Pind Daan: ಪಿಂಡ ದಾನಕ್ಕೆ ಶ್ರೇಷ್ಠ ಈ ಸ್ಥಳ : ದಶರಥನಿಗೆ ಭಗವಾನ್​ ಶ್ರೀರಾಮ ಪಿಂಡ ಪ್ರದಾನಗೈದ ಪುಣ್ಯಸ್ಥಳವಿದು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Pind Daan: ಪಿಂಡ ದಾನಕ್ಕೆ ಶ್ರೇಷ್ಠ ಈ ಸ್ಥಳ : ದಶರಥನಿಗೆ ಭಗವಾನ್​ ಶ್ರೀರಾಮ ಪಿಂಡ ಪ್ರದಾನಗೈದ ಪುಣ್ಯಸ್ಥಳವಿದು

Pind Daan: ಪಿಂಡ ದಾನಕ್ಕೆ ಶ್ರೇಷ್ಠ ಈ ಸ್ಥಳ : ದಶರಥನಿಗೆ ಭಗವಾನ್​ ಶ್ರೀರಾಮ ಪಿಂಡ ಪ್ರದಾನಗೈದ ಪುಣ್ಯಸ್ಥಳವಿದು

Pind Pradhan: ಪೂರ್ವಜರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲು ಕುಟುಂಬಸ್ಥರು ಪಿಂಡ ಪ್ರದಾನ ಮಾಡುತ್ತಾರೆ. ಹಿಂದೂ ಧರ್ಮದಲ್ಲಿ ಪಿಂಡ ಪ್ರದಾನ ಮಾಡಲು ಈ ಸ್ಥಳವನ್ನು ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಸ್ವತಃ ಭಗವಾನ್​ ಶ್ರೀರಾಮನು ಇಲ್ಲಿ ತನ್ನ ತಂದೆ ದಶರಥ ಮಹಾರಾಜನಿಗೆ ಪಿಂಡ ಪ್ರದಾನ ಮಾಡಿದ್ದರು ಎಂಬ ನಂಬಿಕೆಯಿದೆ.

ಪಿಂಡ ಪ್ರದಾನ (pixabay)
ಪಿಂಡ ಪ್ರದಾನ (pixabay)

ಹಿಂದೂ ಸಂಪ್ರದಾಯಗಳಲ್ಲಿ ಪಿಂಡ ಪ್ರದಾನಕ್ಕೆ ಸಾಕಷ್ಟು ಮಹತ್ವವಿದೆ. ನಮ್ಮನ್ನು ಅಗಲಿದೆ ಪೂರ್ವಜರ ಆತ್ಮತೃಪ್ತಿಗಾಗಿ ನಾವು ಪಿಂಡ ಪ್ರದಾನ ಕಾರ್ಯವನ್ನು ಮಾಡುತ್ತೇವೆ. ಹೀಗೆ ಮಾಡುವುದರಿಂದ ಮೃತರ ಆತ್ಮಕ್ಕೆ ಶಾಂತಿ ದೊರಕುತ್ತದೆ ಎಂಬುದು ಸನಾತನ ಧರ್ಮದಲ್ಲಿರುವ ನಂಬಿಕೆಯಾಗಿದೆ. ಪಿಂಡ ಪ್ರದಾನ ಮಾಡುವುದಕ್ಕೆ ಬಿಹಾರದ ಗಯಾ ಪ್ರದೇಶಕ್ಕೆ ತೆರಳುವುದು ಅತ್ಯಂತ ಶ್ರೇಷ್ಟ ಎಂಬ ನಂಬಿಕೆಯಿದೆ. ಈ ಸ್ಥಳಕ್ಕೆ ಇಷ್ಟೊಂದು ಪ್ರಾಮುಖ್ಯತೆ ಬರಲು ಹೇಗೆ ಕಾರಣ? ಇದರ ಬಗ್ಗೆ ತಿಳಿದುಕೊಳ್ಳೋಣ

ಪಿಂಡ ಪ್ರದಾನ ಎಂದರೇನು ?

ಪಿಂಡ ಪ್ರದಾನ ಎನ್ನುವುದು ಹಿಂದೂ ಧರ್ಮದ ಪ್ರಮುಖ ಪದ್ಧತಿ. ತಮ್ಮ ಮನೆಯವರು, ಕುಟುಂಬಸ್ಥರು ಅಗಲಿದಾಗ ಅವರಿಗೆ ಗೌರವ ಸಲ್ಲಿಸುವ ಪರಿಯನ್ನು ಪಿಂಡ ಪ್ರದಾನ ಎನ್ನಲಾಗುತ್ತದೆ. ಅನ್ನಕ್ಕೆ ಕಪ್ಪು ಬಣ್ಣದ ಎಳ್ಳನ್ನು ಮಿಶ್ರಣ ಮಾಡಿ ಉಂಡೆ ರೀತಿಯಲ್ಲಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಮಕ್ಕಳು ತಮ್ಮ ಮೃತ ತಂದೆ ತಾಯಿಗೆ ಇದನ್ನು ಅರ್ಪಿಸುತ್ತಾರೆ. ಮೃತರ ಆತ್ಮಕ್ಕೆ ಶಾಂತಿ ದೊರಕಲು ಹಾಗೂ ಮೋಕ್ಷವನ್ನು ಪಡೆಯುವಲ್ಲಿ ಪಿಂಡ ಪ್ರದಾನ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ನಂಬಿಕೆಯಿದೆ. ಪೂರ್ವಜನರ ಆಶೀರ್ವಾದ ಪಡೆಯುವ ಸಲುವಾಗಿ ಕೂಡ ಅವರಿಗೆ ಪಿಂಡ ಪ್ರದಾನ ಮಾಡಲಾಗುತ್ತದೆ. ಪಿತೃಪಕ್ಷದ ಸಮಯದಲ್ಲಿ ಪೂರ್ವಜರಿಗೆ ಪಿಂಡ ಪ್ರದಾನ ಮಾಡುವ ಪರಂಪರೆ ಹಿಂದೂ ಸಮುದಾಯದಲ್ಲಿದೆ.

ಪಿಂಡ ಪ್ರದಾನಕ್ಕೆ ಗಯಾ ಸ್ಥಳಕ್ಕೆ ಮಹತ್ವವಿರುವುದು ಏಕೆ?

ಭಗವಾನ್​ ಶ್ರೀರಾಮನು ತನ್ನ ತಂದೆ ದಶರಥನ ಮರಣದ ಬಳಿಕ ಬಿಹಾರದ ಗಯಾದಲ್ಲಿ ಪಿಂಡ ಪ್ರದಾನ ಮಾಡಿದ್ದನು ಎಂಬ ನಂಬಿಕೆಯಿದೆ. ಈ ಸ್ಥಳವು ರಾಮಾಯಣಕ್ಕೆ ಸಂಬಂಧಿಸಿದ್ದಾಗಿದ್ದರಿಂದ ಈ ಸ್ಥಳದಲ್ಲಿ ಪಿಂಡ ಪ್ರದಾನ ಮಾಡುವುದು ಶ್ರೇಷ್ಟ ಎಂದು ನಂಬಲಾಗಿದೆ. ಇದು ಮಾತ್ರವಲ್ಲದೇ ವಿಷ್ಣುವಿನ ಹೆಜ್ಜೆ ಗುರುತು ಈ ಸ್ಥಳದಲ್ಲಿ ಇದೆ ಎಂಬ ನಂಬಿಕೆ ಕೂಡ ಇದೆ. ಇದೇ ಕಾರಣಕ್ಕೆ ಈ ಸ್ಥಳಕ್ಕೆ ಸಾಕಷ್ಟು ಧಾರ್ಮಿಕ ಪ್ರಾಮುಖ್ಯತೆಯಿದೆ. ಇದೇ ಕಾರಣಕ್ಕಾಗಿ ಅನೇಕರು ತಮ್ಮ ಪೂರ್ವಜರ ಪಿಂಡ ಪ್ರದಾನ ಮಾಡಲು ಗಯಾಕ್ಕೆ ಪ್ರಯಾಣ ಬೆಳೆಸುತ್ತಾರೆ. ಇಲ್ಲಿ ಪೂರ್ವಜರ ಅಂತಿಮ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿ ಪಿಂಡ ಪ್ರದಾನ ಮಾಡುವುದರಿಂದ ಅವರ ಅತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆಯಿದೆ. ಪ್ರಶಾಂತವಾದ ಪರಿಸರ ಹಾಗೂ ಆಧ್ಯಾತ್ಮಿಕ ವಾತಾವರಣವು ಸ್ಥಳದ ಪ್ರಾವಿತ್ರ್ಯತೆಯನ್ನು ಇನ್ನಷ್ಟು ಹೆಚ್ಚಿಸಿದೆ.

ರಾಮಾಯಣ ಮಾತ್ರವಲ್ಲ, ಮಹಾಭಾರತದ ಜೊತೆಯೂ ಇದೆ ಬಂಧ :

ಬಿಹಾರದ ಗಯಾ ಸ್ಥಳವು ಕೇವಲ ರಾಮಾಯಣದೊಂದಿಗೆ ಮಾತ್ರ ಸಂಬಂಧವನ್ನು ಹೊಂದಿಲ್ಲ. ಮಹಾಭಾರತದಲ್ಲಿಯೂ ಪಾಂಡವರ ಪೈಕಿ ಹಿರಿಯನಾದ ಯುಧಿಷ್ಠಿರನಿಗೆ ಪಿಂಡ ಪ್ರದಾನ ಮಾಡಲು ಗಯಾ ಸ್ಥಳಕ್ಕೆ ತೆರಳುವಂತೆ ಸ್ವತಃ ಶ್ರೀಕೃಷ್ಣನೇ ಮಾರ್ಗದರ್ಶನ ನೀಡಿದ್ದನಂತೆ. ಅಲ್ಲದೇ ಪವಿತ್ರವಾದ ಫಲ್ಗು ನದಿಯು ಗಯಾದಲ್ಲಿಯೇ ಹರಿಯುತ್ತದೆ. ಈ ನದಿಯಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸುವುದು ಮಂಗಳಕರ ಎಂದು ಪರಿಗಣಿಸಲಾಗಿದೆ.

ಪಿಂಡ ಪ್ರದಾನದ ವೇಳೆ ಪಾಲಿಸಬೇಕಾದ ನಿಯಮಗಳು :

ಅಕ್ಕಿ ಹಾಗೂ ಎಳ್ಳನ್ನು ದುಂಡಗಿನ ಉಂಡೆಯನ್ನಾಗಿ ಮಾಡಿ ಅದನ್ನು ಪಿಂಡದ ರೂಪದಲ್ಲಿ ಅರ್ಪಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಸತ್ತವರ ಆತ್ಮಕ್ಕೆ ಶಾಂತಿ ದೊರಕುತ್ತದೆ ಎಂಬ ನಂಬಿಕೆಯಿದೆ. ಗಯಾದಲ್ಲಿರುವ ಪ್ರೇತ್ಶಿಲಾ ಎಂಬ ಬೆಟ್ಟಕ್ಕೆ ಅನೇಕರು ಭೇಟಿ ನೀಡುತ್ತಾರೆ. ಸ್ವತಃ ಭಗವಾನ್​ ಶ್ರೀರಾಮ ಹಾಗೂ ಧರ್ಮರಾಯ ಈ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದರು ಎಂಬ ನಂಬಿಕೆಯಿದೆ. ಶ್ರೀರಾಮನು ದಶರಥನಿಗೆ ಇಲ್ಲೇ ಪಿಂಡ ಪ್ರದಾನ ಮಾಡಿದ್ದರಿಂದ ಅನೇಕರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಬ್ರಹ್ಮ ಕುಂಡ ಸ್ನಾನ: ಗಯಾಕ್ಕೆ ಬರುವ ಯಾತ್ರಿಕರು ಬ್ರಹ್ಮ ಕುಂಡದಲ್ಲಿ ಸ್ನಾನ ಮಾಡುತ್ತಾರೆ. ಇಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಮನಸ್ಸು ಹಾಗೂ ದೇಹ ಶುದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಪಿಂಡದಾನ ಮಾಡುವುದಕ್ಕೂ ಮುನ್ನ ಇಲ್ಲಿ ಸ್ನಾನ ಮಾಡುವುದು ಸಂಪ್ರದಾಯವಾಗಿದೆ.

ಅಕ್ಷಯವತ್​ ವೃಕ್ಷ ಪೂಜೆ : ಅಕ್ಷಯ್​ವೃತ್​ ವೃಕ್ಷವನ್ನು ಪೂಜೆ ಮಾಡುವುದು ಕೂಡ ಪಿಂಡ ಪ್ರದಾನಕ್ಕೆ ಸಂಬಂಧಿಸಿದ ಸಂಪ್ರದಾಯಗಳ ಪೈಕಿ ಒಂದಾಗಿದೆ. ಈ ಪವಿತ್ರ ಅಂಜೂರದ ಮರದ ಕೆಳಗೆ ಶ್ರೀರಾಮನು ತನ್ನ ತಂದೆಗೆ ಪಿಂಡ ಪ್ರದಾನ ಮಾಡಿದ್ದನು ಎಂಬ ಪ್ರತೀತಿಯಿದೆ.

ಫಲ್ಗು ನದಿಯಲ್ಲಿ ತರ್ಪಣೆ : ಪಿಂಡ ಪ್ರದಾನ ಮಾಡಲೆಂದು ಗಯಾಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ಫಲ್ಗು ನದಿಯಲ್ಲಿ ತರ್ಪಣಗಳನ್ನು ಅರ್ಪಿಸುತ್ತಾರೆ. ಬಳಿಕ ಮೃತರು ಶಾಂತಿಯಿಂದ ನೆಲೆಸುವಂತೆ ಹಾಗೂ ಭವಿಷ್ಯದಲ್ಲಿ ಕುಟುಂಬಕ್ಕೆ ಯಾವುದೇ ರೀತಿಯಲ್ಲಿ ಹಾನಿ ಮಾಡದಂತೆ ಬೇಡಿಕೊಳ್ಳುತ್ತಾರೆ. ಇಲ್ಲಿ ತರ್ಪಣ ಬಿಟ್ಟರೆ ಪೂರ್ವಜರ ಆತ್ಮಕ್ಕೆ ಶಾಂತಿ ದೊರಕುತ್ತದೆ ಎಂಬ ನಂಬಿಕೆಯಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.