ಧನಸ್ಸು ರಾಶಿ ಭವಿಷ್ಯ 2025: ನಿಮ್ಮಿಂದ ಸಹಾಯ ಪಡೆದವರೇ ನಿಮ್ಮ ಪ್ರಗತಿಗೆ ಅಡ್ಡಿಯಾಗುತ್ತಾರೆ, ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಧನಸ್ಸು ರಾಶಿ ಭವಿಷ್ಯ 2025: ನಿಮ್ಮಿಂದ ಸಹಾಯ ಪಡೆದವರೇ ನಿಮ್ಮ ಪ್ರಗತಿಗೆ ಅಡ್ಡಿಯಾಗುತ್ತಾರೆ, ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ

ಧನಸ್ಸು ರಾಶಿ ಭವಿಷ್ಯ 2025: ನಿಮ್ಮಿಂದ ಸಹಾಯ ಪಡೆದವರೇ ನಿಮ್ಮ ಪ್ರಗತಿಗೆ ಅಡ್ಡಿಯಾಗುತ್ತಾರೆ, ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ

Sagittarius Horoscope 2025: ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಿದ್ದಂತೆ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸ ವರ್ಷ ಬರುತ್ತಿದ್ದಂತೆ ತಮ್ಮ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. 2025 ರಲ್ಲಿ ಧನಸ್ಸು ರಾಶಿಯವರ ಭವಿಷ್ಯ ಹೇಗಿದೆ ನೋಡೋಣ. (ಬರಹ: ಎಚ್. ಸತೀಶ್, ಜ್ಯೋತಿಷಿ)

ಧನಸ್ಸು ರಾಶಿ ಭವಿಷ್ಯ 2025
ಧನಸ್ಸು ರಾಶಿ ಭವಿಷ್ಯ 2025

ಧನಸ್ಸು ರಾಶಿ ಭವಿಷ್ಯ 2025: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. 2024ರ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಪ್ರವೇಶಿಸುವ ಮುನ್ನ 2025ರ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕಾತುರ ಎಲ್ಲರಿಗೂ ಇರುತ್ತದೆ. ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು '2025ರ ಭವಿಷ್ಯ' ಹೇಗಿದೆ ಎಂದು ನೋಡುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ಧನಸ್ಸು ರಾಶಿಯವರಿಗೆ 2025 ವರ್ಷ ಹೇಗಿರಲಿದೆ ಎಂಬುದನ್ನು ತಿಳಿಯೋಣ.

ಕುಟುಂಬದಲ್ಲಿ ಗೌರವಾನ್ವಿತ ಸ್ಥಾನಮಾನ ದೊರೆಯುತ್ತದೆ

ಮನಸಿನಲ್ಲಿ ವೈರಾಗ್ಯದ ಭಾವನೆ ಇರುತ್ತದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಯಾರನ್ನೂ ಆಶ್ರಯಿಸದೆ ಸ್ವತಂತ್ರವಾಗಿ ನಿಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಧಾರ್ಮಿಕತೆಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಮಾಡಲು ಇಷ್ಟಪಡುವಿರಿ. ಬಿಡುವಿನ ವೇಳೆ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವಿರಿ. ನಿಮ್ಮಿಂದ ತಪ್ಪು ನಡೆದಾಗ ಹಿಂಜರಿಯದೆ ಕ್ಷಮೆ ಯಾಚಿಸುವಿರಿ. ನಿಮ್ಮಲ್ಲಿನ ನೇರವಾದ ನಡೆ ನುಡಿಗಳನ್ನು ಎಲ್ಲರೂ ಒಪ್ಪುತ್ತಾರೆ. ನಿಮ್ಮ ಮನದ ಬೇಸರವನ್ನು ಬೇರೆಯವರಲ್ಲಿ ಹಂಚಿಕೊಳ್ಳುವುದಿಲ್ಲ. ಆರೋಗ್ಯಕ್ಕೆ ಸಂಬಂಧಿಸಿದಂತೆ ಸಣ್ಣ ವಿಚಾರವನ್ನೂ ಕಡೆಗಣಿಸಿ ನೋಡುವುದಿಲ್ಲ. ಇದರಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.

ಚಿಕ್ಕ ಮಕ್ಕಳ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ಯಶಸ್ವಿಯಾಗುವಿರಿ. ಕುಟುಂಬದ ಒಳಗೂ ಹೊರಗೂ ನಿಮಗೆ ಗೌರವಾನ್ವಿತ ಸ್ಥಾನಮಾನ ದೊರೆಯುತ್ತದೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ನಿಗಾ ವಹಿಸಿ. ಕುಟುಂಬದ ಮುಖ್ಯ ಕೆಲಸ ಕಾರ್ಯಗಳನ್ನು ಏಕಾಂಗಿಯಾಗಿ ನಿರ್ವಹಿಸುವಿರಿ. ಬಿಡುವಿಲ್ಲದ ಕೆಲಸ ಕಾರ್ಯಗಳು ಸದಾ ಇರುತ್ತವೆ. ಎದುರಾಗುವ ಸವಾಲುಗಳನ್ನು ದಿಟ್ಟತನದಿಂದ ಗೆಲ್ಲುವಿರಿ. ಆತುರದ ಸ್ವಭಾವ ಇರುವ ಕಾರಣ ಕೆಲವೊಮ್ಮೆ ತಪ್ಪು ನಿರ್ಧಾರ ತೆಗೆದುಕೊಳ್ಳುವಿರಿ. ನೀವು ಆಡುವ ಮಾತುಗಳು ಹಲವರಿಗೆ ಪ್ರಶ್ನಾರ್ಥಕವಾಗಿ ಉಳಿಯುತ್ತದೆ.

ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ

ನಿಮ್ಮಿಂದ ಸಹಾಯ ಪಡೆದವರು ನಿಮ್ಮ ಪ್ರಗತಿಗೆ ಅಡ್ಡಿಯಾಗುತ್ತಾರೆ. ವಾದ ವಿವಾದದ ಸಮಯದಲ್ಲಿ ಮೌನಿಯಾಗಿ ಬುದ್ಧಿವಂತಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಹಣದಿಂದ ತೊಂದರೆ ಆಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ತಮ್ಮಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದುವರೆಯುತ್ತಾರೆ. ಉನ್ನತ ಅಭ್ಯಾಸದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಲಭಿಸುತ್ತದೆ. ಆದರೆ ಯಾವುದೇ ಯಶಸ್ಸು ಗಳಿಸಲು ಆತುರದ ತೀರ್ಮಾನ ಬೇಡ. ಆಡುವ ಮಾತಿನ ಮೇಲೆ ವಿದ್ಯಾರ್ಥಿಗಳು ಹತೋಟಿ ಸಾಧಿಸುವುದು ಒಳ್ಳೆಯದು. ಮಾತನ್ನೇ ಬಂಡವಾಳವಾಗಿಸಿಕೊಂಡವರಿಗೆ ಸಮಾಜದಲ್ಲಿ ವಿಶೇಷ ಅವಕಾಶಗಳು ದೊರೆಯುತ್ತವೆ. ಕುಟುಂಬದಲ್ಲಿ ನಡೆಯಬೇಕಿದ್ದ ವಿವಾಹ ಕಾರ್ಯವು ಕೆಲ ದಿನಗಳು ಮುಂದೂಡ್ಪಡುತ್ತದೆ.

ನವ ದಂಪತಿಗಳಿಗೆ ವಿಶೇಷ ಉಡುಗೊರೆ ದೊರೆಯುತ್ತದೆ. ಶ್ರದ್ಧೆಯಿಂದ ಮಾಡುವ ಕೆಲಸ ಕಾರ್ಯಗಳಿಂದ ಉತ್ತಮ ಲಾಭವಿರುತ್ತದೆ. ದುಡುಕಿನ ಮಾತಿನಿಂದ ಗೃಹಿಣಿಯರು ತೊಂದರೆಗೆ ಸಿಲುಕುತ್ತಾರೆ. ಹಣದ ತೊಂದರೆ ಇರುವುದಿಲ್ಲ. ಆದರೆ ಹಣ ಉಳಿಸಲು ಸಾಧ್ಯವಾಗುವುದಿಲ್ಲ. ನಿಮ್ಮಲ್ಲಿರುವ ಸ್ಮರಣ ಶಕ್ತಿ ವಿಶೇಷವಾಗಿರುತ್ತದೆ. ಕುಟುಂಬದ ಹಿರಿಯರ ಒಲವು ಗಳಿಸುವಿರಿ. ಹಣದ ಕೊರತೆ ಇದ್ದಾಗ ಆತ್ಮೀಯರಿಂದ ಸಹಾಯ ದೊರಕುತ್ತದೆ. ಆದಾಯ ಕಡಿಮೆಯಾದರೂ ಹಣ ಉಳಿಸುವ ಪ್ರಯತ್ನ ಕೈ ಬಿಡುವುದಿಲ್ಲ. ಹೋರಾಟದ ಮನೋಭಾವನೆ ಇರುವ ಕಾರಣ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ.

ರಾಜಕಾರಣಿಗಳಿಗೆ ಅಪರೂಪದ ಅವಕಾಶ

ಚಂಚಲದ ಮನಸ್ಸಿದ್ದರೂ ತಪ್ಪಾದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ನಿಮ್ಮ ಮೃದು ಸ್ವಭಾವದಿಂದ ಕೌಟುಂಬಿಕ ವಿಚಾರಗಳಲ್ಲಿ ಭಾವುಕತೆಯಿಂದ ವರ್ತಿಸುವಿರಿ. ನಿಮ್ಮ ತಂದೆಯವರಿಗೆ ಅವರ ರಕ್ತ ಸಂಬಂಧಿಗಳ ಜೊತೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಕುಟುಂಬದ ಆಸ್ತಿಯ ವಿಚಾರವು ಜಟಿಲಗೊಳ್ಳುತ್ತದೆ. ಮಕ್ಕಳಿಗೆ ಕಿವಿ ನೋವಿನ ತೊಂದರೆ ಇರುತ್ತದೆ. ಬೇರೆಯವರಿಂದ ಸಾಲವಾಗಿ ಪಡೆದ ಹಣವನ್ನು ಹಿಂತಿರುಗಿಸುವಿರಿ. ಉದ್ಯೋಗದ ಸಲುವಾಗಿ ದೂರದ ಊರಿಗೆ ಪ್ರಯಾಣ ಬೆಳೆಸುವಿರಿ. ಸಮಾಜದಲ್ಲಿ ನಿಮಗೆ ಗೌರವಾನ್ವಿತ ಸ್ಥಾನವು ದೊರೆಯುತ್ತದೆ. ಹೊಸ ಸೈಟ್‌ ಕೊಳ್ಳುವಿರಿ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರೆಯುತ್ತದೆ.

ವ್ಯಾಪಾರ ವ್ಯವಹಾರಗಳಲ್ಲಿ ಮಧ್ಯಮ ಗತಿಯ ಲಾಭ ದೊರೆಯುತ್ತದೆ. ಹಣವೊಂದೇ ನಿಮ್ಮ ಮುಖ್ಯ ಗುರಿಯಾಗುವುದಿಲ್ಲ. ಸ್ವಂತ ಉದ್ದಿಮೆ ಇದ್ದಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಗಳಿವೆ. ರಾಜಕಾರಣಿಗಳಿಗೆ ಅಪರೂಪದ ಅವಕಾಶ ದೊರೆಯುತ್ತದೆ. ಸಮಾಜದಲ್ಲಿನ ನಾಯಕತ್ವವು ನಿಮ್ಮದಾಗುತ್ತದೆ. ಗುರು ಹಿರಿಯರಿಗೆ ಸಹಾಯ ಮಾಡುವ ಅವಕಾಶ ದೊರೆಯುತ್ತದೆ. ಮನೆಯ ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ತಮ್ಮ ಸ್ವತಂತ್ರ ಜೀವನಕ್ಕೆ ಮತ್ತು ಗೌರವಕ್ಕೆ ಧಕ್ಕೆ ಬಾರದಂತೆ, ಕುಟುಂಬಕ್ಕೆ ಅನುಕೂಲವಾಗುವಂತಹ ಕೆಲಸ ಕಾರ್ಯಗಳನ್ನು ಆಯ್ಕೆ ಮಾಡಿಕೊಳ್ಳೂವಿರಿ. ಹೊಸ ಕೆಲಸ ಕಾರ್ಯಗಳಲ್ಲಿ ಆಸಕ್ತಿ ತೋರುವುದಿಲ್ಲ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.