Naimisharanya: ವಿಷ್ಣು ದೇವಾಲಯವುಳ್ಳ ನೈಮಿಶಾರಣ್ಯ ಎಲ್ಲಿದೆ? ಈ ಪುಣ್ಯಕ್ಷೇತ್ರದ ಮಹತ್ವ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Naimisharanya: ವಿಷ್ಣು ದೇವಾಲಯವುಳ್ಳ ನೈಮಿಶಾರಣ್ಯ ಎಲ್ಲಿದೆ? ಈ ಪುಣ್ಯಕ್ಷೇತ್ರದ ಮಹತ್ವ ಇಲ್ಲಿದೆ

Naimisharanya: ವಿಷ್ಣು ದೇವಾಲಯವುಳ್ಳ ನೈಮಿಶಾರಣ್ಯ ಎಲ್ಲಿದೆ? ಈ ಪುಣ್ಯಕ್ಷೇತ್ರದ ಮಹತ್ವ ಇಲ್ಲಿದೆ

108 ವೈಷ್ಣವ ಕ್ಷೇತ್ರಗಳಲ್ಲಿ ಒಂದಾಗಿರುವ ನೈಮಿಶಾರಣ್ಯವು ಅನೇಕ ಪುರಾಣಗಳಿಗೆ ಸಾಕ್ಷಿಯಾಗಿದೆ. ಇಂದ್ರ ತಪಸ್ಸು ಮಾಡಿದ್ದ ಸ್ಥಳವೂ ಕೂಡ ಹೌದು. ಈ ಪುಣ್ಯಕ್ಷೇತ್ರದ ಮಹತ್ವ ಇಲ್ಲಿದೆ ತಿಳಿಯಿರಿ.

ನೈಮಿಶಾರಣ್ಯ ದೇವಾಲಯ (ಎಡಚಿತ್ರ-twitter/@GoUPradesh)
ನೈಮಿಶಾರಣ್ಯ ದೇವಾಲಯ (ಎಡಚಿತ್ರ-twitter/@GoUPradesh)

ನಮ್ಮ ಸನಾತನ ಧರ್ಮದಲ್ಲಿ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು ನಡೆದಿವೆ ಎಂಬುದನ್ನು ಸಾಬೀತುಪಡಿಸುವ ಅನೇಕ ಪುಣ್ಯಕ್ಷೇತ್ರಗಳು ಭಾರತದಲ್ಲಿವೆ. ಅಂತಹ ಪುಣ್ಯ ಕ್ಷೇತ್ರಗಳಲ್ಲಿ ಅಯೋಧ್ಯೆ, ಮಥುರಾ, ದ್ವಾರಕಾ, ರಾಮೇಶ್ವರಂ, ಬದರಿನಾಥ, ಕಾಶಿ ಪ್ರಮುಖವಾದವು. ಅನೇಕ ಪುರಾಣಗಳಿಗೆ ಸಾಕ್ಷಿಯಾದ ಮತ್ತೊಂದು ಸ್ಥಳವಿದೆ. ಅದೇ ನೈಮಿಶಾರಣ್ಯ.

ನೈಮಿಶಾರಣ್ಯವು ಉತ್ತರ ಪ್ರದೇಶ ರಾಜ್ಯದ ಸೀತಾಪುರ ಜಿಲ್ಲೆಯಲ್ಲಿದೆ. ಲಖನೌದಿಂದ 90 ಕಿ.ಮೀ ದೂರ ಮತ್ತು ಅಯೋಧ್ಯೆಯಿಂದ 220 ಕಿ.ಮೀ ದೂರದಲ್ಲಿದೆ. ನೈಮಿಶಾರಣ್ಯ ದೇವಾಲಯಕ್ಕೆ ಈ ಪ್ರದೇಶವು ಹೆಸರುವಾಸಿಯಾಗಿದೆ. ಇದು ವಿಷ್ಣು ಮತ್ತು ಲಕ್ಷ್ಮಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ. ಇದನ್ನು ಶ್ರೀ ನೈಮಿಶ್ನಾಥ ವಿಷ್ಣು ದೇವಾಲಯ, ನೈಮಿಶ್ನಾಥ ದೇವರಾಜ ದೇವಾಲಯ, ನೈಮಿಶ್​​​ ನಾರಾಯಣ ದೇವಾಲಯ ಎಂದೂ ಕರೆಯಲಾಗುತ್ತದೆ. ಈ ಪವಿತ್ರ ಸ್ಥಳದ ಮಹತ್ವ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ವೈಷ್ಣವ ಕ್ಷೇತ್ರಗಳಲ್ಲಿ ಒಂದು

ನೈಮಿಶಾರಣ್ಯವು 108 ವೈಷ್ಣವ ಕ್ಷೇತ್ರಗಳಲ್ಲಿ ಒಂದಾಗಿದೆ. ಗೋಮತಿ ನದಿಯ ದಡದಲ್ಲಿರುವ ಈ ಕ್ಷೇತ್ರವು ಸಾವಿರಾರು ಸಾಧು ಸನ್ಯಾಸಿಗಳು ತಪಸ್ಸು ಮಾಡುವ ಪುಣ್ಯ ಕ್ಷೇತ್ರವಾಗಿದೆ. ವೇದವ್ಯಾಸರು ಮಹಾಭಾರತವನ್ನು ನೈಮಿಷಾರಣ್ಯದಲ್ಲಿ ಬರೆದಿದ್ದಾರೆಂದು ನಂಬಲಾಗಿದೆ. ಮಹಾಭಾರತ, ರಾಮಾಯಣ, ವಾಯುಪುರಾಣ ಮತ್ತು ವರಾಹಪುರಾಣಗಳಲ್ಲಿ ನೈಮಿಷಾರಣ್ಯದ ಉಲ್ಲೇಖವಿದೆ. ನೈಮಿಶಾರಣ್ಯವು ವೇದವ್ಯಾಸರು ತಮ್ಮ ಶಿಷ್ಯರಿಗೆ ವೇದ ಮತ್ತು ಪುರಾಣಗಳನ್ನು ಕಲಿಸಿದ ಪುಣ್ಯ ಕ್ಷೇತ್ರವಾಗಿದೆ ಎಂದು ಖ್ಯಾತ ಪಂಚಾಂಗಕರ್ತ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳುತ್ತಾರೆ.

ಮಹಾಭಾಗವತ ಪುರಾಣ ಬರೆದಿದ್ದು ಇಲ್ಲಿಯೇ

ವೇದವ್ಯಾಸರು ತಮ್ಮ ಮಗ ಶುಕಮಹರ್ಷಿಗೆ ಮಹಾಭಾರತವನ್ನು ಮೊದಲು ಹೇಳಿದ್ದು ಮತ್ತು ಮಹಾಭಾಗವತ ಪುರಾಣವನ್ನು ಬರೆದದ್ದು ಇದೇ ನೈಮಿಶಾರಣ್ಯದಲ್ಲಿ ಎಂದು ಪುರಾಣಗಳು ಹೇಳುತ್ತವೆ. ಶೌನಕ ಋಷಿ ಸುಮಾರು 84 ಸಾವಿರ ಸನ್ಯಾಸಿಗಳನ್ನು ಭೇಟಿಯಾಗಿ ಈ ಕಾಡಿನಲ್ಲಿ ಮಹಾಭಾಗವತವನ್ನು ಪಠಿಸಿದರು ಎಂದು ಹೇಳಲಾಗುತ್ತದೆ. ವ್ಯಾಸ ಮಹರ್ಷಿ ಆಶ್ರಮ, ದಧೀಚಿ ಆಶ್ರಮ ಸೇರಿ ಕೆಲವು ದೇವಾಲಯಗಳು ನೈಮಿಶಾರಣ್ಯದಲ್ಲಿವೆ ಎಂದು ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಹೇಳುತ್ತಾರೆ.

meg

ದೇವತೆಗಳ ರಾಜನಾದ ಇಂದ್ರನನ್ನು ಒಮ್ಮೆ ವೃತ್ರ ಎಂಬ ಅಸುರನು ದೇವಲೋಕದಿಂದ ಹೊರಹಾಕಿದನು. ವೃತ್ರನಿಗೆ ಒಂದು ವರ ಸಿಗುತ್ತದೆ. ಅದೇನೆಂದರೆ ಈ ವರ ನೀಡುವ ಸಮಯದವರೆಗೆ ಪರಿಚಿತವಿರುವ ಯಾವುದೇ ಆಯುಧದಿಂದ ಆತನನ್ನು ಕೊಲ್ಲಲಾಗದು ಎಂಬ ವರ. ಅಲ್ಲದೇ ಮರದ ಅಥವಾ ಲೋಹದಿಂದ ಮಾಡಿದ ಯಾವುದೇ ಆಯುಧದಿಂದಾಗು ಆತನಿಗೆ ಹಾನಿಯಾಗುವುದಿಲ್ಲ ಎಂಬುದೂ ಈ ವರದಲ್ಲಿ ಸೇರಿದೆ. ಬ್ರಹ್ಮದೇವನ ಸಲಹೆಯ ಮೇರೆಗೆ ಇಂದ್ರನು 2000 ವರ್ಷಗಳ ಕಾಲ ನೈಮಿಷಾರಣ್ಯದಲ್ಲಿ ವಿಷ್ಣು ದೇವರನ್ನು ಕುರಿತು ತಪಸ್ಸು ಮಾಡಿದನು. ಸಂತೋಷಗೊಂಡ ವಿಷ್ಣುವು ಇಂದ್ರನ ಮುಂದೆ ಕಾಣಿಸಿಕೊಂಡನು ಮತ್ತು ಋಷಿ ದಧೀಚಿಯ ಮೂಳೆಗಳಿಂದ ಮಾಡಿದ ಆಯುಧವು ವೃತ್ರನನ್ನು ಸೋಲಿಸುತ್ತದೆ ಎಂದು ತಿಳಿಸುತ್ತಾನೆ. ಇಂದ್ರನು ಎಲುಬುಗಳನ್ನು ನೀಡುವಂತೆ ಋಷಿ ದಧೀಚಿ ಬಳಿ ವಿನಂತಿಸುತ್ತಾನೆ. ಇಂದ್ರನ ಮನವಿಗೆ ಮಣಿದು ಋಷಿ ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಾರೆ. ಇಂದ್ರನು ಋಷಿಯ ಬೆನ್ನುಮೂಳೆಯಿಂದ ಆಯುಧವನ್ನು ತಯಾರಿಸಿ ವೃತ್ರನನ್ನು ಕೊಂದನು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.