Lord Ganesha: ಒಂದಲ್ಲ, ಎರಡಲ್ಲ ಗಣಪನಿಗುಂಟು 32 ರೂಪ; ವಿನಾಯಕನ ವಿವಿಧ ರೂಪಗಳು, ಪೂಜೆ ಸಲ್ಲಿಕೆಯ ವಿಧಾನ ಇಲ್ಲಿದೆ
ಸೆಪ್ಟೆಂಬರ್ 19ರಂದು ಗಣೇಶ ಚತುರ್ಥಿ. ಗಣೇಶನ ಹುಟ್ಟುಹಬ್ಬವನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವಿಶೇಷ ಸಂದರ್ಭದಲ್ಲಿ ಗಣೇಶದ ವಿವಿಧ ರೂಪಗಳ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ ಜ್ಯೋತಿಷಿ ಎಚ್. ಸತೀಶ್.

ಗಣೇಶನನ್ನು ವಿನಾಯಕ, ಲಂಬೋದರ, ಮೋದಕಹಸ್ತ, ವಕ್ರತುಂಡ ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ಗಣೇಶನಿಗೆ ಹಲವು ಹೆಸರುಗಳು ಮಾತ್ರವಲ್ಲ, ರೂಪಗಳೂ ಇವೆ. ದೇಶ ವಿದೇಶಗಳಲ್ಲಿ ಗಣೇಶನ ವಿಚಾರದಲ್ಲಿ ಹಲವು ಅಧ್ಯಯನಗಳು ನಡೆದಿವೆ. ಒಂದು ಅಧ್ಯಯನದ ಪ್ರಕಾರ ಗಣಪತಿಗೆ 32 ಮಾದರಿ ಇರುವುದು ತಿಳಿದು ಬರುತ್ತದೆ. ಅವುಗಳಲ್ಲಿ ಕೆಲವು ಈ ಕೆಳ ಕಂಡಂತಿದೆ. ಗಣಪನ ವಿವಿಧ ರೂಪಗಳ ವಿಶೇಷವೇನು, ವಿವಿಧ ರೂಪದಲ್ಲಿನ ಗಣಪತಿಯನ್ನು ಹೇಗೆ ಪೂಜಿಸಬೇಕು ಎಂಬ ಕುರಿತ ಮಾಹಿತಿ ಇಲ್ಲಿದೆ.
ಬಾಲ ಗಣೇಶ
ಮಕ್ಕಳಿಲ್ಲದ ದಂಪತಿಗಳು ಉತ್ತಮ ಸಂತಾನ ಪಡೆಯಲು ಬಾಲ ಗಣೇಶನ ಪೂಜೆಯನ್ನು ಮಾಡಬೇಕು. ಮುಖ್ಯದ್ವಾರ ಅಥವಾ ಪೂರ್ವದಿಕ್ಕಿನಲ್ಲಿ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ.
ತರುಣ ಗಣೇಶ
ತರುಣ ಗಣಪತಿಯ ದೇವಸ್ಥಾನವು ಕೇರಳದಲ್ಲಿದೆ. ತರುಣ ಗಣಪತಿಯನ್ನು ಸರಿಯಾದ ಮಾರ್ಗದಲ್ಲಿ ಪೂಜಿಸಿದಲ್ಲಿ ಮನೆಯಲ್ಲಿರುವ ಮಕ್ಕಳು ಒಳ್ಳೆಯದ ಹಾದಿಯಲ್ಲಿ ಸಾಗುತ್ತಾರೆ. ವಿದ್ಯಾರ್ಥಿಗಳು ಮನರಂಜನೆಯ ಹೊರತಾಗಿ ಕಲಿಕೆಯಲ್ಲಿ ತೊಡಗುತ್ತಾರೆ. ತರುಣ ಗಣಪತಿಯನ್ನು ಯಾರು ಬೇಕಾದರೂ ಪೂಜಿಸಬಹುದು ವಯೋವೃದ್ಧರಿಗೆ ತರುಣ ಗಣಪತಿಯ ಪೂಜೆಯಿಂದ ಉತ್ತಮ ಆರೋಗ್ಯ ಲಭಿಸುತ್ತದೆ.
ಶಕ್ತಿ ಗಣೇಶ
ಶಕ್ತಿಗಣಪತಿಯ ಪೂಜೆಯಿಂದ ಹೆಸರೇ ಸೂಚಿಸುವಂತೆ ದೈಹಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು. ಸಾಮಾನ್ಯವಾಗಿ ಶಕ್ತಿ ಗಣಪತಿಯನ್ನು ಅಮಾವಾಸ್ಯೆ ನಂತರ ಬರುವ ಚೌತಿಯದಿನದಂದು ಪೂಜಿಸಬೇಕು. ಈ ಪೂಜೆಯಿಂದ ವಯೋವೃದ್ದರಿಗೆ ಕಂಡುಬರುವ ಮೂಳೆ ಅಥವಾ ಸ್ನಾಯುವಿಗೆ ಸಂಬಂಧಪಟ್ಟ ನೋವು ಕಡಿಮೆಯಾಗುತ್ತದೆ. ಹಾಗೆಯೇ ಯಾರೇ ಆದರೂ ಸರಿಯಾದ ದಾರಿಯಲ್ಲಿ ನಡೆಯದೇ ಹೋದಲ್ಲಿ ತೊಂದರೆಯೂ ಉಂಟಾಗುತ್ತದೆ
ವೀರ ಗಣೇಶ
ಕೆಲವರನ್ನು ಸದಾಕಾಲ ಒಂದು ರೀತಿಯ ಭಯ ಕಾಡುತ್ತಿರುತ್ತದೆ. ಲಿಂಗಭೇದವಿಲ್ಲದೆ ಕೆಲವರು ಹೊರಗಡೆ ಸುತ್ತಾಟಕ್ಕೆ ಹೋಗಲು ಭಯಪಡುತ್ತಾರೆ. ಸ್ವತಂತ್ರವಾಗಿ ಯಾವುದೇ ಕೆಲಸವನ್ನು ಮಾಡಲಾರರು. ಇಂಥವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಈ ಗಣಪತಿಯ ಪೂಜೆಯನ್ನು ಮಾಡಬೇಕು. ಮುಖ್ಯವಾಗಿ ಮಂಗಳವಾರ ಸಂಕಷ್ಟಹರ ಚತುರ್ಥಿ ಬಂದರೆ ಈ ಪೂಜೆ ಮಾಡುವುದು ತುಂಬಾ ಒಳ್ಳೆಯದು. ವೀರ ಗಣೇಶ ದೇವಸ್ಥಾನ ಮಹಾರಾಷ್ಟ್ರದಲ್ಲಿದೆ.
ಸಿದ್ಧಿ ಗಣೇಶ
ಕೆಲವರ ಮನೆಯಲ್ಲಿ ಹುಡುಗ ಅಥವಾ ಹುಡುಗಿ ವಿವಾಹಕ್ಕೆ ಒಪ್ಪುವುದಿಲ್ಲ. ಅವರು ಬ್ರಹ್ಮಚರ್ಯವನ್ನು ಆಚರಿಸಲು ಇಚ್ಚಿಸುತ್ತಾರೆ ಅಥವಾ ಯಾವುದೋ ಕಾರಣಗಳಿಂದಾಗಿ ವಿವಾಹ ನಿಶ್ಚಯವಾಗುವುದಿಲ್ಲ. ಇಂತಹವರು ಸಿದ್ದಿ ವಿನಾಯಕನ ಪೂಜೆಯನ್ನು ಮಾಡಿದರೆ ಶೀಘ್ರವಾಗಿ ಯೋಗ್ಯರೊಂದಿಗೆ ವಿವಾಹವಾಗುತ್ತದೆ.
ವಿಘ್ನ ಗಣೇಶ
ಯಾವುದೇ ಕೆಲಸ ಕಾರ್ಯವಾದರೂ ಸುಲಭವಾಗಿ ನೆರವೇರದು. ಅಂಥಹ ಸಂದರ್ಭದಲ್ಲಿ ವಿಘ್ನಗಣೇಶನ ಪೂಜೆ ಮಾಡಿದಲ್ಲಿ ಕೆಲಸ ಕಾರ್ಯಗಳಲ್ಲಿ ಸುಲಭ ಜಯ ದೊರೆಯುತ್ತದೆ.
ಉಚ್ಚಿಷ್ಟ ಗಣೇಶ
ಮುಖ್ಯವಾಗಿ ತಾಂತ್ರಿಕ ಪರಿಣತಿ ಹೊಂದ ಬಯಸುವವರು ಈ ಗಣೇಶನ ಪೂಜೆಯನ್ನು ಮಾಡಬೇಕು
ಲಕ್ಷ್ಮೀ ಗಣೇಶ
ಈ ದೇವರ ಪೂಜೆ ಮಾಡುವವರು ಹಣಕಾಸಿನ ಮುಗ್ಗಟ್ಟಿನಿಂದ ಪಾರಾಗಬಹುದು ಎಂದು ಹೇಳಲಾಗಿದೆ.
ವಿಜಯ ಗಣೇಶ
ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಜಯಗಳಿಸಲು ಈ ಗಣೇಶನ ಪೂಜೆ ಮಾಡಬೇಕೆಂದು ಹೇಳಲಾಗುತ್ತದೆ.
ನೃತ್ಯ ಗಣೇಶ
ಕಲಾವಿದರು ಇದರ ಪೂಜೆಯನ್ನು ವಿಶೇಷವಾಗಿ ಮಾಡುತ್ತಾರೆ. ಇದರಿಂದ ಕುಟುಂಬದಲ್ಲಿ ಸಂತಸ ನೆಲೆಯೂರುತ್ತದೆ ಎಂದು ಹೇಳಲಾಗುತ್ತದೆ
ಕ್ಷಿಪ್ರಪ್ರಸಾದ ಗಣೇಶ
ಚಿಗುಲಿ ಮತ್ತು ಮೋದಕವನ್ನು ಅರ್ಪಿಸಿ ಈ ಗಣೇಶನ ಪೂಜೆಯನ್ನು ಮಾಡಿದಲ್ಲಿ ಬೇಡಿದ ವರವನ್ನು ಪಡೆಯಬಹುದು ಎನ್ನಲಾಗಿದೆ.
ಋಣಮೋಚನ ಗಣೇಶ
ಈ ಗಣೇಶನ ಪೂಜೆಯನ್ನು ಮಾಡಿದಲ್ಲಿ ಸಾಲದಿಂದ ಮುಕ್ತರಾಗಬಹುದು. ಉತ್ತಮ ಆರೋಗ್ಯವನ್ನು ಗಳಿಸಲೂ ಇದರ ಅವಶ್ಯಕತೆ ಇರುತ್ತದೆ.
ದುರ್ಗಾ ಗಣೇಶ
ಈ ಗಣೇಶನ ಪೂಜೆಯಿಂದ ಕುಟುಂಬದಲ್ಲಿ ಶಾಂತಿ ಲಭಿಸುತ್ತದೆ ಅಲ್ಲದೆ ಕಾನೂನು ಹೋರಾಟದಲ್ಲಿ ಜಯ ಲಭಿಸುತ್ತದೆ.
ಸಂಕಷ್ಠಹರ ನಿವಾರಣ ಗಣೇಶ
ಸಂಕಷ್ಟಹರ ಚತುರ್ಥಿಯ ದಿನ ಈ ಪೂಜೆಯನ್ನು ಆಚರಿಸಲಾಗುತ್ತದೆ. ಇದರಿಂದಾಗಿ ಎದುರಾಗುವ ಅಡಚಣೆಗಳನ್ನು ಮೀರಿ ಶುಭ ಫಲಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ.
ಗಣೇಶನಿಗೆ ಸಂಬಂಧಿಸಿದ ಈ ಲೇಖನಗಳನ್ನೂ ಓದಿ
Ganesh Chaturthi 2023: ಇಷ್ಟಾರ್ಥ ಸಿದ್ಧಿಗೆ ಉದಯಾಸ್ತಮಾನ, ಅಪ್ಪಂ ಸೇವೆ; ಇದು ಮಧೂರು ಗಣಪತಿಯ ವಿಶೇಷ
ಅಸುರರ ಸಂಹಾರಕ್ಕಾಗಿ ಜನ್ಮ ತಳೆದ ಲಂಬೋದರ ಏಕದಂತನಾಗುವುದು ಹೇಗೆ; ಗಣಪತಿಯ ಜನನಕ್ಕೆ ಸಂಬಂಧಿಸಿದ ಕಥೆಗಳನ್ನು ತಿಳಿಯಿರಿ
Lord Ganesha Names: ಗಣೇಶನ 108 ಹೆಸರು ತಿಳಿಯೋಣ, ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಗಣಪತಿಯ ವಿವಿಧ ಹೆಸರಿನ ಅರ್ಥಸಹಿತ ವಿವರಣೆ ಇಲ್ಲಿದೆ
