Uttarayana: ಉತ್ತರಾಯಣ ಪುಣ್ಯಕಾಲದ ವೈಶಿಷ್ಟ್ಯಗಳು ಹಲವು; ಮಕರ ಸಂಕ್ರಾಂತಿಯಿಂದ 6 ತಿಂಗಳು ಶುಭದಿನಗಳು
ಉತ್ತರಾಯಣ ಅವಧಿಯಲ್ಲಿ ಈ ಆರು ತಿಂಗಳು ದೇವತೆಗಳಿಗೆ ಹಗಲಿನ ವೇಳೆಯಾಗಿರುತ್ತದೆ. ಹಾಗೆಯೇ ಅಸುರರಿಗೆ ರಾತ್ರಿಯ ವೇಳೆ ಆಗಿರುತ್ತದೆ. ಆದ್ದರಿಂದ ಗೃಹಪ್ರವೇಶ ಮುಂತಾದ ಶುಭ ಕಾರ್ಯಗಳ ವೇಳೆ ರಾಕ್ಷಸರ ಆಗಮನ ಆಗುವುದಿಲ್ಲವೆಂಬ ನಂಬಿಕೆ ಇರುತ್ತದೆ. ಉತ್ತರಾಯಣ ಪುಣ್ಯಕಾಲದ ಮತ್ತಷ್ಟು ವೈಶಿಷ್ಟ್ಯ ಇಲ್ಲಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಸಂಕ್ರಾಂತಿ ಹಬ್ಬವನ್ನು ಆಚರಿಸುವುದು ಒಂದು ವಿಚಾರ. ಆದರೆ, ಅದಕ್ಕೆ ಪರ್ಯಾಯವಾಗಿ ಮತ್ತೊಂದು ವಿಚಾರವಿದೆ. ಈ ದಿನವನ್ನು ಉತ್ತರಾಯಣ ಪುಣ್ಯಕಾಲ ಎಂದು ಕರೆಯುತ್ತೇವೆ. ಹಾಗೆಯೇ ಮಕರ ಸಂಕ್ರಮಣ ಎಂದು ಕರೆಯುತ್ತೇವೆ. ಈ ದಿನ ಧಾರ್ಮಿಕ ಕ್ರಿಯಾವಿಧಿಗಳಿಗೆ ಪುಣ್ಯ ದಿನವಾಗಿದೆ. ಈ ದಿನ ಪಿತೃವರ್ಗಕ್ಕೆ ತರ್ಪಣ ನೀಡುವ ಆಚಾರವಿದೆ. ಕೆಲವೆಡೆ ಈ ದಿನ ಶ್ರಾದ್ಧವನ್ನು ಮಾಡುತ್ತಾರೆ. ಕಾರಣ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇದೆ.
ಕೆಲವೊಂದು ಧಾರ್ಮಿಕ ಗ್ರಂಥಗಳ ಅನ್ವಯ ಉತ್ತರಾಯಣ ಆರಂಭವಾದ ನಂತರ ಅಸುನೀಗಿದವರು ನೇರವಾಗಿ ವಿಷ್ಣು ಲೋಕವನ್ನು ಸೇರುತ್ತಾರೆ. ಜ್ಯೋತಿಷ್ಯದ ಅನುಸಾರವಾಗಿ ಶುಭ ಕಾರ್ಯಗಳಿಗೆ ಉತ್ತರಾಯಣವು ಅಂದರೆ ಸಂಕ್ರಾಂತಿಯ ದಿನದಿಂದ ಬರುವ ಆರು ತಿಂಗಳು ಶುಭಪ್ರದವಾಗಿವೆ. ಪ್ರಮುಖವಾಗಿ ಈ ಅವಧಿಯಲ್ಲಿ ಮಾಡುವ ಉಪನಯನ, ಗೃಹಪ್ರವೇಶ ಮತ್ತು ವಿವಾಹಗಳು ಯಶಸ್ಸಿನ ಜೀವನಕ್ಕೆ ಹಾದಿ ಮಾಡಿಕೊಡುತ್ತದೆ. ಅದರಲ್ಲಿಯೂ ಉಪನಯನ ಮತ್ತು ಅಕ್ಷರಭ್ಯಾಸಗಳಿಗೆ ಈ ಅವಧಿಯು ಶ್ರೇಷ್ಠಕರವಾಗಿರುತ್ತದೆ.
ಮಹಾಭಾರತದ ಕಥೆಯ ಪ್ರಕಾರ ತಂದೆಯಿಂದ ಭೀಷ್ಮನು ಇಚ್ಛಾಮರಣದ ವರವನ್ನು ಪಡೆದಿರುತ್ತಾನೆ. ಈ ಕಾರಣದಿಂದ ಅರ್ಜುನನಿಂದ ನಿರ್ಮಿತವಾದ ಶರಶಯ್ಯೆಯ ಮೇಲೆ ಮಲಗಿದ ಭೀಷ್ಮನು ಹರಿನಾಮಸ್ಮರಣೆಯಲ್ಲಿ ಮುಳುಗಿ ಉತ್ತರಾಯಣ ಪುಣ್ಯಕಾಲ ಬರುವವರೆಗೂ ಕಾದಿರುತ್ತಾನೆ. ಆನಂತರ ದೇಹ ತ್ಯಾಗ ಮಾಡುತ್ತಾನೆ. ಕೇವಲ ಮರಣದ ವಿಚಾರಕ್ಕೆ ಮಾತ್ರವಲ್ಲದೆ ಈ ಅವಧಿಯಲ್ಲಿ ಜನಿಸಿರುವವರು ಸಾಮಾನ್ಯವಾಗಿ ಜನಪ್ರಿಯ ವ್ಯಕ್ತಿಗಳಾಗುತ್ತಾರೆ. ಈ ಅವಧಿಯಲ್ಲಿ ಜನಿಸಿರುವ ಅನೇಕರು ಅಸಾಧಾರಣ ಸಾಧನೆಯಿಂದ ಗುರುತಿಸಿಕೊಂಡವರು ನಮ್ಮ ಕಣ್ಣ ಮುಂದೆ ಇದ್ದಾರೆ.
ಗಂಗಾ, ಯಮುನಾ, ಕಾವೇರಿ ಮುಂತಾದ ನದಿಗಳಲ್ಲಿ ಪುಣ್ಯಸ್ನಾನ ಮಾಡುವ ಮೂಲಕ ಮಾಡಿದ ಜನ್ಮ ಜನ್ಮಾಂತರದ ಪಾಪ ಕರ್ಮಗಳಿಂದ ವಿಮುಕ್ತರಾಗಬಹುದು. ಪುಣ್ಯಕ್ಷೇತ್ರಗಳಾದ ಗೋಕರ್ಣ, ಗಯಾ ಇನ್ನಿತರ ಸ್ಥಾನಗಳಲ್ಲಿ ಶ್ರಾದ್ಧ ಕಾರ್ಯವನ್ನು ಮಾಡಿದರೆ ಗತಿಸಿದವರಿಗೆ ಪುಣ್ಯ ಲೋಕ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.
ಈ ವೇಳೆಯಲ್ಲಿ ಸೂರ್ಯನ ಪೂಜೆ ಅತಿ ಮುಖ್ಯವಾಗುತ್ತದೆ. ಸೂರ್ಯನನ್ನು ಇಡೀ ವಿಶ್ವದ ಆತ್ಮ ಎಂದೇ ಕರೆಯುತ್ತೇವೆ. ಕಾರಣ ಮಾನವರ ಸಹಿತ ಇತರೆ ಪ್ರಾಣಿಗಳು ಜೀವಿಸಲು ಅಗತ್ಯವಾದಂತ ಜೀವಾನೀಲವನ್ನು ನೀಡುವ ಸಸ್ಯವರ್ಗಕ್ಕೆ ಸೂರ್ಯನೇ ಆಧಾರವಾಗುತ್ತಾನೆ. ಈ ಕಾರಣದಿಂದಾಗಿ ಈ ದಿನದಂದು ಬೆಳೆದಿರುವ ಬೆಳೆಗಳನ್ನು ಸೂರ್ಯನೆಂದೇ ಭಾವಿಸಿ ಪೂಜಿಸುತ್ತಾರೆ. ಸೂರ್ಯನಿಗೆ ಅತಿ ಇಷ್ಟವಾದ ಕೆಂಪು ಬಣ್ಣದ ಹೂಗಳಿಂದ ಪೂಜಿಸುವುದು ಹೆಚ್ಚು ಶ್ರೇಯಸ್ಕರ. ಈ ದಿನ ಕಪ್ಪು ಎಳ್ಳನ್ನು ಉಪಯೋಗಿಸಿ ಸ್ನಾನ ಮಾಡುವುದರಿಂದ ದೇಹದ ಕಾಂತಿ ಹೆಚ್ಚುತ್ತದೆ. ಮನೆಗಳಲ್ಲಿ ಎಳ್ಳಿನ ದೀಪವನ್ನು ಹಚ್ಚಬಾರದು. ಹಾಗೆಯೇ ತಂದೆ ಇರುವವರು ಎಳ್ಳಿನ ದೀಪವನ್ನು ಹಚ್ಚಬಾರದು. ಉಳಿದವರು ಯಾವುದೇ ದೇವಾಲಯದಲ್ಲಿ ಎಳ್ಳಿನ ದೀಪವನ್ನು ಹಚ್ಚಿವ ಮುಖಾಂತರ ಶುಭಫಲಗಳನ್ನು ಮುಖ್ಯವಾಗಿ ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ.
ಈ ಅವಧಿಯಲ್ಲಿ ಈ ಆರು ತಿಂಗಳು ದೇವತೆಗಳಿಗೆ ಹಗಲಿನ ವೇಳೆಯಾಗಿರುತ್ತದೆ. ಹಾಗೆಯೇ ಅಸುರರಿಗೆ ರಾತ್ರಿಯ ವೇಳೆ ಆಗಿರುತ್ತದೆ. ಆದ್ದರಿಂದ ಗೃಹಪ್ರವೇಶ ಮುಂತಾದ ಶುಭ ಕಾರ್ಯಗಳ ವೇಳೆ ರಾಕ್ಷಸರ ಆಗಮನ ಆಗುವುದಿಲ್ಲವೆಂಬ ನಂಬಿಕೆ ಇರುತ್ತದೆ. ಇದೇ ದಿನದಂದು ಶ್ರೀರಾಮಚಂದ್ರನು ರಾವಣನನ್ನು ಸಂಹರಿಸಿ ಸೀತೆಯನ್ನು ಬಿಡುಗಡೆಗೊಳಿಸಿದನು ಎಂದು ತಿಳಿದು ಬರುತ್ತದೆ. ಈ ದಿನದಂದು ಎಳ್ಳನ್ನು ದಾನ ನೀಡುವುದರಿಂದ ಸಾಲದಿಂದ ಋಣಮುಕ್ತರಾಗಬಹುದು ಎನ್ನಲಾಗಿದೆ. ಮುಖ್ಯವಾಗಿ ಹೊಸ ರೀತಿಯ ಸಂತೋಷಕರ ಜೀವನವನ್ನು ಆರಂಭಿಸಬಹುದಾಗಿದೆ. ವಂಶದ ಹಿರಿಯರ ಅಥವಾ ತಂದೆಯ ಆಶೀರ್ವಾದವನ್ನು ಪಡೆದು ಜೀವನದಲ್ಲಿ ಸಫಲತೆಯನ್ನು ಪಡೆಯಬಹುದು.
ಬರಹ: ಎಚ್. ಸತೀಶ್
ಜ್ಯೋತಿಷಿ, ಬೆಂಗಳೂರು
ಮೊಬೈಲ್: 8546865832