Utthana Dwadashi 2023: ಇಂದು ಉತ್ಥಾನ ದ್ವಾದಶಿ; ತುಳಸಿ ಮದುವೆ ಆಚರಣೆಯ ಧಾರ್ಮಿಕ ಹಿನ್ನೆಲೆ, ಮಹತ್ವದ ವಿವರ ಇಲ್ಲಿದೆ
ಕಾರ್ತಿಕ ಮಾಸದಲ್ಲಿ ಉತ್ಥಾನ ದ್ವಾದಶಿ ಬಹಳ ವಿಶೇಷ. ಈ ದಿನ ತುಳಸಿ ಕಟ್ಟೆಯಲ್ಲಿ ಬೃಂದಾವನ ನಿರ್ಮಿಸಿ ತುಳಸಿ ಮದುವೆ ಮಾಡಲಾಗುತ್ತದೆ. ಮಹಾವಿಷ್ಣುವನ್ನು ಆರಾಧಿಸುವ ಮೂಲಕ ತುಳಸಿಗೆ ವಿಶೇಷ ಪೂಜೆ ಸಲ್ಲಿಸುವ ದಿನವಿದು. ಈ ದಿನದಂದು ತುಳಸಿ ಮದುವೆ ಮಾಡುವುದು ಏಕೆ, ಇದರ ಹಿಂದಿನ ಧಾರ್ಮಿಕ ಹಿನ್ನೆಲೆ ಏನು, ಉತ್ಥಾನ ದ್ವಾದಶಿ ಆಚರಣೆಯ ಮಹತ್ವದ ಕುರಿತ ವಿವರ ಇಲ್ಲಿದೆ.
ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಹಿಂದೂಗಳ ಮನೆಯಲ್ಲಿ ತುಳಸಿಕಟ್ಟೆ ಇಲ್ಲಿದೇ ಇರುವುದು ಅಪರೂಪ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ತುಳಸಿಗೆ ದೀಪ ಹಚ್ಚುತ್ತಾರೆ, ಪೂಜೆ ಸಲ್ಲಿಸುತ್ತಾರೆ. ಇಂತಹ ವಿಶೇಷ ಪ್ರಾಮುಖ್ಯವಿರುವ ತುಳಸಿಗೆ ಒಂದು ವಿಶೇಷ ದಿನವಿದೆ. ಅದುವೇ ಉತ್ಥಾನ ದ್ವಾದಶಿ. ಈ ದಿನ ತುಳಸಿ ಮದುವೆ ಆಚರಣೆ ನಡೆಯುತ್ತದೆ. ತುಳಸಿ ಕಟ್ಟೆಯನ್ನು ಬೃಂದಾವನದಂತೆ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ. ಆ ಮೂಲಕ ವಿಷ್ಣುವಿನ ಕೃಪೆಗೆ ಪಾತ್ರರಾಗುತ್ತಾರೆ. ಅಂದ ಹಾಗೆ ಇಂದು (ನ.24) ಉತ್ಥಾನ ದ್ವಾದಶಿ ಆಚರಣೆ ಇದೆ.
ಶ್ರೀಮನ್ನಾರಾಯಣ ಅಂದರೆ ಮಹಾವಿಷ್ಣುವು ನಿದ್ದೆಯಿಂದ ಏಳುವ ದಿನದಂದು ಉತ್ಥಾನ ದ್ವಾದಶಿ ಆಚರಣೆ ಮಾಡಲಾಗುತ್ತದೆ. ಪುರಾಣ ಗ್ರಂಥಗಳ ಪ್ರಕಾರ ವಿಷ್ಣುವು ಶಯನ ಏಕಾದಶಿಯಂದು ಮಲಗಿದರೆ ಕಾರ್ತಿಕ ದ್ವಾದಶಿಯಂದು ಏಳುತ್ತಾನೆ ಎಂಬುದು ನಂಬಿಕೆ.
ಉತ್ಥಾನ ಎಂದರೆ ಏಳು ಅಥವಾ ಎಬ್ಬಿಸು ಎಂಬ ಅರ್ಥವಿದೆ. ನರಕಾಸುರನನ್ನು ವಧೆ ಮಾಡಿದ ನಂತರ ಎಣ್ಣೆ ಹಚ್ಚಿ ಮಲಗುವ ವಿಷ್ಣುವನ್ನು ಉತ್ಥಾನ ದ್ವಾದಶಿಯ ದಿನ ದೇವತೆಗಳು ಎಬ್ಬಿಸುತ್ತಾರೆ. ಆ ಕಾರಣಕ್ಕೆ ಈ ದಿನ ತುಳಸಿ ಸನ್ನಿಧಾನದಲ್ಲಿ ಭಗವಂತನಿಗೆ ಪೂಜೆ ಸಲ್ಲಿಸಿ ಆರಾಧಿಸಲಾಗುತ್ತದೆ ಎಂಬುದು ಇನ್ನೊಂದು ನಂಬಿಕೆ
ಚಾಂದ್ರಮಾನ ಕಾರ್ತಿಕ ಮಾಸ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ತುಳಸಿ ಮದುವೆ ಅಥವಾ ಉತ್ಥಾನ ದ್ವಾದಶಿ ಆಚರಿಸಲಾಗುತ್ತದೆ. ತುಳಸಿಕಟ್ಟೆ ಅಥವಾ ತುಳಸಿ ವೃಂದಾವನದ ಬಳಿ ಧಾತ್ರಿ ವೃಕ್ಷದ ಕೊಂಬೆಯನ್ನಿಟ್ಟು ಅದರ ಶ್ರೀಕೃಷ್ಣನ ಪ್ರತಿಮೆ ಹಾಗೂ ಸಾಲಿಗ್ರಾಮವನ್ನಿಟ್ಟು ಪೂಜೆ ಸಲ್ಲಿಸಲಾಗುತ್ತದೆ. ತುಳಸಿಯು ಸಮುದ್ರ ಮಂಥನ ಸಮಯದಲ್ಲಿ ಉದ್ಭವಿದಳು ಎನ್ನಲಾಗುತ್ತದೆ. ಆ ಕಾರಣಕ್ಕೂ ತುಳಸಿಗೆ ವಿಶೇಷ ಪ್ರಾಧಾನ್ಯವಿದೆ.
ತುಳಸಿ ಮದುವೆ ಅಥವಾ ಉತ್ಥಾನ ದ್ವಾದಶಿ ಆಚರಣೆಯ ಹಿನ್ನೆಲೆ
ತುಳಸಿಗೆ ಇನ್ನೊಂದು ಹೆಸರು ವೃಂದಾ. ಆಕೆ ಜಲಂಧರ ಎಂಬ ರಾಕ್ಷಸನ ಪತ್ನಿ. ವೃಂದಾ ಮಹಾನ್ ಪತೀವೃತೆ. ಜಲಂಧರ ಲೋಕಕ್ಕೆ ಅಪಾಯಕಾರಿಯಾದರೂ ವೃಂದಾ ಪುಣ್ಯಕಾರ್ಯಗಳಿಂದ ಯಾರಿಂದಲೂ ಆತನನ್ನು ಕೊಲ್ಲಲು ಸಾಧ್ಯವಾಗಿರುವುದಿಲ್ಲ. ವೃಂದಾ ಕಾರಣದಿಂದ ಆತ ಅಷ್ಟೊಂದು ಶಕ್ತಿಶಾಲಿಯಾಗಿರುತ್ತಾನೆ. ಆದರೆ ಜಲಂಧರ ಬಹಳ ಉಪದ್ರವಿ. ಇವನ ಕಾಟಕ್ಕೆ ಬೇಸತ್ತ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ವಿಷ್ಣು ಬೇರೆ ದಾರಿ ಕಾಣದೆ ಜಲಂಧರನ ರೂಪದಲ್ಲಿ ಬಂದು ವೃಂದಾಳೊಂದಿಗೆ ಸರಸ, ಸಲ್ಲಾಪದಲ್ಲಿ ತೊಡುಗುತ್ತಾನೆ. ಇದರಿಂದ ಆಕೆ ಪಾವೀತ್ರ್ಯತೆಗೆ ಧಕ್ಕೆ ಉಂಟಾಗುತ್ತದೆ. ಇದರಿಂದ ಜಲಂಧರ ಯುದ್ಧದಲ್ಲಿ ಸಾವನ್ನಪ್ಪುತ್ತಾನೆ. ಕೊನೆಯಲ್ಲಿ ಸತ್ಯ ಅರಿತ ವೃಂದಾ ವಿಷ್ಣುದೇವನನ್ನು ಶಪಿಸುತ್ತಾಳೆ. ನಿನಗೂ ಮುಂದೊಮ್ಮೆ ಪತ್ನಿ ವಿಯೋಗವಾಗಲಿ ಎಂದು ಶಪಿಸಿ ಚಿತೆಯೇರಿ ಸಾಯುತ್ತಾಳೆ. ಆಗ ಪಾರ್ವತಿ ಮಾತೆಯು ವೃಂದಾಳ ಚಿತೆಯ ಸುತ್ತ ತುಳಸಿ ಹಾಗೂ ನೆಲ್ಲಿ ಗಿಡವನ್ನು ನೆಟ್ಟು ವೃಂದಾವನ ನಿರ್ಮಿಸುತ್ತಾಳೆ. ಆಗ ಸೊಂಪಾಗಿ ಬೆಳೆದ ತುಳಸಿಯನ್ನು ತುಳಸಿಯನ್ನು ವಿಷ್ಣು ವರಿಸುತ್ತಾನೆ. ಮುಂದೆ ತುಳಸಿ ರುಕ್ಮಿಣಿಯ ರೂಪದಲ್ಲಿ ಜನಿಸಿ, ಕಾರ್ತಿಕ ಶುದ್ಧ ದ್ವಾದಶಿಯ ದಿನ ಶ್ರೀಕೃಷ್ಣನನ್ನು ಮದುವೆಯಾಗುತ್ತಾಳೆ. ಕೃಷ್ಣಾ ರುಕ್ಮಿಣಿಯರ ವಿವಾಹ ಮಹೋತ್ಸವದ ನೆನಪಿನಲ್ಲಿ ಉತ್ಥಾನ ದ್ವಾದಶಿ ಅಥವಾ ತುಳಸಿ ವಿವಾಹ ನೆರವೇರುತ್ತದೆ ಎಂದು ಹಿರಿಯರು ಹೇಳುತ್ತಾರೆ.
ಉತ್ಥಾನ ದ್ವಾದಶಿ ಆಚರಣೆ ವಿಧಾನ
ತುಳಸಿಕಟ್ಟೆಯನ್ನು ತೊಳೆದು, ತುಳಸಿಯ ಮುಂದೆ ರಂಗೋಲಿ ಹಾಕಿ, ಹೂ, ಮಾವಿನ ಎಲೆಯ ತೋರಣಗಳಿಂದ ಅಲಂಕರಿಸಲಾಗುತ್ತದೆ. ಈ ದಿನ ತುಳಸಿ ಗಿಡದೊಂದಿಗೆ ಬೆಟ್ಟ ನೆಲ್ಲಿಕಾಯಿ ಗಿಡವನ್ನು ಪೂಜಿಸುವುದು ವಾಡಿಕೆ. ತುಳಸಿ ಗಿಡದ ಸುತ್ತಲೂ ಮಂಟಪ ನಿರ್ಮಿಸಿ ಬೃಂದಾವನ ಮಾಡಲಾಗುತ್ತದೆ. ಈ ಬೃಂದಾವನದಲ್ಲಿ ವೃಂದಾಳ ಆತ್ಮವು ರಾತ್ರಿಯಿಡಿ ಇರುತ್ತದೆ ಎಂದು ನಂಬಲಾಗುತ್ತದೆ.
ತುಳಸಿ ವೈಶಿಷ್ಟ್ಯ
ಹಿಂದೂಗಳಲ್ಲಿ ಪ್ರತಿ ಪೂಜೆಗೂ ತುಳಸಿ ದಳ ಬೇಕೇಬೇಕು. ತುಳಸಿ ಎಲೆ, ಬೀಜ, ಹೂ ಎಲ್ಲದ್ದಕ್ಕೂ ಪವಿತ್ರ ಸ್ಥಾನವಿದೆ. ತುಳಸಿ ಇರುವಲ್ಲಿ ಶ್ರೀಕೃಷ್ಣ ನೆಲೆಯಾಗಿರುತ್ತಾನೆ ಎಂದು ನಂಬಲಾಗುತ್ತದೆ. ತುಳಸಿಯು ಮನುಷ್ಯನ ಪಾಪಗಳಿಂದ ಮುಕ್ತಿ ನೀಡುತ್ತದೆ ಎಂಬುದು ನಂಬಿಕೆ. ಇದರೊಂದಿಗೆ ತುಳಸಿ ಗಿಡವು ಆರೋಗ್ಯ ದೃಷ್ಟಿಯಿಂದಲೂ ಉತ್ತಮ. ಆಯುರ್ವೇದ ಪದ್ಧತಿಯಲ್ಲಿ ಇಂದಿಗೂ ತುಳಸಿಗೆ ಅಗ್ರಸ್ಥಾನವಿದೆ.