ಕಾಮಾಕ್ಷಿ ದೀಪ ಹಚ್ಚುವುದೇಕೆ, ಗಜಲಕ್ಷ್ಮೀ ದೀಪ ಎಂದರೇನು? ಯಾವ ದಿಕ್ಕಿನಲ್ಲಿ ಇದನ್ನು ಬೆಳಗಿಸುವುದು ಸೂಕ್ತ?
Religious News: ಬಹಳ ಹಿಂದೂಗಳು ತಮ್ಮ ಮನೆಯಲ್ಲಿ ಕಾಮಾಕ್ಷಿ ದೀಪ ಹಚ್ಚುತ್ತಾರೆ. ಕಾಮಾಕ್ಷಿ ಯಾರು? ಕಾಮಾಕ್ಷಿ ದೀಪ ಹಚ್ಚುವುದೇಕೆ, ಗಜಲಕ್ಷ್ಮೀ ದೀಪ ಎಂದರೇನು? ಯಾವ ದಿಕ್ಕಿನಲ್ಲಿ ಇದನ್ನು ಬೆಳಗಿಸುವುದು ಸೂಕ್ತ? ಎಂಬುದರ ಬಗ್ಗೆಇಲ್ಲಿ ಮಾಹಿತಿ ಇದೆ.
ಹಿಂದೂಗಳ ಮನೆಯಲ್ಲಿ ಪ್ರತಿದಿನವೂ ಬೆಳಗ್ಗೆ, ಸಂಜೆ ದೇವರ ಮನೆಯಲ್ಲಿ ದೀಪ ಹಚ್ಚುತ್ತಾರೆ. ಅದರಲ್ಲೂ ಹಬ್ಬ, ಹರಿದಿನಗಳಂಥ ವಿಶೇಷ ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚು ದೀಪ ಬೆಳಗುತ್ತಾರೆ. ಹಾಗೇ ವಿಶೇಷ ದಿನಗಳಲ್ಲಿ ಬೆಳ್ಳಿ ದೀಪಗಳನ್ನು ಹಚ್ಚಲಾಗುತ್ತದೆ. ಸಾಮಾನ್ಯವಾಗಿ ಕೆಲವರ ಮನೆಯಲ್ಲಿ ಪ್ರತಿದಿನವೂ ಕಾಮಾಕ್ಷಿ ದೀಪ ಹಚ್ಚುತ್ತಾರೆ. ಕಾಮಾಕ್ಷಿ ದೀಪ ಎಂದರೆ ಏನು? ಅದರ ವೈಶಿಷ್ಟ್ಯವೇನು? ಯಾವ ಸಮಯದಲ್ಲಿ ಹಚ್ಚಬೇಕು ಎಂಬುದರ ವಿಚಾರವಾಗಿ ಇಲ್ಲಿದೆ ಮಾಹಿತಿ.
ದೀಪವು ಬೆಳಕನ್ನು ಸಂಕೇತಿಸುತ್ತದೆ. ದೀಪ, ಆತ್ಮ ಮಾತ್ರವಲ್ಲ ಪರಮಾತ್ಮನ ಚಿತ್ರಣ. ಆದ್ದರಿಂದ ಪೂಜೆ ಮಾಡುವ ಮೊದಲು ದೀಪವನ್ನು ಬೆಳಗಿಸಲಾಗುತ್ತದೆ. ದೇವರನ್ನು ಪೂಜಿಸುವ ಮೊದಲು ಆ ದೇವರ ಪ್ರತಿರೂಪವಾದ ದೀಪವನ್ನು ಪೂಜಿಸುತ್ತೇವೆ. ಷೋಡಶೋಪಚಾರ ಪೂಜೆಗಳಲ್ಲಿ ಇದು ಬಹಳ ಮುಖ್ಯವಾಗಿದೆ. ದೇವರಿಗೆ ಮಣ್ಣಿನ ದೀಪ ಹಚ್ಚುವುದು ಶ್ರೇಷ್ಠ ಎನ್ನಲಾಗಿದೆ. ಕೆಲವರು ಒಂದೇ ಒಂದು ಕಾಮಾಕ್ಷಿ ದೀಪವನ್ನೂ ಬಳಸುತ್ತಾರೆ. ಕಾಮಾಕ್ಷಿ ದೀಪದ ಮೇಲೆ ದೇವಿಯು ಕಬ್ಬಿನ ಜಲ್ಲೆ ಹಿಡಿದು ಕುಳಿತಿರುವ ಚಿತ್ರವಿರುತ್ತದೆ. ಆದರೆ ದೇವಿಯ ಪಕ್ಕ ಎರಡೂ ಆನೆಗಳಿದ್ದರೆ ಅದನ್ನು ಗಜಲಕ್ಷ್ಮಿ ದೀಪ ಎಂದು ಕರೆಯುತ್ತಾರೆ. 8 ಲಕ್ಷ್ಮಿಯರು ಇರುವ ದೀಪವನ್ನು ಅಷ್ಟಲಕ್ಷ್ಮಿ ದೀಪ ಎನ್ನುತ್ತಾರೆ. ಇದೇ ರೀತಿ ಅನೇಕ ದೀಪಗಳಿವೆ. ಆದ್ದರಿಂದ ಕಾಮಾಕ್ಷಿ ದೀಪವನ್ನು ತರುವ ಮುನ್ನ ಈ ವಿಚಾರವನ್ನು ಗಮನಿಸಬೇಕಾಗುತ್ತದೆ.
ಯಾರು ಕಾಮಾಕ್ಷಿ ದೇವಿ?
ಕಾಮಾಕ್ಷಿ ದೀಪವನ್ನು ಮನೆಯಲ್ಲಿಟ್ಟು ಪೂಜಿಸುವುದರಿಂದ ಸಕಲ ದೇವತೆಗಳ ಅನುಗ್ರಹ ದೊರೆಯುತ್ತದೆ. ಅಷ್ಟಾದಶ ಶಕ್ತಿಪೀಠಗಳಲ್ಲಿ ಕಂಚಿ ಕ್ಷೇತ್ರವೂ ಒಂದು. ಇಲ್ಲಿ ಕಾಮಾಕ್ಷಿ ದೇವಿ ನೆಲೆಗೊಂಡಿದ್ದಾಳೆ. ಕಾಮಾಕ್ಷಿ ಜಗನ್ಮಾತೆ ಪಾರ್ವತಿಯ ರೂಪ. ಶಿವನನ್ನು ಕುರಿತು ತಪಸ್ಸು ಮಾಡುವ ಕಾಮಾಕ್ಷಿ ಅವನನ್ನು ಒಲಿಸಿಕೊಂಡು ಪರಶಿವನ ಕೈ ಹಿಡಿಯುತ್ತಾಳೆ. ಕಾ ಎಂದರೆ ಬ್ರಹ್ಮಶಕ್ತಿಯಾಗಿರುವ ಸರಸ್ವತಿ, ಮಾ ಎಂದರೆ ವಿಷ್ಣುಶಕ್ತಿಯಾಗಿರುವ ಲಕ್ಷ್ಮಿ ಅಕ್ಷಿ ಎಂದರೆ ಕಣ್ಣುಗಳು. ಕಾಮಾಕ್ಷಿ ದೇವಿಯು ಸರ್ವ ದೇವತೆಗಳಿಗೆ ಶಕ್ತಿ ಕೊಡುತ್ತಾಳೆ ಎಂದು ಪುರಾಣಗಳು ಹೇಳುತ್ತವೆ. ಆದ್ದರಿಂದ ಇತರ ಎಲ್ಲಾ ದೇವಾಲಯಗಳಿಗಿಂತ ಕಾಮಾಕ್ಷಿ ದೇವಸ್ಥಾನವನ್ನು ಬೆಳಗಿನ ಜಾವ ಬ್ರಹ್ಮ ಮುಹೂರ್ತದಲ್ಲಿ ತೆಗೆಯಲಾಗುತ್ತದೆ. ಅದೇ ರೀತಿ ಎಲ್ಲಾ ದೇವಸ್ಥಾನಗಳ ಬಾಗಿಲು ಮುಚ್ಚಿದ ನಂತರವಷ್ಟೇ ಕಾಮಾಕ್ಷಿ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ.
ಕಾಮಾಕ್ಷಿ ದೀಪವನ್ನು ಹೇಗೆ ಹಚ್ಚಬೇಕು?
ದೀಪವು ದೇವರ ಸ್ವರೂಪ. ಆದ್ದರಿಂದ ಕಾಮಾಕ್ಷಿ ದೀಪ ಸೇರಿದಂತೆ ಯಾವುದೇ ದೀಪವಾಗಲೀ ಅದನ್ನು ಶುಚಿಗೊಳಿಸಿ, ಅರಿಶಿನ ಕುಂಕುಮ ಇಟ್ಟು ಹೂವಿನಿಂದ ಅಲಂಕರಿಸಬೇಕು. ನೆಲಕ್ಕೆ ತಾಕದಂತೆ ಒಂದು ಪ್ಲೇಟ್ ಒಳಗೆ ಕಾಮಾಕ್ಷಿ ದೀಪವನ್ನು ಇಟ್ಟು ತುಪ್ಪ ಅಥವಾ ಎಳ್ಳೆಣ್ಣೆ ಬಿಟ್ಟು ದೀಪವನ್ನು ಹಚ್ಚಬೇಕು. ದೀಪದಲ್ಲಿ ಎರಡು ಬತ್ತಿಗಳು ಇರಬೇಕು. ದೀಪವು ಉತ್ತರ ಅಥವಾ ಪೂರ್ವ ದಿಕ್ಕಿಗೆ ಇರುವಂತೆ ಹಚ್ಚಬೇಕು. ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿಗೆ ಹಚ್ಚಬಾರದು. ಶುಕ್ರವಾರ, ಮಂಗಳವಾರ, ಹುಣ್ಣಿಮೆ ಸೇರಿದಂತೆ ಯಾವುದೇ ವಿಶೇಷ ದಿನಗಳಂದು ಕಾಮಾಕ್ಷಿ ದೀಪವನ್ನು ಹಚ್ಚಬಹುದು. ಬೆಳ್ಳಿ, ಪಂಚಲೋಹ, ಹಿತ್ತಾಳೆ ಕಾಮಾಕ್ಷಿ ದೀಪವನ್ನು ಮನೆಗೆ ತಂದು ಪೂಜಿಸಬಹುದು. ಪ್ರತಿದಿನ ಕಾಮಾಕ್ಷಿ ದೀಪ ಹಚ್ಚಿದರೆ ಇನ್ನಷ್ಟು ಶ್ರೇಷ್ಠ.
- ಸಾಮಾನ್ಯವಾಗಿ ಆತ್ಮೀಯರು ಅಥವಾ ಸಂಬಂಧಿಕರು ಉಡುಗೊರೆ ಆಗಿ ನೀಡಿದ ಕಾಮಾಕ್ಷಿ ದೀಪವನ್ನು ಬಹಳಷ್ಟು ಮಂದಿ ಹಚ್ಚಲಾಗುತ್ತದೆ. ಹಾಗೆಂದ ಮಾತ್ರಕ್ಕೆ ಪರಂಪರೆಯಾಗಿ ಬಂದ ಕಾಮಾಕ್ಷಿ ದೀಪವನ್ನು ಮಾತ್ರ ಮನೆಯಲ್ಲಿ ಹಚ್ಚಬೇಕು ಎಂಬ ನಿಯಮವಿಲ್ಲ. ದೀಪದ ಬಗ್ಗೆ ಪ್ರಾಮುಖ್ಯತೆ ತಿಳಿದವರು ಕೂಡಾ ಖರೀದಿಸಿ ತಂದು ಹಚ್ಚಿದರೆ ತಪ್ಪೇನೂ ಇಲ್ಲ.
- ಕಾಮಾಕ್ಷಿ ದೀಪವನ್ನು ಏಕಾದಶಿ, ಪಂಚಮಿ ತಿಥಿಯಲ್ಲಿ ಖರೀದಿಸಿ ತರಬಹುದು. ಅಥವಾ ಗುರುವಾರಗಳಂದೂ ಮನೆಗೆ ತರಬಹುದು.
- ಸೂತಕ ಇರುವಾಗ 11 ದಿನಗಳ ಕಾಲ ಕಾಮಾಕ್ಷಿ ದೀಪವನ್ನು ಹಚ್ಚಬಾರದು.
- ಬೆಳಗ್ಗೆ 5 ರಿಂದ 8 ಹಾಗೂ ಸಂಜೆ 6 ರಿಂದ 8 ಗಂಟೆ ಒಳಗೆ ಕಾಮಾಕ್ಷಿ ದೀಪವನ್ನು ಬೆಳಗಿಸಬಹುದು.
- ಇತರ ದೀಪಗಳು ದೇವರಿಗೆ ಅಭಿಮುಖವಾಗಿರುತ್ತದೆ, ಆದರೆ ಕಾಮಾಕ್ಷಿ ದೀಪವನ್ನು ಭಕ್ತರು, ತಮ್ಮ ಅಭಿಮುಖವಾಗಿ ಇಟ್ಟು ಬೆಳಗಿಸಬೇಕು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)