ಕರ್ಣನ ಬದುಕಿನ ಮರುವ್ಯಾಖ್ಯಾನ: ಜ್ಯೋತಿಷಿ ಪ್ರಕಾಶ ಅಮ್ಮಣ್ಣಾಯ ಬರಹ
Karna Life: ಮಹಾಭಾರತದ ಪ್ರತಿನಾಯಕ, ದುರಂತ ನಾಯಕ, ಆದರ್ಶ ಸ್ನೇಹಿತ ಕರ್ಣ. ಹುಟ್ಟಿದ ಕ್ಷಣದಿಂದ ಒಂದಿಲ್ಲೊಂದು ಬಗೆಯಲ್ಲಿ ಸವಾಲುಗಳನ್ನು ಅನುಭವಿಸಿ, ಆ ಸವಾಲುಗಳನ್ನೇ ಅವಕಾಶಗಳನ್ನಾಗಿ ಮಾಡಿಕೊಂಡ ಛಲಗಾರ ಆತ. ಕರ್ಣಾವಸಾನದ ಬಗ್ಗೆ ಹೊಸ ಒಳನೋಟ ನೀಡಲು ಈ ಬರಹದಲ್ಲಿ ಖ್ಯಾತ ಜ್ಯೋತಿಷಿ ಪ್ರಕಾಶ ಅಮ್ಮಣ್ಣಾಯ ಪ್ರಯತ್ನಿಸಿದ್ದಾರೆ.
ಕರ್ಣನು ಸೂತ ಸುತನೆಂಬ ವಿಳಾಸದಲ್ಲಿ ಇದ್ದವನು. ಕ್ಷಾತ್ರನಾದರೂ ಅವನಿಗೆ ಜನ್ಮ ರಹಸ್ಯ ಗೊತ್ತಿರದ ಕಾರಣ ಸೂತ ಸುತನೆಂದೇ ಹೆಸರು ಪಡೆದಿದ್ದ.ಇನ್ನೊಂದರ್ಥದಲ್ಲಿ ನೋಡಿದರೆ ಸೂತ ಎಂದರೆ ಸೂರ್ಯ. ಸೂರ್ಯ ಸುತನೂ ಆಗಿದ್ದ. ಆಡು ಮಾತಿನ ಸೂತನು ಶೂದ್ರಜ.
ಕ್ಷಾತ್ರ ಗುಣ ಇದ್ದುದರಿಂದಲೇ ಕರ್ಣನಿಗೆ ಶಸ್ತ್ರಾಸ್ತ್ರ ಅಭ್ಯಾಸ ಮಾಡುವ ಮನಸ್ಸಾಯಿತೆನ್ನಬಹುದು. ಶೂದ್ರತ್ವವೇ ಇರುತ್ತಿದ್ದರೆ ಆತ ರಥ ಓಡಿಸುವ ಕಾಯಕವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದ. ಹಾಗಾಗಲಿಲ್ಲ. ಗುರುವನ್ನರಸುತ್ತಾ ಪರಶುರಾಮರಲ್ಲಿಗೆ ಬಂದು ಶಸ್ತ್ರಾಸ್ತ್ರ ಅಭ್ಯಾಸದ ವಿದ್ಯೆಗಾಗಿ ಬೇಡಿಕೊಂಡ. ನಾನು ಕ್ಷತ್ರಿಯರಿಗೆ ಮಾತ್ರ ವಿದ್ಯಾದಾನ ಮಾಡುವುದು ಎಂದು ಪರಶುರಾಮರು ಹೇಳಿದ್ದರು. ಅದಕ್ಕೆ ಕರ್ಣನು ನಾನು ಕ್ಷತ್ರಿಯನು ಎಂದು ಸುಳ್ಳು ಹೇಳಿ ವಿದ್ಯೆ ಕಲಿತನು. ಮುಂದೆ ಕರ್ಣನು ಕ್ಷತ್ರಿಯನಲ್ಲ ಎಂದು ತಿಳಿದು ಪರಶುರಾಮರು ,' ನಿನ್ನ ಅಂತ್ಯಕಾಲದಲ್ಲಿ ನೀನು ನನ್ನಿಂದ ಕಲಿತ ವಿದ್ಯೆಯು ಮರೆತೇ ಹೋಗಲಿ' ಎಂದು ಶಾಪ ನೀಡುತ್ತಾರೆ. ಇದೆಲ್ಲ ಕಥೆ. ಎಷ್ಟು ಸತ್ಯವಿದೆ ಇದರಲ್ಲಿ ಎಂಬುದೇ ಗೊಂದಲ. ಒಂದನೆಯದ್ದಾಗಿ ಪರಶುರಾಮರು ದೈವತ್ವ ಇದ್ದವರು. ಕ್ಷಾತ್ರ ವಿರೋಧಿ. ಹಾಗಾದರೆ ಭೀಷ್ಮರಿಗೆ ಹೇಗೆ ವಿದ್ಯಾದಾನ ಮಾಡಿದರು? ಕ್ಷತ್ರಿಯನೆಂದ ಕರ್ಣನಿಗೆ ವಿದ್ಯಾದಾನವನ್ನು ಹೇಗೆ ಮಾಡಿದರು ಎಂಬ ಪ್ರಶ್ನೆ ಬರುತ್ತದೆ. ಅಲ್ಲದೆ ದೈವತ್ವ ಇರುವ ತ್ರಿಕಾಲ ಜ್ಞಾನಿಯಾದ ಪರಶುರಾಮರನ್ನು ದೇವರೆಂದೇ ಋಷಿಮುನಿಗಳೇ ನಿರ್ಧರಿಸಿದ್ದು ಹೇಗೆ? ಕಾಲಾಕಾಲ ಪರಿಜ್ಞಾನ, ಸದ್ಗುಣ ಸಂಪನ್ನನು, ಸತ್ವರಜತಮೋ ಗುಣ ಸಂಪನ್ನನೇ ದೇವರಾಗೋದು.
ಜ್ಯೋತಿಷ್ಯಶಾಸ್ತ್ರಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
ಅದೆಲ್ಲವೂ ಪರಶುರಾಮರಲ್ಲಿ ಇದ್ದುದರಿಂದಲೇ ಋಷಿಗಳು ಪರಶುರಾಮರನ್ನು ದೇವರೆಂದುಕೊಂಡರು. ಆರಾಧಿಸಿದರು. ಹಾಗಾದರೆ ತ್ರಿಕಾಲ ಜ್ಞಾನಿಯಾದ ಪರಶುರಾಮ ದೇವರಿಗೆ ಕರ್ಣನ ಜನ್ಮರಹಸ್ಯ ತಿಳಿಯಲು ಅಸಾಧ್ಯವಾದದ್ದು ಹೇಗೆ? ಸಿದ್ಧಾಂತದ ಆಧಾರದಲ್ಲೇ ದೇವರನ್ನಾಗಲೀ, ಗುರುಗಳನ್ನಾಗಲೀ ನೋಡಬೇಕಾಗುತ್ತದೆ. ಅವರೆಂದೂ ನಿಯಮ ತಪ್ಪುವವರಲ್ಲ. ಪರಶುರಾಮರು ದುಷ್ಟ ಕ್ಷತ್ರಿಯರ ನಾಶ ಮಾಡಿದ್ದೇ ವಿನಃ,ಕ್ತಾತ್ರ ಜನಾಂಗದ ದ್ವೇಷಿಯಲ್ಲ. ಇವೆಲ್ಲವೂ ಪುರಾಣೇತಿಹಾಸ ಬರೆಯುವವರು ಕಥೆಯ ಸ್ವಾರಸ್ಯಕ್ಕಾಗಿಯೇ ಬರೆದದ್ದಿರಬೇಕು.
ನನ್ನ ಯೋಚನೆಯ ಪ್ರಕಾರ ಕರ್ಣನ ಜನ್ಮ ಜಾತಕಾನುಸಾರ, ನಡೆ ನುಡಿಗಳ ಆಧಾರದಲ್ಲಿ ಪರಶುರಾಮ ದೇವರು ಲೆಕ್ಕ ಹಾಕಿರಬಹುದು. ಸಾಮಾನ್ಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಲಗ್ನದ ಬಾಧಾಧಿಪತಿ ಪಂಚಮಕ್ಕೆ ಸಂಪರ್ಕವಿದ್ದಾಗ ಮರೆವು ರೋಗ ಉಂಟಾಗುತ್ತದೆ. ಇದನ್ನೇ ಪರಶುರಾಮ ದೇವರು ಕರ್ಣನಿಗೆ ತಿಳಿಸಿರಬಹುದು. ಎಷ್ಟೇ ನೆನಪಿನ ಶಕ್ತಿ ಇದ್ದವರಿಗೂ ಈ ದೋಷ ಇದ್ದರೆ ಅವರಿಗೆ ಸಕಾಲದಲ್ಲಿ ಬೇಕಾದ ವಿಚಾರ ಮರೆತುಹೋಗುತ್ತದೆ. ಇದನ್ನೇ ಪರಶುರಾಮದೇವರು ಕರ್ಣನಿಗೆ ತಿಳಿಸಿರಬಹುದಷ್ಟೇ ಹೊರತು ಶಾಪ ಕೊಡಲು ಸಾಧ್ಯವೇ ಇಲ್ಲ. ಗುರುಗಳಾಗಲೀ, ದೇವರಾಗಲೀ ಶಾಪ ಕೊಡುವ ಕ್ರಮ ಇಲ್ಲ. ಹಾಗೇನಾದರೂ ಕೊಟ್ಟರೆ ಅವರು ದೇವರೂ ಆಗಲ್ಲ, ಗುರುಗಳೂ ಆಗೋದಿಕ್ಕೆ ಸಾಧ್ಯವೇ ಇಲ್ಲ. ಕರ್ಣನಿಗೆ ಈ ರೋಗವು ಅಂತ್ಯಕಾಲಕ್ಕೆ ಬಂದುಹೋಯ್ತು. ಹಾಗೆ ಬರುವುದಕ್ಕೂ ಕಾರಣ ಇದೆ. ಅಧರ್ಮದ ಪಕ್ಷಪಾತಿಯಾಗಿದ್ದೇನೆ, ಪಾಂಡವರ ಸಹೋದರ, ಕುಂತಿಯ ಪುತ್ರ ಎಂಬ ಅರಿವನ್ನು ಶ್ರೀಕೃಷ್ಣನು ಕೊನೆಯ ದಿನಗಳಲ್ಲಿ ತಿಳಿಸಿದ್ದೇ ಗೊಂದಲಕ್ಕೀಡು ಮಾಡಿತ್ತು ಕರ್ಣನನ್ನು. ಇದನ್ನೇ ದೈವ ಪ್ರೇರಣೆ ಎನ್ನೋದು. ದೇವರ ಚೈತನ್ಯಕ್ಕಿಂತ ಮಿಗಿಲಾದದ್ದು ಜಗತ್ತಿನಲ್ಲಿ ಯಾವುದೂ ಇಲ್ಲ.
ಬರಹ: ಪ್ರಕಾಶ ಅಮ್ಮಣ್ಣಾಯ
(ಗಮನಿಸಿ: ಈ ಲೇಖನದಲ್ಲಿ ಇರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ. ಅಧ್ಯಾತ್ಮ, ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಬರಹಗಳಿಗೆ kannada.hindustatimes.com ಜಾಲತಾಣಕ್ಕೆ ಭೇಟಿ ನೀಡಿ)
ವಿಭಾಗ