77 ವರ್ಷಗಳ ಬಳಿಕ ಮಕರ ಸಂಕ್ರಾಂತಿಯಂದು ಸಂಭವಿಸಲಿದೆ ಅಪರೂಪದ ವರಿಯನ್‌ ಯೋಗ; ಅಂದು ಈ ವಸ್ತುಗಳನ್ನು ದಾನ ಮಾಡಿದರೆ ಶ್ರೇಯಸ್ಸು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  77 ವರ್ಷಗಳ ಬಳಿಕ ಮಕರ ಸಂಕ್ರಾಂತಿಯಂದು ಸಂಭವಿಸಲಿದೆ ಅಪರೂಪದ ವರಿಯನ್‌ ಯೋಗ; ಅಂದು ಈ ವಸ್ತುಗಳನ್ನು ದಾನ ಮಾಡಿದರೆ ಶ್ರೇಯಸ್ಸು

77 ವರ್ಷಗಳ ಬಳಿಕ ಮಕರ ಸಂಕ್ರಾಂತಿಯಂದು ಸಂಭವಿಸಲಿದೆ ಅಪರೂಪದ ವರಿಯನ್‌ ಯೋಗ; ಅಂದು ಈ ವಸ್ತುಗಳನ್ನು ದಾನ ಮಾಡಿದರೆ ಶ್ರೇಯಸ್ಸು

Variyan Yoga: ಮಕರ ಸಂಕ್ರಾಂತಿ ಹಬ್ಬ ಹತ್ತಿರದಲ್ಲೇ ಇದೆ. ಈ ಬಾರಿ ಮಕರ ಸಂಕ್ರಾಂತಿ ಬಹಳ ವಿಶೇಷ. ಪ್ರತಿವರ್ಷಕ್ಕಿಂತ ಈ ವರ್ಷದ ಹಬ್ಬವು ಇನ್ನಷ್ಟು ಮಹತ್ವ ಪಡೆಯಲಿದೆ. ಅದಕ್ಕೆ ಕಾರಣ ವರಿಯನ್‌ ಯೋಗ. 77 ವರ್ಷಗಳ ನಂತರ ಮಕರ ಸಂಕ್ರಾಂತಿಯಲ್ಲಿ ಸಂಭವಿಸಲಿದೆ ವರಿಯನ್‌ ಯೋಗ.

ಮಕರ ಸಂಕ್ರಾಂತಿಯಂದು ಸಂಭವಿಸಲಿದೆ ಅಪರೂಪದ ವರಿಯನ್‌ ಯೋಗ
ಮಕರ ಸಂಕ್ರಾಂತಿಯಂದು ಸಂಭವಿಸಲಿದೆ ಅಪರೂಪದ ವರಿಯನ್‌ ಯೋಗ

ದೇಶದಾದ್ಯಂತ ಮಕರ ಸಂಕ್ರಾಂತಿ ಹಬ್ಬಕ್ಕಾಗಿ ಜನರು ಎದುರು ನೋಡುತ್ತಿದ್ದಾರೆ. ಇನ್ನೊಂದು ವಾರ ಕಳೆದರೆ ಮಕರ ಸಂಕ್ರಾಂತಿ ಹಬ್ಬವಿದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಬರುವ ಮಕರ ಸಂಕ್ರಾಂತಿ ಹಬ್ಬದ ಮಹತ್ವ ಇನ್ನಷ್ಟು ಹೆಚ್ಚಲಿದೆ. ಅಂದು ಅತ್ಯಂತ ವೈಭವಯುತವಾದ ವರಿಯನ್ ಯೋಗ ಸಂಭವಿಸಲಿದೆ.

ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. 2024ರಲ್ಲಿ, ಸಂಕ್ರಾಂತಿ ಹಬ್ಬ ಸೋಮವಾರ ಅಂದರೆ ಜನವರಿ 15 ರಂದು ಆಚರಿಸಲಾಗುತ್ತದೆ. ಈ ವರ್ಷ ಮಕರ ಸಂಕ್ರಾಂತಿ ಹಬ್ಬವನ್ನು ಎರಡು ವಿಶೇಷ ಯೋಗಗಳೊಂದಿಗೆ ಬರ ಮಾಡಿಕೊಳ್ಳಲಾಗುತ್ತದೆ.

ಜನವರಿ 15ರ ಸಂಕ್ರಾಂತಿ ಹಬ್ಬದ ದಿನದಂದು, ರವಿ ಮತ್ತು ವರಿಯನ್‌ ಯೋಗವು ರೂಪುಗೊಳ್ಳಲಿದೆ. ಈ ಅಪರೂಪದ ವರಿಯನ್‌ ಯೋಗವು 77 ವರ್ಷಗಳ ನಂತರ ಸಂಭವಿಸುತ್ತಿದೆ. ಈ ಯೋಗದಿಂದ ಮಕರ ಸಂಕ್ರಾಂತಿ ಮಹತ್ವ ಹೆಚ್ಚಲಿದೆ. ಐದು ವರ್ಷಗಳ ನಂತರ ಮಕರ ಸಂಕ್ರಾಂತಿ ಹಬ್ಬ ಸೋಮವಾರ ಬರುತ್ತಿದೆ. ಜ್ಯೋತಿಷ್ಯದ ದೃಷ್ಟಿಯಿಂದ ಮಕರ ಸಂಕ್ರಾಂತಿ ಬಹಳ ಮುಖ್ಯ. ಆ ದಿನ ಸೂರ್ಯ ದೇವರ ಜೊತೆಗೆ ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ಸಂಕ್ರಾಂತಿ ಹಬ್ಬದ ದಿನದಂದು ರವಿ ಮತ್ತು ವರಿಯನ್‌ ಯೋಗವು ತುಂಬಾ ಮಂಗಳಕರವಾಗಿದೆ. ಇದರಿಂದ ಸಮೃದ್ಧಿ ಮಾತ್ರವಲ್ಲದೆ ಖ್ಯಾತಿಯನ್ನೂ ತರುತ್ತದೆ.

ರವಿ ಮತ್ತು ವರಿಯನ್ ಯೋಗ ಯಾವಾಗ?

ಜನವರಿ 15 ರಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ವರಿಯನ್ ಯೋಗವು ಸೂರ್ಯೋದಯದಿಂದ ಪ್ರಾರಂಭವಾಗುತ್ತದೆ. ಬೆಳಗ್ಗೆ 7ರಿಂದ 8ರವರೆಗೆ ರವಿಯೋಗ ನಡೆಯಲಿದೆ. ಈ ಯೋಗದಲ್ಲಿ ಪೂಜೆ ಮತ್ತು ದಾನ ಮಾಡುವುದರಿಂದ ಸುಖ, ಸಂತೋಷ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.

ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಿದ್ದಂತೆ ಶುಭ ಮುಹೂರ್ತಗಳು ಪ್ರಾರಂಭವಾಗುತ್ತವೆ. ಇಂದು ಸೂರ್ಯ ತನ್ನ ಕಕ್ಷೆಯನ್ನು ಬದಲಿಸಿ ದಕ್ಷಿಣಾಯಣದಿಂದ ಉತ್ತರಾಯಣವನ್ನು ಪ್ರವೇಶಿಸುತ್ತಾನೆ. ಅಂದಿನಿಂದ, ಹಗಲಿನ ಅವಧಿಯು ಹೆಚ್ಚು ಮತ್ತು ರಾತ್ರಿಯ ಅವಧಿಯು ಕಡಿಮೆಯಾಗಿದೆ. ಪುರಾಣಗಳ ಪ್ರಕಾರ, ಉತ್ತರಾಯಣವನ್ನು ದೇವತೆಗಳಿಗೆ ಹಗಲು ಮತ್ತು ದಕ್ಷಿಣಾಯಣವನ್ನು ದೇವತೆಗಳಿಗೆ ರಾತ್ರಿ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Makar Sankranti 2024: ಕರ್ನಾಟಕ ಸೇರಿ ಭಾರತದ ವಿವಿಧ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಆಚರಣೆ ಹೇಗಿರುತ್ತೆ? ಇಲ್ಲಿದೆ ಉತ್ತರ

ಮಕರ ಸಂಕ್ರಾಂತಿಯ ದಿನದಂದು ಈ ಕೆಲಸಗಳನ್ನು ಮಾಡಿ

ಮಕರ ಸಂಕ್ರಾಂತಿಯ ದಿನದಂದು ದಾನ ಮಾಡುವುದು ಬಹಳ ಮುಖ್ಯ. ಅಂದು ದಾನ ಮಾಡುವುದರಿಂದ ಎಲ್ಲಾ ಪಾಪಗಳೂ ದೂರವಾಗುತ್ತವೆ. ಮುಂಜಾನೆ ಬೇಗ ಎದ್ದು ಗಂಗಾಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿದರೆ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಹೀಗೆ ಮಾಡುವುದರಿಂದ ಶನಿಯಿಂದ ಉಂಟಾಗುವ ಬಾಧೆಗಳೂ ದೂರವಾಗುತ್ತವೆ ಎಂದು ಹೇಳಲಾಗುತ್ತದೆ.

ತಾಮ್ರದ ಬಟ್ಟಲಿನಲ್ಲಿ ಗಂಗಾಜಲದಲ್ಲಿ ಕೆಂಪು ಹೂವುಗಳು, ಕೆಂಪು ಚಂದನ ಮತ್ತು ಎಳ್ಳನ್ನು ಹಾಕಿ. ʼಓಂ ಘೃಣಿ ಸೂರ್ಯಾಯ ನಮಃʼ ಎಂದು ಪಠಿಸುವ ಮೂಲಕ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು.

ಕರಿ ಎಳ್ಳು, ಬೆಲ್ಲದ ಸಾಮಗ್ರಿ, ಉಣ್ಣೆಯ ಬಟ್ಟೆ, ಹೊದಿಕೆಗಳನ್ನು ಕಷ್ಟದಲ್ಲಿರುವ ಬಡವರಿಗೆ ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಹೀಗೆ ಮಾಡಿದರೆ ಸೂರ್ಯ ಮತ್ತು ಶನಿ ಇಬ್ಬರ ಆಶೀರ್ವಾದ ಸಿಗುತ್ತದೆ.

ಮಕರ ಸಂಕ್ರಾಂತಿಯ ದಿನದಂದು ಎಳ್ಳು ಮತ್ತು ಬೆಲ್ಲವನ್ನು ತಿನ್ನಬೇಕು. ಹೀಗೆ ಮಾಡುವುದರಿಂದ ನೀವು ಜೀವನದಲ್ಲಿ ಸೂರ್ಯ ಮತ್ತು ಶನೀಶ್ವರ ದೇವರ ಆಶೀರ್ವಾದವನ್ನು ಪಡೆಯುತ್ತೀರಿ. ಎಳ್ಳಿನಿಂದ ಮಾಡಿದ ವಸ್ತುಗಳನ್ನು ದಾನ ಮಾಡುವುದರಿಂದ ಶನಿಯ ಬಾಧೆಗಳು ದೂರವಾಗುತ್ತವೆ.

ಗಂಗೆಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಸ್ನಾನದ ನೀರಿಗೆ ಗಂಗಾಜಲ ಸೇರಿಸಿ ಸ್ನಾನ ಮಾಡಿ. ಸಾತ್ವಿಕ ಆಹಾರವನ್ನು ಮಾತ್ರ ತೆಗೆದುಕೊಳ್ಳಬೇಕು. ಬಡವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿದರೆ ಒಳ್ಳೆಯದಾಗುತ್ತದೆ.

ಸಂಕ್ರಾಂತಿಯಂದು ತುಪ್ಪವನ್ನು ದಾನ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅನ್ನ, ವಸ್ತ್ರದಾನ ಮಾಡುವುದರಿಂದ ಒಳ್ಳೆಯ ಫಲ ಸಿಗುತ್ತದೆ.

ಪಿತೃದೇವತೆಗಳನ್ನು ಸ್ಮರಿಸಿ ಇಂದು ತರ್ಪಣಗಳನ್ನು ಅರ್ಪಿಸಲಾಗುತ್ತದೆ. ಹೀಗೆ ಮಾಡಿದರೆ ಸ್ವರ್ಗ ಸಿಗುತ್ತದೆ ಎಂಬ ನಂಬಿಕೆ ಇದೆ. ಅವರ ಆಶೀರ್ವಾದ ಪಡೆದು ಒಳ್ಳೆಯದಾಗಲಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.