Broomstick Vastu Tips: ಪೊರಕೆಯ ವಿಚಾರದಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ; ಇದರಿಂದ ತೊಂದರೆಗಳು ತಪ್ಪಿದ್ದಲ್ಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Broomstick Vastu Tips: ಪೊರಕೆಯ ವಿಚಾರದಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ; ಇದರಿಂದ ತೊಂದರೆಗಳು ತಪ್ಪಿದ್ದಲ್ಲ

Broomstick Vastu Tips: ಪೊರಕೆಯ ವಿಚಾರದಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ; ಇದರಿಂದ ತೊಂದರೆಗಳು ತಪ್ಪಿದ್ದಲ್ಲ

ಹಿಂದೂ ಧರ್ಮದಲ್ಲಿ ಪೊರಕೆಗೆ ವಿಶೇಷ ಪ್ರಾಧಾನ್ಯವಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಪೊರಕೆಯನ್ನು ದಾನ ಮಾಡಲಾಗುತ್ತದೆ. ಹೊಸ ಮನೆಯನ್ನು ಪ್ರವೇಶ ಮಾಡುವಾಗಲೂ ಹೊಸ ಪೊರಕೆಯನ್ನು ತರಲಾಗುತ್ತದೆ. ಹೀಗೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ಎಲ್ಲವೂ ಶುಭವಾಗುತ್ತದೆ ಎಂಬುದು ನಂಬಿಕೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಪೊರಕೆ, ಪ್ರತಿಯೊಬ್ಬರ ಮನೆಯಲ್ಲೂ ಇರುವ ಅಗತ್ಯ ವಸ್ತುಗಳಲ್ಲಿ ಒಂದು. ಪೊರಕೆಗೆ ಎಲ್ಲರೂ ಹೆಚ್ಚಿನ ಪ್ರಾಮುಖ್ಯ ನೀಡುತ್ತಾರೆ. ಇದು ಕೇವಲ ಧೂಳು ಮತ್ತು ಕೊಳಕು ಸ್ವಚ್ಛ ಮಾಡುವುದು ಮಾತ್ರವಲ್ಲ. ಆಧ್ಯಾತ್ಮದ ದೃಷ್ಟಿಯಿಂದಲೂ ಪೊರಕೆಗೆ ವಿಶೇಷ ಸ್ಥಾನವಿದೆ. ಇದನ್ನು ಲಕ್ಷ್ಮೀದೇವಿಯ ಸಾಕಾರ ಎಂದು ಕರೆಯಲಾಗುತ್ತದೆ. ಆ ಕಾರಣಕ್ಕಾಗಿಯೇ ಮನೆಯಲ್ಲಿ ಯಾವ ದಿಕ್ಕಿನಲ್ಲಿ ಪೊರಕೆ ಇರಿಸಬೇಕು, ಹೇಗೆ ಇರಿಸಬೇಕು ಎಂಬ ವಿಚಾರವಾಗಿ ವಿಶೇಷ ಗಮನ ನೀಡಲಾಗುತ್ತದೆ.

ಹಲವರಿಗೆ ಪೊರಕೆಯ ಮೇಲೆ ನಡೆಯುವ ಅಭ್ಯಾಸವಿದೆ. ಕಾಲಿನಿಂದ ಪೊರಕೆಯನ್ನು ಸರಿಸುತ್ತಾರೆ. ಆದರೆ ಹೀಗೆ ಕಾಲಿನಿಂದ ಪೊರಕೆಯನ್ನು ತುಳಿಯುವುದು ಒಳ್ಳೆಯದಲ್ಲ. ಇದರಿಂದ ಲಕ್ಷ್ಮೀದೇವಿ ಮುನಿಯುತ್ತಾಳೆ ಎಂದು ಹೇಳಲಾಗುತ್ತದೆ. ಇದು ಮೂಢನಂಬಿಕೆಯ ವಿಚಾರ ಖಂಡಿತ ಅಲ್ಲ. ವಾಸ್ತುಶಾಸ್ತ್ರದಲ್ಲೂ ಪೊರಕೆಗೆ ಬಹಳ ಮಹತ್ವವಿದೆ. ಮನೆ ಗುಡಿಸಿದ ನಂತರ ಪೊರಕೆಯನ್ನು ಬೀಳಿಸಬಾರದು. ಪೊರಕೆಯನ್ನು ನಿಲ್ಲಿಸಿ ಇಟ್ಟು, ಅದು ಬೀಳುವಂತೆ ಮಾಡಬಾರದು. ಇದರಿಂದ ಆರ್ಥಿಕ ಸಂಕಷ್ಟಗಳು ಎದುರಾಗುತ್ತದೆ ಎಂಬುದು ವಾಸ್ತುಶಾಸ್ತ್ರದ ನಂಬಿಕೆ.

ಇದನ್ನೂ ಓದಿ: Vastu Tips: ಮನೆಯಲ್ಲಿ ಸದಾ ಶಾಂತಿ, ನೆಮ್ಮದಿ ನೆಲೆಸಿ, ದಂಪತಿಗಳ ನಡುವೆ ಪ್ರೀತಿ ಹೆಚ್ಚಲು ಈ ಸಿಂಪಲ್‌ ವಾಸ್ತು ಟಿಪ್ಸ್‌ ಫಾಲೋ ಮಾಡಿ

ಪೊರಕೆಯನ್ನು ಕಾಲಿನಿಂದ ಮುಟ್ಟಬಾರದು, ಏಕೆ?

ಹಿಂದೂ ಧರ್ಮದ ಪ್ರಕಾರ ಪೊರಕೆ ತುಂಬಾ ಪವಿತ್ರವಾಗಿದೆ. ಇದನ್ನು ಲಕ್ಷ್ಮೀದೇವಿಯ ಸಂಕೇತವೆಂದು ಪರಿಗಣಿಸಲಾಗಿದೆ. ಪೊರಕೆಯನ್ನು ಕಾಲಿನಿಂದ ಮುಟ್ಟಿದರೆ, ಅದು ಸಂಪತ್ತಿನ ಮೂಲವಾದ ಲಕ್ಷ್ಮೀದೇವಿಗೆ ಅವಮಾನ ಮಾಡಿದಂತೆ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ, ಪೊರಕೆಯನ್ನು ನಿಲ್ಲಿಸಿ ಇಡುವುದು ಒಳ್ಳೆಯದಲ್ಲ. ಇದರಿಂದ ಪೊರಕೆಯ ತುದಿಗೆ ಧೂಳು ಮತ್ತು ಕೊಳಕು ಅಂಟಿಕೊಳ್ಳುತ್ತದೆ, ಇದು ಅಶುಭವನ್ನು ಉಂಟು ಮಾಡುತ್ತದೆ. ಜೊತೆಗೆ ಅಂತಹ ಕೊಳಕು ಇರುವ ಪೊರಕೆಯನ್ನು ಕಾಲಿನಿಂದ ಮುಟ್ಟುವುದರಿಂದ ಪಾದ ಹಾಗೂ ಉಗುರುಗಳಿಗೆ ಧೂಳು ಹಿಡಿಯುತ್ತದೆ, ಇದರಿಂದ ಶನಿ ಪರಮಾತ್ಮ ಬೇಸರಗೊಳ್ಳುತ್ತಾನೆ ಎಂಬುದು ನಂಬಿಕೆ. ಅಲ್ಲದೆ ಕೊಳಕು ಪೊರಕೆಯ ಮೇಲಿನ ರೋಗಾಣುಗಳು ದೇಹಕ್ಕೆ ಅಂಟಿಕೊಂಡು ಆರೋಗ್ಯಕ್ಕೆ ಹಾನಿ ಮಾಡುತ್ತವೆ. ಇದರಿಂದ ಆರೋಗ್ಯ ಸಮಸ್ಯೆಗಳೂ ಹೆಚ್ಚಬಹುದು.

ಪೊರಕೆಯ ಮೇಲೆ ನಡೆದಾಡುವುದು ಎಂದಿಗೂ ಒಳಿತಲ್ಲ. ಹಾಗೆ ಮಾಡಿದರೆ ಲಕ್ಷ್ಮೀದೇವಿಯ ಆಶೀರ್ವಾದ ನಿಮ್ಮ ಮೇಲೆ ಇರುವುದಿಲ್ಲ. ಇದರೊಂದಿಗೆ ಪೊರಕೆಯನ್ನು ಯಾರ ಕಣ್ಣಿಗೂ ಕಾಣದಂತೆ ಇರಿಸುವುದು ಮುಖ್ಯವಾಗುತ್ತದೆ. ಹಾಗೆಯೇ ಅಡುಗೆ ಮನೆಯಲ್ಲಿ ಪೊರಕೆ ಇಡಬೇಡಿ. ಹಾಗೆ ಮಾಡುವುದರಿಂದ ಆಹಾರದ ಕೊರತೆ ಉಂಟಾಗುತ್ತದೆ. ವಾಸ್ತು ಪ್ರಕಾರ ಮನೆಯನ್ನು ಸ್ವಚ್ಛಗೊಳಿಸಲು ಬಳಸುವ ಯಾವುದೇ ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡಬಾರದು. ಅಡುಗೆ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಿ.

ಇದನ್ನೂ ಓದಿ: Vastu Tips: ವಾಸ್ತು ಪ್ರಕಾರ ಚಪ್ಪಲಿಯನ್ನು ಹೀಗೆ ಇಡುವುದು ಅಶುಭಕ್ಕೆ ಕಾರಣವಾಗಬಹುದು

ಆಫ್ರಿಕಾದಲ್ಲೂ ಇದೆ ಈ ನಂಬಿಕೆ

ಪೊರಕೆಯಿಂದ ತುಳಿದರೆ ಅಶುಭ ಎಂಬ ನಂಬಿಕೆ ಭಾರತೀಯರಷ್ಟೇ ಅಲ್ಲ ಆಫ್ರಿಕನ್ನರಿಗೂ ಇದೆ. ಪೊರಕೆಯು ಕಾಲುಗಳಿಗೆ ತಗುಲಿದರೆ, ಅವರ ಮನೆಯಲ್ಲಿ ಸಾವು ಸಂಭವಿಸುತ್ತದೆ ಅಥವಾ ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಜೈಲು ಶಿಕ್ಷೆಯಾಗುತ್ತದೆ ಎಂದು ನಂಬಲಾಗಿದೆ. ಇದಕ್ಕೆ ಪರಿಹಾರವಾಗಿ ಪೊರಕೆಯ ಮೇಲೆ ಉಗುಳುತ್ತಾರೆ. ಹೀಗೆ ಮಾಡಿದರೆ ಯಾವ ಅನಿಷ್ಟವೂ ಬರುವುದಿಲ್ಲ ಎಂಬುದು ಆಫ್ರಿಕನ್ನರ ನಂಬಿಕೆ

ಪೊರಕೆಯನ್ನು ಹೀಗೆ ಇಟ್ಟರೆ ತೊಂದರೆ ಖಚಿತ

ಪೊರಕೆಯನ್ನು ಕಣ್ಣಿಗೆ ಕಾಣಿಸಿದಂತೆ ಇರಿಸಿ. ಯಾರೂ ನೋಡದ ಜಾಗ ಎಂದು ಮಂಚದ ಕೆಳಗೆ ಇಡಬೇಡಿ. ಹೀಗೆ ಮಾಡುವುದರಿಂದ ವಾಸ್ತು ದೋಷಗಳು ಹೆಚ್ಚಾಗುತ್ತವೆ. ಮನೆಯಲ್ಲಿ ಅಶಾಂತಿಯ ವಾತಾವರಣ ನೆಲೆಸುತ್ತದೆ. ಹಾಸಿಗೆಯ ಕೆಳಗೆ ಪೊರಕೆ ಇಟ್ಟರೆ ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲಿರುವುದಿಲ್ಲ. ಹಾನಿಗೊಳಗಾದ ಅಥವಾ ಮುರಿದ ಪೊರಕೆಯನ್ನು ಎಂದಿಗೂ ಮನೆಯಲ್ಲಿ ಇರಬಾರದು. ಮುರಿದ ಪೊರಕೆಯನ್ನು ಶನಿವಾರ ಹೊರಗೆ ಎಸೆಯಬೇಕು. ಮಂಗಳವಾರ, ಶನಿವಾರ ಮತ್ತು ಅಮಾವಾಸ್ಯೆ ದಿನಗಳಲ್ಲಿ ಪೊರಕೆ ಖರೀದಿಸಬಹುದು. ದೇವಸ್ಥಾನಕ್ಕೆ ಮೂರು ಪೊರಕೆಗಳನ್ನು ದಾನ ಮಾಡುವುದು ಶ್ರೇಯಸ್ಕರ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.