ಕರ್ಪೂರವನ್ನು ದೇವರ ಎದುರು ಹೀಗೆ ಹಚ್ಚಿದರೆ ಇದೆ ಇಷ್ಟೆಲ್ಲಾ ಲಾಭ; ಮನೆಯ ನೆಮ್ಮದಿಯಿಂದ ಹಿಡಿದು ಗ್ರಹದೋಷ ಪರಿಹಾರದವರೆಗೆ-rituals these are benefits of burning camphor in front of god it removes negative energy arc ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕರ್ಪೂರವನ್ನು ದೇವರ ಎದುರು ಹೀಗೆ ಹಚ್ಚಿದರೆ ಇದೆ ಇಷ್ಟೆಲ್ಲಾ ಲಾಭ; ಮನೆಯ ನೆಮ್ಮದಿಯಿಂದ ಹಿಡಿದು ಗ್ರಹದೋಷ ಪರಿಹಾರದವರೆಗೆ

ಕರ್ಪೂರವನ್ನು ದೇವರ ಎದುರು ಹೀಗೆ ಹಚ್ಚಿದರೆ ಇದೆ ಇಷ್ಟೆಲ್ಲಾ ಲಾಭ; ಮನೆಯ ನೆಮ್ಮದಿಯಿಂದ ಹಿಡಿದು ಗ್ರಹದೋಷ ಪರಿಹಾರದವರೆಗೆ

ಮನೆಯಲ್ಲಿ ಕರ್ಪೂರ ಹಚ್ಚುವುದರಿಂದ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಗ್ರಹದೋಷ, ಜಾತಕದಲ್ಲಿನ ಗ್ರಹಗಳ ಸ್ಥಾನ ಬಲಗೊಳ್ಳಲು ಮುಂತಾದವುಗಳಿಗೆ ಇದು ಸರಳ ಪರಿಹಾರವಾಗಿದೆ. (ಬರಹ: ಅರ್ಚನಾ ವಿ. ಭಟ್‌)

ಕರ್ಪೂರವನ್ನು ದೇವರ ಎದುರು ಹೀಗೆ ಹಚ್ಚಿದರೆ  ಇದೆ ಇಷ್ಟೆಲ್ಲಾ ಲಾಭ; ಮನೆಯ ನೆಮ್ಮದಿಯಿಂದ ಹಿಡಿದು ಗ್ರಹದೋಷ ಪರಿಹಾರದವರೆಗೆ
ಕರ್ಪೂರವನ್ನು ದೇವರ ಎದುರು ಹೀಗೆ ಹಚ್ಚಿದರೆ ಇದೆ ಇಷ್ಟೆಲ್ಲಾ ಲಾಭ; ಮನೆಯ ನೆಮ್ಮದಿಯಿಂದ ಹಿಡಿದು ಗ್ರಹದೋಷ ಪರಿಹಾರದವರೆಗೆ (PC: HT File Photo)

ಹಿಂದೂ ಧರ್ಮದಲ್ಲಿ ಪೂಜೆ ಮಾಡಲು ಧೂಪ, ದೀಪ, ಹೂವು, ಹಣ್ಣು ಮುಂತಾದವುಗಳನ್ನು ಬಳಸಲಾಗುತ್ತದೆ. ಪೂಜೆಯಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ಅರ್ಥವಿದೆ. ಸಾಮಾನ್ಯವಾಗಿ ಕರ್ಪೂರವನ್ನು ದೇವರ ಎದುರು ಹಚ್ಚಲಾಗುತ್ತದೆ. ಶಾಸ್ತ್ರದಲ್ಲಿ ಕರ್ಪೂರಕ್ಕೆ ಹೆಚ್ಚಿನ ಮಹತ್ವವಿದೆ ಎಂದು ನಂಬಲಾಗಿದೆ. ಅದು ಮಂಗಳಕರ ಗುಣವನ್ನು ಹೊಂದಿದೆ. ಅದು ನಕಾರಾತ್ಮಕ ಶಕ್ತಿಗಳನ್ನು ಹೊರಹಾಕಿ, ಮನೆಯನ್ನು ಶುದ್ಧೀಕರಿಸುತ್ತದೆ. ಮನೆಯಲ್ಲಿ ಆಧ್ಯಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ.

ವಾಸ್ತು ಶಾಸ್ತ್ರದ ‍ಪ್ರಕಾರವೂ ಕರ್ಪೂರದಿಂದ ಅನೇಕ ಪ್ರಯೋಜನಗಳಿವೆ. ಮನೆ ಅಥವಾ ಕಛೇರಿಯಲ್ಲಿ ಕರ್ಪೂರವನ್ನು ಹಚ್ಚುವುದರಿಂದ ಸುತ್ತಮುತ್ತಲಿನ ಪರಿಸರವನ್ನು ಶುದ್ಧಗೊಳಿಸಬಹುದಾಗಿದೆ. ಇದು ಧನಾತ್ಮಕ ಶಕ್ತಿಯು ಮನೆ ಪ್ರವೇಶಿಸುವಂತೆ ಮಾಡುತ್ತದೆ. ಇದರ ಕಟುವಾದ ಪರಿಮಳವು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಏಕಾಗ್ರತೆ ಮತ್ತು ಶಾಂತತೆಯನ್ನು ಸುಧಾರಿಸುತ್ತದೆ. ಇದರ ಸುವಾಸನೆಯು ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸುತ್ತದೆ. ವಾಸ್ತು ಪ್ರಕಾರ, ಮನೆಯಲ್ಲಿ ಕರ್ಪೂರವನ್ನು ಉರಿಸುವುದು ಸಮೃದ್ಧಿ ಮತ್ತು ಸಂತೋಷಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ.

ಮನೆಯಲ್ಲಿರುವ ವಾಸ್ತು ದೋಷಗಳನ್ನು ಹೋಗಲಾಡಿಸಲು ಮತ್ತು ಸಂಪತ್ತು ವೃದ್ಧಿಸಲು ಕರ್ಪೂರವನ್ನು ಹಚ್ಚುವುದು ಒಳ್ಳೆಯ ಪರಿಹಾರವಾಗಿದೆ ಎಂದು ಹೇಳಲಾಗುತ್ತದೆ. ಅದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಕರ್ಪೂರದ ಹೊಗೆ ಮನೆಯಲ್ಲಿ ಹರಡುವುದರಿಂದ ಗ್ರಹದೋಷಗಳು ದೂರವಾಗುತ್ತವೆ ಎಂದು ಪಂಡಿತರು ಹೇಳುತ್ತಾರೆ. ಕರ್ಪೂರವನ್ನು ದೇವರ ಎದುರು ಹಚ್ಚುವುದರಿಂದ ಏನೆಲ್ಲಾ ಲಾಭಗಳು ಸಿಗುತ್ತವೆ ಎಂದು ತಿಳಿಯೋಣ.

ಧನಾತ್ಮಕ ಶಕ್ತಿಗೆ

ದೇವರ ಮುಂದೆ ಕರ್ಪೂರವನ್ನು ಹಚ್ಚುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಇದು ಪವಿತ್ರ ಶಕ್ತಿಗಳು ಮನೆಯೊಳಗೆ ಬರುವಂತೆ ಮಾಡುತ್ತದೆ. ಶಾಂತಿಯುತ ವಾತಾವರಣವನ್ನು ಸೃಷ್ಟಿಸುತ್ತದೆ. ಸಾಯಂಕಾಲದ ಸಮಯದಲ್ಲಿ ಕರ್ಪೂರವನ್ನು ಬೆಳಗಿಸುವುದರಿಂದ ಸಮೃದ್ಧಿ ಮತ್ತು ಶಾಂತಿ ಸಿಗುತ್ತದೆ. ಸಾಮರಸ್ಯವನ್ನು ಬೆಳೆಸುತ್ತದೆ. ಅದರಿಂದ ಹೊರಹೊಮ್ಮುವ ಸುವಾಸನೆಯು ಮನೆಯಲ್ಲಿ ನಕಾರಾತ್ಮಕತೆಯನ್ನು ಹೋಗಲಾಡಿಸಿ, ಧನಾತ್ಮಕ ಶಕ್ತಿಯನ್ನು ಹರಡುತ್ತದೆ. ಇದು ಮನೆಯಲ್ಲಿ ಉತ್ತಮ ಕಂಪನಗಳನ್ನು ಸೃಷ್ಟಿಸುತ್ತದೆ.

ದೋಷಗಳನ್ನು ತೊಡೆದುಹಾಕಲು

ಜಾತಕದಲ್ಲಿನ ದೋಷ ನಿವಾರಣೆಗೆ ಕರ್ಪೂರವನ್ನು ಹಚ್ಚಲು ಹೇಳಲಾಗುತ್ತದೆ. ಲವಂಗ ಮತ್ತು ಕರ್ಪೂರವನ್ನು ಜೊತೆಯಲ್ಲಿ ಹಚ್ಚುವುದು ಜ್ಯೋತಿಷ್ಯದಲ್ಲಿನ ದೋಷಗಳನ್ನು ಅತ್ಯಂತ ಪರಿಣಾಮಕಾರಿ ಪರಿಹರಿಸಬಲ್ಲದು. ಹೀಗೆ ಮಾಡುವುದರಿಂದ ಮನೆಯಲ್ಲಿನ ದೋಷಗಳು ದೂರವಾಗುತ್ತವೆ.

ಗ್ರಹಗಳನ್ನು ಬಲಪಡಿಸಲು

ಏಲಕ್ಕಿಯೊಂದಿಗೆ ಕರ್ಪೂರವನ್ನು ಉರಿಸುವುದರಿಂದ ಬುಧ ಗ್ರಹದ ಅನುಗ್ರಹ ಪಡೆದುಕೊಳ್ಳಬಹುದಾಗಿದೆ. ಇದು ಜಾತಕದಲ್ಲಿ ಬುಧನ ಸ್ಥಾನವನ್ನು ಬಲಗೊಳಿಸುತ್ತದೆ. ಹಾಗೆಯೇ ದಾಲ್ಚಿನ್ನಿ ಕಟ್ಟಿಗೆಗೆ ಕರ್ಪೂರವನ್ನು ಹಾಕಿ ಉರಿಸುವುದರಿಂದ ಶುಕ್ರ, ಮಂಗಳ ಗ್ರಹಗಳು ಬಲವಾಗುತ್ತದೆ. ಉದ್ಯೋಗದಲ್ಲಿದ್ದ ಅಡಚಣೆಗಳು ನಿವಾರಣೆಯಾಗುತ್ತವೆ. ದಾಲ್ಚಿನ್ನಿ ಎಲೆಗಳಿಗೆ ಕರ್ಪೂರವನ್ನು ಹಾಕಿ ಉರಿಸಿ. ಆ ಹೊಗೆ ಮನೆಯಲ್ಲೆಲ್ಲಾ ಹರಡುವಂತಾಗಬೇಕು. ಇದನ್ನು ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲದೇ ಇದು ರಾಹುವಿನ ದುಷ್ಪರಿಣಾಮಗಳನ್ನು ನಿವಾರಿಸುತ್ತದೆ.

ನಕಾರಾತ್ಮಕ ಶಕ್ತಿ ಹೋಗಲಾಡಿಸಲು

ಕರ್ಪೂರವು ನಕಾರಾತ್ಮಕ ಶಕ್ತಿಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಮನೆಗೆ ರಕ್ಷಣಾ ಕವಚವನ್ನು ರಚಿಸುತ್ತದೆ. ಕರ್ಪೂರವನ್ನು ಹಚ್ಚುವುದರಿಂದ ಮನೆಯಲ್ಲಿರುವ ಹಾನಿಕಾರಕ ಶಕ್ತಿಗಳು ದೂರವಾಗುತ್ತವೆ. ದುಷ್ಟಶಕ್ತಿಗಳು ಮನೆಯೊಳಗೆ ಬರದಂತೆ ಮಾಡುತ್ತದೆ. ಕರ್ಪೂರದಲ್ಲಿರುವ ಶುದ್ಧೀಕರಣ ಗುಣಗಳು ಮನೆಯಲ್ಲಿ ಶಾಂತಿ ನೆಲೆಸುವಂತೆ ಮಾಡತ್ತದೆ.

ಸಂಪತ್ತನ್ನು ವೃದ್ಧಿಗೆ

ಸಂಜೆ ವೇಳೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಕರ್ಪೂರ ಹಚ್ಚುವುದು ತುಂಬಾ ಒಳ್ಳೆಯದು. ಹೀಗೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ. ಅದೃಷ್ಟವನ್ನು ಡಬಲ್ ಮಾಡುತ್ತದೆ. ಮನೆಯಲ್ಲಿ ಹಣದ ಕೊರತೆಯಾಗುವುದಿಲ್ಲ. ಲವಂಗ ಮತ್ತು ಕರ್ಪೂರವನ್ನು ಒಟ್ಟಿಗೆ ಉರಿಸಿ. ಆ ಹೊಗೆ ಮನೆಯ ತುಂಬಾ ಹರಡುವಂತೆ ಮಾಡಿ. ಅದು ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ.ಸ

(ಬರಹ: ಅರ್ಚನಾ ವಿ. ಭಟ್‌)

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.