Garuda Purana: ಮೋಕ್ಷ ಸಿಗಬೇಕು ಅಂದ್ರೆ ಗರುಡ ಪುರಾಣದಲ್ಲಿನ ಈ ಅಂಶಗಳನ್ನು ತಪ್ಪದೇ ಪಾಲಿಸಿ
ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಗರುಡ ಪುರಾಣವು ಬಹಳ ಮಹತ್ವದ್ದಾಗಿದೆ. ಮರಣದ ನಂತರ ವ್ಯಕ್ತಿಯು ತನ್ನ ಕರ್ಮಗಳನ್ನು ಅವಲಂಬಿಸಿ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತಾನೆ ಇದರಲ್ಲಿ ವಿವರಿಸಲಾಗಿದೆ. ಹಾಗಾದ್ರೆ ಮನುಷ್ಯ ಮೋಕ್ಷ ಪಡೆಯಬೇಕು ಅಂದ್ರೆ ಏನು ಮಾಡಬೇಕು ನೋಡಿ.

ಗರುಡ ಪುರಾಣ ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ವಿಶಿಷ್ಟವಾಗಿದೆ. ಇದನ್ನು ಕೇಳುವುದರಿಂದ ಮತ್ತು ಓದುವುದರಿಂದ ಮನುಷ್ಯನ ಸಮಸ್ಯೆಗಳೆಲ್ಲವೂ ದೂರಾಗುತ್ತದೆ, ಮಾತ್ರವಲ್ಲ ಅವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದು ನಂಬಲಾಗಿದೆ.
ಪುರಾಣಗಳ ಪ್ರಕಾರ, ಗರುಡ ಪುರಾಣವು ವಿಷ್ಣು ಹಾಗೂ ಗರುಡನ ನಡುವಿನ ಸಂಭಾಷಣೆಯನ್ನು ವಿವರಿಸುತ್ತದೆ. ಇದರಲ್ಲಿ ಮನುಷ್ಯನ ಹುಟ್ಟು-ಸಾವು, ಪಾಪ-ಕರ್ಮ, ಧರ್ಮ-ಅಧರ್ಮ, ಮೋಕ್ಷದ ಕುರಿತಾಗಿ ವಿವರಿಸಲಾಗಿದೆ. ಮನುಷ್ಯನು ತನ್ನ ಜೀವತಾವಧಿಯಲ್ಲಿ ಮಾಡುವ ಕ್ರಿಯೆಗಳು ಅವನ ಸಾವಿನ ನಂತರ ಬದುಕನ್ನು ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಹಾಗಾದರೆ ವ್ಯಕ್ತಿಯೊಬ್ಬರ ತನ್ನ ಜೀವನದಲ್ಲಿ ಮೋಕ್ಷ ಪಡೆಯಬೇಕು ಎಂದರೆ ಯಾವ ಮಾರ್ಗ ಅನುಸರಿಸಬೇಕು ಎಂಬುದನ್ನು ಇಂದಿನ ಗರುಡ ಪುರಾಣದಲ್ಲಿ ತಿಳಿಯೋಣ.
ದಾನ ಮಾಡುವುದು
ಗರುಡ ಪುರಾಣದ ಪ್ರಕಾರ, ಮನುಷ್ಯರು ತಮ್ಮ ಕೈಲಾದಷ್ಟು ದಾನ ಮಾಡುತ್ತಿರಬೇಕು. ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನ ಮಾಡುವವರಿಗೆ ಲಕ್ಷ್ಮೀದೇವಿಯ ಆಶೀರ್ವಾದ ಖಂಡಿತ ಸಿಗುತ್ತದೆ. ಇದಲ್ಲದೆ, ದಾನ ಮಾಡುವುದರಿಂದ ನೀವು ಅನೇಕ ರೀತಿಯ ದೋಷಗಳಿಂದ ಮುಕ್ತರಾಗುತ್ತೀರಿ. ಹಲವರು ತಮ್ಮ ಜೀವಿತಾವಧಿಯಲ್ಲಿ ಮಾಡಿದ ದಾನದಿಂದ ಮರಣದ ನಂತರ ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬುತ್ತಾರೆ. ಇದನ್ನು ನಿಜ ಎನ್ನುತ್ತದೆ ಗರುಡ ಪುರಾಣ.
ತಪ್ಪು ದಾರಿಯಲ್ಲಿ ಸಂಪಾದಿಸಬೇಡಿ
ಯಾರು ಕೂಡ ಕೆಟ್ಟ ದಾರಿ ಅಥವಾ ತಪ್ಪು ವಿಧಾನಗಳಿಂದ ಹಣ ಸಂಪಾದಿಸಬಾರದು. ಹೀಗೆ ಮಾಡುವವರ ಸಂಪತ್ತು ಯಾವಾಗ ಒಂದಲ್ಲ ಒಂದು ದಿನ ಮಂಜಿನಂತೆ ಕರಗಿ ಹೋಗುತ್ತದೆ. ಏಕೆಂದರೆ ಕೆಟ್ಟ ಉದ್ದೇಶ ಅಥವಾ ದಾರಿಯಿಂದ ಸಂಪಾದಿಸಿದ ಹಣವು ನಮ್ಮ ದುರಾಸೆಯನ್ನು ಸ್ವಲ್ಪ ಸಮಯದವರೆಗೆ ಮಾತ್ರ ಪೂರೈಸುತ್ತದೆ. ಇದರಿಂದ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಸತ್ಯ ಮತ್ತು ಧರ್ಮದ ಮಾರ್ಗವನ್ನು ಅನುಸರಿಸಿ ಹಣವನ್ನು ಗಳಿಸಬೇಕು.
ಸ್ತ್ರೀಯರಿಗೆ ಗೌರವ
ʼಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃʼ ಈ ಮಾತು ದೇವತೆಗಳ ಕಾಲದಿಂದಲೂ ರೂಢಿಯಲ್ಲಿದೆ. ಗರುಡ ಪುರಾಣದಲ್ಲಿಯೂ ಇದನ್ನು ವಿವರಿಸಲಾಗಿದೆ. ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ ಅಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ ಎಂದು ಉಲ್ಲೇಖಿಸಲಾಗಿದೆ. ಹಾಗೆಯೇ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವವರು ಯಮಲೋಕದಲ್ಲಿ ಚಿತ್ರಹಿಂಸೆಗಳನ್ನು ಎದುರಿಸಬೇಕಾಗುತ್ತದೆ. ಆದುದರಿಂದ ಹೆಣ್ಣುಮಕ್ಕಳಿಗೆ ಯಾವತ್ತೂ ಅವಮಾನ ಮಾಡಬಾರದು. ಹೀಗೆ ಮಾಡುವುದರಿಂದ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ.
ಹಿರಿಯರನ್ನು ಗೌರವಿಸುವ ಮನೋಭಾವ
ಗರುಡ ಪುರಾಣದಲ್ಲಿ ಧರ್ಮ-ಅಧರ್ಮದ ಜೊತೆಗೆ ದೇವತೆಗಳು, ಹಿರಿಯರು, ಮಾತಾಪಿತೃಗಳನ್ನು ಗೌರವಿಸುವ ಮತ್ತು ಅವರ ಸೇವೆ ಮಾಡುವವರಿಗೆ ಶುಭ ಫಲಿತಾಂಶಗಳು ದೊರೆಯುತ್ತವೆ, ಅಂತಹವರ ಮನೆಯಲ್ಲಿ ಲಕ್ಷ್ಮೀದೇವಿಯು ಸದಾ ನೆಲೆಸುತ್ತಾಳೆ ಎಂದು ಹೇಳಲಾಗಿದೆ. ಇದಲ್ಲದೆ, ಹಿರಿಯರನ್ನು ಗೌರವಿಸುವ ಜನರು ಪ್ರತಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ, ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ.
ಗರುಡ ಪುರಾಣದಲ್ಲಿ ಹೇಳಿರುವ ಈ ಎಲ್ಲಾ ಮಾತುಗಳನ್ನು ಪಾಲಿಸುವುದರಿಂದ ಹಾಗೂ ಇದನ್ನು ಅನುಸರಿಸುವುದರಿಂದ ಮೋಕ್ಷ ಪಡೆಯುವುದು ಮಾತ್ರವಲ್ಲ, ಜೀವನದಲ್ಲಿ ಯಶಸ್ಸು ಗಳಿಸಲು ಕೂಡ ಸಾಧ್ಯವಾಗುತ್ತದೆ.
