Deepawali 2023: ದೀಪಾವಳಿ ಹಬ್ಬದ ದಿನಾಂಕ, ಪೂಜಾ ಮುಹೂರ್ತ ಸೇರಿದಂತೆ, ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸುವ ಸಿಹಿ ತಿನಿಸುಗಳ ವಿವರ ಇಲ್ಲಿದೆ
Deepawali 2023: ದಸರಾ ಹಬ್ಬದ ಸಂಭ್ರಮ ಈಗಷ್ಟೇ ಮುಗಿದಿದೆ. ಇದೀಗ ದೀಪಾವಳಿ ಹಬ್ಬಕ್ಕೆ ಎದುರು ನೋಡುತ್ತಿದೆ ಭಾರತ. ಹಾಗಾದರೆ ದೀಪಾವಳಿ ಹಬ್ಬ ಯಾವಾಗ, ಹಬ್ಬದ ಮಹತ್ವ, ಪೂಜಾ ಮುಹೂರ್ತ ಹಾಗೂ ಸಿಹಿ ತಿನಿಸುಗಳ ಕುರಿತ ಸಂಪೂರ್ಣ ವಿವರ ಇಲ್ಲಿದೆ
ಭಾರತದಲ್ಲಿ ಈಗ ಹಬ್ಬಗಳ ಪರ್ವಕಾಲ. ಒಂದರ ಹಿಂದೆ ಒಂದರಂತೆ ಸಾಲು ಸಾಲು ಹಬ್ಬಗಳು ಬರುತ್ತಿವೆ. ಈಗಷ್ಟೇ ನವರಾತ್ರಿ ಸಂಭ್ರಮ ಮುಗಿದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರುತ್ತದೆ. ಬೆಳಕಿನ ಹಬ್ಬದ ದೀಪಾವಳಿಯನ್ನು ಭಾರತದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಶ್ರೀರಾಮನು 14 ವರ್ಷಗಳ ಕಾಲ ವನವಾಸ ಮುಗಿಸಿ ರಾಜ್ಯಕ್ಕೆ ಮರಳಿದ ದಿನದ ನೆನಪಿನಲ್ಲಿ ದೀಪಾವಳಿ ಆಚರಿಸಲಾಗುತ್ತದೆ ಎಂದು ಪುರಾಣ ಕಥೆಗಳು ಉಲ್ಲೇಖಿಸುತ್ತವೆ.
ಈ ವರ್ಷ ನವೆಂಬರ್ 12 ರಂದು ದೀಪಾವಳಿ ಆಚರಣೆ ಇದೆ. ಆದರೆ ದೀಪಾವಳಿಗೆ ವಾರಗಳು ಇರುವಾಗಲೇ ಸಿದ್ಧತೆಗಳು ಆರಂಭವಾಗುತ್ತದೆ. ಲಕ್ಷ್ಮೀದೇವಿ ಹಾಗೂ ಗಣೇಶನಿಗೆ ದೀಪಾವಳಿಯಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ದೀಪಾವಳಿಯ ಸಲುವಾಗಿ ವಾರಗಳ ಮೊದಲೇ ಮನೆಯನ್ನು ಸ್ವಚ್ಚಗೊಳಿಸುವುದು ವಾಡಿಕೆ. ಬಣ್ಣ ಬಣ್ಣದ ದೀಪಗಳು, ಗೂಡುದೀಪಗಳು, ಪಟಾಕಿ ಸಂಭ್ರಮದೊಂದಿಗೆ ವಿವಿಧ ಬಗೆಯ ತಿನಿಸುಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ.
2023ರ ದೀಪಾವಳಿ ಯಾವಾಗ
ಮೊದಲೇ ಹೇಳಿದಂತೆ ಈ ವರ್ಷ ನವೆಂಬರ್ 12 ರಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಐದು ದಿನಗಳ ಕಾಲ ದೀಪಾವಳಿ ಹಬ್ಬದ ಆಚರಣೆ ಇರುತ್ತದೆ. ಧನ್‌ತೆರೆಸ್ ಎಂದು ದೀಪಾವಳಿ ಮೊದಲ ದಿನವನ್ನು ಉತ್ತರ ಭಾಗದಲ್ಲಿ ಆಚರಿಸುತ್ತಾರೆ. ನವೆಂಬರ್ 10ರಂದು ಧನತೆರಸ್ ಆಚರಣೆ ಇದೆ. ನವೆಂಬರ್ 11ಕ್ಕೆ ನರಕ ಚತುದರ್ಶಿ ಆಚರಿಸಲಾಗುತ್ತದೆ. ಮೂರನೇ ದಿನ ದೀಪಾವಳಿ. ನವೆಂಬರ್ 14 ರಂದು ಗೋಪೂಜೆ ಇದೆ. ನವೆಂಬರ್ 15 ರಂದು ಭಾಯ್ ದೋಜ್ (ಉತ್ತರ ಭಾರತ) ಆಚರಣೆಯ ಮೂಲಕ ದೀಪಾವಳಿ ಮುಗಿಯುತ್ತದೆ.
ದೀಪಾವಳಿ ಹಬ್ಬದ ಮಹತ್ವ
ಹಿಂದೂ ಕ್ಯಾಲೆಂಡರ್ ಪ್ರಕಾರ ಕಾರ್ತಿಕ ಮಾಸದಲ್ಲಿ ದೀಪಾವಳಿ ಹಬ್ಬದ ಆಚರಣೆ ಇರುತ್ತದೆ. ಈ ದಿನದಂದು ಶ್ರೀರಾಮನು ತನ್ನ ಮಡದಿ ಸೀತಾ ಹಾಗೂ ತಮ್ಮ ಲಕ್ಷಣನ ಜೊತೆ 14 ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ದಿನವಾಗಿದೆ. ಈ ದಿನದಂದು ಶ್ರೀರಾಮ ರಾಜ್ಯಕ್ಕೆ ಮರಳಿದ ಖುಷಿಗೆ ಅಯೋಧ್ಯೆಯ ಜನರು ದೀಪಗಳನ್ನು ಬೆಳಗಿಸುವ ಮೂಲಕ ಸಂಭ್ರಮಿಸಿದರು ಎಂದು ಪುರಾಣ ಗ್ರಂಥಗಳು ಹೇಳುತ್ತವೆ. ಅಲ್ಲದೆ ದೀಪಾವಳಿ ಎಂದರೆ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವುದು ಅಥವಾ ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗುವುದು ಎಂಬ ಅರ್ಥವೂ ಇದೆ.
ಈ ದಿನ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸುವುದು ವಾಡಿಕೆ. ಈ ದಿನದಂದು ಲಕ್ಷ್ಮಿ ದೇವಿಯು ತನ್ನ ಭಕ್ತರನ್ನು ಆಶೀರ್ವದಿಸಲು ಧರೆಗಿಳಿಯುತ್ತಾಳೆ ಎಂದು ನಂಬಲಾಗಿದೆ.
2023ರ ದೀಪಾವಳಿಯ ಲಕ್ಷ್ಮೀ ದೇವಿಯ ಪೂಜೆಯ ಶುಭ ಮುಹೂರ್ತ
ದೀಪಾವಳಿ: ಭಾನುವಾರ, ನವೆಂಬರ್ 12, 2023,
ವೃಭಷ ಲಗ್ನ ಮುಹೂರ್ತ: ನವೆಂಬರ್ 12ರ ಸಂಜೆ 5.39 ರಿಂದ ಸಂಜೆ 7.35
ಸಿಂಹ ಲಗ್ನ ಮುಹೂರ್ತ: ಮಧ್ಯರಾತ್ರಿ 12.10 ರಿಂದ 2.27 (ನವೆಂಬರ್ 13)
ಅಮವಾಸ್ಯೆ ತಿಥಿ ಆರಂಭ: ನವೆಂಬರ್ 12 ರ ಮಧ್ಯಾಹ್ನ 2.44 ರಿಂದ
ಅಮಾವಾಸ್ಯೆ ತಿಥಿ ಮುಕ್ತಾಯ: ನವೆಂಬರ್ 13ರಂದು 2.56ಕ್ಕೆ
ದೀಪಾವಳಿಯ ಸಂಭ್ರಮ ಹೆಚ್ಚಿಸುವ ವಿಶೇಷ ತಿನಿಸುಗಳು
ಕಾಜು ಬರ್ಫಿ
ಹಾಲು ಹಾಗೂ ಗೋಡಂಬಿ ಹಾಕಿ ತಯಾರಿಸುವ ಕಾಜು ಬರ್ಫಿ ಗೋಡಂಬಿ ಹಬ್ಬದ ವಿಶೇಷ. ಬಹಳ ಸುಲಭವಾಗಿ ತಯಾರಿಸಬಹುದಾದ ಈ ತಿನಿಸನ್ನು ಒಂದು ಗಂಟೆಯಲ್ಲಿ ಮನೆಯಲ್ಲೇ ತಯಾರಿಸಬಹುದು.
ರಸಮಲೈ
ರಸಮಲೈ ಬಹುತೇಕ ಇಷ್ಟದ ತಿನಿಸು. ಇದು ಉತ್ತರ ಭಾರತದ ತಿನಿಸಾದರೂ ದಕ್ಷಿಣದಲ್ಲೂ ಫೇಮಸ್. ಏಲಕ್ಕಿ, ಹಾಲು, ಕೆನೆಯಿಂದ ತಯಾರಿಸುವ ಈ ಸಿಹಿ ತಿನಿಸು ಕೂಡ ದೀಪಾವಳಿಯಲ್ಲಿ ವಿಶೇಷ ಸ್ಥಾನ ಪಡೆದಿದೆ.
ದಹಿ ವಡೆ
ಇದು ಭಾರತದ ಪ್ರಸಿದ್ಧ ಚಾಟ್ ತಿನಿಸುಗಳಲ್ಲಿ ಒಂದು. ಇದನ್ನು ಬಹುತೇಕರು ದೀಪಾವಳಿ ಹಬ್ಬದ ಸಮಯದಲ್ಲಿ ಮನೆಯಲ್ಲಿ ತಯಾರಿಸುತ್ತಾರೆ. ಇದನ್ನು ಉದ್ದಿನಬೇಳೆಯಿಂದ ತಯಾರಿಸಿದ ವಡೆ ಹಾಗೂ ಮೊಸರಿನಲ್ಲಿ ಅದ್ದಿ ನೀಡಲಾಗುತ್ತದೆ.
ದಾಲ್ ಮಕಾನಿ
ದೀಪಾವಳಿ ಹಬ್ಬಕ್ಕೆ ದಾಲ್ ಮಕಾನಿಯನ್ನು ಮನೆಯಲ್ಲೇ ತಯಾರಿಸಿ ಹಬ್ಬದ ಸಂಭ್ರಮ ಹೆಚ್ಚಿಸಬಹುದು.
ಕಡಾಯಿ ಪನೀರ್
ಇದು ಕೂಡ ಉತ್ತರ ಭಾರತದ ತಿನಿಸು, ಆದರೆ ದಕ್ಷಿಣದಲ್ಲೂ ಫೇಮಸ್. ಕಡಾಯಿ ಪನೀರ್ ಮೇನ್ ಕೋರ್ಸ್ ಪಟ್ಟಿಯಲ್ಲಿ ಪ್ರಮುಖವಾಗಿರುತ್ತದೆ. ಈ ದೀಪಾವಳಿಗೆ ನೀವು ಮನೆಯಲ್ಲಿ ಕಡಾಯಿ ಪನೀರ್ ಕೂಡ ತಯಾರಿಸಿ ಸವಿಯಬಹುದು.
ಇದನ್ನೂ ಓದಿ
Deepawali 2023: ಹತ್ತಿರ ಬರ್ತಿದೆ ದೀಪಾವಳಿ, ಶುರುವಾಗಲಿ ಸಿದ್ಧತೆ: ಪ್ರಮುಖ ದಿನ, ಆಚರಣೆ, ಮುಹೂರ್ತದ ವಿವರಗಳು ಇಲ್ಲಿವೆ
ದೀಪಾವಳಿ ಎಂದರೆ ದೀಪಗಳನ್ನು ಬೆಳಗಿಸುವ ಹಬ್ಬ. ದೀಪ ಎನ್ನುವುದು ಸಂಸ್ಕೃತ ಶಬ್ದ, ದೀಪ ಬೆಳಗಿಸುವುದು ಶುಭ ಸಂಕೇತವಾಗಿದೆ. ಆವಳಿ ಎಂದರೆ ಸಾಲು, ಶ್ರೇಣಿ ಎಂದರ್ಥ. ಹಾಗಾಗಿ ದೀಪಾವಳಿ ಎಂದರೆ ದೀಪಗಳ ಸಾಲನ್ನು ಬೆಳಗುವುದು ಎಂದರ್ಥ. ದೀಪಾವಳಿಯಂದು ಸಾಲು ಸಾಲು ದೀಪಗಳನ್ನು ಬೆಳಗಿಸುವ ಮೂಲಕ ಕತ್ತಲನ್ನು ದೂರವಾಗಿಸುತ್ತೇವೆ.