ಕುಂಭ ರಾಶಿಯಿಂದ ಮೀನ ರಾಶಿಗೆ ಶನಿಯ ಸಂಚಾರ: 12 ರಾಶಿಗಳ ಮೇಲೆ ಏನು ಪರಿಣಾಮ? ಯಾರಿಗೆ ಶುಭ? ಇಲ್ಲಿದೆ ಸಮಗ್ರ ವಿವರ
Saturn Transit 2025: ಶನಿಯು ಕುಂಭ ರಾಶಿಯಿಂದ ಗುರು ಅಧಿಪತಿಯಾಗಿರುವ ಮೀನ ರಾಶಿಗೆ ಚಲಿಸಲಿದ್ದಾನೆ. ಶನಿಯ ಈ ಸಂಕ್ರಮಣವು 2025ರ ಮಾರ್ಚ್ 29 ರಂದು ಸಂಭವಿಸುತ್ತದೆ. ಈ ಸಂಕ್ರಮಣವು ದ್ವಾದಶ ರಾಶಿಗಳ ಮೇಲೆ ಅನೇಕ ಪರಿಣಾಮಗಳನ್ನು ಬೀರಲಿದೆ. ಹಾಗಾದರೆ ಯಾವ ರಾಶಿಯವರಿಗೆ ಏನು ಪರಿಣಾಮ, ಯಾರಿಗೆ ಶುಭಫಲಗಳಿವೆ ಎಂಬುದನ್ನು ತಿಳಿಯೋಣ.

ಶನಿಯು ನ್ಯಾಯವನ್ನು ಕೊಡುವ ದೇವರು ಎಂದು ನಂಬಲಾಗಿದೆ. ಆತ ಶಿಸ್ತುಪಾಲಕ ಮತ್ತು ಶಿಕ್ಷೆ ಕೊಡುವ ದೇವರಾಗಿದ್ದಾನೆ. ತಪ್ಪು ದಾರಿಯಲ್ಲಿ ನಡೆದರೆ ಶಿಕ್ಷೆಯನ್ನು ನೀಡುವ ಅಧಿಕಾರವನ್ನು ಹೊಂದಿದ್ದಾನೆ. ಒಳ್ಳೆಯ ಕರ್ಮಗಳನ್ನು ಮಾಡಿದರೆ ಉತ್ತಮ ಫಲಗಳನ್ನು ನೀಡುತ್ತಾನೆ. ಕುಂಭ ರಾಶಿಯ ಅಧಿಪತಿ ಶನಿಯಾಗಿದ್ದಾನೆ. ತನ್ನದೇ ಸ್ವಂತ ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ನೆಲೆಸಿದ್ದನು. ಈಗ ಶನಿ ತನ್ನ ಸ್ವಂತ ಮನೆಯಿಂದ ಬುದ್ಧಿವಂತಿಕೆಯನ್ನು ಸಂಕೇತಿಸುವ ಗುರು ಗ್ರಹದಿಂದ ಆಳಲ್ಪಡುವ ಮೀನ ರಾಶಿಗೆ ಚಲಿಸಲಿದ್ದಾನೆ. ಈ ಸ್ಥಾನದ ಬದಲಾವಣೆಯು ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಶನಿಯ ಈ ಸಂಕ್ರಮಣವು 2025ರ ಮಾರ್ಚ್ 29 ರಂದು ಸಂಭವಿಸುತ್ತದೆ. ಶನಿಯು ಮೀನ ರಾಶಿಗೆ ಚಲಿಸುತ್ತಿದ್ದಂತೆ ಮಕರ ರಾಶಿಯವರಿಗೆ ಸಾಡೇಸಾತಿ ಮುಕ್ತಾಯವಾಗುತ್ತದೆ. ಆದರೆ ಮೇಷ ರಾಶಿಯವರಿಗೆ ಸಾಡೇಸಾತಿ ಪ್ರಾರಂಭವಾಗುತ್ತದೆ. ಶನಿಯ ಈ ಸಂಕ್ರಮಣವು ಹನ್ನೆರಡು ರಾಶಿಗಳ ಮೇಲೆ ಯಾವ ರೀತಿಯ ಪ್ರಭಾವಗಳನ್ನು ಬೀರುತ್ತದೆ ಎಂದು ನೋಡೋಣ.
ಮೇಷ ರಾಶಿ: ಶನಿಯ ಸಂಕ್ರಮಣದಿಂದ ಮೇಷ ರಾಶಿಯವರಿಗೆ ಸಾಡೇಸಾತಿ ಪ್ರಾರಂಭವಾಗುತ್ತದೆ. ಇದು ನಿಮ್ಮ ಆದಾಯ ಮತ್ತು ವೆಚ್ಚದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಹಣಕಾಸು ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಈ ಸಮಯದಲ್ಲಿ ಆರೋಗ್ಯದ ಸಮಸ್ಯೆಗಳು ಉಂಟಾಗಬಹುದು. ಪ್ರಮುಖವಾಗಿ ಕಣ್ಣಿನ ಆರೋಗ್ಯದ ಸಮಸ್ಯೆ ಉಂಟಾಗುವುದು. ವಿದೇಶ ಪ್ರವಾಸ ಅಥವಾ ವಿದೇಶದಲ್ಲಿ ವಾಸ್ತವ್ಯದ ಅವಕಾಶ ಒದಗಿ ಬರಬಹುದು.
ವೃಷಭ ರಾಶಿ: ಈ ರಾಶಿಯವರಿಗೆ ಶನಿ ಸಂಕ್ರಮಣವು ಲಾಭದಾಯಕವಾಗಿದೆ. ನಿಮ್ಮ ವೃತ್ತಿ ಜೀವನದಲ್ಲಿ ಅನುಕೂಲಗಳನ್ನು ಸೃಷ್ಟಿಸುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಲು ಸಹಾಯ ಮಾಡುತ್ತದೆ. ಆದರೆ ಶಿಕ್ಷಣದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬಹುದು. ಮಕ್ಕಳ ಬಗ್ಗೆ ಕಾಳಜಿಯಿಂದಿರಿ. ಕೆಲಸದ ನಿಮಿತ್ತ ದೀರ್ಘ ಪ್ರಯಾಣ ಮಾಡಬೇಕಾಗುತ್ತದೆ.
ಮಿಥುನ ರಾಶಿ: ಈ ರಾಶಿಯು ಬುಧ ಗ್ರಹದಿಂದ ಆಳಲ್ಪಡುತ್ತದೆ. ಬುಧ ಗ್ರಹವು ಶನಿಯ ಮಿತ್ರ. ಆದ್ದರಿಂದ ಶನಿಯ ಈ ಸಂಚಾರವು ಮಿಥುನ ರಾಶಿಯವರಿಗೆ ಅನುಕೂಲಕರವಾಗಿದೆ. ವೃತ್ತಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಅವಕಾಶವಿದೆ. ಕುಟುಂಬ ಜೀವನದಲ್ಲಿ ಏರುಪೇರು ಉಂಟಾಗಬಹುದು. ಮನೆಯ ಹಿರಿಯರಿಗೆ ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳಬಹುದು. ಅದೃಷ್ಟ ನಿಮ್ಮ ಜೊತೆಗಿರುವುದರಿಂದ ಒಟ್ಟಾರೆಯಾಗಿ ಯಶಸ್ಸುಗಳಿಸುವಿರಿ.
ಕಟಕ ರಾಶಿ: ಈ ರಾಶಿಯವರಿಗೆ ಶನಿಯ ಸವಾಲಿನ ಅವಧಿಯು ಕೊನೆಗೊಳ್ಳಲಿದೆ. ಕ್ರಮೇಣ ಕೆಲಸ, ವ್ಯಾಪಾರದಲ್ಲಿ ಪ್ರಗತಿಯನ್ನು ಸಾಧಿಸುತ್ತೀರಿ. ಸಂಗಾತಿಯೊಂದಿಗೆ ಸಂಬಂಧ ಸುಧಾರಿಸಲು ಪ್ರಾರಂಭಿಸುತ್ತದೆ. ಹಠಾತ್ ಆರ್ಥಿಕ ಲಾಭಗಳ ಸಾಧ್ಯತೆಯಿದೆ. ನಿಮಗೆ ಬರಬೇಕಾಗಿದ್ದ ಹಣ ವಾಪಸ್ಸು ಬರಲಿದೆ. ಆರೋಗ್ಯ ಸಮಸ್ಯೆಗಳು ಉಂಟಾಗಬಹುದು, ಜಾಗರೂಕರಾಗಿರಿ.
ಸಿಂಹ ರಾಶಿ: ಶನಿಯ ಈ ಸಂಕ್ರಮಣವು ಸಿಂಹ ರಾಶಿಯವರಿಗೆ ಸವಾಲಿನ ದಿನಗಳ ಆರಂಭವನ್ನು ಸೂಚಿಸುತ್ತದೆ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದು ಬಹಳ ಮುಖ್ಯವಾಗಿದೆ. ದೀರ್ಘಕಾಲದ ಅನಾರೋಗ್ಯ ಕಾಡಬಹುದು. ಸಾಲ ಮರುಪಾವತಿಗೆ ಪ್ರಯತ್ನಿಸುತ್ತೀರಿ. ಕಾನೂನು ತೊಡಕುಗಳು ಇರುತ್ತವೆ. ಅನಿರೀಕ್ಷಿತ ವೆಚ್ಚಗಳು ಎದುರಾಗುತ್ತವೆ. ಕುಟುಂಬದಲ್ಲಿ ಆಗಾಗ ವಾದ ವಿವಾದ ನಡೆಯಬಹುದು. ವೃತ್ತಿಯಲ್ಲಿ ಏರಿಳಿತ ಕಾಣುತ್ತೀರಿ.
ಕನ್ಯಾ ರಾಶಿ: ಈ ರಾಶಿಯವರಿಗೆ ಶನಿಯು ಸಕಾರಾತ್ಮಕವಾಗಿ ಪ್ರಭಾವ ಬೀರುತ್ತಾನೆ. ಅವಿವಾಹಿತರಿಗೆ ವಿವಾಹವಾಗುವ ಅವಕಾಶಗಳಿವೆ. ವ್ಯಾಪಾರಕ್ಕೆ ಹಣದ ಅವಶ್ಯಕತೆಯಿದ್ದರೆ ಬ್ಯಾಂಕುಗಳಿಂದ ಸುಲಭವಾಗಿ ಸಾಲ ಪಡೆದುಕೊಳ್ಳುತ್ತೀರಿ. ಜುಲೈನಿಂದ ಸೆಪ್ಟೆಂಬರ್‌ವರೆಗೆ ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಬರಬಹುದು. ಹಾಗಾಗಿ ತಾಳ್ಮೆ ಅವಶ್ಯಕವಾಗಿದೆ. ವೈವಾಹಿಕ ಜೀವನದಲ್ಲಿ ಏರಿಳಿತಗಳಾಗಬಹುದು.
ತುಲಾ ರಾಶಿ: ಈ ರಾಶಿಯವರಿಗೆ ಶನಿ ಸಂಕ್ರಮಣವು ಮಂಗಳಕರವಾಗಿದೆ. ವಿರೋಧಿಗಳ ಮೇಲೆ ವಿಜಯ ಸಾಧಿಸುವ ಭರವಸೆ ಹೆಚ್ಚಾಗುತ್ತದೆ. ವೃತ್ತಿಕ್ಷೇತ್ರದಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ. ಪ್ರಯತ್ನಗಳಿಗೆ ತಕ್ಕ ಪ್ರತಿಫಲ ದೊರೆಯುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಆಲಸ್ಯವನ್ನು ಬಿಡಿ. ಕೌಂಟಂಬಿಕ ವಿಷಯಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯವು ಲಾಭದಾಯಕವಾಗಿದೆ.
ವೃಶ್ಚಿಕ ರಾಶಿ: ಶನಿಯ ಸಂಚಾರವು ನಿಮ್ಮ ಪ್ರೇಮ ಸಂಬಂಧಗಳನ್ನು ಬಲಪಡಿಸುತ್ತದೆ. ಕಂಕಣ ಭಾಗ್ಯ ಕೂಡಿಬರಲಿದೆ. ಈ ರಾಶಿಯವರು ಉದ್ಯೋಗ ಬದಲಾಯಿಸುವ ಯೋಚನೆಯಲ್ಲಿದ್ದರೆ ಜುಲೈನಿಂದ ನವೆಂಬರ್ ವರೆಗೆ ಬದಲಾಯಿಸಬೇಡಿ. ಮಕ್ಕಳಿಂದ ಸಂತೋಷ ಸಿಗುತ್ತದೆ. ಆದಾಯದಲ್ಲಿ ಹೆಚ್ಚಳವನ್ನು ಕಾಣುತ್ತೀರಿ.
ಧನು ರಾಶಿ: ಈ ರಾಶಿಯವರಿಗೆ ಶನಿಯ ಸವಾಲಿನ ಅವಧಿಯ ಪ್ರಾರಂಭವಾಗುತ್ತದೆ. ಕುಟುಂಬದಿಂದ ದೂರವಿರುವ ಸಮಯ ಬರಬಹುದು. ತಾಯಿಯ ಆರೋಗ್ಯದ ಕಡೆ ಗಮನ ಹರಿಸಿ. ಕಷ್ಟ ಪಟ್ಟರೆ ಕಾನೂನು ವಿಷಯದಲ್ಲಿ ಯಶಸ್ಸು ಸಾಧಿಸಬಹುದು. ಶಿಸ್ತುಬದ್ಧ ಜೀವನಶೈಲಿಯನ್ನು ಪಾಲಿಸುವುದರಿಂದ ನಿಮ್ಮ ಸವಾಲಿನ ದಿನಗಳನ್ನು ಬಹಳ ಸುಲಭವಾಗಿ ನಿಭಾಯಿಸಬಹುದು.
ಮಕರ ರಾಶಿ: ಶನಿಯ ಸಂಕ್ರಮಣವು ನಿಮ್ಮ ಮೇಲೆ ಅನುಕೂಲಕರ ಪ್ರಭಾವವನ್ನು ಬೀರುತ್ತದೆ. ಪ್ರವಾಸ ಅಥವಾ ವಿದೇಶ ಪ್ರವಾಸದ ಸಂಭವವಿದೆ. ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಹೊಂದುತ್ತೀರಿ. ನಿಮ್ಮ ಮಕ್ಕಳು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಾರೆ. ಬುದ್ಧಿವಂತಿಕೆಯಿಂದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸುತ್ತೀರಿ. ನಿಮ್ಮ ಮತ್ತು ಪೋಷಕರ ಆರೋಗ್ಯದ ಮೇಲೆ ಗಮನವಹಿಸಿ. ವ್ಯಾಪಾರಸ್ಥರಿಗೆ ಇದು ಕಷ್ಟದ ಸಮಯ.
ಕುಂಭ ರಾಶಿ: ಈ ರಾಶಿಯವರಿಗೆ ಇದ್ದ ಸಾಡೇಸಾತಿ ಅಂತಿಮ ಹಂತವನ್ನು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ ಸಾಕಷ್ಟು ಶ್ರಮದಿಂದ ಹಣ ಸಂಗ್ರಹಿಸುತ್ತೀರಿ. ವ್ಯಾಪಾರಸ್ಥರು ಹಣದಲ್ಲಿ ಉಳಿತಾಯವನ್ನು ಕಾಣಬಹುದು. ಕುಟುಂಬ ಸಂಬಂಧಗಳಲ್ಲಿ ಏರಿಳಿತಗಳನ್ನು ಕಾಣುತ್ತೀರಿ. ಆಸ್ತಿ ವಹಿವಾಟು ನಿಮಗೆ ಲಾಭದಾಯಕವಾಗಬಹುದು. ನಿಮ್ಮ ಸಂಗಾತಿಯು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು.
ಮೀನ ರಾಶಿ: ಇದೇ ರಾಶಿಯಲ್ಲಿ ಶನಿ ಸಂಚರಿಸುವುದರಿಂದ ಈ ರಾಶಿಯವರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಒಡಹುಟ್ಟಿದವರಲ್ಲಿ ಪ್ರೀತಿ ಹೆಚ್ಚುತ್ತದೆ. ಸಂಗಾತಿಗೆ ಆರೋಗ್ಯ ಸಮಸ್ಯೆಗಳು ಕಾಡಬಹುದು. ಈ ಅವಧಿಯಲ್ಲಿ ವೃತ್ತಿಪರ ಸಂಬಂಧಗಳು ಅನುಕೂಲಕರವಾಗಿರುತ್ತದೆ. ಹೊಸ ವ್ಯಾಪಾರಕ್ಕೆ ಉತ್ತಮ ಸಮಯ. ಉದ್ಯೋಗದಲ್ಲಿರುವವರಿಗೆ ಪರಿಶ್ರಮದಿಂದ ಲಾಭ ದೊರೆಯುತ್ತದೆ. ಆದರೂ ದೈಹಿಕ ಮತ್ತು ಮಾನಸಿಕ ಒತ್ತಡ ಮುಂದುವರಿಯಬಹುದು.
