ಡಿ 28 ಕ್ಕೆ ಶನಿ ಪ್ರದೋಷ: ಮನಸಿಟ್ಟು ಶನಿದೇವನ ಪೂಜಿಸಿದರೆ ದಾಂಪತ್ಯ, ವಿದ್ಯಾಭ್ಯಾಸದ ದೋಷ ಪರಿಹಾರ, ಕಥೆ-ಪೂಜಾ ವಿವರ ಇಲ್ಲಿದೆ
ಈ ಪೂಜೆಯಿಂದ ಒಳ್ಳೆಯ ಸಂತಾನವಾಗುತ್ತದೆ ಅಥವಾ ಮಕ್ಕಳ ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಶ್ರೀ ಪರಮೇಶ್ವರನಿಗೆ ಪೂಜೆ ಮಾಡುವ ಕಾರಣ ಕುಟುಂಬದ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ. ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಪ್ರಗತಿ ಕಂಡುಬರುತ್ತದೆ. (ಬರಹ: ಸತೀಶ್, ಜ್ಯೋತಿಷಿ)
2024 ನೇ ವರ್ಷದ ಕೊನೆಯ ಪ್ರದೋಷ ಪೂಜೆಯನ್ನು ಡಿಸೆಂಬರ್ 28 ರಂದು ಮಾಡಬೇಕಾಗುತ್ತದೆ. ಈ ಶನಿ ಪ್ರದೋಷ ಪೂಜೆಯಿಂದ ವಿಶೇಷ ಫಲಗಳು ದೊರೆಯುತ್ತವೆ. ಆ ದಿನ ಸಂಜೆಯ ವೇಳೆ 6.30 ರಿಂದ 7.15 ರ ನಡುವೆ ಪೂಜೆ ಆರಂಭಿಸಬೇಕು. ಈ ಅವಧಿಯಲ್ಲಿ ಮಿಥುನ ಲಗ್ನವಿರುತ್ತದೆ. ಪ್ರಮುಖವಾಗಿ ರವಿಯು ಸಪ್ತಮಭಾವದಲ್ಲಿ ಸ್ಥಿತನಾಗಿರುತ್ತಾನೆ. ಚಂದ್ರ ಮತ್ತು ಕುಜರ ನಡುವೆ ಪರಿವರ್ತನ ಯೋಗ ಇರುತ್ತದೆ. ಇದರಿಂದ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ಉಪಾಯನದ ವಿಧಿಯಿಂದ ಸಂಪೂರ್ಣ ಪೂಜಾಫಲ ದೊರೆಯುತ್ತದೆ. ಶಿವನ ಪೂಜೆಯ ಜೊತೆಯಲ್ಲಿ ಶನಿಶಾಂತಿಯನ್ನು ಮಾಡುವುದು ಒಳ್ಳೆಯದು. ಬೆಳಗಿನ ವೇಳೆಯನ್ನು ಶ್ರೀ ಆಂಜನೇಯಸ್ವಾಮಿಯನ್ನು ಅರ್ಚಿಸಬೇಕು.
ಪ್ರದೋಷದ ದಿನದಂದು ಉದಯ ಲಗ್ನ ಅಂದರೆ 6 ರಿಂದ 7:30 ರ ಒಳಗಿನ ವೇಳೆಯಲ್ಲಿ ಗೋಪೂಜೆಯನ್ನು ಮಾಡಬೇಕು. ಆನಂತರ ಮಾರುತಿಯನ್ನು ಪೂಜಿಸಿದಲ್ಲಿ ಉದ್ಯೋಗದಲ್ಲಿ ಇರುವ ತೊಂದರೆಯು ಕೊನೆಗೊಳ್ಳುತ್ತದೆ. ಸಹೋದ್ಯೋಗಿಗಳು ಮತ್ತು ಅಧಿಕಾರಿಗಳ ನಡುವಿನ ಮನಸ್ತಾಪ ಮರೆಯಾಗುವುದು. ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪವು ಪರಿಹಾರಗೊಳ್ಳುವುದು ಎಂದು ಕೆಲವು ಧಾರ್ಮಿಕ ಗ್ರಂಥಗಳಲ್ಲಿ ತಿಳಿಸಿವೆ.
ಸಾಮಾನ್ಯವಾಗಿ ಈ ಪೂಜೆಯಿಂದ ಒಳ್ಳೆಯ ಸಂತಾನವಾಗುತ್ತದೆ ಅಥವಾ ಮಕ್ಕಳ ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಶ್ರೀ ಪರಮೇಶ್ವರನಿಗೆ ಪೂಜೆ ಮಾಡುವ ಕಾರಣ ಕುಟುಂಬದ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ. ಅಪಮೃತ್ಯು ದೋಷವು ಪರಿಹಾರ ಆಗುತ್ತದೆ. ಈ ಪೂಜೆಗೆ ಸಂಬಂಧಿಸಿದಂತೆ ಕತೆಯೊಂದಿದೆ.
ಶನಿ ಪ್ರದೋಷ ಪೂಜೆಯ ಕಥೆ
ಮಿಥಿಲಾ ನಗರದಲ್ಲಿ ಓರ್ವ ಜನಾನುರಾಗಿ ಇರುತ್ತಾನೆ. ಕಷ್ಟಪಟ್ಟು ಗಳಿಸಿದ ತನ್ನ ಗಳಿಕೆಯ ಬಹುಪಾಲನ್ನು ಜನೋಪಯೋಗಿ ಕೆಲಸ ಕಾರ್ಯಗಳಿಗೆ ಖರ್ಚು ಮಾಡುತ್ತಿರುತ್ತಾನೆ. ಉತ್ತಮ ಪತ್ನಿ ಇದ್ದರೂ ಆತನಿಗೆ ಸುಖ ಸಂತೋಷ ಎಂಬುದು ಕನಸಾಗಿಯೇ ಉಳಿದಿತ್ತು. ಇದಕ್ಕೆ ಕಾರಣ ಆ ದಂಪತಿಗಳಿಗೆ ಸಂತಾನ ಇರುವುದಿಲ್ಲ. ಸಂತಾನವೇ ಇಲ್ಲದ ಜೀವನ ಪ್ರಯೋಜನವಿಲ್ಲ ಎಂಬ ಮನಸ್ಸು ದಂಪತಿಗಳಿಗಿತ್ತು. ಯಾವುದೇ ಪೂಜೆ ಪುನಸ್ಕಾರ ಮಾಡಿದರೂ, ದಾನ ಧರ್ಮಗಳನ್ನು ಮಾಡಿದರೂ ಸಂತಾನ ಆಗಿರಲಿಲ್ಲ. ಆಕಸ್ಮಿಕವಾಗಿ ಇವರನ್ನು ಸಂತರೊಬ್ಬರು ಭೇಟಿಯಾಗುತ್ತಾರೆ. ತಮ್ಮ ಅಂತರ್ ಜ್ಞಾನ ಶಕ್ತಿಯಿಂದ ಅವರು ದಂಪತಿಗಳಿಗೆ ಸಂತಾನವಿಲ್ಲದ ಬಗ್ಗೆ ತಿಳಿಯುತ್ತಾರೆ. ಸ್ವಯಂಪ್ರೇರಣೆಯಿಂದ ತಮ್ಮ ಮಾರ್ಗದರ್ಶನದಲ್ಲಿ ಅವರಿಂದ ಶನಿಪ್ರದೋಷದ ಪೂಜೆಯನ್ನು ಮಾಡಿಸುತ್ತಾರೆ. ಆನಂತರ ಆ ದಂಪತಿಗಳಿಗೆ ಗಂಡು ಸಂತಾನವಾಗುತ್ತದೆ.
ಇದೇ ರೀತಿಯಲ್ಲಿ ಶನಿಪ್ರದೋಷ ಪೂಜೆ ಮಾಡಿ ದಶರಥ ಮಹಾರಾಜನು ಕಷ್ಟದಿಂದ ಪಾರಾದನೆಂದು ಹೇಳಲಾಗಿದೆ. ಆದ್ದರಿಂದ ಇಂದಿನ ಪೂಜೆಯಿಂದ ಉದ್ಯೋಗದಲ್ಲಿನ ಬಿನ್ನಾಭಿಪ್ರಾಯಗಳು ದೂರವಾಗುತ್ತದೆ. ಸ್ವಂತ ಉದ್ದಿಮೆ ಉಳ್ಳವರಿಗೆ ಶುಭ ಉಂಟಾಗುತ್ತದೆ. ಒಮ್ಮೆ ಬಲರಾಮನಿಗೆ ಗೋಹತ್ಯಾ ದೋಷ ಬರುತ್ತದೆ. ಆಗ ಅವನು ಗುರುಹಿರಿಯರ ಆದೇಶದಂತೆ ಶನಿಪ್ರದೋಷವನ್ನು ಆಚರಿಸುತ್ತಾನೆ. ಇದರಿಂದ ಬಲರಾಮನ ಪಾಪ ಪರಿಹಾರವಾಗುತ್ತದೆ. ಇಂದಿನ ಗೋಪೂಜೆ ಅಥವ ಗೋದಾನದಿಂದ ಗರ್ಭಿಣಿಯರಿಗೆ ಒಳ್ಳೆಯದಾಗುತ್ತದೆ. ಈ ದಿನದಂದು ಶನಿಪ್ರದೋಷವನ್ನು ಆಚರಿಸುವುದರಿಂದ ನಾನಾ ರೀತಿಯ ಪ್ರಯೋಜನಗಳು ಕಂಡುಬರುತ್ತವೆ.
ಸಜ್ಜಿಗೆ ಪ್ರಸಾದ ಶ್ರೇಷ್ಠ
ಈ ಪೂಜೆಯಲ್ಲಿ ಆಂಜನೇಯ ಮತ್ತು ಶ್ರೀರಾಮರ ಪೂಜೆಯನ್ನೂ ಮಾಡಿ, ರವೆಯಿಂದ ಮಾಡಿದ ಸಜ್ಜಿಗೆಯನ್ನು ಪ್ರಸಾದವಾಗಿ ಸ್ವೀಕರಿಸಿದಲ್ಲಿ, ದಾಂಪತ್ಯ ಜೀವನದ ಸಮಸ್ಯೆಗಳು ದೂರವಾಗುತ್ತವೆ. ಪ್ರದೋಷದ ದಿನ ಶಿವ ಪಂಚಾಕ್ಷರಿ ಮಂತ್ರ ಪಠಣೆಯಿಂದ ಆಪಾಯಗಳು ದೂರವಾಗುತ್ತವೆ. ನಂದಿ ಗಾಯತ್ರಿಯನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ 18, 48, 108 ಬಾರಿ ಜಪಿಸಿದಲ್ಲಿ ಪೂರ್ವ ಜನ್ಮದಲ್ಲಿ ಮಾಡಿದ ದೋಷಗಳು ದೂರವಾಗುತ್ತವೆ.
ಶ್ರೀ ಮಾರುತಿಗೆ ವಡೆಯ ಹಾರವನ್ನು ಸಮರ್ಪಿಸಿದಲ್ಲಿ ಮನೆಯ ದಾರಿದ್ರ್ಯವು ದೂರವಾಗುವುದಲ್ಲದೆ ಆರಂಭಿಸುವ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಪೂರ್ಣಗೊಳ್ಳುತ್ತವೆ. ದಶರಥ ವಿರಚಿತ ಶನಿಪೀಡಾ ಪರಿಹಾರ ಸ್ತೋತ್ರವನ್ನು ಪಠಿಸಿದರೂ ಶುಭಫಲಗಳು ದೊರೆಯುತ್ತವೆ. ಪಚ್ಚೆಲಿಂಗ ಇರುವ ಶಿವನ ದೇಗುಲದಲ್ಲಿ ಬಿಲ್ವಪತ್ರೆಯಿಂದ ಶಿವನನ್ನು ಅರ್ಚಿಸಿದರೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡುತ್ತದೆ.
(ಬರಹ: ಸತೀಶ್, ಜ್ಯೋತಿಷಿ)
(ಗಮನಿಸಿ: ಈ ಬರಹವು ಪ್ರಚಲಿತ ನಂಬಿಕೆ, ಶಾಸ್ತ್ರ ಮತ್ತು ಸಂಪ್ರದಾಯವನ್ನು ಆಧರಿಸಿದೆ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ. ಓದುಗರು ಅನುಸರಿಸುವ ಮೊದಲು ಹಿರಿಯರು, ಕುಲಪುರೋಹಿತರ ಅಭಿಪ್ರಾಯ ಪಡೆಯುವುದು ಒಳ್ಳೆಯದು)