Pran Pratishtha: ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠೆ ಪ್ರಕ್ರಿಯೆ ಶುರು; ರಾಮಲಲಾನ ವಿಗ್ರಹಕ್ಕೆ 7 ಅಧಿವಾಸ ಪ್ರಕ್ರಿಯೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Pran Pratishtha: ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠೆ ಪ್ರಕ್ರಿಯೆ ಶುರು; ರಾಮಲಲಾನ ವಿಗ್ರಹಕ್ಕೆ 7 ಅಧಿವಾಸ ಪ್ರಕ್ರಿಯೆ

Pran Pratishtha: ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠೆ ಪ್ರಕ್ರಿಯೆ ಶುರು; ರಾಮಲಲಾನ ವಿಗ್ರಹಕ್ಕೆ 7 ಅಧಿವಾಸ ಪ್ರಕ್ರಿಯೆ

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಗೆ ಸಂಬಂಧಿಸಿದ ಧಾರ್ಮಿಕ ವಿಧಿ ವಿಧಾನಗಳು ಮಂಗಳವಾರ (ಜ.16) ಶುರುವಾಗಿದೆ. ರಾಮಲಲಾನ ವಿಗ್ರಹಕ್ಕೆ 7 ಅಧಿವಾಸ ಪ್ರಕ್ರಿಯೆ ಕೂಡ ಶುರುವಾಗಿದ್ದು, ಜ.22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದೆ.

ಅಯೋಧ್ಯೆಯ ಸರಯೂ ನದಿ ದಂಡೆಯ ಮೇಲೆ ಮಂಗಳವಾರ (ಜ.16) ರಾತ್ರಿ ಹಣತೆ ಹಚ್ಚಿ, ಶ್ರೀ ರಾಮನನ್ನು ಆರಾಧಿಸಿದ ಬಿಕಾನೇರ್‌ನ ಭಕ್ತರು. ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠೆ ಪ್ರಕ್ರಿಯೆಗಳೂ ನಿನ್ನೆ (ಜ.16) ಶುರುವಾಗಿದ್ದು, ಜ.22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದೆ.
ಅಯೋಧ್ಯೆಯ ಸರಯೂ ನದಿ ದಂಡೆಯ ಮೇಲೆ ಮಂಗಳವಾರ (ಜ.16) ರಾತ್ರಿ ಹಣತೆ ಹಚ್ಚಿ, ಶ್ರೀ ರಾಮನನ್ನು ಆರಾಧಿಸಿದ ಬಿಕಾನೇರ್‌ನ ಭಕ್ತರು. ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠೆ ಪ್ರಕ್ರಿಯೆಗಳೂ ನಿನ್ನೆ (ಜ.16) ಶುರುವಾಗಿದ್ದು, ಜ.22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದೆ. (Shrikant Singh / ANI)

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಬೆರಳೆಣಿಕೆ ದಿನಗಳಿದ್ದು, ಮಂಗಳವಾರದಿಂದ ಪ್ರಾಣ ಪ್ರತಿಷ್ಠೆಗೆ ಪೂರ್ವಭಾವಿಯಾಗಿರುವ ಧಾರ್ಮಿಕ ವಿಧಿವಿಧಾನಗಳು ಶುರುವಾಗಿವೆ. ಮೈಸೂರಿನ ಅರುಣ್ ಯೋಗಿರಾಜ್ ವಿಶೇಷವಾಗಿ ಕೆತ್ತನೆ ಮಾಡಿರುವ ಬಾಲರಾಮನ ಮೂರ್ತಿ ಮತ್ತು ಇತರೆ ದೇವ ದೇವತೆಗಳ ವಿಗ್ರಹಗಳಿಗೆ ಪ್ರಾಣ ಪ್ರತಿಷ್ಠೆ ಮಾಡುವ ಪ್ರಕ್ರಿಯೆಗಳಿಗೆ ನಿನ್ನೆ (ಜ.16) ಚಾಲನೆ ಸಿಕ್ಕಿದೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರ ಪೈಕಿ ಒಬ್ಬರಾಗಿರುವ ಅನಿಲ್ ಮಿಶ್ರಾ ಮತ್ತು ಉಷಾ ಮಿಶ್ರಾ ದಂಪತಿ ಯಜಮಾನರ ಸ್ಥಾನದಲ್ಲಿ ಕುಳಿತು ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ ಎಂದು ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಹೇಳಿದ್ದಾರೆ.

ಅನುಷ್ಠಾನ ಪ್ರಕ್ರಿಯೆಗಳು ಮಂಗಳವಾರದಿಂದ ಶುರುವಾಗಿದೆ. ಅದು ಜ.22ರ ವರೆಗೆ ಮುಂದುವರಿಯಲಿದೆ. ಹನ್ನೊಂದು ಪುರೋಹಿತರು ಪ್ರಾಣ ಪ್ರತಿಷ್ಠೆಗೆ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ ಎಂದು ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ವಿವರಿಸಿದ್ದಾರೆ.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟ್‌ನ ಸದಸ್ಯ ರಲ್ಲಿ ಒಬ್ಬರಾಗಿರುವ ಅನಿಲ್ ಮಿಶ್ರಾ, ತಾವು ಯಜಮಾನನ ಸ್ಥಾನದಲ್ಲಿ ನಿಂತು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಡುತ್ತಿರುವುದಾಗಿ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿಯವರೇ ಯಜಮಾನನ ಸ್ಥಾನದಲ್ಲಿ ನಿಂತು ಎಲ್ಲ ಕಾರ್ಯಗಳನ್ನೂ ನೆರವೇರಿಸುವವರಿದ್ದಾರೆ ಎಂದು ವರದಿಯಾಗಿತ್ತು.

ಯಜಮಾನ ಸ್ಥಾನ ಎಂದರೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವ “ಆತಿಥೇಯ” ಎಂಬ ಅರ್ಥದಲ್ಲಿ ಬಳಕೆಯಾಗಿದೆ. ಅನಿಲ್ ಮಿಶ್ರಾ ದಂಪತಿ ಜನವರಿ 22ರಂದು ಪ್ರಧಾನಿ ಮೋದಿಯವರು ಭಾಗವಹಿಸುವ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಲಿದ್ದಾರೆ.

ಬಾಲರಾಮನ ವಿಗ್ರಹಕ್ಕೆ 7 ಅಧಿವಾಸ ಪ್ರಕ್ರಿಯೆ

ಪ್ರಾಣ ಪ್ರತಿಷ್ಠೆಯ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ, ಬಾಲರಾಮನ ವಿಗ್ರಹವನ್ನು ಏಳು ಅಧಿವಾಸ ಪ್ರಕ್ರಿಯೆಗಳಿಗೆ ಒಳಪಡಿಸಲಾಗುತ್ತದೆ. ಅಂದರೆ ಏಳು ರಾತ್ರಿ ಬಾಲರಾಮನ ವಿಗ್ರಹವನ್ನು ಒಂದೊಂದು ವಸ್ತುವಿನಲ್ಲಿ ಮುಳುಗಿಸಿ ಇಡಲಾಗುತ್ತದೆ. ಜ.21ರಂದು ಶಯ್ಯಾಧಿವಾಸವಿರುತ್ತದೆ. ಇದರ ಅರ್ಥವೇನೆಂದರೆ ವಿಗ್ರಹವನ್ನು ಪ್ರಾಣ ಪ್ರತಿಷ್ಠೆಗೂ ಹಿಂದಿನ ರಾತ್ರಿ ಮಲಗಿಸಿ ಇಡಲಾಗುತ್ತದೆ.

ಇನ್ನು, ಪ್ರಾಣ ಪ್ರತಿಷ್ಠೆಗೆ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮಗಳ ಮೇಲುಸ್ತುವಾರಿಯನ್ನು ಹಿರಿಯ ವಿದ್ವಾಂಸ, ಕಾಶಿಯ ವಿಶ್ವನಾಥ ದೇಗುಲದ ಹಿರಿಯ ಅರ್ಚಕ ಗಣೇಶ್ವರ ಶಾಸ್ತ್ರಿ ದ್ರಾವಿಡ್ ನೋಡಿಕೊಳ್ಳುತ್ತಿದ್ದಾರೆ. ಅವರ ಜೊತೆಗೆ 121 ಮಂದಿ ವೈದಿಕ ವಿದ್ವಾಂಸರು ವಿವಿಧ ಧಾರ್ಮಿಕ ಕ್ರಿಯಾಭಾಗಗಳನ್ನು ನಡೆಸಿಕೊಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ, 'ತೀರ್ಥ ಪೂಜೆ', 'ಜಲ ಯಾತ್ರೆ' ಮತ್ತು 'ಗಂಧಾಧಿವಾಸ್' ಮುಂತಾದ ಆಚರಣೆಗಳು ನಡೆಯಲಿವೆ. ಸೋಮವಾರ, ಪ್ರಾಯಶ್ಚಿತ್ತ ಮತ್ತು ಕರ್ಮಕುಟಿ ಪೂಜೆ ನಡೆಯಿತು. ರಾಮ ಮಂದಿರದ 'ಪ್ರಾಣ ಪ್ರತಿಷ್ಠಾ' ಕಾರ್ಯಕ್ರಮ ಜನವರಿ 22 ರಂದು ಮಧ್ಯಾಹ್ನ 12.20 ಕ್ಕೆ ಪ್ರಾರಂಭವಾಗಿ 1 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದು ದೇವಸ್ಥಾನದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಸುದ್ದಿಗಾರರಿಗೆ ಸೋಮವಾರ ತಿಳಿಸಿದ್ದರು.

ಜ.22ರಂದು ನಡೆಯುವ ಪ್ರಾಣ ಪ್ರತಿಷ್ಠೆ ಮತ್ತು ಮಂದಿರ ಉದ್ಘಾಟನೆ ದಿನ ಪ್ರಧಾನಿ ನರೇಂದ್ರ ಮೋದಿ ಸೇರಿ ಕೇವಲ ಐವರು ಮಾತ್ರವೇ ರಾಮಮಂದಿರದ ಗರ್ಭಗುಡಿಯ ಒಳಗೆ ಪ್ರವೇಶಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 8 ಸಾವಿರ ಮಂದಿ ವಿಶೇಷ ಆಹ್ವಾನಿತ ಅತಿಥಿಗಳು ಭಾಗವಹಿಸಲಿದ್ದಾರೆ. ಅವರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುವ ಸಾಧ್ಯತೆಗಳಿವೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.