Tirumala: ತಿರುಮಲದಲ್ಲಿ ವೈಕುಂಠ ದರ್ಶನ ಇಂದು ಮುಕ್ತಾಯ; ನಾಳೆಯಿಂದ ಸರ್ವದರ್ಶನ ಟೋಕನ್‌ ವಿತರಣೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tirumala: ತಿರುಮಲದಲ್ಲಿ ವೈಕುಂಠ ದರ್ಶನ ಇಂದು ಮುಕ್ತಾಯ; ನಾಳೆಯಿಂದ ಸರ್ವದರ್ಶನ ಟೋಕನ್‌ ವಿತರಣೆ

Tirumala: ತಿರುಮಲದಲ್ಲಿ ವೈಕುಂಠ ದರ್ಶನ ಇಂದು ಮುಕ್ತಾಯ; ನಾಳೆಯಿಂದ ಸರ್ವದರ್ಶನ ಟೋಕನ್‌ ವಿತರಣೆ

ತಿರುಮಲದಲ್ಲಿ ವೈಕುಂಠ ದರ್ಶನ ಇಂದು ಮುಕ್ತಾಯವಾಗಲಿದೆ. ನಾಳೆ (ಜನವರಿ 2) ಬೆಳಗ್ಗೆಯಿಂದ ಭಕ್ತರಿಗೆ ಸರ್ವದರ್ಶನ ಟೋಕನ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಟಿಟಿಡಿ ಹೇಳಿದೆ. ಜನವರಿ ತಿಂಗಳ ವಿಶೇಷ ದಿನಗಳು ಮತ್ತು ಇತರೆ ವಿವರ ಹೀಗಿದೆ.

ತಿರುಮಲ ತಿರುಪತಿ ದೇವಸ್ಥಾನ (ಕಡತ ಚಿತ್ರ)
ತಿರುಮಲ ತಿರುಪತಿ ದೇವಸ್ಥಾನ (ಕಡತ ಚಿತ್ರ)

ತಿರುಮಲದಲ್ಲಿ ವೈಕುಂಠ ದರ್ಶನಕ್ಕಾಗಿ ಸ್ಥಗಿತವಾಗಿದ್ದ ಸರ್ವದರ್ಶನಂ ಟೋಕನ್‌ಗಳನ್ನು ನಾಳೆ (ಜನವರಿ 2) ಯಿಂದ ಮತ್ತೆ ನೀಡುವುದಾಗಿ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಆಡಳಿತ ಮಂಡಳಿ ತಿಳಿಸಿದೆ.

ತಿರುಮಲದಲ್ಲಿ ಸ್ವಾಮಿಯ ವೈಕುಂಠ ದರ್ಶನವು 2023ರ ಡಿಸೆಂಬರ್ 23ರಂದು ವೈಕುಂಠ ಏಕಾದಶಿಯಂದು ಶುರುವಾಗಿತ್ತು. ಇಂದು (ಜ.1) ವೈಕುಂಠ ದರ್ಶನ ಸಂಪನ್ನವಾಗಲಿದೆ. ಡಿಸೆಂಬರ್ 23 ರಿಂದ ಜನವರಿ 1 ರವರೆಗೆ ವೈಕುಂಠ ದ್ವಾರ ದರ್ಶನಕ್ಕಾಗಿ ಸರ್ವ ದರ್ಶನ ಟೋಕನ್ ಪಡೆದವರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

ಇನ್ನು ನಾಳೆ (ಜ.2) ತಿರುಪತಿಯ ಕೌಂಟರ್‌ಗಳಲ್ಲಿ ಶ್ರೀವಾರಿ ಸರ್ವದರ್ಶನಂ ಟೋಕನ್ ವಿತರಣೆಯನ್ನು ಪುನಃ ಆರಂಭಿಸಲಾಗುವುದು. ಸರ್ವದರ್ಶನಂ ಟೋಕನ್‌ಗಳನ್ನು ಜನವರಿ 2 ರಂದು ಮುಂಜಾನೆ 4 ಗಂಟೆಯಿಂದ ನೀಡಲಾಗುವುದು. ಮಧ್ಯಾಹ್ನ 12 ಗಂಟೆಯಿಂದ ದರ್ಶನ ಸ್ಲಾಟ್‌ಗಳು ಆರಂಭವಾಗಲಿವೆ ಎಂದು ಟಿಟಿಡಿ ತಿಳಿಸಿದೆ.

ತಿರುಮಲದ ಶ್ರೀವಾರಿ ದೇವಸ್ಥಾನದಲ್ಲಿ ಜನವರಿ 2024ರ ವಿಶೇಷ ದಿನಗಳು

ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ 2024ರ ಜನವರಿ ತಿಂಗಳಿನಲ್ಲಿ ಆಚರಿಸಲಾಗುವ ವಿಶೇಷ ದಿನಗಳ ವಿವರ ಈ ಕೆಳಗಿನಂತಿದೆ.

ಜನವರಿ 1 - ಶ್ರೀವಾರಿ ದೇವಸ್ಥಾನದಲ್ಲಿ ವೈಕುಂಠದ್ವಾರ ದರ್ಶನ ಸಮಾಪ್ತಿ

ಜನವರಿ 5 - ಶ್ರೀವಾರಿ ದೇಗುಲದಲ್ಲಿ ಅಧ್ಯಯನೋತ್ಸವ ಸಂಪನ್ನ

ಜನವರಿ 6 - ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ತಿರುಮಲನಂಬಿ ದರ್ಶನ

ಜನವರಿ 7 - ಸರ್ವ ಏಕಾದಶಿ

ಜನವರಿ 9 - ತೊಂಡರಡಿಪ್ಪೊಡಿಯಾಳ್ವಾರ್ ವರ್ಷ ತಿರುನಕ್ಷತ್ರ.

ಜನವರಿ 14 - ಬೋಗಿ ಹಬ್ಬ, ಧನುರ್ಮಾಸ ಮುಕ್ತಾಯ

ಜನವರಿ 15 - ಮಕರ ಸಂಕ್ರಾಂತಿ. ಸುಪ್ರಭಾತ ಸೇವೆ ಪುನರಾರಂಭ

ಜನವರಿ 16 - ತಿರುಮಲ ಶ್ರೀವಾರು ಪರ್ವತ ಮಂಟಪಕ್ಕೆ ಸ್ವಾಮಿ ಭೇಟಿ, ಕನುಮ ಹಬ್ಬ.

ಜನವರಿ 25 - ಶ್ರೀ ರಾಮಕೃಷ್ಣ ತೀರ್ಥ ಮುಕ್ಕೋಟಿ.

ಜನವರಿ 28 - ತಿರುಮೊಳಿಸೈಯಾಳ್ವಾರ್ ವರ್ಷ ತಿರುನಕ್ಷತ್ರ.

ಜನವರಿ 31 - ಕುರತ್ತಾಳ್ವಾರ್ ವರ್ಷ ತಿರುನಕ್ಷತ್ರ.

ಭಕ್ತರಿಗಾಗಿ ಅಚ್ಯುತಮ್ ಮತ್ತು ಶ್ರೀಪಥಂ ವಸತಿ ಸಂಕೀರ್ಣಗಳ ನಿರ್ಮಾಣ: ತಿರುಮಲ ಸ್ವಾಮಿ ದರ್ಶನಕ್ಕಾಗಿ ಜಗತ್ತಿನ ವಿವಿಧೆಡೆಯಿಂದ ಬರುವ ಸಾವಿರಾರು ಭಕ್ತರಿಗೆ ತಿರುಪತಿಯಲ್ಲಿ ಹೆಚ್ಚಿನ ಸೌಕರ್ಯ ಕಲ್ಪಿಸಲು ಟಿಟಿಡಿ ಅಚ್ಯುತಮ್ ಮತ್ತು ಶ್ರೀಪಥಂ ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ ಎಂದು ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಹೇಳಿದರು.

ತಿರುಪತಿಯಲ್ಲಿ ಶ್ರೀ ಗೋವಿಂದರಾಜಸ್ವಾಮಿ (ಎರಡು) ಮತ್ತು ಶ್ರೀ ಕೋದಂಡರಾಮಸ್ವಾಮಿ (ಮೂರು) ಸತ್ರಗಳ ಜಾಗದಲ್ಲಿ ಅಚ್ಯುತಂ ಮತ್ತು ಶ್ರೀಪಥಂ ವಸತಿ ಸಂಕೀರ್ಣಗಳನ್ನು ತಲಾ 209 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವುದಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಪ್ರತಿ ಬ್ಲಾಕ್‌ನಲ್ಲಿ 4100ರಂತೆ ಒಟ್ಟು 8200 ಭಕ್ತರು ಇಲ್ಲಿ ತಂಗಬಹುದು. 200ಕ್ಕೂ ಹೆಚ್ಚು ಕಾರು, ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶವಿದೆ. ಪ್ರತಿ ಬ್ಲಾಕ್ ಅನ್ನು ಎಂಟು ಮಹಡಿಗಳೊಂದಿಗೆ 7.04 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತದೆ. ಮೊದಲ ಮಹಡಿಯಲ್ಲಿ ಸ್ವಾಗತ, ಎಸ್‌ಎಸ್‌ಡಿ ಟೋಕನ್ ಕೌಂಟರ್‌ಗಳು, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸಾಮಾನ್ಯ ಶೌಚಾಲಯಗಳು, ವೈದ್ಯಕೀಯ ಡಿಸ್ಪೆನ್ಸರಿ, ಕಚೇರಿ ಕೊಠಡಿಗಳು, ಎರಡು ರೆಸ್ಟೋರೆಂಟ್‌ಗಳು, ಶ್ರೀವಾರಿ ಸೇವಕರಿಗೆ ಐದು ಹಾಲ್‌ಗಳು ಮತ್ತು ಸ್ಟೋರ್ ರೂಂ ಇರುತ್ತದೆ ಎಂದು ಭೂಮನ ಕರುಣಾಕರ ರೆಡ್ಡಿ ವಿವರಿಸಿದರು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.