ವೃಶ್ಚಿಕ ರಾಶಿ ಭವಿಷ್ಯ 2025: ಗಣ್ಯ ವ್ಯಕ್ತಿಗಳ ಸಹಾಯ ಸಹಕಾರ ದೊರೆಯುತ್ತದೆ, ಸ್ವಂತ ಉದ್ದಿಮೆ ಇರುವವರಿಗೆ ನಿರೀಕ್ಷಿತ ಲಾಭ ಬರಲಿದೆ
Scorpio Horoscope 2025: ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಿದ್ದಂತೆ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸ ವರ್ಷ ಬರುತ್ತಿದ್ದಂತೆ ತಮ್ಮ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. 2025 ರಲ್ಲಿ ವೃಶ್ಚಿಕ ರಾಶಿಯವರ ಭವಿಷ್ಯ ಹೇಗಿದೆ ನೋಡೋಣ. (ಬರಹ: ಎಚ್. ಸತೀಶ್, ಜ್ಯೋತಿಷಿ)
ವೃಶ್ಚಿಕ ರಾಶಿ ಭವಿಷ್ಯ 2025: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. 2024ರ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಪ್ರವೇಶಿಸುವ ಮುನ್ನ 2025ರ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕಾತುರ ಎಲ್ಲರಿಗೂ ಇರುತ್ತದೆ. ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು '2025ರ ಭವಿಷ್ಯ' ಹೇಗಿದೆ ಎಂದು ನೋಡುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ವೃಶ್ಚಿಕ ರಾಶಿಯವರಿಗೆ 2025 ವರ್ಷ ಹೇಗಿರಲಿದೆ ಎಂಬುದನ್ನು ತಿಳಿಯೋಣ.
ತಾಳ್ಮೆ ಇದ್ದಲ್ಲಿ ಗೆಲುವು ಖಚಿತ
ದುಡುಕುತನ ತೋರದೆ ಸಂಯಮದಿಂದ ನಡೆದುಕೊಳ್ಳುವುದರಿಂದ ಎದುರಾಗುವ ಕಷ್ಟಗಳು ದೂರವಾಗುತ್ತವೆ. ವಿರೋಧಿಗಳ ಮನಸ್ಸು ಗೆಲ್ಲುವಿರಿ. ಉದ್ಯೋಗಸ್ಥರು ಅಧಿಕಾರಿಗಳಿಗೆ ಸಮಾನವಾದಂಥ ಸ್ಥಾನ ಪಡೆಯುತ್ತಾರೆ. ಉತ್ತಮ ಅವಕಾಶ ದೊರೆತು ಉದ್ಯೋಗ ಬದಲಿಸುವ ಸಾಧ್ಯತೆಗಳಿವೆ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸುವ ಮನಸ್ಸಿರುವುದಿಲ್ಲ. ಆದರೆ ಬೇರೆಯವರ ಒಳಿತಿಗಾಗಿ ಯಾವುದೇ ಬದಲಾವಣೆಗಳನ್ನು ಒಪ್ಪಿಕೊಳ್ಳುವಿರಿ. ನಿಮ್ಮೊಂದಿಗೆ ಸ್ನೇಹ ಸಂಬಂಧ ಬೆಳೆಸಲು ಹಲವರು ಇಚ್ಚಿಸುತ್ತಾರೆ. ಆದರೆ ನಿಮ್ಮ ಮನಸ್ಸಿಗೆ ಒಪ್ಪುವ ಜನರೊಂದಿಗೆ ಮಾತ್ರ ಸ್ನೇಹ ಬೆಳೆಸುವಿರಿ. ಅವಿವಾಹಿತರಿಗೆ ವರ್ಷದ ಆರಂಭದಲ್ಲಿ ವಿವಾಹ ನಿಶ್ಚಯವಾಗುತ್ತದೆ. ಉತ್ತಮ ಸ್ನೇಹವಿದ್ದರೂ ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬುವುದಿಲ್ಲ. ರಹಸ್ಯವಾಗಿ ಹಣಕಾಸಿನ ವ್ಯವಹಾರ ನಡೆಸುವಿರಿ. ಕುಟುಂಬದ ಜನರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯುವಿರಿ.
ಕುಟುಂಬದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗುವಿರಿ. ಅಗತ್ಯವಿದ್ದಲ್ಲಿ ಮಾತ್ರ ಹಿರಿಯರ ಅನುಭವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಿರಿ. ಬಂಧು-ಬಳಗದವರಿಂದ ದೂರ ಉಳಿಯಲು ಯತ್ನಿಸುವಿರಿ. ಸ್ವತಂತ್ರವಾಗಿ ಹಣ ಸಂಪಾದಿಸುವ ಗುರಿಯಿಂದ ಉದ್ಯೋಗ ತೊರೆಯುವ ತೀರ್ಮಾನ ಮಾಡುವಿರಿ. ಏಕಾಂಗಿಯಾಗಿ ಹೋರಾಡಲು ಭಯಪಡುವುದಿಲ್ಲ. ಪಾಲುದಾರಿಕೆ ವ್ಯಾಪಾರದಲ್ಲಿ ನಂಬಿಕೆ ಅಥವಾ ಆಸಕ್ತಿ ತೋರುವುದಿಲ್ಲ. ಮಕ್ಕಳಿಗೆ ಬೇಕಾಗಿರುವ ಅಗತ್ಯತೆಗಳನ್ನು ಒದಗಿಸುವಿರಿ. ನೆರೆಹೊರೆಯವರೊಂದಿಗೆ ವಿಶ್ವಾಸದಿಂದ ನಡೆದುಕೊಳ್ಳುವಿರಿ. ವಿದೇಶಕ್ಕೆ ಸಂಬಂಧಿಸಿದ ಕಂಪನಿಗಳ ವ್ಯಾಪಾರದ ಸಹಭಾಗಿತ್ವ ಪಡೆಯುವಿರಿ. ಬಿಡುವಿಲ್ಲದ ಕೆಲಸ ಕಾರ್ಯಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುವಿರಿ. ಆರೋಗ್ಯದಲ್ಲಿ ಏರಿಳಿತ ಕಂಡು ಬರಲಿದೆ. ಕುಟುಂಬದಲ್ಲಿನ ಸಮಸ್ಯೆಗಳು ನಿಧಾನಗತಿಯಲ್ಲಿ ಕಣ್ಮರೆಯಾಗುತ್ತದೆ. ನೀವಿರುವ ಸ್ಥಳದಲ್ಲಿ ಹಾಸ್ಯಕ್ಕೆ ಕೊರತೆ ಇರುವುದಿಲ್ಲ.
ಆರ್ಥಿಕ ಸ್ಥಿತಿ ಸುಧಾರಿಸಲಿದೆ
ಮಕ್ಕಳ ಜೀವನದಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾಗಲಿವೆ. ಆದರೆ ಕುಟುಂಬದ ಹಿರಿಯರ ಸಹಾಯದಿಂದ ಸಹಜ ಸ್ಥಿತಿ ಮರಳುತ್ತದೆ. ಕೋಪ ಕಡಿಮೆ ಮಾಡಿಕೊಳ್ಳೂವುದು ಒಳ್ಳೆಯದು. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಗೆಲ್ಲಲು ಪ್ರಯತ್ನಿಸುವಿರಿ. ಯಾರೊಂದಿಗೂ ದ್ವೇಷ ಬೆಳೆಸಿಕೊಳ್ಳುವುದಿಲ್ಲ. ಜಗಳ ಕದನಗಳಿಂದ ದೂರವಿದ್ದು ಬುದ್ಧಿವಂತಿಕೆ ಮತ್ತು ಸಂಧಾನದಿಂದ ಕಷ್ಟವನ್ನು ಗೆಲ್ಲುವಿರಿ. ಬಂಧು ವರ್ಗದವರಿಂದ ದೂರ ಉಳಿಯುವಿರಿ. ಅವಶ್ಯಕತೆ ಇದ್ದವರಿಗೆ ದಾನ ಧರ್ಮ ಮಾಡುವಿರಿ. ಕ್ರಮೇಣವಾಗಿ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡುಬರುತ್ತದೆ. ಧಾರ್ಮಿಕ ಕೇಂದ್ರಕ್ಕೆ ಹಣಕಾಸಿನ ಸಹಾಯ ಮಾಡುವಿರಿ. ವಂಶದ ಆಸ್ತಿಯಲ್ಲಿ ಮನಸ್ತಾಪ ದೂರವಾಗಲಿದೆ. ನಿಮಗೆ ಉಷ್ಣದ ತೊಂದರೆ ಇರುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆಯಿಂದ ಇರುವುದು ಒಳಿತು. ಉದ್ಯೋಗದಲ್ಲಿ ಯಾವುದೇ ತೊಂದರೆ ಕಾಣುವುದಿಲ್ಲ. ಆದರೆ ಸಹೊದ್ಯೋಗಿಗಳ ಜೊತೆ ವಿಶ್ವಾಸದಿಂದ ನಡೆದುಕೊಳ್ಳಲು ಪ್ರಯತ್ನಿಸುವಿರಿ. ಮುಂಗೋಪ ಕಡಿಮೆ ಮಾಡಿಕೊಂಡು ಬೇರೆಯವರ ಪ್ರೀತಿ ಗಳಿಸುವಿರಿ. ದಾಂಪತ್ಯ ಜೀವನದಲ್ಲಿ ಸಂಗಾತಿಯು ನಿಮ್ಮ ಕೆಲಸ ಕಾರ್ಯಗಳಲ್ಲಿ ಸಹಾಯ ಸಹಕಾರ ನೀಡಲಿದ್ದಾರೆ.
ಹೃದಯಕ್ಕೆ ಸಂಬಂಧಿಸಿದ ದೋಷವಿರುವವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಅತಿಯಾಗಿ ಯೋಚನೆ ಮಾಡಿ ತಲೆನೋವಿನಿಂದ ಬಳಲುವಿರಿ. ಹಣಕಾಸಿನ ವ್ಯವಹಾರವಿದ್ದಲ್ಲಿ ತೊಂದರೆ ಉಂಟಾಗಬಹುದು. ಸಾಲದ ಬಾಧೆಯಿಂದ ಪಾರಾಗುವಿರಿ. ಸೋದರಿಯಿಂದ ಹಣದ ಸಹಾಯ ದೊರೆಯುತ್ತದೆ. ಮನಸ್ಸಿನ ಬೇಸರದಿಂದ ಹೊರಬರಲು ದೀರ್ಘಕಾಲದ ಪ್ರವಾಸ ಕೈಗೊಳ್ಳುವಿರಿ. ಸೋದರಿಗೆ ಸೇರಿದ ಸಮಸ್ಯೆಯೊಂದು ದೂರವಾಗುತ್ತದೆ. ಅನಿರೀಕ್ಷಿತವಾಗಿ ಉದ್ಯೋಗ ಬದಲಿಸಬೇಕಾದ ಪರಿಸ್ಥಿತಿ ಎದುರಾಗಲಿದೆ. ದುಡುಕುತನದ ಮಾತಿನಿಂದ ಉದ್ಯೋಗದಲ್ಲಿ ವಿವಾದ ಎದುರಿಸಬೇಕಾಗುತ್ತದೆ. ನೀರಿರುವ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಿ.
ಆರೋಗ್ಯ ಸಮಸ್ಯೆ ಕಾಡಬಹುದು , ಜಾಗ್ರತೆ
ಕಾಲುಗಳಲ್ಲಿ ಊತ ಅಥವಾ ನೋವು ಉಂಟಾಗುತ್ತದೆ. ಕುಟುಂಬದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿವೆ. ಮಹಿಳೆಯರಿಗೆ ತವರಿನಿಂದ ಸಿಹಿ ಸುದ್ದಿ ದೊರೆಯಲಿದೆ. ಸ್ವಂತ ಉದ್ದಿಮೆ ಇರುವವರಿಗೆ ನಿರೀಕ್ಷಿತ ಲಾಭ ದೊರೆಯುತ್ತದೆ. ಹಣಕಾಸಿನ ಸ್ಥಿರತೆಗಾಗಿ ವಿವಿಧ ಯೋಜನೆಯಲ್ಲಿ ಹಣ ವಿನಿಯೋಗಿಸುವಿರಿ. ಮನೆಯನ್ನು ಅಲಂಕರಿಸಲು ಆಕರ್ಷಕ ಪದಾರ್ಥಗಳನ್ನು ಕೊಳ್ಳುವಿರಿ. ನಿಮ್ಮ ಹೆಸರಿನಲ್ಲಿರುವ ಆಸ್ತಿಯೊಂದನ್ನು ಮಾರಾಟ ಮಾಡಿ ಮನೆಕೊಳ್ಳುವ ಯೋಚನೆ ಮಾಡುವಿರಿ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಇರದು. ಅವರ ಮನಸ್ಸಿಗೆ ಸರಿ ಎನಿಸುವ ಕೆಲಸವನ್ನಷ್ಟೇ ಆರಂಭಿಸುತ್ತಾರೆ. ದೈಹಿಕವಾಗಿ ದುರ್ಬಲರಾದವರಿಗೆ ಹಣದ ಸಹಾಯ ಮಾಡುವಿರಿ. ಸಮಾಜದ ಮುಖ್ಯ ವಾಹಿನಿಗೆ ಸೇರುವ ಪ್ರಯತ್ನವು ಯಶಸ್ವಿ ಆಗುವುದಿಲ್ಲ. ಆದರೆ ಗಣ್ಯ ವ್ಯಕ್ತಿಗಳ ಸಹಕಾರ ದೊರೆಯುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).