ಶಕ್ತಿ ಪೀಠಗಳಿಂದ ಹಿಡಿದು ಜಗತ್ತಿನ ಶ್ರೀಮಂತ ದೇವಸ್ಥಾನದವರೆಗೆ: ಅಚ್ಚರಿ, ಕೌತುಕಗಳಿಂದ ಕೂಡಿರುವ ಭಾರತದ ಪುರಾತನ ದೇವಾಲಯಗಳಿವು
ಭಾರತದಲ್ಲಿ ಅನೇಕ ಪುರಾತನ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶಿಷ್ಟ ಆಚರಣೆಗಳಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಅವುಗಳಲ್ಲಿ ಕೆಲವು ವಿಸ್ಮಯಗಳಿಂದ ಕೂಡಿವೆ. ಅಂತಹ ಆರು ಪ್ರಸಿದ್ಧ ದೇವಾಲಯಗಳ ಕುರಿತ ಮಾಹಿತಿ ಇಲ್ಲಿದೆ.
ಭಾರತವು ಪುರಾತನ ಪರಂಪರೆ ಮತ್ತು ವೈವಿಧ್ಯಮಯ ಸಂಸ್ಕೃತಿಗೆ ಜಗತ್ತಿನಲ್ಲೆ ಹೆಸರುವಾಸಿಯಾಗಿದೆ. ಇಲ್ಲಿ ವಿಸ್ಮಯಗಳಿಂದ ಕೂಡಿದ ಅನೇಕ ದೇವಾಲಯಗಳಿವೆ. ಪ್ರಾಚೀನ ಇತಿಹಾಸ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯಿಂದ ಕೂಡಿರುವ ಅನೇಕ ದೇವಾಲಯಗಳು ಭಾರತದಲ್ಲಿವೆ. ಅವೆಲ್ಲವೂ ದೈವಿಕ ಶಕ್ತಿಯ ಹಲವು ಕಥೆ ಮತ್ತು ಅನೇಕ ಚಮತ್ಕಾರಗಳನ್ನು ಒಳಗೊಂಡಿವೆ. ಇಲ್ಲಿನ ಅತ್ಯಂತ ಸೂಕ್ಷ್ಮ ವಾಸ್ತುಶಿಲ್ಪಗಳು ದೈವಿಕ ಶಕ್ತಿಯ ಪ್ರತೀಕವಾಗಿವೆ. ಭಾರತದಲ್ಲಿನ ಹಲವಾರು ದೇವಸ್ಥಾನಗಳಲ್ಲಿರುವ ಆಚರಣೆಗಳಿಂದ, ವಿಸ್ಮಯ ಮತ್ತು ನಿಗೂಢತೆಯಿಂದ ಕೂಡಿವೆ. ದಕ್ಷಿಣ ಭಾರತದ ತಿರುಮಲ ದೇವಸ್ಥಾನದಿಂದ ಹಿಡಿದು ಉತ್ತರ ಭಾರತದ ಅಸ್ಸಾಂನ ಕಾಮಾಖ್ಯ ದೇವಿ ದೇವಸ್ಥಾನಗಳವರೆಗೆ ಅದೆಷ್ಟೋ ಅಚ್ಚರಿಯನ್ನೊಳಗೊಂಡ ದೇವಾಲಯಗಳಿವೆ. ಅಂತಹ ಅತ್ಯಂತ ವಿಶೇಷ ದೇವಾಲಯಗಳ ಬಗ್ಗೆ ಇಲ್ಲಿ ತಿಳಿಯೋಣ.
ಕಾಲ ಭೈರವ ನಾಥ ದೇವಸ್ಥಾನ, ಉಜ್ಜಯನಿ (ಮಧ್ಯ ಪ್ರದೇಶ)
ಇದು ಶಿವನ ಭಯಂಕರ ರೂಪವಾದ ಕಾಲ ಭೈರವನಿಗೆ ಸಮರ್ಪಿತವಾಗಿರುವ ದೇವಸ್ಥಾನವಾಗಿದೆ. ಈ ದೇವಸ್ಥಾನವು ಬಹಳ ವಿಶೇಷಗಳಿಂದ ಕೂಡಿದೆ. ಏಕೆಂದರೆ ಇಲ್ಲಿ ಕಾಲ ಭೈರವನಿಗೆ ಮದ್ಯವನ್ನು ಅರ್ಪಿಸಲಾಗುತ್ತದೆ. ಈ ಸಂಪ್ರದಾಯವು ಕಾಲ ಭೈರವನನ್ನು ಒಲಿಸಿಕೊಳ್ಳುವ ಮಾರ್ಗವೆಂದು ಭಕ್ತರು ನಂಬುತ್ತಾರೆ. ಈ ಸಂಪ್ರದಾಯವು ಒಂದು ನಿಗೂಢತೆಯಿಂದ ಕೂಡಿದೆ. ಕಾಲ ಭೈರವನು ನಕಾರಾತ್ಮಕ ಶಕ್ತಿ ಮತ್ತು ಶಾಪಗಳನ್ನು ದೂರ ಮಾಡಿ ಭಕ್ತರನ್ನು ರಕ್ಷಿಸುತ್ತಾನೆ ಎಂದು ನಂಬಲಾಗಿದೆ.
ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ, ತಿರುವನಂತಪುರಂ (ಕೇರಳ)
ಇದು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿರುವ ದೇವಸ್ಥಾನವಾಗಿದೆ. ಈ ದೇವಸ್ಥಾನವು ಅಪಾರ ಸಂಪತ್ತು ಮತ್ತು ಹಲವು ನಿಗೂಢತೆಗಳಿಂದ ಕೂಡಿದೆ. 2011 ರಲ್ಲಿ ಈ ದೇವಸ್ಥಾನದಲ್ಲಿನ ನೆಲಮಹಡಿಯಲ್ಲಿ ಹಲವು ಸಂಪತ್ತು ತುಂಬಿರುವ ಖಜಾನೆಗಳು ಇರುವುದು ಕಂಡುಬಂದವು. ಅಲ್ಲಿ ಕೋಟಿಗಟ್ಟಲೆ ಮೌಲ್ಯದ ಸಂಪತ್ತು ಇರುವುದು ಕಂಡುಬಂದಿತು. ಈ ಖಜಾನೆಗಳನ್ನು ಶತಮಾನಗಳಿಂದ ತೆರೆದಿರಲಿಲ್ಲ. ಇನ್ನೂ ಕೂಡಾ ಅಲ್ಲಿನ ಕೆಲವು ಖಜಾನೆಗಳನ್ನು ತೆರೆಯದೆ ಇಡಲಾಗಿದೆ. ಏಕೆಂದರೆ ಅವುಗಳನ್ನು ತೆರೆಯುವುದರಿಂದ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ ಎಂದು ನಂಬಲಾಗಿದೆ. ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ಜೀವನದಲ್ಲಿ ಅದೃಷ್ಟ ಒಲಿದು ಬರಲಿದೆ ಮತ್ತು ಸಂಪತ್ತು ವೃದ್ಧಿಯಾಗುತ್ತದೆ ಎಂದು ಭಕ್ತರು ನಂಬುತ್ತಾರೆ.
ಕಾಮಾಖ್ಯ ದೇವಿ ಮಂದಿರ, ಗುವಾಹಟಿ (ಅಸ್ಸಾಂ)
ಈ ದೇವಾಲಯವು ಭಾರತದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಇದು ದುರ್ಗಾ ದೇವಿಯ ಅವತಾರವಾದ ಕಾಮಾಖ್ಯ ದೇವಿಗೆ ಸಮರ್ಪಿತವಾಗಿದೆ. ಗುವಾಹಟಿಯ ನೀಲಾಚಲ ಬೆಟ್ಟದಲ್ಲಿರುವ ಈ ದೇವಾಲಯವು ಭಾರತದ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಇದು ತಾಂತ್ರಿಕ ಆಚರಣೆಗೆ ಹೆಸರುವಾಸಿಯಾದ ದೇವಸ್ಥಾನವಾಗಿದೆ. ಇಲ್ಲಿನ ಆಚರಣೆಗಳು ಹಲವು ನಿಗೂಢತೆಗಳಿಂದ ಕೂಡಿದೆ. ಇದು ಸತಿ ದೇವಿಯ ಗರ್ಭವು ಬಿದ್ದ ಸ್ಥಳವೆಂದು ನಂಬಲಾಗಿದೆ. ಇಲ್ಲಿ ವಾರ್ಷಿಕವಾಗಿ ನಡೆಯುವ ಅಂಬುಬಾಚಿ ಮೇಳವು ಬಹಳ ವಿಶೇಷವಾಗಿರುತ್ತದೆ. ಇದು ದೇವಿಯ ಋತುಚಕ್ರದ ದಿನಗಳ ಆಚರಣೆಯ ಹಬ್ಬವಾಗಿದೆ. ಇದನ್ನು ಭಕ್ತರು ಪವಿತ್ರವೆಂದು ಪರಿಗಣಿಸುತ್ತಾರೆ. ಸಾಮಾನ್ಯವಾಗಿ ಭಕ್ತರು ಫಲವತ್ತತೆಗಾಗಿ ಆಶೀರ್ವಾದ ಪಡೆಯಲು ಇಲ್ಲಿಗೆ ಭೇಟಿ ಕೊಡುತ್ತಾರೆ. ಅಧ್ಯಾತ್ಮಕ ಶಕ್ತಿಯಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು ಎಂಬ ನಂಬಿಕೆ ಭಕ್ತರಲ್ಲಿದೆ.
ವೆಂಕಟೇಶ್ವರ ದೇವಸ್ಥಾನ, ತಿರುಮಲ (ಆಂಧ್ರಪ್ರದೇಶ)
ಇದು ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ದೇವಸ್ಥಾನವಾಗಿದೆ. ಇಲ್ಲಿ ಮಹಾ ವಿಷ್ಣುವೇ ವೆಂಕಟೇಶ್ವರನಾಗಿ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಇದನ್ನು ತಿರುಪತಿ ಬಾಲಾಜಿ ಎಂದೂ ಕರೆಯುತ್ತಾರೆ. ಇದು ವಿಶ್ವದ ಅತ್ಯಂತ ಶ್ರೀಮಂತ ದೇವಸ್ಥಾನವಾಗಿದೆ. ಇಲ್ಲಿಗೆ ಅಪಾರ ಸಂಪತ್ತು ಮತ್ತು ದೇಣಿಗೆಗಳು ಎಲ್ಲಿಂದ ಬರುತ್ತವೆ ಎಂಬುದು ಬಹಳ ವಿಸ್ಮಯವೆನಿಸುತ್ತದೆ. ಇಲ್ಲಿ ಭಕ್ತರು ಕೇಶವನ್ನು ಮುಡುಪಾಗಿ ಕೊಡುವ ಆಚರಣೆಯಿದೆ. ಇದು ತಮ್ಮನ್ನು ತಾವು ದೇವರಿಗೆ ಅರ್ಪಿಸಿಕೊಳ್ಳುವ ರೀತಿ ಎಂಬ ನಂಬಿಕೆಯಿದೆ. ವೆಂಕಟೇಶ್ವರ ಮೂರ್ತಿಯು ಜೀವಂತ ಮೂರ್ತಿ ಎನ್ನಲಾಗುತ್ತದೆ. ಈ ದೇವರಲ್ಲಿ ಬ್ರಹ್ಮಾಂಡದ ಅಗಾಧವಾದ ಶಕ್ತಿಯಿದೆ ಎಂದು ಹೇಳಲಾಗುತ್ತದೆ. ಇಲ್ಲಿನ ವಿಗ್ರಹವು ಯಾವಾಗ ಸ್ಥಾಪಿತವಾಗಿದೆ ಎಂಬುದು ನಿರ್ದಿಷ್ಟವಾಗಿ ತಿಳಿದಿಲ್ಲ, ಅನಾದಿಕಾಲದಿಂದಲೂ ಇದೆ ಎಂದು ಹೇಳಲಾಗುತ್ತದೆ.
ಬಾಲಾಜಿ ದೇವಸ್ಥಾನ, ಮೆಹೆಂದಿಪುರ (ರಾಜಸ್ಥಾನ)
ರಾಜಸ್ಥಾನದ ದೌಸಾದ ಮೆಹೆಂದಿಪುರದಲ್ಲಿರುವ ಬಾಲಾಜಿ ದೇವಸ್ಥಾನವು ಹನುಮಂತನಿಗೆ ಸಮರ್ಪಿತವಾದ ದೇವಸ್ಥಾನವಾಗಿದೆ. ಇಲ್ಲಿ ಆಂಜನೇಯ ಬಾಲಾಜಿಯ ರೂಪದಲ್ಲಿ ನೆಲೆಸಿದ್ದಾನೆ. ದುಷ್ಟಶಕ್ತಿ ಮತ್ತು ಮಾಟಮಂತ್ರಗಳ ರಕ್ಷಣೆಗಾಗಿ ಇಲ್ಲಿಗೆ ಭಕ್ತರು ಬರುತ್ತಾರೆ. ಈ ದೇವಸ್ಥಾನವು ವಿಚಿತ್ರ ಆಚರಣೆಗಳಿಗೆ ಹೆಸರುವಾಸಿಯಾಗಿದೆ. ದೆವ್ವ, ಭೂತ ಓಡಿಸುವ ಆಚರಣೆಯಿರುವ ಈ ದೇವಸ್ಥಾನವು ಅನೇಕರನ್ನು ಭಯಭೀತಗೊಳ್ಳುವಂತೆ ಮಾಡುತ್ತದೆ. ಈ ದೇವರ ಅಗಾಧ ಶಕ್ತಿ ಮತ್ತು ಅಧ್ಯಾತ್ಮಿಕ ಆಚರಣೆಯನ್ನು ಭಕ್ತರು ಬಹಳವಾಗಿ ನಂಬುತ್ತಾರೆ. ನಕಾರಾತ್ಮಕ ಶಕ್ತಿಯ ನಿವಾರಣೆಗೆ ಬಾಲಾಜಿಗೆ ದೀಪಗಳನ್ನು ಬೆಳಗಿಸಲಾಗುತ್ತದೆ.
ಕಾಕನಮಠ ದೇವಾಲಯ, ಕಾಕನಮಠ (ಛತ್ತೀಸ್‌ಗಢ)
ಈ ದೇವಾಲವು ಛತ್ತೀಸ್‌ಗಢದ ಕಾಕನಮಠ ಎಂಬ ಹಳ್ಳಿಯಲ್ಲಿದೆ. ಕಾಕನಮಠ ದೇವಾಲಯವು ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಇದು ಶಿವನಿಗೆ ಅರ್ಪಿತವಾದ ದೇವಸ್ಥಾನವಾಗಿದೆ. ಈ ದೇವಸ್ಥಾನವು ಅತ್ಯಂತ ನಿಗೂಢತೆಗಳಿಂದ ಕೂಡಿರುವ ದೇವಾಲಯವಾಗಿದೆ. ಇಲ್ಲಿ ವಾಸ್ತುಶಿಲ್ಪ ಗಮನಾರ್ಹವಾಗಿದೆ. 11ನೇ ಶತಮಾನದಷ್ಟು ಹಳೆಯದಾಗಿರುವ ಈ ದೇಗುಲವು ಸೂಕ್ಷ್ಮ ಕೆತ್ತನೆಗಳನ್ನು ಮತ್ತು ವಿವಿಧ ದೇವತೆಗಳನ್ನು ಒಳಗೊಂಡಿದೆ. ಇದು ಅಲೌಕಿಕ ಘಟನೆಗಳ ತಾಣ ಎಂಬ ಐತಿಹ್ಯವೂ ಇದೆ.