ಶ್ರಾವಣ ಮಾಸದಲ್ಲಿ ಶಿವನಿಗೆ ಪ್ರಿಯವಾದ ಧೂಪ ಬೆಳಗಿಸಿ; ಮನೆಯಲ್ಲೇ ಇದನ್ನು ತಯಾರಿಸುವುದು ಹೇಗೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶ್ರಾವಣ ಮಾಸದಲ್ಲಿ ಶಿವನಿಗೆ ಪ್ರಿಯವಾದ ಧೂಪ ಬೆಳಗಿಸಿ; ಮನೆಯಲ್ಲೇ ಇದನ್ನು ತಯಾರಿಸುವುದು ಹೇಗೆ?

ಶ್ರಾವಣ ಮಾಸದಲ್ಲಿ ಶಿವನಿಗೆ ಪ್ರಿಯವಾದ ಧೂಪ ಬೆಳಗಿಸಿ; ಮನೆಯಲ್ಲೇ ಇದನ್ನು ತಯಾರಿಸುವುದು ಹೇಗೆ?

ವಿಶೇಷ ದಿನಗಳಲ್ಲಿ ಮನೆಯಲ್ಲಿ ದೇವರ ಮುಂದೆ ಧೂಪ ಬೆಳಗಿಸುತ್ತೇವೆ. ಇದರಿಂದ ಬರುವ ಹೊಗೆಯಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳು ದೂರವಾಗುವುದಲ್ಲದೆ, ಸುವಾಸನೆಯಿಂದ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ. ಮನೆಯ‍ಲ್ಲೇ ದೊರೆಯುವ ವಸ್ತುಗಳಿಂದ ನೀವು ಧೂಪ ತಯಾರಿಸಬಹುದು.

ಶ್ರಾವಣ ಮಾಸದಲ್ಲಿ ಶಿವನಿಗೆ ಪ್ರಿಯವಾದ ಧೂಪ ಬೆಳಗಿಸಿ; ಮನೆಯಲ್ಲೇ ಇದನ್ನು ತಯಾರಿಸುವುದು ಹೇಗೆ?
ಶ್ರಾವಣ ಮಾಸದಲ್ಲಿ ಶಿವನಿಗೆ ಪ್ರಿಯವಾದ ಧೂಪ ಬೆಳಗಿಸಿ; ಮನೆಯಲ್ಲೇ ಇದನ್ನು ತಯಾರಿಸುವುದು ಹೇಗೆ?

ಶ್ರಾವಣ ಮಾಸದಲ್ಲಿ ಶಿವನ ಪೂಜೆಗೆ ಹೆಚ್ಚಿನ ಮಹತ್ವವಿದೆ. ಅಲ್ಲದೆ ಚಾತುರ್ಮಾಸದಲ್ಲಿ ಅನೇಕರು 16 ಸೋಮವಾರ ವ್ರತ ಮಾಡುತ್ತಾರೆ. ಇನ್ನೂ ಕೆಲವರು ಈ ಸಮಯದಲ್ಲಿ ಜ್ಯೋತಿರ್ಲಿಂಗ ದರ್ಶನಕ್ಕೆ ತೆರಳುತ್ತಾರೆ. ಶ್ರಾವಣ ಮಾಸದಲ್ಲಿ ಶಿವನು ತನ್ನ ಭಕ್ತರ ಇಷ್ಟಾರ್ಥಗಳನ್ನು ಪೂರೈಸಲು ಭೂಮಿಗೆ ಬರುತ್ತಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ ಭಕ್ತರು ಶಿವನ ಅನುಗ್ರಹ ಪಡೆಯಲು ಅವರ ಆರಾಧನೆ ಮಾಡುತ್ತಾರೆ.

ಹಾಗೇ ಹಬ್ಬ ಹರಿದಿನಗಳಂಥ ವಿಶೇಷ ಪೂಜೆಗಳಲ್ಲಿ ಮನೆಯಲ್ಲಿ ಧೂಪ ಹಾಕುವುದು ಸಾಮಾನ್ಯ. ಮಾರುಕಟ್ಟೆಯಲ್ಲಿ ನಾನಾ ರೀತಿಯ ಸುಗಂಧಭರಿತ ಧೂಪಗಳು ದೊರೆಯುತ್ತದೆ. ಆದರೆ ನೀವು ಮನೆಯಲ್ಲೇ ದೊರೆಯುವ ಸುಲಭವಾದ ಪದಾರ್ಥಗಳಿಂದ ಮನೆಯಲ್ಲೇ ಧೂಪ ತಯಾರಿಸಿ ದೇವರಿಗೆ ಹಚ್ಚಬಹುದು. ಈ ಶ್ರಾವಣ ಮಾಸದಲ್ಲಿ ಕೂಡಾ ನೀವು ಈ ಧೂಪವನ್ನು ಮನೆಯಲ್ಲಿ ತಯಾರಿಸಿ ಶಿವನಿಗೆ ಹಚ್ಚಿದರೆ ಶಂಕರನ ಆಶೀರ್ವಾದ ನಿಮಗೆ ದೊರೆಯುತ್ತದೆ.

ಮನೆಯಲ್ಲಿ ಯಾವುದೇ ಋಣಾತ್ಮಕತೆ ಬಾರದಂತೆ ಹಾಗೂ ಶಿವನ ಆಶೀರ್ವಾದ ಸದಾ ಉಳಿಯುವಂತೆ ಮಾಡಲು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ವಿಶೇಷವಾದ ಅಗರ ಬತ್ತಿನಿಯ ಬಗ್ಗೆ ಇಂದು ತಿಳಿಯೋಣ. ಶ್ರಾವಣ ಮಾಸದಲ್ಲಿ ಶಿವನ ಮುಂದೆ ಈ ಅಗರಬತ್ತಿಯನ್ನು ಬೆಳಗಿಸುವುದರಿಂದ ಶುಭ ಫಲಗಳು ದೊರೆಯುತ್ತವೆ.

ಧೂಪ ಮಾಡಲು ಬೇಕಾಗುವ ಸಾಮಗ್ರಿಗಳು

ಈ ಧೂಪದ್ರವ್ಯವನ್ನು ತಯಾರಿಸಲು ನೀವು ಮಾರುಕಟ್ಟೆಯಿಂದ ಏನನ್ನೂ ತರುವ ಅಗತ್ಯವಿಲ್ಲ. ಎಲ್ಲಾ ವಸ್ತುಗಳು ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿವೆ. ಇದನ್ನು ಮಾಡಲು ಹೆಚ್ಚು ಹಣವನ್ನು ಖರ್ಚು ಮಾಡುವ ಅಗತ್ಯ ಕೂಡಾ ಇಲ್ಲ. ಮೊದಲು ಪೂಜಾ ಕೊಠಡಿಯಲ್ಲಿ ದೇವರಿಗೆ ಮುಡಿಸಿದ ಹೂಗಳನ್ನು ಸಂಗ್ರಹಿಸಿಟ್ಟುಕೊಳ್ಳಿ. ಒಣಗಿಸಿದ ಹಸುವಿನ ಸಗಣಿ, ತೊಗಟೆ, ಶ್ರೀಗಂಧದ ಪುಡಿ, ಗೋಧಿ ಹಿಟ್ಟು , ಕರ್ಪೂರ ಮತ್ತು ದೇಸಿ ತುಪ್ಪ

ಧೂಪ ತಯಾರಿಸುವ ವಿಧಾನ

ಮೊದಲು ಒಣ ಹೂವುಗಳು , ಒಣ ಸಗಣಿಯನ್ನು ಪುಡಿ ಮಾಡಿಕೊಂಡು, ಜರಡಿ ಮಾಡಿಕೊಳ್ಳಿ. ಈ ಪುಡಿಗೆ ಶ್ರೀಗಂಧ , ಗೋಧಿ ಹಿಟ್ಟು, ಕರ್ಪೂರದ ಪುಡಿಯನ್ನು ಸೇರಿಸಿ ಎಲ್ಲವೂ ಹೊಂದಿಕೊಳ್ಳುವಂತೆ ಸಮನಾಗಿ ಮಿಕ್ಸ್‌ ಮಾಡಿ. ಇದಕ್ಕೆ ಸ್ವಲ್ಪ ತುಪ್ಪ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಬೆರೆಸಿ ಹಿಟ್ಟಿನಂತೆ ಮಾಡಿಕೊಳ್ಳಿ. ಈ ಪದಾರ್ಥಗಳೊಂದಿಗೆ ಬೇಕಿದ್ದರೆ ಸಾಮ್ರಾಣಿಯನ್ನು ಕೂಡಾ ಸೇರಿಸಿಕೊಳ್ಳಬಹುದು. ಇದನ್ನು ಸಣ್ಣದಾಗಿ ಉದ್ದ ಆಕಾರಕ್ಕೆ ಬರುವಂತೆ ಮಾಡಿ ಇದನ್ನು ನೆರಳಿನಲ್ಲಿ ಸ್ವಲ್ಪ ದಿನ ಒಣಗಿಸಿ. ಈ ಧೂಪದ ಕಡ್ಡಿಗಳು ಗಟ್ಟಿಯಾದಾಗ ಅದನ್ನು ದೇವರ ಮುಂದೆ ಹಚ್ಚಲು ಆರಂಭಿಸಿ. ಈ ರೀತಿ ಧೂಪದ ಹೊಗೆ ಮನೆಯೆಲ್ಲಾ ಹರಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇರುವುದಿಲ್ಲ. ಸೊಳ್ಳೆಯ ಸಮಸ್ಯೆಯೂ ಇರುವುದಿಲ್ಲ. ಇದರಿಂದ ಹೊರ ಹೊಮ್ಮುವ ಸುಗಂಧ ಕೂಡಾ ನಿಮ್ಮನ್ನು ಮಾನಸಿಕವಾಗಿಯೂ ಸಂತೋಷವಾಗಿಡುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.