Makara Sankranti: ಮಕರ ಸಂಕ್ರಾಂತಿಯಂದು ಪುಣ್ಯಸ್ನಾನ, ಶಿವಪೂಜೆ ಮಾಡುವುದರಿಂದ ಸಕಲ ಕಷ್ಟಗಳೂ ಪರಿಹಾರ, ಹೀಗಿರಲಿ ಕ್ರಮ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Makara Sankranti: ಮಕರ ಸಂಕ್ರಾಂತಿಯಂದು ಪುಣ್ಯಸ್ನಾನ, ಶಿವಪೂಜೆ ಮಾಡುವುದರಿಂದ ಸಕಲ ಕಷ್ಟಗಳೂ ಪರಿಹಾರ, ಹೀಗಿರಲಿ ಕ್ರಮ

Makara Sankranti: ಮಕರ ಸಂಕ್ರಾಂತಿಯಂದು ಪುಣ್ಯಸ್ನಾನ, ಶಿವಪೂಜೆ ಮಾಡುವುದರಿಂದ ಸಕಲ ಕಷ್ಟಗಳೂ ಪರಿಹಾರ, ಹೀಗಿರಲಿ ಕ್ರಮ

ಮಕರ ಸಂಕ್ರಾಂತಿಯನ್ನು ಭಾರತದಲ್ಲಿ ಬಹಳ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಈ ದಿನ ಸೂರ್ಯ ತನ್ನ ಪಥವನ್ನು ಬದಲಿಸುತ್ತಾನೆ. ಇಂದು ಪುಣ್ಯಸ್ನಾನ, ದಾನ ಮಾಡುವುದು, ಶಿವನ ಪೂಜೆ ಮಾಡುವುದು ವಿಶೇಷ. ಇದರಿಂದ ಹಲವು ಪ್ರಯೋಜನಗಳು ಸಿಗಲಿವೆ. ಈ ಕುರಿತ ಮಾಹಿತಿ ಇಲ್ಲಿದೆ.

ಮಕರ ಸಂಕ್ರಾಂತಿ
ಮಕರ ಸಂಕ್ರಾಂತಿ

ಜನವರಿ 15ರಂದು ಸೂರ್ಯ ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಕಾರಣದಿಂದಾಗಿ ಈ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಇದನ್ನು ಮಕರ ಸಂಕ್ರಮಣ ಎಂದೂ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ಹಬ್ಬದಂದು ಪುಣ್ಯ ಸ್ನಾನ ಹಾಗೂ ದಾನ ಧರ್ಮ ಮಾಡುವುದರಿಂದ ವಿಶೇಷ ಫಲಗಳನ್ನು ಪಡೆಯಬಹುದು. ಈ ದಿನ ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ತನ್ನ ಪಥವನ್ನು ಬದಲಾಯಿಸುತ್ತಾನೆ. ಜ್ಯೋತಿಷ್ಯದ ಪ್ರಕಾರ ಈ ದಿನ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.

ಹಬ್ಬವೆಂದರೂ ಈ ದಿನ ರಾತ್ರಿಯ ವೇಳೆ ಉಪವಾಸ ಮಾಡಬೇಕು. ಈ ದಿನ ಪುಣ್ಯ ಸ್ನಾನ ಮಾಡಿದರೆ ಅನೇಕ ಪಾಪಾದಿ ಕರ್ಮಗಳಿಂದ ಮುಕ್ತಿ ಹೊಂದಬಹುದು ಎಂಬುದು ನಂಬಿಕೆ. ಒಂದು ವೇಳೆ ಈ ದಿನದಂದು ಸ್ನಾನವನ್ನೇ ಮಾಡದಿದ್ದಲ್ಲಿ ಏಳು ಜನ್ಮದವರಿಗೂ ರೋಗಿಯಾಗಿರುತ್ತಾನೆ. ಅಲ್ಲದೆ ಹಣಕಾಸಿನ ತೊಂದರೆ ಕೂಡ ಎದುರಾಗಬಹುದು. ಈ ಕಾರಣದಿಂದಾಗಿ ಪುಣ್ಯಸ್ಥಾನವು ಅತಿ ಮುಖ್ಯ. ಈ ದಿನ ಜೀವಂತ ಪಿತೃಗಳಿದ್ದಲ್ಲಿಉಪವಾಸವನ್ನು ಮಾಡಬಾರದು. ಕೆಲವು ಪ್ರಾಂತ್ಯಗಳಲ್ಲಿ ತಂದೆ ಮಗ ಒಂದೇ ಕಡೆ ಇದ್ದಲ್ಲಿಯೂ ಉಪವಾಸವನ್ನು ಮಾಡುವುದಿಲ್ಲ. ಈ ದಿನದಂದು ಪಿಂಡರಹಿತ ಶ್ರಾದ್ಧವನ್ನು ಮಾತ್ರ ಮಾಡಬೇಕೆಂದು ಹೇಳಲಾಗಿದೆ.

ಇದನ್ನೂ ಓದಿ: 77 ವರ್ಷಗಳ ಬಳಿಕ ಮಕರ ಸಂಕ್ರಾಂತಿಯಂದು ಸಂಭವಿಸಲಿದೆ ಅಪರೂಪದ ವರಿಯನ್‌ ಯೋಗ; ಅಂದು ಈ ವಸ್ತುಗಳನ್ನು ದಾನ ಮಾಡಿದರೆ ಶ್ರೇಯಸ್ಸು

ಈ ದಿನದಂದು ಕರಿ ಎಳ್ಳಿನಿಂದ ಮಾಡಿದ ತಿಂಡಿಯನ್ನು ದಾನ ಮಾಡುವುದು ಶ್ರೇಯಸ್ಕರ. ಶಿವನ ದೇವಸ್ಥಾನದಲ್ಲಿ ಎಳ್ಳೆಣ್ಣೆಯಿಂದ ದೀಪ ಹಚ್ಚಿದಲ್ಲಿ ಏಳೇಳು ಜನ್ಮದಲ್ಲಿ ಮಾಡಿದ ಪಾಪ ಕರ್ಮವು ಕಳೆಯುವುದು ಎಂದು ಧಾರ್ಮಿಕ ಗ್ರಂಥಗಳಲ್ಲಿ ಸೂಚಿತವಾಗಿದೆ. ಇದಲ್ಲದೆ ಎಳ್ಳೆಣ್ಣೆಯಿಂದ ಮಾಡಿದ ಅಕ್ಷತೆಯಿಂದ ಶಿವನ ಪೂಜೆ ಮಾಡಬೇಕು. ಇದರಿಂದಾಗಿ ಅಪಮೃತ್ಯು ಪರಿಹಾರವಾಗುತ್ತದೆ. ಅಲ್ಲದೆ ದೀರ್ಘಕಾಲದ ರೋಗದಿಂದ ಬಳಲುತ್ತಿದ್ದಲ್ಲಿ ಸೂಕ್ತ ಪರಿಹಾರ ದೊರೆಯುತ್ತದೆ. ಕರಿಎಳ್ಳು ಬಳಸಿ ಸ್ನಾನ ಮಾಡಿದರೆ ಚರ್ಮರೋಗದಿಂದ ದೂರವಾಗಬಹುದು. ಕರಿಎಳ್ಳನ್ನು ದಾನ ಮಾಡುವುದರಿಂದ ಬ್ರಹ್ಮಹತ್ಯಾ ದೋಷವು ಪರಿಹಾರವಾಗುತ್ತದೆ. ಈ ದಿನದಂದು ತಿಲ ಹೋಮವನ್ನು ಮಾಡುವುದರಿಂದ ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳು ದೂರವಾಗುತ್ತವೆ.

ಅಂದು ಬಿಳಿ ಎಳ್ಳಿನಿಂದ ದೇವ ತರ್ಪಣವನ್ನು, ಕರಿ ಎಳ್ಳಿನಿಂದ ಪಿತೃ ತರ್ಪಣವನ್ನು ನೀಡಬೇಕು. ತುಪ್ಪದಿಂದ ಶಿವನಿಗೆ ಅಭಿಷೇಕವನ್ನು ಮಾಡಿದರೆ ಮನಸ್ಸಿನ ಎಲ್ಲಾ ಆಸೆ ಆಕಾಂಕ್ಷಿಗಳು ದೊರೆಯುತ್ತದೆ ಎಂದು ಧಾರ್ಮಿಕ ಪುರಾಣಗಳಿಂದ ತಿಳಿದು ಬರುತ್ತದೆ. ಚಿನ್ನದ ಸಹಿತವಾಗಿ ಪಂಚರತ್ನಗಳಿಂದ ಶಿವನನ್ನು ಪೂಜಿಸಿದರೆ ಹೆಚ್ಚಿನ ಶುಭಫಲಗಳು ದೊರೆಯಲಿವೆ.

ಈ ದಿನದಂದು ಶಿವನ ಪೂಜೆಯನ್ನು ಹೇಗೆ ಆಚರಿಸಬೇಕು ಎಂದು ತಿಳಿಸಲಾಗಿದೆ. ಸ್ನಾನ ಸಂಧ್ಯಾವಂದನೆ ಬಳಿಕ ತಿಲತರ್ಪಣವನ್ನು ನೀಡಬೇಕಾಗುತ್ತದೆ. ಆನಂತರ ಎಳ್ಳೆಣ್ಣೆಯಿಂದ ದೀಪ ಹಚ್ಚಿ ಪೂಜೆ ಮಾಡಬೇಕು. ಸಾಧ್ಯವಾದಲ್ಲಿ ತಿಲಹೋಮವನ್ನು ಮಾಡಲೇಬೇಕು. ದಂಪತಿಗಳನ್ನು ಮನೆಯ ಆಹ್ವಾನಿಸಿ ಅವರಿಗೆ ಭೋಜನವನ್ನು ನೀಡಬೇಕು. ಇದರಿಂದ ಕುಟುಂಬದಲ್ಲಿ ಅನ್ಯೋನ್ಯತೆ ಲಭಿಸುತ್ತದೆ.

ಇದನ್ನೂ ಓದಿ: Makar Sankranti 2024: ಮಕರ ಸಂಕ್ರಾಂತಿಯಂದು ಯಾವ ದಾನ ಶ್ರೇಯಸ್ಕರ? ಇಲ್ಲಿದೆ ನಿಮ್ಮ ರಾಶಿಗೆ ಅನುಗುಣವಾದ ಮಾಹಿತಿ

ಈ ಮಕರ ಸಂಕ್ರಾಂತಿಯ ವೇಳೆಯ ಪ್ರಕಾರ ಸೈನಿಕರು ಅಥವಾ ಪೊಲೀಸರಿಗೆ ವಿಶೇಷವಾದ ಜವಾಬ್ದಾರಿ ದೊರೆಯುತ್ತದೆ. ಹೆಚ್ಚಿನ ಮಾನಸಿಕ ಒತ್ತಡ ಇವರಿಗೆ ಇರುತ್ತದೆ. ಕುಟುಂಬದ ಹಿರಿಯ ಸದಸ್ಯನ ಮನಸ್ಸಿಗೆ ನೆಮ್ಮದಿ ದೊರೆಯುವುದಿಲ್ಲ. ಆಹಾರ ಧಾನ್ಯಗಳ ಕೊರತೆ ಉಂಟಾಗುವುದಿಲ್ಲ. ಆದರೆ ಬುದ್ಧಿವಂತರು ತಮ್ಮ ನಿರೀಕ್ಷೆಯಂತೆ ಜೀವನದಲ್ಲಿ ಮುಂದೆ ಬರಲಾಗದು. ಎಷ್ಟನೇ ಸಂಪಾದಿಸಿದರು ಹಣಕಾಸಿನ ಕೊರತೆ ಇರುತ್ತದೆ. ಒಟ್ಟಾರೆ ಮುಖ್ಯವಾಗಿ ಮಕರ ರಾಶಿ ಅಥವಾ ಲಗ್ನದಲ್ಲಿ ಜನಿಸಿದವರ ಜೀವನದಲ್ಲಿ ಮುಖ್ಯ ಫಲಗಳು ದೊರೆಯುತ್ತವೆ. ಇದರ ಫಲವಾಗಿ ರಾಜ್ಯ ಆಡಳಿತದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಲಿವೆ.

ಲೇಖನ: ಎಚ್‌. ಸತೀಶ್‌, ಜ್ಯೋತಿಷಿ

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.