾವಳಿಯನ್ನು ಹಿಂದೂ ಚಂದ್ರನ ತಿಂಗಳಾದ ಆಶ್ವಯುಜ ಮತ್ತು ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಈ ಮಾಸವು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಬರುತ್ತದೆ. ದೀಪಾವಳಿಯನ್ನು ಅಮಾವಾಸ್ಯೆಯಂದು ಅಥವಾ ಆಶ್ವಯುಜ ಮಾಸದ ಹದಿನೈದನೇ ದಿನದಂದು ಆಚರಿಸಲಾಗುತ್ತದೆ ಎಂದು ಪ್ರಾಚೀನ ಕ್ಯಾಲೆಂಡರ್ ಹೇಳುತ್ತದೆ. ಈ ವರ್ಷ ನವೆಂಬರ್ 12ರಂದು ದೀಪಾವಳಿ ಆಚರಣೆ ಇದೆ.
ದೀಪಾವಳಿಯ ವಿವಿಧ ಆಚರಣೆಗಳ ದಿನಾಂಕ ಹಾಗೂ ಶುಭ ಮುಹೂರ್ತ
- ದೀಪಾವಳಿ: ನವೆಂಬರ್ 12, 2023
- ಲಕ್ಷ್ಮೀ ಪೂಜೆಯ ಮುಹೂರ್ತ: ಸಂಜೆ 4.21 ರಿಂದ ಸಂಜೆ 6.02 ರ ಸಮಯ
- ಅಮಾವಾಸ್ಯೆ ತಿಥಿ ಆರಂಭ: ನವೆಂಬರ್ 12ರ ಬೆಳಿಗ್ಗೆ 11.14ರಿಂದ
- ಅಮಾವಾಸ್ಯೆ ತಿಥಿ ಮುಕ್ತಾಯ: ಬೆಳಿಗ್ಗೆ 11.26ರಿಂದ ನವೆಂಬರ್ 13
5 ದಿನಗಳ ದೀಪಾವಳಿ ಹಬ್ಬ
- ನವೆಂಬರ್ 10, 2023: ಶುಕ್ರವಾರ: ಧನ್ವಂತರಿ ಜಯಂತಿ
- ನವೆಂಬರ್ 11 2023: ಶನಿವಾರ: ನೀರು ತುಂಬುವ ಹಬ್ಬ, ಧನ ತ್ರಯೋದಶಿ, ನರಕ ಚತುರ್ದಶಿ
- ನವೆಂಬರ್ 12, 2023: ಭಾನುವಾರ: ದೀಪಾವಳಿ, ಲಕ್ಷ್ಮೀಪೂಜೆ
- ನವೆಂಬರ್ 13: ಸೋಮವಾರ: ದೀಪಾವಳಿ ಅಮಾವಾಸ್ಯೆ, ಬಲೀಂದ್ರ ಪೂಜೆ
- ನವೆಂಬರ್ 14 ಸೋಮವಾರ: ಗೋಪೂಜೆ
ಧನ್ವಂತರಿ ಜಯಂತಿ: ಈ ದಿನದ ಧನ್ ಎಂಬ ಹೆಸರು ಆಯುರ್ವೇದ ದೇವತೆ ಧನ್ವಂತರಿಯನ್ನು ಸೂಚಿಸುತ್ತದೆ. ಈ ದಿನದಂದು ಧನ್ವಂತರಿ ಪೂಜೆ ಮಾಡಲಾಗುತ್ತದೆ. ಇದನ್ನು ದೀಪಾವಳಿ ಹಬ್ಬದ ಭಾಗವಾಗಿ ಕೆಲವು ಕಡೆ ಆಚರಿಸುತ್ತಾರೆ.
ನೀರು ತುಂಬುವ ಹಬ್ಬ, ಧನ ತ್ರಯೋದಶಿ, ನರಕ ಚತುರ್ದಶಿ: ಭಾರತದಲ್ಲಿ ಬಹುತೇಕ ಕಡೆ ಧನ್‌ತೇರಸ್ ಅಥವಾ ಧನ ತ್ರಯೋದಶಿಯನ್ನು ಆಚರಿಸುತ್ತಾರೆ. ಧನ ಎಂದರೆ ಸಂಪತ್ತು ಎಂದರ್ಥ. ಅದನ್ನು ಕೆಲವು ಕಡೆ ಕಿರು ದೀಪಾವಳಿ ಅಥವಾ ಚೋಟಿ ದೀವಾಳಿ ಎಂದೂ ಕರೆಯುತ್ತಾರೆ. ಇದು ಆಶ್ವಯುಜ ಮಾಸದ 14ನೇ ಬರುತ್ತದೆ. ಪುರಾಣಗಳ ಪ್ರಕಾರ ಈ ದಿನದಂದು 16,000 ಗೋಪಿಕೆಯರನ್ನು ಅಪಹರಿಸಿದ ರಾಕ್ಷಸ ನರಕಾಸುರನನ್ನು ಕೃಷ್ಣನು ಕೊಂದು ಗೋಪಿಕೆಯರನ್ನು ರಕ್ಷಿಸುತ್ತಾರೆ, ಆ ಕಾರಣಕ್ಕೆ ನರಕ ಚತುರ್ದಶಿ ಆಚರಣೆಗೆ ಬಂತು ಎನ್ನಲಾಗುತ್ತದೆ.
ದೀಪಾವಳಿ: ಆಶ್ವಯುಜ ಮಾಸದ ಕೊನೆಯ ದಿನ ದೀಪಾವಳಿ ಆಚರಿಸಲಾಗುತ್ತದೆ. ದೀಪಾವಳಿಯು ಬೆಳಕಿನ ಹಬ್ಬ. ಬದುಕಿನ ಕತ್ತಲನ್ನು ದೂರವಾಗಿಸಿ ಬೆಳಕಾಗಿಸುವ ಈ ಹಬ್ಬದಂದು ದೀಪಗಳನ್ನು ಬೆಳಗಿಸುವ ಜೊತೆಗೆ ಪಟಾಕಿ ಹೊಡೆಯುವ ಮೂಲಕ ಸಂಭ್ರಮಿಸಲಾಗುತ್ತದೆ. ಈ ದಿನದಂದು ಹಿಂದೂಗಳು, ಜೈನರು, ಸಿಖ್ಖರು ಮನೆ, ದೇವಾಲಯಗಳಲ್ಲಿ ದೀಪ ಬೆಳಗಿಸುವ ಮೂಲಕ ಆಚರಿಸುತ್ತಾರೆ. ಈ ದಿನದಂದು ಲಕ್ಷ್ಮೀಪೂಜೆ ಮಾಡುವುದು ವಿಶೇಷ.
ಗೋವರ್ಧನ ಪೂಜೆ, ಬಲಿ ಪಾಡ್ಯಮಿ
ದೀಪಾವಳಿಯ ಹದಿನೈದು ದಿನಗಳು ಮುಗಿದ ನಂತರ ಮೊದಲ ದಿನದ ಆಚರಣೆಯಿದು. ಇದನ್ನು ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಪಾಡ್ವಾ, ಗೋಮರ್ಧನ ಪೂಜೆ, ಬಲಿಪ್ರತಿಪಾದ, ಬಲಿ ಪಾಡ್ಯಮಿ, ಕಾರ್ತಿಕ ಶುಕ್ಲಾ ಪ್ರತಿಪಾದ ಎಂಬೆಲ್ಲಾ ಹೆಸರಿನಿಂದ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಇಂದ್ರದೇವನ ಸಿಟ್ಟಿನಿಂದ ನಿರಂತರ ಮಳೆ, ಪ್ರವಾಹದಿಂದ ಕೃಷಿ ಭೂಮಿ ಹಾಗೂ ಹಸು ಪಾಲನೆಯ ಗ್ರಾಮಗಳನ್ನು ರಕ್ಷಿಸಲು ಶ್ರೀ ಕೃಷ್ಣ ಪರಮಾತ್ಮನು ಗೋವರ್ಧನ ಪರ್ವತವನ್ನು ಎತ್ತಿದನು ಎಂದು ಪುರಾಣ ಕಥೆಗಳು ಹೇಳುತ್ತವೆ.
5ನೇ ದಿನದಂದು ಉತ್ತರ ಭಾರತದ ಕಡೆ ಭಾಯಿ ದೂಜ್ ಎಂದು ಆಚರಿಸುತ್ತಾರೆ. ಈ ದಿನವನ್ನು ರಕ್ಷಾಬಂಧನಕ್ಕೆ ಹೋಲಿಸಲಾಗುತ್ತದೆ. ಈ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ಆರತಿ ಬೆಳಗಿ ದೇವರಲ್ಲಿ ಪಾರ್ಥಿಸಲಾಗುತ್ತದೆ. ಈ ದಿನದಂದು ಯುಮನ ಸಹೋದರಿ ಯಮುನೆ ತನ್ನ ಸಹೋದರರನ್ನು ತಿಲಕವಿಟ್ಟು ಆರತಿ ಮಾಡುತ್ತಾಳೆ ಎನ್ನಲಾಗುತ್ತದೆ. ಇದರೊಂದಿಗೆ ನರಕಾಸುರನನ್ನು ಕೊಂದ ಮನೆಗೆ ಬಂದ ಕೃಷ್ಣನಿಗೆ ಸುಭದ್ರೆ ಆರತಿ ಮಾಡುವ ಮೂಲಕ ತಿಲಕವಿಟ್ಟು ಮನೆಯೊಳಗೆ ಆಹ್ವಾನಿಸುತ್ತಾಳೆ ಎಂದು ಪುರಾಣಗಳು ಹೇಳುತ್ತವೆ.